Friday, 22nd November 2024

Nitin Gadkari: ಪ್ರತಿಪಕ್ಷಗಳಿಂದ ನಿತಿನ್ ಗಡ್ಕರಿಗೆ ಪ್ರಧಾನಿ ಹುದ್ದೆಯ ಆಫರ್! ಇವರ ಪ್ರತಿಕ್ರಿಯೆ ಏನಿತ್ತು?

Nitin Gadkari

ಮುಂಬೈ: ಲೋಕಸಭಾ ಚುನುವಾಣೆ (Lok Sabha election)ಯ ಫಲಿತಾಂಶ ಹೊರಬಿದ್ದು ಎನ್‌ಡಿಎ (NDA) ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 3 ತಿಂಗಳು ಕಳೆದಿದ್ದು, ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ರಹಸ್ಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ತಾವು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾದರೆ ತಮ್ಮನ್ನು ಬೆಂಬಲಿಸುವುದಾಗಿ ಪ್ರತಿಪಕ್ಷದ ನಾಯಕರೊಬ್ಬರು ತಿಳಿಸಿದ್ದರು ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

“ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ನೀವು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾದರೆ ನಾವು ಬೆಂಬಲಿಸುತ್ತೇವೆ ಎಂದು ಪ್ರತಿಪಕ್ಷದ ನಾಯಕರೊಬ್ಬರು ನನ್ನ ಬಳಿ ಹೇಳಿದ್ದರು” ಎಂದು ಗಡ್ಕರಿ ಶನಿವಾರ ನಾಗ್ಪುರದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದ್ದಾರೆ.

“ನಾನು ಈ ಕೊಡುಗೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು ಎಂದು ನಾನು ಪ್ರಶ್ನಿಸಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನಾನು ನನ್ನ ನಂಬಿಕೆ ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ ಮತ್ತು ನಾನು ಯಾವುದೇ ಹುದ್ದೆಗಾಗಿ ರಾಜಿ ಮಾಡಿಕೊಳ್ಳಲು ಹೋಗುವುದಿಲ್ಲ” ಎಂದು ಬಿಜೆಪಿಯ ಹಿರಿಯ ನಾಯಕ ತಿಳಿಸಿದ್ದಾರೆ.

ನಿತಿನ್ ಗಡ್ಕರಿ ಅವರು ತಮ್ಮ ಭಾಷಣದಲ್ಲಿ ಪತ್ರಿಕೋದ್ಯಮ ಮತ್ತು ರಾಜಕೀಯ ಎರಡರಲ್ಲೂ ನೈತಿಕತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಇದೇ ವೇಳೆ ಹಿರಿಯ ಸಿಪಿಐ ನಾಯಕ ದಿವಂಗತ ಎ.ಬಿ.ಬರ್ಧನ್ ಅವರ ಬದ್ಧತೆಗೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಎ.ಬಿ.ಬರ್ಧನ್ ಅವರು ನಾಗ್ಪುರ ಮತ್ತು ವಿದರ್ಭದ ಅತ್ಯಂತ ಸಂಭಾವಿತ ರಾಜಕಾರಣಿಗಳಲ್ಲಿ ಒಬ್ಬರು ಎಂದು ನಾನು ಹಿಂದೊಮ್ಮೆ ನಮ್ಮ ನಾಯಕರೊಬ್ಬರ ಬಳಿ ಹೇಳಿದ್ದೆ. ಅದಕ್ಕೆ ಅವರು ಬರ್ಧನ್ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ವಿರೋಧಿ ಎಂದು ತಿಳಿಸಿದ್ದರು. ಆಗ ನಾನು ಪ್ರಾಮಾಣಿಕ ವಿರೋಧವನ್ನು ಗೌರವಿಸಬೇಕು ಎಂದಿದ್ದೆʼʼ ಎಂದು ಗಡ್ಕರಿ ಹಿಂದಿನ ಘಟನೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.

ʼʼಬರ್ಧನ್ ಅವರು ತಮ್ಮ ಸಿದ್ಧಾಂತಕ್ಕೆ ನಿಷ್ಠರಾಗಿದ್ದರು ಮತ್ತು ರಾಜಕೀಯ ಮತ್ತು ಪತ್ರಿಕೋದ್ಯಮದಲ್ಲಿ ಈಗ ಅಂತಹ ಜನರ ಕೊರತೆಯಿದೆʼʼ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮ ಎಂಬ ನಾಲ್ಕು ಸ್ತಂಭಗಳು ನೈತಿಕತೆಯನ್ನು ಅನುಸರಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

2019 ಮತ್ತು 2024ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. 2014ರಲ್ಲಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಗಡ್ಕರಿ ನಾಗ್ಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ಸಾರಿಗೆ ಸಚಿವರಾಗಿ ಮುಂದುವರಿದಿದ್ದಾರೆ.

ಈ ಸುದ್ದಿಯನ್ನೂ ಓದಿ: Nitin Gadkari: ಶೀಘ್ರ ಭಾರತದಲ್ಲಿ ಡೀಸೆಲ್‌ ಕಾರುಗಳ ಯುಗಾಂತ್ಯ; ಸಚಿವ ನಿತಿನ್‌ ಗಡ್ಕರಿ ನೀಡಿದ ಸೂಚನೆ ಏನು?