ಹುಲುನ್ಬಿಯುರ್ (ಚೀನಾ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ(Asian Champions Trophy) ಹಾಕಿ ಪಂದ್ಯಾವಳಿಯ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನವನ್ನು(India vs Pakistan) 2-1 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿ ಸೆಮಿಫೈನಲ್ ಆಡಲು ಸಿದ್ಧವಾಗಿದೆ. ನಾಯಕ ಹರ್ಮನ್ಪ್ರೀತ್ ಸಿಂಗ್(Harmanpreet Singh) ಬಾರಿಸಿದ ಅವಳಿ ಗೋಲು ಭಾರತದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಪಂದ್ಯದಲ್ಲಿ ಮೊದಲು ಗೋಲಿನ ಖಾತೆ ತೆರೆದದ್ದು ಪಾಕಿಸ್ತಾನ. ಮೊದಲ ಕ್ವಾರ್ಟರ್ನ ಆರಂಭದಲ್ಲಿ ಪಾಕಿಸ್ತಾನದ ಅಹ್ಮದ್ ನದೀಮ್ ಗೋಲು ಬಾರಿಸಿ ಹಾಲಿ ಚಾಂಪಿಯನ್ ಭಾರತಕ್ಕೆ ಆಘಾತ ನೀಡಿದರು. 1-0 ಹಿನ್ನಡೆಯಲ್ಲಿದ್ದ ಭಾರತಕ್ಕೆ ನಾಯಕ ಹರ್ಮನ್ಪ್ರೀತ್ ಸಿಂಗ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಸಿಕ್ಕ ಪೆನಾಲ್ಟಿ ಹೊಡೆತವನ್ನು ನೇರವಾಗಿ ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ಸು ಸಾಧಿಸಿದರು. ಬಳಿಕ ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್ನಲ್ಲಿಯೂ ಗೋಲು ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ Asian Champions Trophy: ಕೊರಿಯಾ ವಿರುದ್ಧ ಭಾರತಕ್ಕೆ 3-1 ಜಯಭೇರಿ
ಪಾಕ್ ತಂಡ ಆರಂಭಿಕ ಗೋಲು ಬಾರಿಸಿ ಮುನ್ನಡೆ ಸಾಧಿಸಿದರೂ ಆ ಬಳಿಕ ಭಾರತದ ರಕ್ಷಣಾ ವಿಭಾಗವನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಜತೆಗೆ ಭಾರತದ ಪಟ್ಟುಬಿಡದ ಫಾರ್ವರ್ಡ್ ಲೈನ್ ಅನ್ನು ನಿಭಾಯಿಸಲು ಹೆಣಗಾಡಿತು. ನದೀಮ್ ಮತ್ತು ಅಜಾಜ್ ಅಹ್ಮದ್ ಶಕ್ತಿ ಮೀರಿ ಪ್ರದರ್ಶನ ತೋರಿದರೂ ಕೂಡ ಅವರಿಗೆ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗದೆ ತಂಡ ಸೋಲಿಗೆ ಸಿಲುಕಿತು.
ಭಾರತದ ಗೋಲ್ಕೀಪರ್ ಕ್ರಿಶನ್ ಕುಮಾರ್ ಪಾಠಕ್ ಅವರು ಮಾಜಿ ಆಟಗಾರ ಶ್ರೀಜೇಶ್ ರೀತಿಯಲ್ಲೇ ಹಲವು ಗೋಲುಗಳನ್ನು ತಡೆದು ನಿಲ್ಲಿಸಿ ಗಮನಸೆಳೆದರು. ಇದರಲ್ಲಿ 2 ಪೆನಾಲ್ಟಿ ಕಾರ್ನರ್ ತಡೆದದ್ದು ಪಂದ್ಯದ ಗತಿಯನ್ನೇ ಬದಲಿಸಿತು.