ಅಜ್ಮೀರ್: ಆಸ್ತಿ, ಹಣ, ಸಂಪತ್ತಿನ ಆಸೆಗೆ ಬಿದ್ದ ಮನುಷ್ಯ ಎಂಥಾ ನೀಚತನಕ್ಕೂ ಸಿದ್ಧನಾಗಿರುತ್ತಾನೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಆಸ್ತಿಗಾಗಿ ದುಷ್ಕರ್ಮಿಗಳು ವೃದ್ಧ ಸಹೋದರಿಯರಿಬ್ಬರನ್ನು ಅಪಹರಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್(Ajmer)ನಲ್ಲಿ ನಡೆದಿದೆ. ಕಿಡ್ನ್ಯಾಪ್(Kidnapping case) ಆದ ಒಂದೇ ಗಂಟೆಯಲ್ಲಿ ಮಹಿಳೆಯರನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ನಾಲ್ವರು ಕಿಡಿಗೇಡಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral News) ಆಗಿದೆ.
ನಿವೃತ ಪ್ರಾಂಶುಪಾಲರಾದ ಕುಂಕುಮ್ ಜೈನ್ ಮತ್ತು ರಮಾ ರಾಣಿ ಅವರನ್ನು ದುಷ್ಕರ್ಮಿಗಳು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಣಕ್ಕೆ ಯತ್ನಿಸಿದ್ದಾರೆ. ಇವರಿಬ್ಬರನ್ನು ಮೊಹಮ್ಮದ್ ಆದಿಲ್ ಶೇಖ್ ಎಂಬಾತ ಕಿಡ್ನ್ಯಾಪ್ ಮಾಡಿ ಬೆದರಿಸಿದ್ದಾನೆ ಎನ್ನಲಾಗಿದೆ. ಈ ಇಬ್ಬರು ಸಹೋದರಿಯರಿಗೆ ಸೇರಿದ ಆಸ್ತಿಯನ್ನು ತಮ್ಮ ಆಸ್ತಿಯೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಶಕ್ಕೆ ಪಡೆಯಲು ಮೊಹಮ್ಮದ್ ಆದಿಲ್ ಶೇಖ್ ಯತ್ನಿಸಿದ್ದಾನೆ ಎನ್ನಲಾಗಿದೆ.
2 ಕೋಟಿಗೆ ಬೇಡಿಕೆ:
ಈ ಘಟನೆ ಬಗ್ಗೆ ಕುಂಕುಮ್ ಜೈನ್ ಪ್ರತಿಕ್ರಿಯಿಸಿದ್ದು, ಮನೆಯ ನುಗ್ಗಿದ ಆದಿಲ್ ಮತ್ತು ಆತನ ಸಹಚರರನ್ನು ನನ್ನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ್ದಾರೆ. ಅಲ್ಲಿ ನೋಡಿದಾಗ ನನ್ನ ಸಹೋದರಿ ರಮಾ ರಾಣಿ ಜೈನ್ ಕಾರಿನಲ್ಲಿದ್ದಳು. ನಾವು ಜೋರಾಗಿ ಕೂಗಿ ಕಾಪಾಡುವಂತೆ ಕಿರುಚಿದ್ದೇವೆ. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ನಾವು ಕೂಗುತ್ತಿದ್ದಾಗ ಕಿಡಿಗೇಡಿಗಳು ರಿವಾಲ್ವಾರ್, ಕತ್ತಿ ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ 2 ಕೋಟಿ ರೂ. ಕೊಡಿ ಆಮೇಲೆ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ನಮ್ಮ ಆಸ್ತಿ ಕಬಳಿಸಲು ಆದಿಲ್ ಯತ್ನಿಸುತ್ತಿದ್ದಾನೆ ಎಂದು ಅವರು ದೂರಿದ್ದಾರೆ.
ರಮಾರಾಣಿ ಜೈನ್ ಘಟನೆ ಬಗ್ಗೆ ವಿವರಿಸಿದ್ದು, ಬೆಳಗ್ಗೆ ಹಿಂದಿನ ಗೇಟ್ ತೆರೆದಾಗ ದೆಹಲಿ ನಂಬರ್ ಹೊಂದಿರುವ ಕಪ್ಪು ಐಷಾರಾಮಿ ಕಾರು ಅಲ್ಲಿ ನಿಂತಿತ್ತು. ಕಾರಿನಲ್ಲಿ ಬಂದವರು ಯಾರೆಂದು ನೋಡಲು ಮುಂದಕ್ಕೆ ಹೋದ ಕೂಡಲೇ ಎರಡು-ಮೂರು ಜನ ನನ್ನ ಮೇಲೆ ಎರಗಿ ನನ್ನನ್ನು ಎತ್ತಿಕೊಂಡು ಬಲವಂತವಾಗಿ ಕಾರಿನಲ್ಲಿ ಕೂರಿಸಿದರು. ಸದ್ದು ಕೇಳಿ ನನ್ನ ತಂಗಿ ಕುಂಕುಮ ಗೇಟ್ ಕಡೆಗೆ ಬಂದಳು, ಆಗ ದುಷ್ಕರ್ಮಿಗಳು ಅವಳನ್ನು ಎಳೆದುಕೊಂಡು ಕಾರಿಗೆ ಕರೆತಂದರು. ಕಾರಿನಲ್ಲಿ ನಮ್ಮನ್ನು ಆದಿಲ್ ಶೇಖ್ ಮತ್ತು ಆತನ ಸಹಚರರು ಥಳಿಸಿದ್ದಾರೆ. ಅಲ್ಲದೇ ಕತ್ತರಿ, ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ
ಒಂದೇ ಗಂಟೆಯಲ್ಲಿ ಮಹಿಳೆಯರ ರಕ್ಷಣೆ
ಇನ್ನು ಮಹಿಳೆಯರನ್ನು ಕಿಡ್ನ್ಯಾಪ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಆರೋಪಿಗಳ ಕಾರನ್ನು ಚೇಸ್ ಮಾಡಿದ ಪೊಲೀಸರು ಒಂದೇ ಗಂಟೆಯಲ್ಲಿ ಕಾರನ್ನು ತಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಆದಿಲ್ ಮತ್ತು ಆತನ ಸಹಚರನನ್ನು ಅರೆಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಬೆಂಗಳೂರಿನಲ್ಲಿ ಮಹಿಳೆಯರು ಶಾರ್ಟ್ಸ್ ಧರಿಸುವಂತಿಲ್ವಾ? ಭಾರೀ ವೈರಲ್ ಆಗ್ತಿದೆ ಈ ವಿಡಿಯೋ