Saturday, 21st September 2024

Dr SadhanaShree Column: ಇಲ್ಲಿದೆ ನೋಡಿ ಪರಸ್ಪರ ಹೊಂದಿಕೆಯಾಗದ ಆಹಾರಗಳ ಪಟ್ಟಿ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ವಿರುದ್ಧ ಆಹಾರವೆಂದರೆ ’ಪರಸ್ಪರ ಹೊಂದದ/ ಪರಸ್ಪರ ವಿರುದ್ಧ ಗುಣ ಗಳಿರುವ ಆಹಾರ ದ್ರವ್ಯಗಳನ್ನು ಒಮ್ಮೆಲೇ ಸಂಯೋಜಿಸಿ ಸೇವಿಸಿದಾಗ, ಅವು ದೇಹದಲ್ಲಿ ಸರಿಯಾಗಿ ಪಾಕವಾಗದೆ, ತ್ರಿದೋಷಗಳನ್ನು ಕೆರಳಿಸಿ, ಈ ಕೆರಳಿದ ತ್ರಿದೋಷಗಳು ದೇಹದಿಂದ ಆಚೆಯೂ ಹೋಗದ ಹಾಗೆ ಅವರೋಧಿಸಿ, ಇದರಿಂದ ರೋಗೋತ್ಪತ್ತಿಗೆ ಕಾರಣವಾಗುವ ದ್ರವ್ಯಗಳನ್ನು ವಿರುದ್ಧ ಆಹಾರ’, ಅಂತ ಕರೆಯುತ್ತೇವೆ. ಹಿಂದೆಂದೂ ಕಾಣದ, ಕೇಳದ, ಅರಿಯದ, ಚಿಕಿತ್ಸೆಗೆ ಅತ್ಯಂತ ಸವಾಲಾಗಿರುವ ಹೊಸ ಹೊಸ ರೋಗಗಳ ಉತ್ಪತ್ತಿಗೆ ಈ ವಿರುದ್ಧ ಆಹಾರ ಸೇವನೆಯೇ ಬಹು ಮುಖ್ಯವಾದ ಕಾರಣ ವೆಂದರೆ ಅದು ತಪ್ಪಾಗಲಾರದು. ಈಗಿನ ಆಹಾರ ಸೇವನಾ ಪದ್ಧತಿಗಳನ್ನು ಅವಲೋಕಿಸಿದರೆ, ಶೇ.90ರಷ್ಟು ಖಾದ್ಯ ಗಳೆಲ್ಲವೂ ವಿರುದ್ಧ ಆಹಾರದ ಅಡಿಯ ಬರುತ್ತದೆ ಎನ್ನುವುದು ಬಹಳ ಭಯ ಹುಟ್ಟಿಸುವಂತಹ ವಿಷಯ ವಾಗಿದೆ.

ಆಚಾರ್ಯ ಚರಕರು ೧೮ ವಿಧವಾದ ವಿರುದ್ಧ ಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಅವುಗಳನ್ನು ಹೆಸರಿಸ ಬೇಕಾದರೆ: ದೇಶ ವಿರುದ್ಧ, ಕಾಲ ವಿರುದ್ಧ, ಅಗ್ನಿ ವಿರುದ್ಧ, ಮಾತ್ರ ವಿರುದ್ಧ, ಸಾತ್ಮ್ಯ ವಿರುದ್ಧ, ದೋಷ ವಿರುದ್ಧ, ಸಂಸ್ಕಾರ ವಿರುದ್ಧ, ವೀರ್ಯ ವಿರುದ್ಧ, ಕೋಷ್ಠ ವಿರುದ್ಧ, ಅವಸ್ಥಾ ವಿರುದ್ಧ, ಕ್ರಮ ವಿರುದ್ಧ, ಪರಿಹಾರ ವಿರುದ್ಧ, ಉಪಚಾರ ವಿರುದ್ಧ, ಪಾಕ ವಿರುದ್ಧ, ಸಂಯೋಗ ವಿರುದ್ಧ, ಹೃದ್ ವಿರುದ್ಧ, ಸಂಪತ್ ವಿರುದ್ಧ ಮತ್ತು ವಿಧಿ ವಿರುದ್ಧ.
ಇವುಗಳಲ್ಲಿ ಮುಖ್ಯವಾಗಿ ಆಹಾರಕ್ಕೆ ಸಂಬಂಧ ಪಟ್ಟ ಕೆಲವು ವಿರುದ್ಧಗಳನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ.

ನಮ್ಮೆಲ್ಲರಿಗೂ ತಿಳಿದಂತೆ ಹಾಲು ಅತ್ಯಂತ ಆರೋಗ್ಯಕರವಾದಂತಹ ವಸ್ತು. ಆದರೆ, ಇದನ್ನು ಕ್ರಮವಿಲ್ಲದೆ ಬಳಸಿ ದಾಗ ಇದು ಸಹ ವಿರುದ್ಧ ಆಹಾರವಾಗಿ ಪರಿಣಮಿಸುತ್ತದೆ. ಹಾಲಿನ ಜೊತೆಗೆ ಹುಳಿ ರುಚಿ ಇರುವ ಪದಾರ್ಥ ಗಳನ್ನು ಒಟ್ಟುಗೂಡಿಸಿ ಸೇವಿಸಿದಾಗ ಅದು ವಿರುದ್ಧ ಆಹಾರವಾಗಿ ಮಾರ್ಪಾಡಾಗುತ್ತದೆ. ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಬಹಳ ಪ್ರಚಲಿತದಲ್ಲಿರುವ ’morning breakfast bowls’ ಬಗ್ಗೆ ಇಲ್ಲಿ ಹೇಳಲು ಇಷ್ಟಪಡು ತ್ತೇನೆ. ಈ ಒಂದು ಟ್ರೆಂಡ್‌ನಲ್ಲಿ ಒಂದೇ ಬಟ್ಟಲಿನಲ್ಲಿ ವಿವಿಧ ರೀತಿಯ ಹಣ್ಣು ಮತ್ತು ಹಾಲುಗಳನ್ನು ಸೇರಿಸಿ ಸೇವಿಸುವುದು ಯುವ ಜನಾಂಗದಲ್ಲಿ ಚಾಲ್ತಿಯಲ್ಲಿರುವ ಒಂದು ಅಭ್ಯಾಸ.

ಆದರೆ ಆಯುರ್ವೇದದ ಪ್ರಕಾರ ಯಾವುದೇ ಹಣ್ಣು, ವಿಶೇಷವಾಗಿ ಹುಳಿ ರುಚಿ ಇರುವ ಹಣ್ಣುಗಳ ಜೊತೆಗೆ ಹಾಲನ್ನು ಬೆರೆಸುವುದು ದೇಹದಲ್ಲಿ ವಿಷವಾಗಿ ಮಾರ್ಪಾಡಾಗುತ್ತದೆ. ಮಾವಿನಹಣ್ಣಿನ ಮಿಲ್ಕ್ ಶೇಕ್, ಕಿವಿ ಹಣ್ಣಿನ ಐಸ್ ಕ್ರೀಮ, ಲಿಚಿ ಐಸ್ ಕ್ರೀಮ, ಆರೆಂಜ್ ಮಿಲ್ಕ ಶೇಕ್, ಸ್ಟ್ರಾಬೆರಿ‌ ಮಿಲ್ಕ್ ಶೇಕ್‌ಗಳು ಆರೋಗ್ಯಕ್ಕೆ ಹಾನಿಕರ. ನಾವು
ಹೊರಗಡೆ ಊಟಕ್ಕೆ ಹೋದಾಗ ಸಾಮಾನ್ಯವಾಗಿ‌ ಹೊಟ್ಟೆ ತುಂಬಾ ತಿಂದ ಮೇಲೆ ಫ್ರುಟ್ ಸಲಾಡ್ ವಿತ್ ಐಸ್ ಕ್ರೀಮ್ ಮತ್ತು ಕಸ್ಟರ್ಡ್ ತಿನ್ನುವ ಅಭ್ಯಾಸ. ಇದು ವಿರುದ್ಧ ಆಹಾರದ ಮತ್ತೊಂದು ಉದಾಹರಣೆ. ಇದು ನೇರವಾಗಿ ನಮ್ಮ ಅಗ್ನಿಯನ್ನು ಹಾಳು ಮಾಡಿ ವಿವಿಧ ಕಾಯಿಲೆಗಳಿಗೆ ನಾಂದಿ ಹಾಡುತ್ತದೆ.

ಆಯುರ್ವೇದ ಶಾಸ್ತ್ರದಲ್ಲಿ ವಿಶೇಷವಾಗಿ ಬಾಳೆಹಣ್ಣನ್ನು ಹಾಲಿನ ಜೊತೆ ಸೇವಿಸುವುದರ ಬಗ್ಗೆ ಹೇಳಿದ್ದಾರೆ. ಇದು ಮತ್ತೊಂದು ವಿರುದ್ಧ ಆಹಾರದ ಉದಾಹರಣೆ. ಬಾಳೆಹಣ್ಣನ್ನು ತಿಂದು ಹಾಲು ಕುಡಿಯುವುದು, ಬಾಳೆಹಣ್ಣಿನ ಮಿಲ್ಕ್ ಶೇಕ್, ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣು+ ಹಾಲು+ ಓಟ್ಸ್ ಸೇವಿಸುವುದು, ಬಾಳೆಹಣ್ಣಿನ ರಸಾಯನಕ್ಕೆ ಹಾಲು‌ ಸೇರಿಸುವುದು, ಬಾಳೆಹಣ್ಣಿನ ಐಸ್ ಕ್ರೀಮ್ ಹಾಗೂ ಬಾಳೆಹಣ್ಣಿನ ಜೊತೆ ಮೊಸರು ಅಥವಾ ಮಜ್ಜಿಗೆಯ
ಬೆರಿಕೆಗಳು ಸಹ ವಿರುದ್ಧ ಆಹಾರದ ಉದಾಹರಣೆಗಳು.

ಒಂದು ಸಂಶೋಧನೆಯ ಪ್ರಕಾರ ಈ ರೀತಿ ಬಾಳೆಹಣ್ಣು ಮತ್ತು ಹಾಲನ್ನು ಪ್ರತಿನಿತ್ಯ ಬಳಸುವವರಲ್ಲಿ ಲಿವರ್, ಹಾರ್ಟ್ ಮತ್ತು ಕಿಡ್ನಿಗಳಲ್ಲಿ ರಚನಾತ್ಮಕ ಮತ್ತು ಕ್ರಿಯಾತ್ಮಕ‌ ಬದಲಾವಣೆಗಳು ಕಂಡುಬಂದಿವೆ. ವಿಶೇಷವಾಗಿ
ಸಣ್ಣ ಮಕ್ಕಳಿಗೆ ಈ ಸಂಯೋಗವನ್ನು ಉಪಹಾರ ವಾಗಿ ಕೊಡುವುದನ್ನು ನಾವು ಖಂಡಿತವಾಗಿ ನಿಲ್ಲಿಸಬೇಕು, ಇಲ್ಲವಾದರೆ ಬೆಳೆಯುತ್ತಾ ಅವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗೆಯೇ, ಹಾಲು ಅಥವಾ ಹಾಲಿನ ಕ್ರೀಮ್ ಜೊತೆ ಉಪ್ಪಿನ ಪದಾರ್ಥವನ್ನು ಸೇವಿಸುವುದು ಸಹ ನಿಷಿದ್ಧ. ಉದಾಹರಣೆಗೆ, ನಾವು ಸೇವಿಸುವ ಚಹಾ ಅಥವಾ ಕಾಫಿಯ ಜೊತೆ ಸಾಲ್ಟ ಬಿಸ್ಕೆಟ್ ಮತ್ತು ಕರಿದ ಚೌಚೌ ಇತ್ಯಾದಿಗಳನ್ನು ಸೇವಿಸುವುದು,
ಸೂಪ್/ ಗ್ರೇವಿಗಳಿಗೆ ಹೆವಿ ಮಿಲ್ಕ ಕ್ರೀಮ್ ಬಳಸುವುದು, ಪಾಸ್ತಾ ಗಳಲ್ಲಿ ಹಾಲು ಅಥವಾ ಹಾಲಿನ ಕ್ರೀಮ್ ಬಳಸು ವುದು ವಿರುದ್ಧ ಆಹಾರದ ಬಹುಮುಖ್ಯವಾದ ಉದಾಹರಣೆಗಳು.

ಕ್ಷಾರೀಯ ಪಾನೀಯಗಳನ್ನು ಹಾಲಿನ ಜೊತೆ ಬಳಸುವುದು ಸಹ ವಿರುದ್ಧವೇ. ಚಾಲ್ತಿಯಲ್ಲಿರುವ ಕೋಲಾ ಮಿಲ್ಕ್ ಶೇಕ್ ಅಥವಾ ಕೋಕ್ ಫ್ರೂಟ್ ನಂತಹ ಸಂಯೋಗಗಳು ದೇಹದಲ್ಲಿ ತೊಂದರೆಯನ್ನು ಉಂಟುಮಾಡುವುದು ಖಚಿತ. ನಾವೆಲ್ಲರೂ ಮನೆಗಳಲ್ಲಿ ಸಾಮಾನ್ಯವಾಗಿ ಮಾಡುವ ಮತ್ತೊಂದು ತಪ್ಪು ಅಭ್ಯಾಸ, ಹಾಗೆಯೇ ವಿರುದ್ಧ
ಆಹಾರವೂ ಸಹ ಎಂದರೆ ಹುಳಿಯಾದ ಮೊಸರಿನ ಜೊತೆ ಹಾಲನ್ನು ಬೆರೆಸಿಕೊಂಡು ತಿನ್ನುವುದು. ಮೊಸರು ಅತಿಯಾಗಿ ಹುಳಿಯಾದಾಗ ಸೇವಿಸಲು ಹಿತಕರವಿಲ್ಲದಿದ್ದಾಗ ಅದರ ಹುಳಿ ಅಂಶವನ್ನು ಕಡಿಮೆ ಮಾಡಲು ನಾವು ಸಾಮಾನ್ಯವಾಗಿ ಸ್ವಲ್ಪ ಹಾಲನ್ನು ಅದಕ್ಕೆ ಬೆರೆಸಿಕೊಂಡು ತಿನ್ನುತ್ತೇವೆ. ಆದರೆ, ಜೋಕೆ!

ಇದು ಸಹ ವಿರುದ್ಧ ಆಹಾರವೇ. ಇದೇ ಸಂದರ್ಭದಲ್ಲಿ ಮತ್ತೊಂದು ಉದಾಹರಣೆ ಎಂದರೆ ಮೊಸರಿನ ಮಿಲ್ಕ ಶೇಕ್‌ಗಳು. ಹೌದು ನಿಮಗೆ ಕೇಳಿದರೆ ಆಶ್ಚರ್ಯವಾಗಬಹುದು ಆದರೆ yogurt milkshake ಗಳು ಸಾಮಾನ್ಯವಾಗಿ ಅತಿ ಹೆಚ್ಚು ವರ್ಕೌಟ್ ಮಾಡುವ ಜನರಲ್ಲಿ ತುಂಬಾ ಪ್ರಚಲಿತವಾಗಿರುವ ಆಹಾರ. ಆದರೆ ನೆನಪಿಡಿ ಇದು ಸಹ ವಿರುದ್ಧ ಆಹಾರವೇ.

ಆಯುರ್ವೇದದ ಗ್ರಂಥಗಳು ಚರ್ಮ ಕಾಯಿಲೆಗಳಿಗೆ ಉದಾಹರಣೆ ಕೊಡುವಾಗ ಹೇಳುವ ಬಹಳ ಮುಖ್ಯವಾದಂತಹ ವಿರುದ್ಧ ಆಹಾರವೆಂದರೆ ಮೀನು ಮತ್ತು ಹಾಲನ್ನು ಜೊತೆಯಾಗಿ ಸೇವಿಸುವುದು. ಮೀನು ಬಹಳ ಉಷ್ಣವಾದ ದ್ರವ್ಯ, ಅದರ ತದ್ವಿರುದ್ಧವಾಗಿ ಹಾಲು ಶೀತ ಪದಾರ್ಥ. ಈ ಎರಡು ಪರಸ್ಪರ ವಿರುದ್ಧ ಗುಣಗಳಿರುವ ಆಹಾರಗ
ಳನ್ನು ಒಟ್ಟಿಗೆ ಸೇವಿದರೆ ಅದು ಜೀರ್ಣಾಂಗದಲ್ಲಿ ಸರಿಯಾಗಿ ಪಾಕಗೊಳ್ಳದೆ ದೇಹದಲ್ಲಿ ಉಳಿದುಕೊಂಡು ವಿವಿಧ ರೀತಿಯ ವಿಷಗಳನ್ನು ದೇಹದಲ್ಲಿ ಉತ್ಪಾದನೆ ಮಾಡಿ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ಚರ್ಮದ, ಗುಣಪಡಿಸಲು ಬಹಳ ಕಷ್ಟವಾದ ಕಾಯಿಲೆಗಳಿಗೆ ಈ ಒಂದು ವಿರುದ್ಧ ಆಹಾರ ಕಾರಣವಾಗುತ್ತದೆ.
ಸಿರಿಧಾನ್ಯಗಳನ್ನು ಬಳಸುವಾಗಲೂ ಸಹ ನಾವು ಎಚ್ಚರದಿಂದ ಮಾಡಬೇಕು.

ಸಿರಿಧಾನ್ಯಗಳನ್ನು ಹಾಲಿನಲ್ಲಿ ಬೇಯಿಸಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯ ಅಭ್ಯಾಸವಲ್ಲ. ಅಂತೆಯೇ, ಕಾರ್ನ್ ಫ್ಲೆಕ್ಸ್ ಜೊತೆಗೆ ಹಾಲಿನ ಸೇವನೆಯು ಆಯುರ್ವೇದದ‌ ಪ್ರಕಾರ ನಿತ್ಯ ಸೇವನೆಗೆ ಸೂಕ್ತವಾದ ಪದ್ಧತಿಯಲ್ಲ. ಇನ್ನು ಹುರಳಿ, ಅವರೇ, ಉದ್ದಿನ ಬೇಳೆ, ರಾಜ್ಮ, ಸೊಯಾ, ಮಶ್ರೂಮ್- ಇವುಗಳನ್ನು ಸಹ ಹಾಲಿನ ಜೊತೆ ಸೇವಿಸುವುದು ವಿರುದ್ಧ ಆಹಾರವಾಗುತ್ತದೆ. ಸಾಮಾನ್ಯವಾಗಿ, ಉತ್ತರ ಭಾರತೀಯ ಖಾದ್ಯ ಗಳನ್ನು ತಯಾರಿಸುವಾಗ ಅದರ ಮೇಲೆ ಮಿಲ್ಕ್ ಕ್ರೀಮ್ ಅನ್ನು ಹಾಕುವ ಅಭ್ಯಾಸ ಇತ್ತೀಚೆಗೆ ಬಹಳ‌ ಕಾಣಬಹುದು. ಆದರೆ ನೆನಪಿಡಿ ದಾಲ್ ಮಖನಿ, ರಾಜ್ಮ ಮಸಾಲ, ಮುಶ್ರೂಮ್ ಸೂಪ್ – ಇವುಗಳ ಜೊತೆ ಮಿಲ್ಕ್ ಕ್ರೀಮ್ ಒಳ್ಳೆಯದಲ್ಲ. ಇನ್ನು, ಬಳ್ಳಿಯಲ್ಲಿ ಬೆಳೆಯುವ ತರಕಾರಿಗಳಾದ ಸೌತೆಕಾಯಿ, ಕುಂಬಳಕಾಯಿ, ಮೊಳಕೆ ಕಾಳು, ಕಳಲೆ ಇವುಗಳನ್ನು ಸಹ ಹಾಲಿನ ಜೊತೆ ಬಳಸಿದರೆ ವಿರುದ್ಧವಾಗುತ್ತದೆ.

ಇವಿಷ್ಟು ಹಾಲಿನ ವಿಚಾರವಾದರೆ, ಈಗ ಮೊಸರಿನ ವಿಚಾರಕ್ಕೆ ಬರೋಣ. ಆಯುರ್ವೇದವು ಮೊಸರನ್ನು ಬಳಸುವು ದಕ್ಕೆ ಸೇವನಾಕ್ರ ಮವನ್ನು ಸೂಚಿಸಿದೆ. ಮೊಸರನ್ನು ವಸಂತ , ಗ್ರೀಷ್ಮ ಹಾಗೂ ಶರತ್ ಋತುವಿನಲ್ಲಿ ಬಳಸಬಾರದು. ಉಳಿದ ಋತುಗಳಲ್ಲಿ ಕೇವಲ ದಿನದಲ್ಲಿ ಮಾತ್ರ ಬಳಸತಕ್ಕದ್ದು. ಎಂದಿಗೂ ಸಹ ಮೊಸರಿನ ರಾತ್ರಿ ಬಳಕೆ ನಿಷಿದ್ಧ. ಮೊಸರನ್ನು ಎಂದಿಗೂ ಬಿಸಿ ಮಾಡಬಾರದು ಅಥವಾ ಬಿಸಿ ಪದಾರ್ಥಗಳೊಡನೆ ಬಳಸಬಾರದು. ಪೂರ್ತಿ ಹೆಪ್ಪಾಗದ ಮೊಸರು ಅನಾರೋಗ್ಯಕರ. ಮೊಸರನ್ನು ಹಾಗೆಯೇ ಬಳಸದೆ ಸದಾ ಕಲ್ಲುಸಕ್ಕರೆ/ ಹೆಸರು ಬೇಳೆಕಟ್ಟು/ ಜೇನುತುಪ್ಪ/ ನೆಲ್ಲಿಪುಡಿಯೊಂದಿಗೆ ಸೇವಿಸಬೇಕು. ಈ ಕ್ರಮದಲ್ಲಿ ಸೇವಿಸದಿದ್ದಾಗ ಮೊಸರು ಹಾನಿ ತರಬಹುದು. ಮೊಸರಿನ ಜೊತೆ ಮಾಡುವ ಮೊಸರು ವಡೆಯಂತಹ ಉದ್ದಿನ ಪದಾರ್ಥವು ಒಳ್ಳೆಯದಲ್ಲ.

ಇದೂ ವಿರುದ್ಧವೇ! ಇನ್ನು ಮೊಸರಿನ ಜೊತೆ ಉಪ್ಪು / ಉಪ್ಪಿನಕಾಯಿ / ಕೋಳಿ ಮಾಂಸವನ್ನು ಬಳಸಬಾರದು. ನಾನು ಆಗಲೇ ಹೇಳಿದ ಹಾಗೆ, ಹಣ್ಣಿನ ಜೊತೆ ಮೊಸರನ್ನು ಬೆರೆಸಕೂಡದು. ಮೊಸರನ್ನು ಬಿಸಿ ಮಾಡ ಬಾರದು. ಮಜ್ಜಿಗೆ ಹುಳಿ / ಕಡಿ ಮುಂತಾದ ಖಾದ್ಯಗಳಲ್ಲಿ ಚೆನ್ನಗಿ ಕಡಿದ ಮಜ್ಜಿಗೆಯನ್ನೇ ಬಳಸತಕ್ಕದ್ದು. ಬಿರಿಯಾನಿ, ಯೋಗರ್ಟ್ ಕುಕೀಸ್, ರವಾ ಇಡ್ಲಿ, ರವಾ ದೋಸ , ಪನೀರ್ ಟಿಕ್ಕಾದಂತಹ ಪದಾರ್ಥಗಳೊಡನೆ ಮೊಸರನ್ನು ಹಾಕಿ ಅವುಗಳನ್ನು ತಯಾರಿಸುತ್ತಿದ್ದರೆ ಇಂದೇ ನಿಲ್ಲಿಸಿ! ಅದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಇನ್ನು ಹಂದಿಮಾಂಸ, ಕೋಳಿಮಾಂಸ, ಆಡಿನ ಮಾಂಸಗಳ ಜೊತೆಗೆ ಮೊಸರನ್ನು ಸಂಯೋಜಿಸುವುದು ವಿರುದ್ಧ ಪದಾರ್ಥಗಳಾಗಿ ಪರಿಣಮಿಸುತ್ತದೆ.

ಸ್ನೇಹಿತರೆ, ಹಾಲು ಮತ್ತು ಮೊಸರು ಅತ್ಯಂತ ಪೌಷ್ಟಿಕವಾದಂತಹ ಆಹಾರವಾಗಿದ್ದರೂ ಸಹ ಅದನ್ನು ಬಹಳ ವಿವೇಚನೆಯಿಂದ ಉಪಯೋಗಿಸಬೇಕು ಎಂದು ಆಯುರ್ವೇದ ತಿಳಿಸುತ್ತದೆ. ಇಲ್ಲವಾದರೆ, ಆರೋಗ್ಯವನ್ನು ಪಡೆದು ಕೊಳ್ಳುವ ಬದಲು ಇರುವ ಅಲ್ಪಸ್ವಲ್ಪ ಆರೋಗ್ಯವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ.

ಮುಂದೆ, ಸ್ವಲ್ಪ ತುಪ್ಪದ ವಿಚಾರವನ್ನು ನೋಡೋಣ. ತುಪ್ಪದ ಜೊತೆಗೆ ತಣ್ಣಗಿನ ಆಹಾರ ಅಥವಾ ಪಾನೀಯಗಳು ಸದಾ ವಿರುದ್ಧ. ತುಪ್ಪದಿಂದ ಮಾಡಿದ ಅಡಿಗೆ/ ಸಿಹಿಖಾದ್ಯಗಳನ್ನು ತಿಂದು ತಕ್ಷಣವೇ ತಣ್ಣೀರು ಕುಡಿಯುವುದು/ ತಂಪಾದ ಪಾನೀಯಗಳನ್ನು ಸೇವಿಸುವುದು, ಜ್ಯೂಸ್ /ಐಸ್ ಕ್ರೀಂಗಳನ್ನು ತಿನ್ನುವುದರಿಂದ ಆರೋಗ್ಯದ ವ್ಯತ್ಯಾಸ
ವಾಗಬಹುದು. ನೆನಪಿಡಿ, ತುಪ್ಪದ ಜೊತೆಗೆ/ ತುಪ್ಪದಿಂದ ಮಾಡಿದ ಖಾದ್ಯಗಳ ಜೊತೆಗೆ ಸದಾ ಬಿಸಿನೀರು ಹಿತಕರ.

ಇನ್ನು, ಜೇನುತುಪ್ಪದ ಬಗ್ಗೆ ತಿಳಿಸುವುದಾದರೆ ಯಾವುದೇ ಬಿಸಿ ವಸ್ತುವಿನ ಜೊತೆಗೆ ಜೇನನ್ನು ಬೆರೆಸುವುದು ವಿರುದ್ಧ ವೆನ್ನುವುದು ಆಯುರ್ವೇದದ ಕಿವಿಮಾತು. ಜೇನನ್ನು ಬಿಸಿ ಮಾಡಿದರೆ ಅದು ವಿಷಕ್ಕೆ ಸಮನಾದ ಪರಿಣಾಮ ವನ್ನು ದೇಹದ ಮೇಲೆ ಬೀರುತ್ತದೆ. ಉದಾಹರಣೆಗೆ ಬಿಸಿ ನೀರಿನ ಜೊತೆಗೆ ಜೇನುತುಪ್ಪವನ್ನು ಸೇವಿಸು ವುದು/ ಬಿಸಿ ಚಪಾತಿ ಅಥವಾ ದೋಸೆ/ ಬಿಸಿಹಾಲಿನ ಜೊತೆಗೆ ಜೇನುತುಪ್ಪವನ್ನು ಬಳಸುವುದು ಬೇಡ. ಬಿಸಿನೀರಿನ ಜೊತೆ ಜೇನುತುಪ್ಪ, ಬ್ರೆಡ್ ಮೇಲೆ ಜೇನುತುಪ್ಪ ಸವರಿಟೋ ಮಾಡುವುದು, ಹನಿ ಚಿಲ್ಲಿ ಪೊಟಾಟೋದಂತಹ ಪದಾರ್ಥ ಗಳು ಅತಿಯಾಗಿ ಹಾನಿಕರ. ಅದೇ ರೀತಿ ಅತಿ ಉಷ್ಣ ಕಾಲದಲ್ಲಿ ಜೇನುತುಪ್ಪವನ್ನು ಬಳಸುವುದು ಸಹ ವಿರುದ್ಧವಾಗಿ ಪರಿಣಮಿಸು ತ್ತದೆ. ಇನ್ನು, ಕಮಲದ ಬೀಜಗಳ (makhana) ಜೊತೆಗೆ ಜೇನುತುಪ್ಪದ ಸಂಯೋಗವೂ ವಿರುದ್ಧ. ಅಂತೆಯೇ, ಸಮ ಪ್ರಮಾಣದಲ್ಲಿ ಜೇನು ಮತ್ತು ತುಪ್ಪವನ್ನು ಬಳಸುವುದು ಸಹ ವಿರುದ್ಧವೇ. ಬಿಸಿಯಾದ ಮತ್ತು ತಣ್ಣಗಿನ ಆಹಾರ ಗಳನ್ನು ಒಟ್ಟಿಗೆ ಸೇವಿಸುವುದು ವಿರುದ್ಧವಾಗುತ್ತದೆ.

ಉದಾಹರಣೆಗೆ- ಸಿಸಲರ್ ಬ್ರೌನಿ, ಹಾಟ್ ಚಾಕಲೇಟ್ ಫಡ್ಜ್, ಐಸ್ ಕ್ರೀಮ್ ಬೋಂಡಾ, ಐಸ್ ಕ್ರೀಮ್ ದೋಸ ಇತ್ಯಾದಿ. ಅದೇ ರೀತಿಯಾಗಿ ಅತಿಯಾಗಿ ಬೆವರಿದ ಅಥವಾ ಬಿಸಿಲಿಗೆ ಮೈಯೊಡ್ಡಿದ ತಕ್ಷಣ‌ ತಣ್ಣೀರಿನ ಸ್ನಾನ ಮಾಡುವುದು ಅಥವಾ ಫ್ರಿಜ್ಜಿನ ನೀರು ಕುಡಿಯುವುದು ಸಹ ವಿರುದ್ಧ ಆಹಾರವೇ. ಶೀತಕಾಲದಲ್ಲಿ ಶೀತ ಪದಾರ್ಥಗಳನ್ನು ಅತಿ ಯಾಗಿ ಬಳಸುವುದು ಮತ್ತು ಉಷ್ಣಕಾಲದಲ್ಲಿ ಉಷ್ಣ ವೀರ್ಯವಿರುವ ಪದಾರ್ಥಗಳನ್ನು ಬಳಸುವುದು ವಿರುದ್ಧ ಆಹಾರವಾಗಿಯೇ ಪರಿಣಮಿಸುತ್ತದೆ.

ದೇಹದ ಜಠರಾಗ್ನಿಯು ಮಂದವಾಗಿದ್ದಾಗ/ ಹಸಿವೆ ಮತ್ತು ಜೀರ್ಣಶಕ್ತಿ ಹೆಚ್ಚಾಗಿ ಇಲ್ಲದಿದ್ದಾಗ, ಜೀರ್ಣಕ್ಕೆ ಜಡವಾದ ಆಹಾರವನ್ನು ಸೇವಿಸುವುದು ವಿರುದ್ಧಾಹಾರಕ್ಕೆ ಸಮವೇ. ಇನ್ನು ಆಯುರ್ವೇದದ ಶಾಸ್ತ್ರದಲ್ಲಿ ಹೇಳಿರುವ ಆಹಾರ ಸೇವನಾ ವಿಧಿಯನ್ನು ಪಾಲಿಸದೆ, ಮನ ಬಂದಂತೆ ಆಹಾರವನ್ನು ಸೇವಿಸಿದರೆ ಅದು ವಿರುದ್ಧ ಆಹಾರದಂತೆಯೇ ವಿಷವಾಗಿ ದೇಹವನ್ನು ಹಾನಿ ಮಾಡಬಹುದು. ಆದ್ದರಿಂದ ಸೇವಿಸುವ ಆಹಾರ ಎಷ್ಟು ಮುಖ್ಯವೋ ಸೇವಿಸುವ
ಕ್ರಮವೂ ಸಹ ಅಷ್ಟೇ ಮುಖ್ಯ. ಆದ್ದರಿಂದ, ನಾನು ಹೇಳುವ ಕಿವಿಮಾತೇನೆಂದರೆ ಆಯುರ್ವೇದದಲ್ಲಿ ಹೇಳಿರುವ ಆಹಾರ ಸೇವನಾ ಕ್ರಮವನ್ನು ಅರಿತು, ಅದರಂತೆಯೇ ನಮ್ಮ ಆಹಾರಗಳನ್ನು ಸರಿಪಡಿಸಿ ಕೊಂಡು, ನಮ್ಮ ಆಹಾರ ವನ್ನೇ ನಮ್ಮ ಔಷಧವನ್ನಾಗಿ ಮಾಡಿಕೊಂಡರೆ- ಅದುವೇ ಈ ವಿರುದ್ಧ ಆಹಾರವೆಂಬ ವಿಷಕ್ಕೆ ಸರಿಯಾದ ಪ್ರತಿ ವಿಷ!

ದೇಹದ ಜಠರಾಗ್ನಿಯು ಮಂದವಾಗಿದ್ದಾಗ/ ಹಸಿವೆ ಮತ್ತು ಜೀರ್ಣಶಕ್ತಿ ಹೆಚ್ಚಾಗಿ ಇಲ್ಲದಿದ್ದಾಗ, ಜೀರ್ಣಕ್ಕೆ ಜಡವಾದ ಆಹಾರವನ್ನು ಸೇವಿಸುವುದು ವಿರುದ್ಧಾಹಾರಕ್ಕೆ ಸಮವೇ. ಇನ್ನು ಆಯುರ್ವೇದದ ಶಾಸ್ತ್ರದಲ್ಲಿ ಹೇಳಿರುವ ಆಹಾರ ಸೇವನಾ ವಿಧಿಯನ್ನು ಪಾಲಿಸದೆ, ಮನ ಬಂದಂತೆ ಆಹಾರವನ್ನು ಸೇವಿಸಿದರೆ ಅದು ವಿರುದ್ಧ ಆಹಾರದಂತೆಯೇ ವಿಷವಾಗಿ ದೇಹವನ್ನು ಹಾನಿ ಮಾಡಬಹುದು. ಆದ್ದರಿಂದ ಸೇವಿಸುವ ಆಹಾರ ಎಷ್ಟು ಮುಖ್ಯವೋ ಸೇವಿಸುವ
ಕ್ರಮವೂ ಸಹ ಅಷ್ಟೇ ಮುಖ್ಯ. ಆದ್ದರಿಂದ, ನಾನು ಹೇಳುವ ಕಿವಿಮಾತೇನೆಂದರೆ ಆಯುರ್ವೇದದಲ್ಲಿ ಹೇಳಿರುವ ಆಹಾರ ಸೇವನಾ ಕ್ರಮವನ್ನು ಅರಿತು, ಅದರಂತೆಯೇ ನಮ್ಮ ಆಹಾರಗಳನ್ನು ಸರಿಪಡಿಸಿ ಕೊಂಡು, ನಮ್ಮ ಆಹಾರ ವನ್ನೇ ನಮ್ಮ ಔಷಧವನ್ನಾಗಿ ಮಾಡಿಕೊಂಡರೆ- ಅದುವೇ ಈ ವಿರುದ್ಧ ಆಹಾರವೆಂಬ ವಿಷಕ್ಕೆ ಸರಿಯಾದ ಪ್ರತಿ ವಿಷ!