ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಅಕ್ಕ’ ವಿಶ್ವಕನ್ನಡ ಸಮ್ಮೇಳನದ ೧೨ನೆಯ ಆವೃತ್ತಿ ಮೊನ್ನೆ ರಿಚ್ಮಂಡ್‌ನಲ್ಲಿ ಸಂಪನ್ನವಾಯಿತು. ಸಮ್ಮೇಳನದ ಯಶಸ್ಸು-ವೈಫಲ್ಯಗಳು, ವ್ಯವಸ್ಥೆ-ಅವ್ಯವಸ್ಥೆಗಳು ‘ಉಳಿದವರು ಕಂಡಂತೆ’, ಅವರವರ ಭಾವಭಕ್ತಿಗಳಿಗೆ ತಕ್ಕಂತೆ ವ್ಯಕ್ತವಾದವು. ಆ ಮಟ್ಟಿಗೆ ‘ಅಕ್ಕ’ ಸಂಸ್ಥೆ ಮತ್ತು ಅದು ನಡೆಸುವ ಸಮ್ಮೇಳನಗಳು ಒಂಥರದಲ್ಲಿ ಕುರುಡರು ಮುಟ್ಟಿದ ಆನೆಯಂತೆಯೇ. ಸಾಮಾನ್ಯರಿಗೆ ಸ್ಪಷ್ಟತೆ ಸಿಗದ ಬಾಬತ್ತುಗಳು. ಈಗ ವ್ಯಕ್ತಿಗತ ಅಭಿಪ್ರಾಯವಾಗಿ ನಾನೇ ಏನನ್ನಾ ದರೂ ಬರೆದರೂ ಅದೊಂದು ಸೀಮಿತ ದೃಷ್ಟಿಕೋನವಾದೀತೇ ಹೊರತು ಸಮಗ್ರವೆನಿಸದು. ಆದ್ದರಿಂದ ಅಂಥ ಉಸಾಬರಿಗೆ ಹೋಗದೆ, ಈ ಸಲ ಸಮ್ಮೇಳನದ ಕಾರಣದಿಂದಾಗಿ ನನಗೇನು ಆನಂದದ ಅನುಭೂತಿಯಾಯ್ತು,
ಸಜ್ಜನರ ಸಂಗದ ಹೆಜ್ಜೇನನ್ನು ನಾನೆಂತು ಸವಿದೆ ಎನ್ನುವುದನ್ನಷ್ಟೇ ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ,
ಕೆಲವೊಂದು ಭಾಗಗಳು ಡೈರಿಯ ಪುಟದಿಂದಲೋ ಎಂಬಂತೆ. ಸುಮಾರು ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಲ್ಲಿರಬೇಕು, ಈ ಬಾರಿಯ ‘ಅಕ್ಕ’ ಸಮ್ಮೇಳನ ರಿಚ್ಮಂಡ್ ಕನ್ನಡ ಸಂಘ ಮತ್ತು ನಮ್ಮ ವಾಷಿಂಗ್ಟನ್ ಡಿಸಿಯ ಕಾವೇರಿ ಕನ್ನಡ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವುದೆಂದು ಆಗಷ್ಟೇ ಠರಾವಾಗಿತ್ತು.
ಇದನ್ನೂ ಓದಿ: Pralhad Joshi: ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ; ಸೌರ ವಿದ್ಯುತ್ ಸ್ಥಾವರಗಳಿಗೆ ಶೇ.76ರಷ್ಟು ಸುಂಕ ಇಳಿಕೆ
ನನ್ನ ಇಲ್ಲಿನ ಆಪ್ತಮಿತ್ರರಲ್ಲೊಬ್ಬರಾದ ಸಂಜಯ ರಾವ್ ಒಂದು ದಿನ ನನಗೆ ಕರೆ ಮಾಡಿ ‘ಅಕ್ಕ ಸಮ್ಮೇಳನದಲ್ಲಿ ಆಶಯ ಭಾಷಣ (ಕೀನೋಟ್ ಅಡ್ರೆಸ್) ಮಾಡಲಿಕ್ಕೆ ಕರ್ನಾಟಕದಿಂದ ಯೋಗ್ಯ ವ್ಯಕ್ತಿಯೊಬ್ಬರ ಹೆಸರು ಸೂಚಿಸು ತ್ತೀರಾ?’ ಎಂದು ಕೇಳಿದರು. ಅವರ ಪ್ರಶ್ನೆಗೆ ನಾನು ಥಟ್ಟಂತ ಉತ್ತರಿಸಿದ್ದೇ ‘ಥಟ್ ಅಂತ ಹೇಳಿ’ ಖ್ಯಾತಿಯ ನಾ.ಸೋಮೇಶ್ವರರ ಹೆಸರನ್ನು. ‘ಅಕ್ಕ’ ಸಮ್ಮೇಳನದ ವೇದಿಕೆಯಲ್ಲಿ ಶುದ್ಧ ಸ್ಪಷ್ಟ ಸದಭಿರುಚಿಯ ಕನ್ನಡದಲ್ಲಿ ನಾಡು- ನುಡಿ ಬಗೆಗಿನ ಸತ್ತ ಯುತ ಮಾತುಗಳು ಕೇಳಿಬರಬೇಕಿದ್ದರೆ ಅವರಿಗಿಂತ ಸೂಕ್ತ ವ್ಯಕ್ತಿ ಬೇರೆ ಇಲ್ಲ ಎಂದು ನನ್ನ ಅಭಿಪ್ರಾಯ.
ಸಂಜಯ ರಾವ್‌ಗೂ ಆ ಸಲಹೆ ಇಷ್ಟವಾಯ್ತು. ಅದನ್ನವರು ಸಮ್ಮೇಳನ ಸಂಚಾಲಕ ಷಣ್ಮುಗಂ ಅಯ್ಯರ್ ಮತ್ತು ‘ಅಕ್ಕ’ ಅಧ್ಯಕ್ಷ ರವಿ ಬೋರೇಗೌಡರಿಗೆ ತಿಳಿಸಿದರು. ಅವರಿಬ್ಬರೂ ತಥಾಸ್ತು ಎಂದರು. ‘ಅಕ್ಕ ಕಡೆಯಿಂದ ಆಹ್ವಾನ ಬಂದರೆ ಅಮೆರಿಕಕ್ಕೆ ಪ್ರವಾಸ ಮಾಡಲು ಸಿದ್ಧರಿದ್ದೀರಾ? ನಿಮಗೆ ವೀಸಾ ಇದೆಯೇ?’ ಎಂದು ಸೋಮೇಶ್ವರರಲ್ಲಿ ಪ್ರಸ್ತಾವಿಸಿ ಅವರಿಂದ ತಾತ್ತ್ವಿಕ ಒಪ್ಪಿಗೆ ಪಡೆಯುವ ಕೆಲಸವನ್ನೂ ನನಗೇ ವಹಿಸಿಬಿಟ್ಟರು. ಸರಿ, ಮೊದಲಿಗೆ
ವಾಟ್ಸ್ಯಾಪ್‌ನಲ್ಲೊಂದು ಮೆಸೇಜು ಕಳುಹಿಸಿ, ಕರೆ ಮಾಡಲಿಕ್ಕೆ ಸೂಕ್ತ ಸಮಯ ಕೇಳಿಕೊಂಡು ಸೋಮೇಶ್ವರರೊಡನೆ ಮಾತನಾಡಿದೆ. ‘ಅಕ್ಕ’ ಪ್ರಸ್ತಾವವನ್ನು ಮತ್ತು ಅದಕ್ಕೆ ಸಂಬಂಧಿಸಿದ ಇತರ ಅಂಶಗಳನ್ನು ವಿವರಿಸಿದೆ.
ಎಲ್ಲವನ್ನೂ ಸೂಕ್ಷ್ಮವಾಗಿ ಕೇಳಿ ತಿಳಿದುಕೊಂಡ ಮೇಲೆ ಸೋಮೇಶ್ವರ ‘ಆಯ್ತು, ಬರುತ್ತೇನೆ. ನನಗೆ ವೀಸಾ ಇದೆ’ ಎಂದು ಒಪ್ಪಿಗೆಯಿತ್ತರು. ಹಾಗೆನ್ನುವಾಗ ಅವರೂ ಒಂದು ಪ್ರಸ್ತಾವವನ್ನು ಮುಂದಿಟ್ಟರು. ‘ಸಮ್ಮೇಳನಕ್ಕೆ ಭಾಷಣಕಾರನಾಗಿ ಬರುವಾಗ ಜತೆಯಲ್ಲಿ ನನ್ನ ಶ್ರೀಮತಿಯನ್ನೂ ಕರೆದುಕೊಂಡು ಬರುತ್ತೇನೆ. ಆದರೆ ಆಕೆಯ ಪ್ರವಾಸದ ಅಷ್ಟೂ ವೆಚ್ಚವನ್ನು ಸಂಪೂರ್ಣವಾಗಿ ನಾನೇ ಭರಿಸುತ್ತೇನೆ. ಅಕ್ಕ ಸಂಸ್ಥೆ ಇದಕ್ಕೋಸ್ಕರ ಒಂದು ಸೆಂಟ್ ಕೂಡ ಖರ್ಚು ಮಾಡಬೇಕಿಲ್ಲ, ಮಾಡಬಾರದು. ನಾನವಳನ್ನು ಕರೆದುಕೊಂಡು ಬರುವುದು ಅಮೆರಿಕ ತೋರಿಸ ಲಿಕ್ಕೆಂದಲ್ಲ, ಬೆಂಗಳೂರಿನಲ್ಲಿ ಮನೆಯಲ್ಲಿ ನಾವಿಬ್ಬರೇ ಇರುವುದು, ನಾನು ೮-೧೦ ದಿನ ವಿದೇಶಪ್ರವಾಸದಲ್ಲಿದ್ದರೆ ಆಕೆ ಒಬ್ಬಂಟಿಯಾಗುತ್ತಾಳೆ, ಆ ಕಷ್ಟ ಆಕೆಗಾಗಬಾರದು.
ಇದಕ್ಕೆ ಒಪ್ಪಿಗೆ ಇದೆಯೇ?’ ಎಂದು.
ಸೋಮೇಶ್ವರರ ಬಗ್ಗೆ ಯಾವತ್ತೂ ಗೌರವಭಾವವಿರುವ ನನಗೆ ಆ ಮಾತನ್ನು ಕೇಳಿ ಅವರ ವ್ಯಕ್ತಿತ್ವ ಅದೆಷ್ಟು ಎತ್ತರದ್ದೆಂದು ಭಾಸವಾಯಿತು. ಹೃದಯ ತುಂಬಿಬಂತು. ದೂರವಾಣಿಯಲ್ಲಿ ಮಾತಾಡುತ್ತಲೇ ಅವರಿಗೆ ತಲೆಬಾಗಿದೆ. ಅದಕ್ಕೆ ಇನ್ನೊಂದು ಕಾರಣವೂ ಇತ್ತು, ತೀರಾ ಕಾಂಟ್ರಾಸ್ಟಿಂಗ್ ರೀತಿಯದು. ೨೦೨೨ರಲ್ಲಿ ನಮ್ಮ ಕಾವೇರಿ ಕನ್ನಡ ಸಂಘವು ಸ್ವರ್ಣಮಹೋತ್ಸವ ಆಚರಿಸಿದಾಗಲೂ ಆಶಯಭಾಷಣಕ್ಕೆಂದು ಕನ್ನಡ ಸಾಂಸ್ಕೃತಿಕ ವಲಯದವ ರೊಬ್ಬರನ್ನು ಕೇಳಿನೋಡುತ್ತೀರಾ ಎಂದು ಸಂಜಯ ರಾವ್ ನನ್ನನ್ನು ಕೇಳಿದ್ದರು. ಅವರು ಸೂಚಿಸಿದ್ದ ಮಹಾನು ಭಾವರೇನೋ ಬರಲಿಕ್ಕೆ ಒಪ್ಪಿದ್ದರು, ಒಂದು ಷರತ್ತಿನ ಮೇಲೆ: ‘ನನಗೆ ಮತ್ತು ನನ್ನ ಹೆಂಡತಿಗೆ ಬೆಂಗಳೂರಿನಿಂದ ವಾಷಿಂಗ್ಟನ್‌ಗೆ ರೌಂಡ್ ಟ್ರಿಪ್ ಬಿಜಿನೆಸ್ ಕ್ಲಾಸ್ ವಿಮಾನಯಾನ ವ್ಯವಸ್ಥೆ ಮಾಡುವಿರಾದರೆ ಮಾತ್ರ!’ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.
ನಾವದಕ್ಕೆ ಸೊಪ್ಪು ಹಾಕದೆ, ಆಶಯಭಾಷಣ ಇಲ್ಲದೆಯೇ, ಸ್ವರ್ಣಮಹೋತ್ಸವ ಸಾಂಗವಾಗಿ ನೆರವೇರಿತೆನ್ನುವುದು ಬೇರೆ ಮಾತು. ಒಬ್ಬೊಬ್ಬರೂ ಹೇಗಿರುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ ಅಷ್ಟೇ. ಸಮ್ಮೇಳನಕ್ಕೆ ನಾ.ಸೋಮೇಶ್ವರ ಹೇಗೂ ಬರುವವರಿದ್ದಾರೆ, ಆಗ ಸಮ್ಮೇಳನಾರ್ಥಿಗಳಿಗಾಗಿಯೇ ‘ಥಟ್ ಅಂತ ಹೇಳಿ’ ಸ್ಪರ್ಧೆ
ನಡೆಸಬಹುದಲ್ಲ ಎಂಬ ವಿಚಾರವೂ ಬಂತು. ಸಂಬಂಧಪಟ್ಟವರೆಲ್ಲರ ಸಮ್ಮತಿಯಿಂದ ಅದು ಕಾರ್ಯರೂಪಕ್ಕೂ ಬಂತು. ‘ಥಟ್ ಅಂತ ಹೇಳಿ’ಯ ಅನನ್ಯ ಶೈಲಿಯಂತೆ ಪ್ರತಿಯೊಂದು ಸರಿಯುತ್ತರಕ್ಕೆ ಒಂದು ಕನ್ನಡ ಪುಸ್ತಕ ಬಹುಮಾನ ಕೊಡುವುದನ್ನೇ ಮಾಡೋಣ, ಸ್ಪರ್ಧಿಗಳು ಉತ್ತರಿಸದಿದ್ದರೆ ಪ್ರೇಕ್ಷಕರಿಗೆ ಪ್ರಶ್ನೆಯನ್ನು ವರ್ಗಾಯಿಸಿ ಸರಿಯುತ್ತರ ಬಂದರೆ ಅವರಿಗೂ ಪುಸ್ತಕ ಬಹುಮಾನ ಕೊಡೋಣ ಎಂದು ನಿರ್ಧರಿಸಿದೆವು.
ಇಲ್ಲೂ ಅಷ್ಟೇ. ‘ಬಹುಮಾನ ಕೊಡಲಿಕ್ಕೆ ಪುಸ್ತಕಗಳನ್ನು ನಾನೇ ತರುತ್ತೇನೆ’ ಎಂದು ಬಿಟ್ಟರು ಸೋಮೇಶ್ವರ! ಅವರಿಗೆ ಆ ಹೊರೆಯನ್ನು ವಹಿಸುವುದು ನಮಗೆಲ್ಲ ಸುತರಾಂ ಇಷ್ಟವಿರಲಿಲ್ಲ. ‘ಬೇಡ, ನಾವೊಂದಿಷ್ಟು ಸ್ನೇಹಿತರು ಸೇರಿ ಪುಸ್ತಕಗಳ ವ್ಯವಸ್ಥೆ ಮಾಡುತ್ತೇವೆ’ ಎಂದೆವು. ಕೊನೆಗೂ ಅವರು ಒಪ್ಪಲೇಬೇಕಾಯ್ತು, ಅವರ ಪ್ರಯಾಣದ ಕೆಎಲ್‌ಎಂ ವಿಮಾನದಲ್ಲಿ ಒಬ್ಬರಿಗೆ ಒಂದೇ ಸೂಟ್‌ಕೇಸ್ ಒಯ್ಯಲು ಅನುಮತಿಯಾದ್ದರಿಂದ. ಅಲ್ಲದೇ ಸೋಮೇಶ್ವರರ ಜತೆ ಅವರ ಶ್ರೀಮತಿಯವರೂ ಪಯಣಿಸುವ ವಿಚಾರ ಏನಾಯ್ತೆಂದರೆ- ಅವರಿಗೆ ವೀಸಾ ಇರಲಿಲ್ಲ. ವೀಸಾ ಅರ್ಜಿಯೊಡನೆ ಲಗತ್ತಿಸಲು ‘ಅಕ್ಕ’ ಕಡೆಯಿಂದ ಶಿಫಾರಸು ಪತ್ರವನ್ನೇನೋ ಕಳುಹಿಸಿದ್ದೆವು; ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕಕ್ಕೆ ಪ್ರವಾಸಿಗ ವೀಸಾ ಬಿಡಿ, ಸಂದರ್ಶನಕ್ಕೆ ಅಪಾಯಿಂಟ್‌ಮೆಂಟೇ ಸಿಗುವುದಿಲ್ಲ. ಬೇರೆ
ನಿರ್ವಾಹವಿಲ್ಲದೆ ಸೋಮೇಶ್ವರರು ಆ ಆಲೋಚನೆಯನ್ನು ಬಿಟ್ಟುಬಿಡಬೇಕಾಯಿತು.
‘ಅಕ್ಕ’ ಸಮ್ಮೇಳನದ ಸಾಹಿತ್ಯಿಕ ಚಟುವಟಿಕೆಗಳ ಉಸ್ತುವಾರಿ ರಿಚ್ಮಂಡ್‌ನಿವಾಸಿ ಸ್ನೇಹಿತ-ಬರಹಗಾರ ಶ್ರೀನಾಥ ಭಲ್ಲೆಯವರೊಡನೆ ನನ್ನದು. ಯಾವ ಸಾಹಿತಿಗಳನ್ನು ಆಹ್ವಾನಿಸುವುದೆಂಬ ತೀರ್ಮಾನವನ್ನು ಸಂಚಾಲಕ ಷಣ್ಮುಗಂ ಅಯ್ಯರ್ ನಮಗೇ ಬಿಟ್ಟಿದ್ದರು. ‘ಬೆಂಗಳೂರಿಗೆ ಹೋಗಿದ್ದಾಗ ಅನಿರೀಕ್ಷಿತವಾಗಿ ಡುಂಡಿರಾಜ್ ಭೇಟಿಯಾಗಿದ್ದರು, ಅವರನ್ನು ಸಮ್ಮೇಳನಕ್ಕೆ ನಾನೇ ಆಹ್ವಾನಿಸಿದ್ದೇನೆ. ಆಗಸ್ಟ್‌ನಲ್ಲಿ ಅವರು ಅಮೆರಿಕದ ಸಿಯಾಟಲ್‌ಗೆ ಮಗನ ಮನೆಗೆ ಬಂದಿರುತ್ತಾರಂತೆ. ಅಲ್ಲಿಂದ ರಿಚ್ಮಂಡ್‌ಗೆ ಕರೆಸೋಣ’ ಎಂದು ಕೂಡ ಷಣ್ಮುಗಂ ತಿಳಿಸಿದ್ದರು. ಆಮೇಲೆ ನಾನೂ ಒಮ್ಮೆ ಡುಂಡಿರಾಜರ ಬಳಿ ಮಾತನಾಡಿ ಆ ಯೋಜನೆಯನ್ನು ಪಕ್ಕಾಗೊಳಿಸಿದೆ. ಘನಗಂಭೀರ ಸಾಹಿತ್ಯಗೋಷ್ಠಿಗಳಿಗೆ ಅಕ್ಕ ಸರಿಯಾದ ವೇದಿಕೆಯಲ್ಲ, ಹಾಗಾಗಿ ಇನ್ನೊಬ್ಬರು ಹಾಸ್ಯಸಾಹಿತಿ ನಗೆಮಾತುಗಾರನನ್ನೇ ಆಹ್ವಾನಿಸೋಣವೆಂದು ‘ಸಿಲ್ಲಿ-ಲಲ್ಲಿ’, ‘ಪಾಪ-ಪಾಂಡು’, ‘ವಿಶ್ವ-ವಿಶಾಲೂ’ ಖ್ಯಾತಿಯ ಎಂ.ಎಸ್. ನರಸಿಂಹಮೂರ್ತಿಯವರನ್ನೇ ಆಯ್ದುಕೊಂಡೆ.
ಕರೆ ಮಾಡಿ ಕೇಳಿದಾಗ ಸಂತೋಷದಿಂದ ಒಪ್ಪಿದರು. ‘ನನಗೀಗ ವಯಸ್ಸಾಗಿದೆ. ಒಬ್ಬನೇ ಪ್ರವಾಸ ಮಾಡಲು ಹಿಂಜರಿಯುತ್ತೇನೆ. ಸಮ್ಮೇಳನಕ್ಕೆ ಬೆಂಗಳೂರಿನಿಂದ ಹೋಗುವವರು ಯಾರಾದರೂ ಇದ್ದೇಇರುತ್ತಾರೆಂದು ಬಲ್ಲೆ. ದಯವಿಟ್ಟು ಅವರ ಜತೆಗೆ ಅದೇ ವಿಮಾನದಲ್ಲಿ ನನ್ನ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಿರಾ?’ ಎಂದು ಕೇಳಿಕೊಂಡರು. ಹೇಗೂ ನಾ.ಸೋಮೇಶ್ವರ ಸಹ ಒಬ್ಬರೇ ಬರುವುದೆಂದಾಗಿತ್ತು. ಅದೇ ವಿಮಾನದಲ್ಲೇ ನರಸಿಂಹಮೂರ್ತಿಯವರಿಗೂ ಟಿಕೆಟ್ ವ್ಯವಸ್ಥೆ ಆಯ್ತು. ಶ್ರೀನಾಥ ಭಲ್ಲೆಯವರು ಇನ್ನಿಬ್ಬರು ಅತಿಥಿಗಳನ್ನು ಆಹ್ವಾನಿಸಿದರು. ‘ಅಟ್ಲಾಂಟಾದಲ್ಲಿ ಮಗಳ ಮನೆಗೆ ಬಂದಿರುತ್ತೇನೆ’ ಎಂದಿದ್ದ ಲೇಖಕಿ ಜಯಶ್ರೀ ದೇಶಪಾಂಡೆ ಮತ್ತು
ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ ವೇರ್ ವೃತ್ತಿಯಲ್ಲಿರುವ, ‘ಅಲಖ್ ನಿರಂಜನ್’ ವಿಡಿಯೊ ಖ್ಯಾತಿಯ ನವನೀತ ಗಲಗಲಿ.
ಎಲ್ಲರೂ ಖ್ಯಾತನಾಮರೇ; ಸರಳತೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವವರು. ಆಗಸ್ಟ್ ೨೮ರ ಸಂಜೆ ವಾಷಿಂಗ್ಟನ್ ವಿಮಾನನಿ ಲ್ದಾಣದಲ್ಲಿ ಬಂದಿಳಿದರು ನಾ.ಸೋಮೇಶ್ವರ ಮತ್ತು ಎಂಎಸ್ ಎನ್. ಎದುರುಗೊಳ್ಳಲು ನಾನೂ ಹೋಗಿದ್ದೆ. ಕೆಂಪು ಮತ್ತು ಹಳದಿ ಬಣ್ಣದ ಹೂವುಗಳಿದ್ದ ಗುಚ್ಛ ಕೊಟ್ಟು ಸ್ವಾಗತಿಸಿದೆ. ‘ಓಹೋ! ಕನ್ನಡದ ಬಣ್ಣಗಳಲ್ಲಿ ಕಾರ್ನೇಷನ್ ಹೂವು!’ ಎಂದು ನಾ.ಸೋ. ಸಂತಸ ಪಟ್ಟರು. ಆದಿನ ಅವರಿಬ್ಬರೂ ಉಳಿದುಕೊಳ್ಳಲಿಕ್ಕೆ ವ್ಯವಸ್ಥೆಯಿದ್ದದ್ದು ಮೇರಿಲ್ಯಾಂಡ್‌ನಲ್ಲಿ ಸುಚೇತಾ -ಪ್ರಭುದೇವ ದಂಪತಿಯ ಮನೆಯಲ್ಲಿ. ಮೇರಿಲ್ಯಾಂಡ್
ವಿಶ್ವವಿದ್ಯಾಲಯದಲ್ಲಿ ಡೀನ್ ಆಗಿರುವ ಪ್ರಭುದೇವ ಕನ್ನಡದ ಹಿರಿಯ ಸಾಹಿತಿ ನಾಡೋಜ ಕೋ. ಚನ್ನಬಸಪ್ಪನವರ ಮಗ. ಮನೆಹಿಂದೆ ವಿಶಾಲವಾದೊಂದು ಸರೋವರ, ಪ್ರಶಾಂತ ವಾತಾವರಣ. ಬಿಸಿಬಿಸಿ ಅನ್ನ-ಸಾರು, ಪಾಯಸ, ಮಸಾಲೆದೋಸೆ, ಉಭಯಕುಶಲೋಪರಿ ಮಾತುಕತೆ… ಆತ್ಮೀಯತೆಯಿಂದ ತೊಯ್ದು
ಆಯಾಸವೆಲ್ಲ ಮಾಯವಾಯ್ತು ಎಂದರು ಇಬ್ಬರೂ ಅತಿಥಿಗಳು. ಗುರುವಾರ ಸಂಜೆ ಅವ ರನ್ನು ರಿಚ್ಮಂಡ್‌ಗೆ ಸಮ್ಮೇಳನಸ್ಥಳಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು. ಎರಡೂವರೆ ಗಂಟೆ ಕಾರ್ ಪ್ರಯಾಣದುದ್ದಕ್ಕೂ ನಗೆಚಟಾಕಿಗಳು, ಹಾಸ್ಯಪ್ರಸಂಗಗಳ ಮೆಲುಕು. ವರ್ಷಗಳ ಹಿಂದೊಮ್ಮೆ ಎಂಎಸ್‌ಎನ್ ವಾಕಿಂಗ್ ಹೋಗುವಾಗ ಮುಗ್ಗರಿಸಿಬಿದ್ದು ದವಡೆ ಮುರಿದುಕೊಂಡ ಘಟನೆಯಿಂದ ಹಿಡಿದು ಅ.ರಾ.ಮಿತ್ರರು ಸ್ಕೂಟರ್ ಸ್ಕಿಡ್ ಆಗಿ ಬಿದ್ದಾಗಿನ ಲಘು ಅಪಘಾತ ಆಮೇಲೆ ‘ಉಪಘಾತ’ ಎಂಬ ಲಲಿತಪ್ರಬಂಧ ಆದವರೆಗೆ.
ಸ್ಟೇಟ್‌ಬ್ಯಾಂಕ್‌ನಲ್ಲಿದ್ದಾಗ ಕಲ್ಚರಲ್ ಕಾರ್ಯಕ್ರಮಗಳ ಜವಾಬ್ದಾರಿ ಹೊತ್ತಿದ್ದ ಎಂಎಸ್‌ಎನ್, ಖ್ಯಾತ ವೈಣಿಕ ಚಿಟ್ಟಿಬಾಬುರವರ ‘ಕಂಠಮಟ್ಟ ಸೇವನೆ’ಯನ್ನೆದುರಿಸಿದ ಬಗೆಯಿಂದ ಹಿಡಿದು ಮೊತ್ತಮೊದಲ ಲಂಡನ್ ಪ್ರವಾಸದ
ಅನುಭವಗಳವರೆಗೆ. ನಡುನಡುವೆ ನಾ.ಸೋ. ಅವರಿಂದ ವೈಜ್ಞಾನಿಕ ವೈದ್ಯಕೀಯ ವಿಶ್ಲೇಷಣೆ. ದಾರಿ ಸವೆದದ್ದೇ ಗೊತ್ತಾಗಲಿಲ್ಲ. ರಿಚ್ಮಂಡ್ ತಲುಪಿ ಅಲ್ಲಿನ್ನೂ ಸಿಂಗಾರಗೊಳ್ಳುತ್ತಿದ್ದ ಸಭಾಂಗಣ ನೋಡಿದೆವು. ಕಾರ್ಯಕರ್ತರನ್ನು ಭೇಟಿಯಾದೆವು. ಪಕ್ಕದಲ್ಲೇ ಇದ್ದ ಹಿಲ್ಟನ್ ಹೊಟೇಲ್ ರೂಮ್ ನಂ.೪೪೨ರಲ್ಲಿ ಇಬ್ಬರಿಗೂ ಚೆಕ್ ಇನ್ ಮಾಡಿಸಿ, ‘ಅಕ್ಕ’ ಅಧ್ಯಕ್ಷರ ಮನೆಯಲ್ಲೊಂದು ಪೂರ್ವಭಾವಿ ಪಾರ್ಟಿಯಲ್ಲಿ ಹಾಜರಿಹಾಕಿಸಿ, ನಾನು ನಮ್ಮನೆಗೆ ಹಿಂದಿರುಗಿದೆ.
ಶುಕ್ರವಾರ ಬೆಳಗ್ಗೆ ನಾನು ರಿಚ್ಮಂಡ್ ತಲುಪುವುದಕ್ಕೆ ಮೊದಲೇ ಡುಂಡಿರಾಜ್ ಸಿಯಾಟಲ್‌ನಿಂದ ನೈಟ್‌ಜರ್ನಿ ಮಾಡಿ ಬಂದವರು ರಿಚ್ಮಂಡ್ ಏರ್‌ಪೋರ್ಟ್ ತಲುಪಿದ್ದರು. ನವನೀತ ಗಲಗಲಿ ಸಹ ಅದೇ ವಿಮಾನದಲ್ಲಿ ಬಂದಿದ್ದರಿಂದ ಅವರೆಲ್ಲ ಒಟ್ಟಿಗೇ ಸಮ್ಮೇಳನ ಸ್ಥಳ ತಲುಪಿದರು.
ಡುಂಡಿರಾಜ್‌ಗೂ ಹಿಲ್ಟನ್‌ನಲ್ಲೇ ರೂಮ್ ಇದ್ದದ್ದಾದರೂ ಚೆಕ್‌ಇನ್ ಆಗಲಿಕ್ಕೆ ನಾನಿರಬೇಕಿತ್ತು. ಪಾಪ,
ಹಸಿವೂ ಆಗಿತ್ತೇನೋ. ನಾನು ಬರುವವರೆಗೆ ಅವರನ್ನು ನಿಮ್ಮ ರೂಮಲ್ಲಿಟ್ಟುಕೊಂಡಿರಿ ಎಂದು ಎಂಎಸ್‌ಎನ್‌ಗೆ ಫೋನ್ ಮಾಡಿ ತಿಳಿಸಿದೆ. ಆಮೇಲೆ ಡುಂಡಿರಾಜರೂ ಫೈನಲ್ಲೇ ನನ್ನೊಡನೆ ಮಾತನಾಡಿ ‘ಪರವಾಇಲ್ಲ ನಿಧಾನಕ್ಕೆ ಬನ್ನಿ. ಇಲ್ಲಿ ಎಂಎಸ್‌ಎನ್ ನನಗೆ ಬಿಸ್ಕೇಟ್ ಹಾಕಿದ್ದಾರೆ’ ಎಂದು ಜೋಕ್ ಸಿಡಿಸಿದರು. ಸೆಲೆಬ್ರಿಟಿಗಳು ಹಮ್ಮುಬಿಮ್ಮು ಬಿಗುಮಾನದವರಾಗಿರದೆ ಹಾಸ್ಯಪ್ರವೃತ್ತಿಯವರಾದರೆ ವಾತಾವರಣ ಹೇಗೆ ತಿಳಿಯಾಗಿರುತ್ತದೆನ್ನುವುದಕ್ಕೆ ಇದನ್ನಿಲ್ಲಿ ದಾಖಲಿಸಿದ್ದೇನೆ.
ನಾನು ತಲುಪಿದಮೇಲೆ ಡುಂಡಿಜ್ ಗೆ ಕೊಠಡಿ ಸಂಖ್ಯೆ ೩೪೨ ಅಲಾಟ್ ಆಯ್ತು. ಕಿಂಗ್‌ಬೆಡ್ ಇದ್ದ ವಿಶಾಲ ಕೊಠಡಿಗೆ ಒಬ್ಬನೇ ಡುಂಡಿ-ರಾಜ. ೪೪೨ರಲ್ಲಿರುವ ಎಂಎಸ್‌ಎನ್ ಮತ್ತು ನಾ.ಸೋ. ಎಲ್ಲಾದ್ರೂ ನೆಲಕ್ಕೆ ಕನ್ನ ಕೊರೆದ್ರೆ
ಅಲ್ಲೇ ಕೆಳಗಿನ ಮಹಡಿಯಲ್ಲಿ ೩೪೨ರಲ್ಲಿರುವ ಡುಂಡಿಯ ಮೇಲೆ ಬೀಳುತ್ತೀರಿ ಹುಷಾರು! ಎಂದು ಅಲ್ಲೂ ಒಂದು ತಮಾಷೆ. ಸಂಜೆ ಐದರ ಹೊತ್ತಿಗೆಲ್ಲ ಸಭಾಂಗಣದಲ್ಲಿ ಸಮ್ಮೇಳನದ ರಂಗು ಏರತೊಡಗಿತ್ತು. ಈ ಮೂವರಿಗೂ ಅಲ್ಲಿ ಅನೇಕ ಅಭಿಮಾನಿಗಳಿದ್ದರು. ಮುಖ್ಯವಾಗಿ ಅಭಿಮಾನಿನಿಯರು ಮುತ್ತಿಗೆ ಹಾಕಿ ಸೆಲಿ ತೆಗೆದುಕೊಳ್ಳುತ್ತಿದ್ದರು. ಆವತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯಾದ ಮೇಲೆ ನಾ.ಸೋಮೇಶ್ವರರ ಆಶಯ ಭಾಷಣ
ಅಂತ ಇದ್ದದ್ದು. ಪ್ರಕಟಿತ ವೇಳಾಪಟ್ಟಿಯ ಪ್ರಕಾರ ರಾತ್ರಿ ೯ರಿಂದ ೯:೩೦ರವರೆಗೆ. ಅರ್ಧ ಗಂಟೆಯಲ್ಲಿ ಓದಿ ಮುಗಿಸಲಿ ಕ್ಕಾಗುವಷ್ಟು ಚೊಕ್ಕದಾದ ಸತ್ತ ಯುತ ಭಾಷಣ ಬರೆದುತಂದಿದ್ದರು. ಪರಾಮರ್ಶಿಸಿ ತಿದ್ದುಪಡಿ ಬೇಕಿದ್ದರೆ ತಿಳಿಸಿ ಎಂದು ವಾರದ ಹಿಂದೆಯೇ ನನಗೊಂದು ‘ಮೃದುಪ್ರತಿ’ ಸಹ ಕಳುಹಿಸಿದ್ದರು. ಆವತ್ತು ವೇದಿಕೆ ಕಾರ್ಯಕ್ರಮಗಳು ಆರಂಭವಾಗಿದ್ದೂ ತಡ, ಮುಗಿದದ್ದು ಮತ್ತೂ ತಡ.
ರಾಜಕಾರಣಿಗಳು, ಸ್ವಾಮೀಜಿಗಳು, ‘ಅಕ್ಕ’ ಪದಾಧಿಕಾರಿಗಳದೇ ಭರಾಟೆ. ಸೋಮೇಶ್ವರರಿಗೆ ಮಾತನಾಡಲಿಕ್ಕೆ ಕೊಟ್ಟ
ಅವಽ ಎರಡೇಎರಡು ನಿಮಿಷ! ಪ್ರತ್ಯೇಕ ಆಶಯ ಭಾಷಣ ಇರುವುದಿಲ್ಲ ಎಂಬ ಸೂಚನೆಯನ್ನೂ ಕೊಡಲಿಲ್ಲ. ಮಾರನೆ ದಿನ ಬೆಳಗ್ಗೆಯೂ ಡಿಟ್ಟೋ ಪರಿಸ್ಥಿತಿ. ಸಭಾಕಾರ್ಯಕ್ರಮ ಅತ್ಯಂತ ಅಸಮರ್ಪಕ ನಿರ್ವಹಣೆ. ನಗಣ್ಯ-ಗಣ್ಯರಿಗೆ ಕಾಯುತ್ತ ಸಭೆ ಆರಂಭಿಸಲು ಮಾಡಿದ ವಿಳಂಬದಲ್ಲಿ ಸೋಮೇಶ್ವರ ನಾಲ್ಕು ಸರ್ತಿ ಭಾಷಣ ಓದಿಮುಗಿಸುತ್ತಿದ್ದರೇನೋ. ಕೊನೆಗೂ ಆಶಯ ಭಾಷಣಕ್ಕೆ ಅರ್ಧಚಂದ್ರವೇ ಗತಿ. ‘ನಮ್ಮಿಂದ ಪ್ರಮಾದವಾಯ್ತು
ದಯವಿಟ್ಟು ಕ್ಷಮಿಸಿ’ ಎಂದು ಆಮೇಲೆ ಸಂಚಾಲಕ ಷಣ್ಮುಗಂ ಬಂದು ಸೋಮೇಶ್ವರರ ಕಾಲಿಗೆ ಬಿದ್ದು ಕ್ಷಮೆಕೇಳಿದರು. ಬೇರೆಯವರಾಗಿದ್ದರೆ ಅಲ್ಲಿ ಎಂಥ ಸೀನ್ ಕ್ರಿಯೇಟ್ ಆಗುತ್ತಿತ್ತೇನೋ.
ಸೋಮೇಶ್ವರ ಒಂದಿನಿತೂ ವಿಚಲಿತರಾಗದೆ ಏನೂ ನಡೆದೇಇಲ್ಲವೇನೋ ಎಂಬಂತೆ ಪ್ರಸನ್ನವದನರಾಗಿಯೇ ಇದ್ದರು. ಭಾಷಣದ ಮೃದುಪ್ರತಿ ನನ್ನಲ್ಲಿದ್ದುದರಿಂದ ಅದನ್ನೇ ವಿಶ್ವವಾಣಿಗೆ ಕಳುಹಿಸಿ, ಪೂರ್ಣವಾಗಿ ಪ್ರಕಟಿಸುವಂತೆ ವಿನಂತಿಸಿ, ನ್ಯಾಯ ಒದಗಿಸುವುದರಲ್ಲಿ ನನ್ನ ಕೈಲಾದ್ದಷ್ಟನ್ನು ಮಾಡಿದೆ. ಸಮ್ಮೇಳನ ಮುಗಿದ ಮೇಲೆ ಸೋಮವಾರ ಬೆಳಗ್ಗೆ ಎಲ್ಲರಿಗೂ ತಮ್ಮತಮ್ಮ ಊರುಗಳಿಗೆ ಹೊರಡುವ ತರಾತುರಿ. ಸಿಯಾಟಲ್‌ಗೆ ಹಿಂದಿರುಗಲಿದ್ದ ಡುಂಡಿರಾಜರನ್ನು ರಿಚ್ಮಂಡ್ ಏರ್‌ಪೋರ್ಟ್‌ಗೆ ಬಿಟ್ಟು ನಾನು ಎಂಎಸ್‌ಎನ್ ಮತ್ತು ನಾ.ಸೋ. ವಾಷಿಂಗ್ಟನ್‌ಗೆ
ಹಿಂದಿರುಗಿದೆವು. ಇಬ್ಬರಿಗೂ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಇದ್ದದ್ದು ಬುಧವಾರ ಸಂಜೆ ಆದ್ದರಿಂದ ೪೮ ಗಂಟೆಗಳಲ್ಲಿ ಸಾಧ್ಯವಾದಷ್ಟೂ ವಾಷಿಂಗ್ಟನ್ ಡಿಸಿ ವೀಕ್ಷಣೆಯ ಯೋಜನೆ. ಆರ್ಲಿಂಗ್ಟನ್ ನಲ್ಲಿರುವ ನ್ಯಾಷನಲ್ ಸೆಮೆಟ್ರಿ ನೋಡ್ಕೊಂಡು ಬನ್ನಿ ಎಂದು ಎಂಎಸ್‌ಎನ್‌ಗೆ ಸಿಹಿಕಹಿಚಂದ್ರು ಬೆಂಗಳೂರಲ್ಲೇ ಹೇಳಿಟ್ಟಿದ್ದರಂತೆ,
ಮೊದಲಿಗೆ ಅಲ್ಲಿಗೇ ಹೋದೆವು.
ಆಮೇಲೆ ಕ್ಯಾಪಿಟೋಲ್ ಮತ್ತು ಪಕ್ಕದಲ್ಲೇ ಇರುವ ಬೊಟಾನಿಕಲ್ ಗಾರ್ಡನ್. ಮಾರನೆದಿನ ಲುರೇ ಕೇವರ್ನ್ಸ್ ನೈಸರ್ಗಿಕ ಗುಹೆಗಳು. ಸೋಮೇಶ್ವರರಿಗೆ ಅದು ತುಂಬ ಇಷ್ಟವಾಯ್ತು. ‘ಥಟ್ ಅಂತ ಹೇಳಿ’ಯ ಬರಲಿರುವ
ಕಂತುಗಳಿಗೆ ಪುಷ್ಕಳ ಸರಕೂ ಸಿಕ್ಕಿರಬಹುದು! ಸಂಜೆ ಮೇರಿಲ್ಯಾಂಡ್‌ನ ಶರಾವತಿ ಕನ್ನಡ ಬಳಗದವರಿಂದ ನಾ.ಸೋ. ಮತ್ತು ಎಂಎಸ್‌ಎನ್ ಅವರೊಡನೆ ಅನೌಪಚಾರಿಕ ಸ್ನೇಹಕೂಟ. ಬುಧವಾರ ಬೆಳಗ್ಗೆ ನಮ್ಮನೆಗೆ ಹತ್ತಿರದಲ್ಲೇ ಇರುವ ‘ಬಾರ್ನ್ಸ್ ಆಂಡ್ ನೋಬಲ್’ ಬೃಹತ್ ಪುಸ್ತಕಮಳಿಗೆಗೆ ಭೇಟಿ. ಅಲ್ಲಿನ ಸ್ಟೋರ್ ಮ್ಯಾನೇಜರ್‌ಗೆ ಸೋಮೇಶ್ವರರನ್ನು, ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮವನ್ನು, ಸರಿಯುತ್ತರಕ್ಕೆ ಬಹುಮಾನವಾಗಿ ಪುಸ್ತಕ ಕೊಡುವ ಅನನ್ಯತೆಯನ್ನು ಹೆಮ್ಮೆಯಿಂದ ಪರಿಚಯಿಸಿದೆ.
ಆತ ತುಂಬ ಖುಷಿಪಟ್ಟು ಫೋಟೊ ತೆಗೆಸಿಕೊಂಡನು. ಖರೀದಿಸಿದ ಪುಸ್ತಕಗಳ ಬೆಲೆಯಲ್ಲಿ ಒಂದಿಷ್ಟು ರಿಯಾಯಿತಿ ಯನ್ನೂ ಕೊಟ್ಟನು. ನಂತರ ಏರ್ ಆಂಡ್ ಸ್ಪೇಸ್ ಮ್ಯೂಸಿಯಮ್‌ಗೆ ಹೋದೆವು. ಅದಾದ ಮೇಲೆ, ಇಲ್ಲಿಯ ಇಂಡಿಯನ್ ರೆಸ್ಟೋರೆಂಟ್ಸ್ ಹೇಗಿರುತ್ತವೆಂದು ತೋರಿಸಲಿಕ್ಕೆ ಸರವಣ ಪ್ಯಾಲೇಸ್‌ನಲ್ಲಿ ಬಫೆ ಊಟ. ಅಲ್ಲಿಂದ ವಿಮಾನನಿಲ್ದಾಣಕ್ಕೆ ಹೋಗಿ ಇಬ್ಬರಿಗೂ ಶುಭಪ್ರಯಾಣ ಕೋರಿ ವಿದಾಯ. ನಾನು ಈ ಅಂಕಣಬರಹ ಸಿದ್ಧಪಡಿಸಿ ‘ಸೆಲೆಬ್ರಿಟಿಗಳ ಸರಳತನ, ಸಜ್ಜನಿಕೆ ಅರಿವಾದಾಗಿನ ಆನಂದ’ ಎಂಬ ತಲೆಬರಹ ನೀಡುವಷ್ಟರಲ್ಲಿ, ಫೇಸ್‌ಬುಕ್‌ನಲ್ಲಿ ಎಂಎಸ್‌ಎನ್ ಅವರದೊಂದು ಪೋಸ್ಟ್ ಕಣ್ಣಿಗೆಬಿತ್ತು.
ಸಮ್ಮೇಳನ ಮುಗಿಸಿ ಹಿಂದಿರುಗುವಾಗ ವಿಮಾನದಲ್ಲಿ ಬಿಗ್‌ಬಾಸ್ ಸೀಸನ್-೪ರ ವಿನ್ನರ್ ಪ್ರಥಮ್ ಸಿಕ್ಕನಂತೆ. ಆಮ್ ಸ್ಟರ್‌ಡಾಮ್‌ನಲ್ಲಿ ಬೆಂಗಳೂರಿನ ವಿಮಾನ ಹೊರಡುವ ಗೇಟ್ ತಿಳಿದುಕೊಳ್ಳಲಿಕ್ಕೆ, ವಿಮಾನದೊಳಗೆ ಗಗನಸಖಿಗೆ ಹೇಳಿ ಇವರಿಬ್ಬರಿಗೆ ಸ್ಪೆಷಲ್ ಕಾಫಿ ಮತ್ತು ಜ್ಯೂಸ್ ಕೊಡಿಸುವುದಕ್ಕೆ, ಬೆಂಗಳೂರಲ್ಲಿ ಇಳಿದ ಮೇಲೆ ಲಗೇಜ್ ಬೆಲ್ಟ್ ನಿಂದ ಇಳಿಸಲಿಕ್ಕೆ, ಕೊನೆಗೆ ಟ್ಯಾಕ್ಸಿ ಬುಕ್ ಮಾಡಲಿಕ್ಕೂ ಅವನಾಗಿಯೇ ನಗುನಗುತ್ತ ನೆರವಾದನಂತೆ. ‘ಅವನ ಚುರುಕುತನ ಮತ್ತು ಲೀಡರ್‌ಶಿಪ್ ಕ್ವಾಲಿಟೀಸ್ ಕಂಡು ನಾನು ಬೆರಗಾದೆ.
ಕಲಾವಿದರನ್ನು ಟಿವಿ ಪರದೆಯ ಮೇಲೆ ನೋಡಿದಾಗ ಜಂಬ ಇರಬಹುದು ಎಂಬ ಅಭಿಪ್ರಾಯ ಬಂದಿರುತ್ತದೆ. ನಿಜಜೀವನದಲ್ಲಿ ಕಂಡಾಗ ಪ್ರಥಮ್ ಎಂಥ ಸಹೃದಯಿ, ಅದೆಷ್ಟು ಡೈನಮಿಕ್ ಹುಡುಗ ಎಂದು ಅರ್ಥವಾಯ್ತು’ ಅಂತ ಎಂಎಸ್‌ಎನ್ ಬರೆದಿದ್ದರು. ಅಂದರೆ, ಸೆಲೆಬ್ರಿಟಿ ಜತೆ ಅವರಿಗೂ ಅದೇ ಅನುಭವ!