Friday, 20th September 2024

Rahul Gandhi: ರಾಹುಲ್‌ ಗಾಂಧಿಯನ್ನು ʻಪಪ್ಪುʼ ಎಂದ ಜಿಲ್ಲಾಧಿಕಾರಿ; ಕಾಂಗ್ರೆಸ್‌ ಕೆಂಡಾಮಂಡಲ, FIR ದಾಖಲು

Rahul Gandhi

ನವದೆಹಲಿ: ಕಾಂಗ್ರೆಸ್‌ ನಾಯಕ ಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ(‌Rahul Gandhi)ಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ವೊಂದನ್ನು ಮಾಡಿದ್ದ ನೋಯ್ಡಾ ಜಿಲ್ಲಾಧಿಕಾರಿ(Noida DC) ವಿರುದ್ಧ ಕಾಂಗ್ರೆಸ್‌(Congress) ಗರಂ ಆಗಿದ್ದು, ಅವರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿದೆ. ಗೌತಮ್‌ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ವರ್ಮಾ ಅವರ ಎಕ್ಸ್‌ ಖಾತೆಯಿಂದ ರಾಹುಲ್‌ ಗಾಂಧಿಯವರನ್ನು ಪಪ್ಪು(Pappu comment) ಎಂದು ಸಂಬೋಧಿಸಿರುವ ಆಕ್ಷೇಪಾರ್ಹ ಪೋಸ್ಟ್‌ ಪ್ರಕಟವಾಗಿತ್ತು.

ಇನ್ನು ತಮ್ಮ ಖಾತೆ ಹ್ಯಾಕ್‌ ಆಗಿದ್ದು, ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಮನೀಶ್ ವರ್ಮಾ ಸ್ಪಷ್ಟನೆ ಕೊಟ್ಟಿದ್ದರೂ ಕಾಂಗ್ರೆಸ್‌ ಮಾತ್ರ ಅವರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸೂಕ್ತ ಕ್ರಮ ಜರುಗಿಸುವುದಾಗಿ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನಾಟೆ ಅವರು ಇತಿಹಾಸಕಾರರೊಂದಿಗಿನ ತಮ್ಮ ಮಾತುಕತೆಯ ಕ್ಲಿಪ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಮಾತನಾಡುತ್ತಾ ʼಇತಿಹಾಸವನ್ನು ಈಗಾಗಲೇ ನಿರ್ಮಿಸಲಾಗಿದೆ. ಅದನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರಿಗೆ ತಮ್ಮನ್ನು ಇತಿಹಾಸವು ಹೇಗೆ ನೆನಪಿಸಿಕೊಳ್ಳುತ್ತದೆ ಎಂದು ತಿಳಿದಿದೆ. ಅದಕ್ಕಾಗಿಯೇ ಅವರು ಚಿಂತಿತರಾಗಿದ್ದಾರೆʼ ಎಂದು ಹೇಳಿದ್ದಾರು. ಈ ಪೋಸ್ಟ್‌ಗೆ ಮನೀಶ್ ವರ್ಮಾ ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದು, ನೀವು ಮೊದಲು ನಿಮ್ಮನ್ನು ಮತ್ತು ನಿಮ್ಮ ಪಪ್ಪುವಿನ ಬಗ್ಗೆ ಯೋಚಿಸಿ ಎಂದು ಕಮೆಂಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಅದನ್ನು ಆ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದರು. ಈ ಕಮೆಂಟ್‌ನ ಸ್ಕ್ರೀನ್‌ ಶಾಟ್‌ ತೆಗೆದು ಸುಪ್ರಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಕೆಂಡಾಮಂಡಲ

ಇನ್ನು ಈ ಘಟನೆಗೆ ಕಾಂಗ್ರೆಸ್‌ ಬಿಜೆಪಿಯನ್ನು ಗುರಿಯಾಗಿಸಿ ಕಿಡಿ ಕಾರಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನದ ಉಸ್ತುವಾರಿ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದು, ಇದು ಹೊಸ ಬೆಳವಣಿಗೆಯಲ್ಲ. ಕಳೆದ 10 ವರ್ಷಗಳಲ್ಲಿ ಇಂತಹ ಘಟನೆಗಳು ನಡೆಯತ್ತಲೇ ಇವೆ. ನಾಗರಿಕ ಸೇವೆಯನ್ನು ನಿಗ್ರಹಿಸಲು ಮತ್ತು ನಿಷ್ಪ್ರಯೋಜಕಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ರೀತಿಯ ಪ್ರಕರಣಗಳು ಆ ಪ್ರಯತ್ನಕ್ಕೆ ಇತ್ತೀಚಿನ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರತಿಕ್ರಿಯಿಸಿದ್ದು, ಬಿಜೆಪಿ ಆಡಳಿತದಲ್ಲಿ ಈಗ ಐಎಎಸ್ ಅಧಿಕಾರಿಗಳಿಗೆ ಇಂತಹ ರಾಜಕೀಯ ಹೇಳಿಕೆಗಳನ್ನು ನೀಡಲು ಆದೇಶಿಸಲಾಗಿದೆಯೇ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಯನ್ನು ಪ್ರಶ್ನಿಸಿದ ಪತ್ರಕರ್ತನ ಮೇಲೆ ಕಾಂಗ್ರೆಸ್‌ ನಾಯಕರ ಹಲ್ಲೆ! ಕಾರಣ ಬಾಂಗ್ಲಾ ಹಿಂದೂ ಕುರಿತ ಪ್ರಶ್ನೆ