ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಪೂಂಚ್ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ಬೆಳಿಗ್ಗೆಯಿಂದ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ (Encounter) ನಡೆಯುತ್ತಿದೆ. ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆ ಸುತ್ತುವರಿದಿದೆ. ಈ ಪೈಕಿ ಭಯೋತ್ಪಾದಕ ಗುಂಪಿನ ಕಮಾಂಡರ್ ಕೂಡ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕ್ಷಣದಲ್ಲಿ ಈ ಉಗ್ರರನ್ನು ಸೇನಾ ಸಿಬ್ಬಂದಿ ಹೊಡೆದುರುಳಿಸಲಿದ್ದಾರೆ.
ಗ್ರಾಮದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
#WATCH | J&K | Encounter is underway between security forces and terrorists in the Pathanateer area of the Mendhar sector of Poonch after rounds of fire were heard last night. Gunshots can be heard in the background.
— ANI (@ANI) September 15, 2024
(Visuals deferred by unspecified time) https://t.co/M2OUKNqQD2 pic.twitter.com/ReZZs1DttD
ಪೊಲೀಸರು ಮತ್ತು ಸೇನಾ ಸಿಬ್ಬಂದಿ ಶನಿವಾರ ಸಂಜೆಯಿಂದಲೇ ಮೆಂಧರ್ ಉಪವಿಭಾಗದ ಗುರ್ಸಾಯಿ ಟಾಪ್ ಬಳಿಯ ಪಥನತೀರ್ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಈ ತಂಡದ ಮೇಲೆ ಮೊದಲಿಗೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಬಳಿಕ ಭದ್ರತಾ ಪಡೆ ಸಿಬ್ಬಂದಿ ಪ್ರತಿದಾಳಿ ನಡೆಸಿ ಉಗ್ರರ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. 5 ಉಗ್ರರನ್ನು ಹೊಡೆದುರುಳಿಸಿದ ಒಂದು ದಿನ ಬಳಿಕ ಈ ಬೆಳವಣಿಗೆ ನಡೆದಿದೆ.
ಗುಂಡಿನ ಚಕಮಕಿ
ಬಾರಾಮುಲ್ಲಾ ಜಿಲ್ಲೆಯ ಪಠಾಣ್ ಪ್ರದೇಶದ ಚಕ್ ಥಾಪರ್ ಕ್ರೀರಿ ಬಳಿ ಶುಕ್ರವಾರ ತಡರಾತ್ರಿ ಉಗ್ರರು ಅವಿತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಸೇನೆ, ಜಮ್ಮು ಪೊಲೀಸರ ಜತೆಗೂಡಿ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಮತ್ತೊಂದೆಡೆ ಕಥುವಾದಲ್ಲೂ ಪ್ರತ್ಯೇಕ ಶೂಟೌಟ್ ನಡೆದಿದ್ದು, ಇಬ್ಬರು ಉಗ್ರರನ್ನು ಎನ್ಕೌಂಟರ್ ಮಾಡಲಾಗಿತ್ತು
ಕಿಶ್ತ್ವಾರ್ ಜಿಲ್ಲೆಯಲ್ಲೂ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಭಾರೀ ಕಾರ್ಯಾಚರಣೆ ಆರಂಭವಾಗಿತ್ತು. ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಉಗ್ರರು ಸಿಡಿಸಿದ ಗುಂಡಿನ ದಾಳಿಯಲ್ಲಿ ಸುಬೇದಾರ್ ವಿಪನ್ ಕುಮಾರ್ ಮತ್ತು ಸಿಪಾಯ್ ಅರವಿಂದ ಸಿಂಗ್ ಹುತ್ಮಾರಾಗಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕೊನೆ ಮೊಳೆ: ಮೋದಿ
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿ, ರಾಜ್ಯದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯುವುದಾಗಿ ಗುಡುಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಭಯೋತ್ಪಾದನೆ ತನ್ನ ಕೊನೆಯ ಉಸಿರು ಎಳೆಯುತ್ತಿದೆ ಎಂದು ಹೇಳಿದ್ದರು. ನಾವು ಮತ್ತು ನೀವು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಸುರಕ್ಷಿತ ಮತ್ತು ಸಮೃದ್ಧ ಭಾಗವನ್ನಾಗಿ ಮಾಡಬೇಕಾಗಿದೆ ಎಂದು ಇದೇ ವೇಳೆ ಅವರು ಕರೆ ನೀಡಿದ್ದರು. ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಉಗ್ರರ ವಿರುದ್ಧ ಕಿಡಿಕಾರಿದ್ದರು. ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಪಣ ತೊಟ್ಟಿದ್ದರು.
ಈ ಸುದ್ದಿಯನ್ನೂ ಓದಿ: Terrorist Encounter : ಶ್ರೀನಗರದಲ್ಲಿ ಗುಂಡಿನ ಚಕಮಕಿ; 2 ಉಗ್ರರ ಹತ್ಯೆ, ಇಬ್ಬರು ಯೋಧರು ಹುತಾತ್ಮ