Wednesday, 30th October 2024

Prakash Shesharaghavachar Column: ಮಹಿಳಾ ಸುರಕ್ಷತೆ ಮೊದಲ ಆದ್ಯತೆಯಾಗಲಿ

ಅಭಿಮತ

ಪ್ರಕಾಶ್‌ ಶೇಷರಾಘವಾಚಾರ್‌

2012 ರಲ್ಲಿ ನಿರ್ಭಯಾ ಪ್ರಕರಣ(Nirbhaya Case)ವು ದೇಶಾದ್ಯಂತ ತಲ್ಲಣ ಸೃಷ್ಟಿಸಿ ಅತ್ಯಾಚಾರದ ವಿರುದ್ದ ಕಠಿಣ ಕಾನೂನು ಜಾರಿಗೆ ಕಾರಣವಾಯಿತು. 2024 ಆಗಸ್ಟ್‌ ನಲ್ಲಿ ಕೋಲ್ಕತ್ತಾ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆದು ಹತ್ಯೆಯಾಗಿದೆ. ಇದರ ವಿರುದ್ದ ಮತ್ತೊಮ್ಮೆ ದೇಶಾದ್ಯಂತ ಪ್ರತಿಭಟನೆ ಆಕ್ರೋಶ ನಿರಂತರವಾಗಿ ನಡೆಯುತ್ತಿದೆ. ಹಾಗಾದರೆ ಹನ್ನೆರೆಡು ವರ್ಷದಲ್ಲಿ ಬದಲಾವಣೆಯಾದರು ಏನಾಯಿತು? ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇದೆ. ಜಾರಿಗೆ ತಂದಿರುವ ಕಠಿಣ ಕಾನೂನು ಪುಸ್ತಕಕ್ಕೆ ಮತ್ತು ಭಾಷಣಕ್ಕೆ ಸಿಮೀತವಾಗಿದೆ.

ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆ ಕೊಡಿಸಲು ರಚನೆಯಾಗಿರುವ -ಟ್ರ್ಯಾಕ್ ಕೋರ್ಟ್‌ಗಳು ವಿಫಲವಾಗಿ ಮಹಿಳಾ ಸುರಕ್ಷ ಇಂದಿಗೂ ಮರೀಚಿಕೆ ಯಾಗಿಯೇ ಉಳಿದಿರುವುದು ವಿಷಾದನೀಯ ಸಂಗತಿ. 2012 ರ ನಿರ್ಭಯಾ ಪ್ರಕರಣದ ನಂತರ ಅತ್ಯಾಚಾರಿಗಳಿಗೆ ಹತ್ತು ವರ್ಷ ಕಾರಾಗೃಹ ಶಿಕ್ಷೆ ವಿಽಸುವ ಕಾನೂನು ಬಂದಿತು. 2018ರಲ್ಲಿ ಭಾರತೀಯ ದಂಡ ಸಂಹಿತೆಗೆ ತಿದ್ದುಪಡಿ ತಂದು ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ನಡೆಸಿದರೆ ಕನಿಷ್ಠ 20 ವರ್ಷ ಸೆರೆವಾಸ ಅಥವಾ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶ ನೀಡಲಾಯಿತು. 2013ರಲ್ಲಿ ಜಾರಿಗೆ ಬಂದ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ ಅಪರಾಧಿಗಳಿಗೆ 20 ವರ್ಷ ಸೆರೆವಾಸ ಅಥವಾ ಜೀವಾವಧಿ ಜೈಲು ಶಿಕ್ಷೆ ನೀಡುವ ಬದಲಾವಣೆ ತರಲಾಗಿದೆ.

ಇದನ್ನೂ ಓದಿ: Jawhar Sircar: ವೈದ್ಯೆ ಕೊಲೆ ಕೇಸ್‌; ಮಮತಾ ವಿರುದ್ಧ ಸ್ವಪಕ್ಷದಲ್ಲೇ ಅಪಸ್ವರ- ರಾಜ್ಯಸಭೆಗೆ ಟಿಎಂಸಿ ಸಂಸದ ರಾಜೀನಾಮೆ; ರಾಜಕೀಯಕ್ಕೂ ಗುಡ್‌ಬೈ

2018ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ವಿಧಿಸಲು ನಿರ್ಭಯಾ ನಿಧಿಯನ್ನು ಬಳಸಿಕೊಂಡು ಮಹಿಳಾ ದೌರ್ಜನ್ಯ ಪ್ರಕರಣ ಗಳ ವಿಚಾರಣೆಗೆ 742 ಮತ್ತು 409 ಪೋಸ್ಕೋ ಪ್ರಕರಣಗಳಿಗೆ -ಟ್ರ್ಯಾಕ್ ಕೋಟ್ ಗಳನ್ನು ತೆರೆಯಲಾಗಿದೆ. ಈ ತ್ವರಿತ ನ್ಯಾಯಲಯ ಗಳಲ್ಲಿ ಈತನಕ 266834 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಹಾಗೆಯೇ 202308 ಮೊಕದ್ದಮೆಗಳು ಇತ್ಯರ್ಥ ವಾಗದೆ ಬಾಕಿ ಇರುವುದು. 2012 ರಲ್ಲಿ ವರ್ಷಕ್ಕೆ ಮಹಿಳೆಯರ ಮೇಲೆ 25000 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದವು.

ಕಳೆದ ಹನ್ನೆರೆಡು ವರ್ಷದಲ್ಲಿ ಈ ಸಂಖ್ಯೆಯು 30000 ದಾಟಿದೆ. ಅಂದರೆ ಕಠಿಣ ಕಾನೂನು ಜಾರಿಯಾದ ನಂತರವೂ ಅತ್ಯಾಚಾರ ಪ್ರಕರಣ ಹೆಚ್ಚಾಗಿರುವುದೇ ವಿನಃ ಕಡಿಮೆಯಾಗಿಲ್ಲ. ದೇಶದಲ್ಲಿ ಪ್ರತಿ ಹದಿನಾರು ನಿಮಿಷಕ್ಕೆ ಒಬ್ಬಳ ಮೇಲೆ ಅತ್ಯಾಚಾರ ನಡೆದರೆ, ಪ್ರತಿ ಗಂಟೆಗೆ 51 ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಆಘಾತಕಾರಿ ಸಂಗತಿಯೇ ಹೌದು. ಪಶ್ಚಿಮ ಬಂಗಾಳದಲ್ಲಿ 332394 ಮಹಿಳಾ ದೌರ್ಜನ್ಯದ ಅತಿ ಹೆಚ್ಚು ದೂರು ದಾಖಲಾಗಿದ್ದರು ಅತಿ ಕಡಿಮೆ ಪ್ರಮಾಣದಲ್ಲಿ ಅಪರಾಧಿಗಳು ಶಿಕ್ಷೆಗೊಳಗಾಗುತ್ತಿದ್ದಾರೆ.

ಪಶ್ಚಿಮ ಬಂಗಾಳದ ಮತ್ತೊಂದು ದಾಖಲೆಯೆಂದರೆ ದೇಶದ ಅತಿ ಕಡಿಮೆ ತ್ವರಿತ ನ್ಯಾಯಲಯಗಳು ಸ್ಥಾಪಿತವಾಗಿರುವುದು. ಹಿಮಾಚಲ ಪ್ರದೇಶದಂತಹ ಸಣ್ಣ ರಾಜ್ಯದಲ್ಲಿ ಆರು ತ್ವರಿತ ನ್ಯಾಯಾಲಯವಿದ್ದರೆ ಇಲ್ಲಿ ಕೇವಲ ಮೂರು ತ್ವರಿತ ನ್ಯಾಯಾಲಯ ತೆರೆಯಲಾಗಿದೆ. ರಾಷ್ಟ್ರೀಯ
ಅಪರಾಧ ವರದಿ ಬ್ಯೂರೊ ಪ್ರಕಾರ ಅತ್ಯಾಚಾರ ಪ್ರಕರಣ ಮಾತ್ರ. ಗ್ಯಾಂಗ್ ರೇಪ್ ಮತ್ತು ಹತ್ಯೆಯ ಪ್ರಕರಣಗಳಲ್ಲಿ ಶೇಕಡಾ 38.8ರಷ್ಟಿದೆ. ಕಠಿಣವಾದ ಕಾನೂನು ಮತ್ತು ಸಂತ್ರಸ್ಥೆಗೆ ಶೀಘ್ರ ನ್ಯಾಯದಾನ ನೀಡಲು ತ್ವರಿತ ನ್ಯಾಯಾಲಯಗಳ ಸ್ಥಾಪನೆಯ ನಂತರವು ವ್ಯವಸ್ಥೆಯಲ್ಲಿನ ದೋಷದ ಪರಿಣಾಮ ಶೇಕಡಾ 75 ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ನಡೆಯುವ ಬಹುತೇಕ ಅತ್ಯಾಚಾರ ಪ್ರಕರಣಗಳು ಠಾಣೆಯ ಮೆಟ್ಟಿಲು ಏರುವುದಿಲ್ಲ. ಸಾಮಾಜಿಕ ಕಳಂಕಕ್ಕೆಹೆದರಿ ಅನೇಕ ಮಹಿಳೆಯರು ದೂರು ಕೊಡಲು ಮುಂದೆ ಬರುವುದಿಲ್ಲ. ದೂರು ಕೊಟ್ಟ ಸಂತ್ರಸ್ಥೆಯು ಹಲವು ಹಂತದಲ್ಲಿ ತನಗಾದ ಘೋರ ಅನುಭವವನ್ನು ಪದೇ ಪದೇ ತನಿಖೆಯ ಹೆಸರಲ್ಲಿ ಹಲವರ ಬಳಿ ಹಂಚಿಕೊಳ್ಳ ಬೇಕಾಗುತ್ತದೆ. ಪುರುಷ ತನಿಖಾಽಕಾರಿಯ ಬಳಿ ಮಹಿಳೆಯು ತನ್ನ ಮೇಲೆ ನಡೆದ ದೌರ್ಜನ್ಯ ವಿವರಿಸಲು ಚಿತ್ರಹಿಂಸೆಗೆ ಒಳಾಗಾಗುತ್ತಾಳೆ. ಇದರಿಂದ ತಪ್ಪಿಸಿಕೊಳ್ಳಲು ದೂರೇ ಕೊಡುವುದಿಲ್ಲ.

ಚಿತ್ರನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್‌ರವರು ಮಹಿಳಾ ದೌರ್ಜನ್ಯದ ಪ್ರಕರಣದಲ್ಲಿ ಆಕೆಯನ್ನು ಪರೀಕ್ಷಿಸುವ ವೈದ್ಯೆಯಿಂದ ಮೊದಲು ಗೊಂಡು ವಕೀಲರು, ನ್ಯಾಯವಾದಿಗಳು ತನಿಖಾಧಿಕಾರಿ ಹೀಗೆ ಸಂಪೂರ್ಣ ಮಹಿಳಾ ತಂಡ ನೇಮಕವಾಗಬೇಕು ಇದರಿಂದ ಮುಕ್ತವಾಗಿ ನಡೆದ ಕೃತ್ಯವನ್ನು ವಿವರಿಸಲು ಸಾಧ್ಯವಾಗಿ ಅಪರಾಧಿಗಳಿಗೆ ಶಿಕ್ಷೆಯ ಸಾಧ್ಯತೆಯು ಹೆಚ್ಚಾಗುವುದು ಎನ್ನುತ್ತಾರೆ.

ಅಪರಾಧಿಯು ಶ್ರೀಮಂತನಾಗಿದ್ದರೆ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಸರಕಾರಿ ವಕೀಲನ ಹತ್ತು ಪಟ್ಟು ಅನುಭವದ ಲಾಯರ್‌ಗಳು ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಮಂಡಿಸುವ ಪ್ರಖರ ವಾದಕ್ಕೆ ಸರಕಾರಿ ವಕೀಲರು ಮಂಕಾಗಿ ಹೋಗಿ ಕೇಸು ಬಿದ್ದು ಹೋಗುತ್ತದೆ. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದರು ಪೊಲೀಸರು ಅಗತ್ಯ ದಾಖಲೆಗಳು ಸಾಕ್ಷ್ಯಾಧಾರಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸದಿದ್ದರೆ ಮೊಕದ್ದಮೆ ಸುದೀರ್ಘವಾಗಿ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಅಪರಾಧಿಯು ನ್ಯಾಯಾಲಯ ಹಿಡಿತದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯುಂಟು ಅಥವಾ ಸಂತ್ರಸ್ಥೆಯು ಮೊಕದ್ದಮೆ ನಡೆಸುವ ಉತ್ಸಾಹವನ್ನೇ ಕಳೆದುಕೊಂಡಿರುತ್ತಾರೆ. 1992ರಲ್ಲಿ ಅಜ್ಮೀರ ದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ೨೦೨೪ರಲ್ಲಿ ಶಿಕ್ಷೆಯಾಗುತ್ತದೆ. ಅಂದರೆ ನ್ಯಾಯಕ್ಕಾಗಿ ಸಂತ್ರಸ್ಥರು 30 ವರ್ಷ ಕಾಯಬೇಕಾಯಿತು ಇಂತಹ ವ್ಯವಸ್ಥೆಯ ಮೇಲೆ ಅತ್ಯಾಚಾರಕ್ಕೆ ಬಲಿಯಾದವರಿಗೆ ನ್ಯಾಯ ದೊರೆಯುವ ವಿಶ್ವಾಸ ವಾದರೂ ಹೇಗೆ ಬರುತ್ತದೆ.

ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಯಾದ ನಂತರ ಅವನ ಕ್ಷಮಾದಾನ ಅರ್ಜಿಯು ರಾಷ್ಟ್ರಪತಿಗಳಿಂದಲೂ ತಿರಸ್ಕೃತವಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಮತ್ತೇ ಅವನು ಸಲ್ಲಿಸಿದ ಅರ್ಜಿಯಾಧಾರದ ಮೇಲೆ ಅವನ ಮರಣ ದಂಡನೆಯನ್ನು 30 ವರ್ಷದ ಕಾರಾಗೃಹ ಶಿಕ್ಷೆಗೆ ಇಳಿಸುತ್ತದೆ. ರಾಷ್ಟ್ರಪತಿಗಳು ಒಮ್ಮೆ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಮೇಲೆ ಪುನಃ ನ್ಯಾಯಾಲಯವು ಮರಣದಂಡನೆಯನ್ನು ರದ್ದು
ಮಾಡಬಾರದು ಎನ್ನುತ್ತಾರೆ ವಕೀಲ ದೊರೈರಾಜ್‌ರವರು. ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಿಗೆ 2013ರಲ್ಲಿ ಗಲ್ಲುಶಿಕ್ಷೆಯಾದರು ಅವರು ನ್ಯಾಯದಾನದ ಲೋಪದೋಷವನ್ನು ದುರುಪಯೋಗ ಮಾಡಿಕೊಂಡು ಅರ್ಜಿಯ ಮೇಲೆ ಅರ್ಜಿ ಸಲ್ಲಿಸಿ ಗಲ್ಲು ಶಿಕ್ಷೆಯಿಂದ ಪಾರಾಗಲು ಹರ ಸಾ
ಹಸ ಮಾಡುತ್ತಾರೆ. ಅಂತಿಮವಾಗಿ 202ರಲ್ಲಿ ಅವರನ್ನು ನೇಣುಗಂಬವೇರಿಸುತ್ತಾರೆ.

ಕೋಲ್ಕತ್ತಾ ವೈದ್ಯೆಯ ಹತ್ಯಾಚಾರ ಪ್ರಕರಣ ನಡೆದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಹತ್ತು ದಿನದ ಅಂತರದಲ್ಲಿಯೇ ದೇಶದಲ್ಲಿ 21 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಉಜ್ಜಯನಿಯಲ್ಲಿ ಹಾಡುಹಗಲೇ ಪುಟ್ ಪಾತಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಹಾದು
ಹೋಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅದರ ಸೆರೆ ಹಿಡಿಯುವುದರಲ್ಲಿ ಮಗ್ನರಾಗಿದ್ದರು. ಸಾರ್ವಜನಿಕರ ನೈತಿಕ ಅಧಃಪತನಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.

ಅತ್ಯಾಚಾರ ಸಂತ್ರಸ್ಥರ ಪರ ವಾದಿಸುವ ಹಿರಿಯ ನ್ಯಾಯವಾದಿ ರೆಬೆಕ ಎ ಜಾನ್ ಹೇಳುತ್ತಾರೆ ಕಾನೂನಿನ ಭಯವೇ ಇಲ್ಲದೆ ಅತ್ಯಾಚಾರಿಗಳು ಅಪರಾಧ ಮಾಡಿ ತಪ್ಪಿಸಿಕೊಳ್ಳಬಹುದು ಎಂದು ತಿಳಿದಿರುತ್ತಾರೆ. ದುರ್ಬಲ ಪೊಲೀಸಿಂಗ್ ವ್ಯವಸ್ಥೆ ಮತ್ತು ಮೊಕದ್ದಮೆ ಹೂಡುವಾಗ ಸ್ಥಿರವಾದ ಕಾನೂನು ಅನ್ವಯಿಸದಿರುವುದು ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಅತ್ಯಾಚಾರ ಪ್ರಕರಣದಿಂದ ದೇಶದ ಯಾವ ರಾಜ್ಯವು ಹೊರತಾಗಿಲ್ಲ ಎಂಬುದನ್ನು ಮರೆಯಬಾರದು. ಮಹಿಳಾ ಸುರಕ್ಷತೆಯು ಇಡೀ ದೇಶಕ್ಕೆ ಸವಾಲಾಗಿರುವ ವಿಷಯವು ಇದರಲ್ಲಿ ರಾಜಕೀಯ ಬೆರಸಿದರೆ ಲಾಭವಾಗುವುದು ಅತ್ಯಾಚಾರಿಗಳಿಗೆ ಮಾತ್ರ. ಈ ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆಯು ರಾಜಕಾರಣಿಗಳಿಗೆ ಬೇಕಾಗಿದೆ.

ಅಧಿಕಾರಸ್ಥರು ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆಗೆ ಬೇಕಾದ ವಿಧಿವಿಜ್ಞಾನ ಪ್ರಯೋಗಾಲಯ ಹೆಚ್ಚು ಮಾಡಲು ಮತ್ತು ನುರಿತ ತಜ್ಞರ ನೇಮಕಮಾಡಲು ಗಮನಹರಿಸಬೇಕು. ಅಪರಾಧಿಗಳು ನುಣಚಿಹೋಗದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಅಗತ್ಯವಿರುವ ಅನುಕೂಲ ಕಲ್ಪಿಸಿ ಅಪರಾಧಿಗಳ ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕು ಮತ್ತು ವೇಗವಾಗಿ ನ್ಯಾಯ ದೊರೆಯುವಂತಾಗಬೇಕು.

ಇಪ್ಪತ್ತೊಂದನೆಯ ಶತಮಾನದಲ್ಲಿ ಮಹಿಳೆಯರು ಪ್ರತಿಯೊಂದು ರಂಗದಲ್ಲಿಯೂ ಪುರುಷರಿಗೆ ಸರಿಸಮಾನವಾಗಿರುವಾಗ ಹಾಗೂ ಶಾಸನ ಸಭೆಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ಪಡೆಯುತ್ತಿರುವ ಸಂದರ್ಭದಲ್ಲಿಯೂ ಮಹಿಳೆ ಯರು ಅಸುರಕ್ಷಿತ ಭಾವನೆ ಅನುಭವಿಸುವುದು ಮತ್ತು
ಅಮಾನುಷವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನಾಗರಿಕ ಸಮಾಜಕ್ಕೆ ಬಹುದೊಡ್ಡ ಕಳಂಕವಾಗಿದೆ. ಅತ್ಯಾಚಾರ ಪ್ರಕರಣಗಳು ರಾಜಕೀಯ ಪ್ರೇರಿತ ಟೀಕೆ ಟಿಪ್ಪಣಿಗೆ ಆಸ್ಪದವಾಗದೆ ಆಡಳಿತ ಮತ್ತು ವಿರೋಧ ಪಕ್ಷಗಳು ಒಂದೇ ಧ್ವನಿ ಮತ್ತು ನಿಲುವು ಕೈಗೊಂಡು ಅಸಹಾಯಕ
ಮಹಿಳೆಯರಿಗೆ ಸುರಕ್ಷತೆಯ ಭಾವನೆ ಮೂಡಿಸುವ ಸಕಾರಾತ್ಮಕ ಕೆಲಸಕ್ಕೆ ಮುಂದಾಗಬೇಕು.