Friday, 20th September 2024

IND vs PAK ‘Bowl-Out’: ಭಾರತ-ಪಾಕ್‌ ‘ಬೌಲ್‌ ಔಟ್‌’ಗೆ ತುಂಬಿತು 17 ವರ್ಷ; ಹೇಗಿತ್ತು ಆ ರೋಚಕ ಪಂದ್ಯ?

IND vs PAK 'Bowl-Out'

ಮುಂಬಯಿ: ಅದು, 2007ರಲ್ಲಿ(OTD in 2007) ದಕ್ಷಿಣ ಆಫ್ರಿಕಾ ಆತಿಥ್ಯದ ನಡೆದ ಚೊಚ್ಚಲ ಟಿ20 ವಿಶ್ವಕಪ್‌ ಟೂರ್ನಿ. ಮೊದಲ ಪ್ರಯತ್ನದಲ್ಲೇ ಧೋನಿ ಸಾರಥ್ಯದ ಭಾರತ ತಂಡ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೇ ಟೂರ್ನಿಯಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ಲೀಗ್‌ ಮತ್ತು ಫೈನಲ್‌ ಪಂದ್ಯಲ್ಲಿ ಮುಖಾಮುಖಿಯಾಗಿತ್ತು. ಇತ್ತಂಡಗಳ ನಡುವಣ ಲೀಗ್‌ ಪಂದ್ಯ ಟೈಗೊಂಡಿತ್ತು. ಇದು ಕೂಟದಲ್ಲಿ ಭಾರತ ಆಡಿದ ದ್ವಿತೀಯ ಪಂದ್ಯವಾಗಿತ್ತು. ಟೈಗೊಂಡಾಗ ಫಲಿತಾಂಶಕ್ಕಾಗಿ ಬೌಲ್‌ ಔಟ್‌(IND vs PAK ‘Bowl-Out’) ನಡೆಸಲಾಗಿತ್ತು. ಈ ಬೌಲ್‌ ಔಟ್‌ ಘಟನೆಗೆ ಈಗ ಬರೋಬ್ಬರಿ 17 ವರ್ಷ ತುಂಬಿದೆ. ಅಂದಿನ ಈ ರೋಚಕ ಪಂದ್ಯದ ವಿವರ ಇಂತಿದೆ.

ಅಂದಿನ ಈ ಟಿ20 ವಿಶ್ವಕಪ್‌ ವೇಳೆ ಪಂದ್ಯ ಟೈ ಆದಾಗ ಸೂಪರ್‌ ಓವರ್‌ ನಿಯಮ ಇರಲಿಲ್ಲ. ಅದೇನೂ ಕಾಕತಾಳೀಯವೋ, ಭಾರತ-ಪಾಕಿಸ್ತಾನ ನಡುವೆ ಡರ್ಬನ್‌ನಲ್ಲಿ ನಡೆದ ಲೀಗ್‌ ಪಂದ್ಯವೇ ಟೈ ಆಯಿತು! ಭಾರತ 9ಕ್ಕೆ 141 ರನ್‌ ಬಾರಿಸಿದರೆ, ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೂಡ 7ವಿಕೆಟ್‌ ಕಳೆದುಕೊಂಡು 141 ರನ್‌ ಮಾಡಿತ್ತು. ಪಂದ್ಯ ಟೈ ಗೊಂಡಿತು.

ಇದನ್ನೂ ಓದಿ Yograj Sing: ಧೋನಿ ವಿರುದ್ಧ ವಾಗ್ದಾಳಿ ನಡೆಸಿ ಮಗನಿಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ ಮಾಜಿ ಆಟಗಾರ

ಆಗ ಟೈ ಬ್ರೇಕರ್‌ಗಾಗಿ ಅಳವಡಿಸಿದ್ದು “ಬಾಲ್‌ ಔಟ್‌’ ನಿಯಮ. ಅಂದರೆ, ಬ್ಯಾಟಿಂಗ್‌ ಎಂಡ್‌ನ‌ಲ್ಲಿರುವ ಸ್ಟಂಪ್‌ಗೆ ಬೌಲರ್‌ ಚೆಂಡೆಸೆಯುವುದು. ಅಲ್ಲಿ ಬ್ಯಾಟರ್‌ ನಿಂತಿರುವುದಿಲ್ಲ, ಕೇವಲ ಕೀಪರ್‌ ಮಾತ್ರ. ಚೆಂಡು ಸ್ಟಂಪ್‌ಗೆ ತಗಲಬೇಕಿತ್ತು. ಭಾರತ ಇಲ್ಲಿ 3-0 ಅಂತರದ ಮೇಲುಗೈ ಸಾಧಿಸಿತು. ಭಾರತದ ಮೂವರೂ ಎಸೆದ ಚೆಂಡು ಸ್ಟಂಪ್‌ಗೆ ಹೋಗಿ ಬಡಿದಿತ್ತು. ಪಾಕಿಸ್ತಾನದ ಮೂರೂ ಎಸೆತಗಳು ಗುರಿ ತಪ್ಪಿದವು.

ಧೋನಿ ಅವರ ಶಾಂತ ನಾಯಕತ್ವ ಮತ್ತು ಬುದ್ಧಿವಂತಿಕೆಯ ನಿರ್ಧಾರ ಇಲ್ಲಿ ಯಶಸ್ಸು ಕಂಡಿತ್ತು. ಅನುಭವಿ ಬೌಲರ್‌ಗಳಿಗೆ ಧೋನಿ ಚೆಂಡು ನೀಡದೆ ಬ್ಯಾಟರ್‌ ಆಗಿದ್ದ ವೀರೇಂದ್ರ ಸೆಹವಾಗ್‌ ಮತ್ತು ರಾಬಿನ್‌ ಉತ್ತಪ್ಪಗೆ ಬೌಲಿಂಗ್‌ ಅವಕಾಶ ನೀಡಿದ್ದರು. ಹರ್ಭಜನ್‌ ಸಿಂಗ್‌ ಮಾತ್ರ ಬೌಲರ್‌ ಆಗಿದ್ದರು. ಪಾಕಿಸ್ತಾನ ಪರ ಯಾಸಿರ್‌ ಅರಾಫ‌ತ್‌, ಉಮರ್‌ ಗುಲ್‌ ಮತ್ತು ಶಾಹಿದ್‌ ಅಫ್ರಿದಿ ಬೌಲಿಂಗ್‌ ಮಾಡಿದ್ದರು. ಆದರೆ ಒಂದು ಎಸೆತವನ್ನು ವಿಕೆಟ್‌ಗೆ ಎಸೆಯಲು ಇವರಿಂದ ಸಾಧ್ಯವಾಗಲಿಲ್ಲ. ಐಸಿಸಿ ಟೂರ್ನಿಯಲ್ಲಿ ನಡೆದ ಮೊದಲ ಮತ್ತು ಕೊನೆಯ ಬೌಲ್‌ ಔಟ್‌ ನಿದರ್ಶನ ಇದಾಗಿತ್ತು. ಆ ಬಳಿಕ ನಡೆದ ಎಲ್ಲ ವಿಶ್ವಕಪ್‌ ಟೂರ್ನಿಯಲ್ಲಿ ಪಂದ್ಯ ಟೈ ಆದರೆ ಸೂಪರ್‌ ಓವರ್‌ ಆಡಿಸಲಾಗುತ್ತದೆ.