ಮುಂಬಯಿ: ಬಹುನಿರೀಕ್ಷಿತ ಐಪಿಎಲ್ 18ನೇ(IPL 2025) ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಆಟಗಾರರ ರಿಟೇನ್ ನಿಯಮಾವಳಿಯನ್ನು(IPL 2025 Retention Policy) ಬಿಸಿಸಿಐ(BCCI) ಮಾಸಾಂತ್ಯದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿ ಪ್ರಕಟಿಸಲು ನವೆಂಬರ್ 15ರವರೆಗೆ ಸಮಯಾವಕಾಶ ಕಲ್ಪಿಸುವ ಸಾಧ್ಯತೆ ಕಂಡುಬಂದಿದೆ. ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯಲಿದೆ.
ಈ ಹಿಂದೆನ ನಿರ್ಧಾರದ ಪ್ರಕಾರ ಆಗಸ್ಟ್ ಅಂತ್ಯದಲ್ಲೇ ಆಟಗಾರರ ರಿಟೇನ್ ನಿಯಮಾವಳಿ ಪ್ರಕಟಗೊಳ್ಳಬೇಕಾಗಿತ್ತು. ಆದರೆ ಕೆಲ ಫ್ರಾಂಚೈಸಿಗಳ ಹಲವು ಬೇಡಿಕೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ಹೀಗಾಗಿ ನಿಯಮಾವಳಿ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಯಿತು. ಐಪಿಎಲ್ ಮೂಲಗಳ ಪ್ರಕಾರ ಸೆಪ್ಟೆಂಬರ್ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯ ಸಮಯದಲ್ಲೇ ರಿಟೇನ್ ನಿಯಮಾವಳಿ ಪ್ರಕಟವಾಗುವ ಸಾಧ್ಯತೆ ಇದೆ ತಿಳಿಸಿದೆ.
ಮೆಗಾ(mega auction) ಹರಾಚಿನಲ್ಲಿ ಪ್ರತಿ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಪ್ರಾಂಚೈಸಿಗಳು ಒತ್ತಾಯಿಸಿದ್ದರೂ ಕೂಡ ಬಿಸಿಸಿಐ ಪ್ರತಿ ತಂಡಕ್ಕೆ ಗರಿಷ್ಠ 4 ಆಟಗಾರರ ರಿಟೇನ್ಗೆ ಮಾತ್ರ ಅವಕಾಶ ನೀಡಬಹುದು ಎನ್ನಲಾಗಿದೆ. ಇನ್ನೊಂದು ವರದಿಯೊಂದರ ಪ್ರಕಾರ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ 5 ವರ್ಷ ಕಳೆದಿರುವ ಆಟಗಾರರನ್ನು ‘ಅನ್‌ಕ್ಯಾಪ್ಡ್’ ಎಂದು ಪರಿಗಣಿಸಿ, ಕಡಿಮೆ ಮೊತ್ತಕ್ಕೆ ರಿಟೇನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಮೊದಲ ಸೀಸನ್‌ನಿಂದ ಜಾರಿಯಲ್ಲಿದ್ದ ಈ ನಿಯಮವನ್ನು 2021ರಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಈ ನಿಯಮ ಜಾರಿಗೆ ತರಲು ಚಿಂತನೆ ನಡೆದಿದೆ.
ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಕೆಗೂ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ. ಆರ್ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ.