ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಈಗಿನ ಕಾಲದ ಸಿನಿಮಾಗಳಲ್ಲಿ ಕಥೆ ನೇ ಇರಲ್ಲ ಅನ್ನೋದು ಬಹಳಷ್ಟು ಪ್ರೇಕ್ಷಕರ ಕಂಪ್ಲೇಂಟ್. ಆದ್ರೆ ಈ ವಾರ ಬಿಡುಗಡೆ ಆದ ‘ಕಾಲಾ ಪತ್ಥರ್’ ಸಿನಿಮಾ ವಿಷಯದಲ್ಲಿ ಹಾಗನ್ನೋ ಅವಕಾಶ ಇಲ್ಲ. ಯಾಕಂದ್ರೆ ಈ ಸಿನಿಮಾದ
ಪ್ರಮುಖ ಅಂಶನೇ ಕಥೆ. ಈ ಸಿನಿಮಾದ ಕಥೆ ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ. ಕಥಾ ನಾಯಕ ಆರ್ಮಿಯಲ್ಲಿ ಇರೋ ಎಪಿಸೋಡ್‌ನಿಂದ ಸಿನಿಮಾ ಶುರು ಆಗುತ್ತೆ. ಇದರಲ್ಲಿ ಏನಿದೆ ಕಥೆ ಅಂತ ಕಾಯೋ ಹೊತ್ತಿಗೆ ಒಂದು ವಿಭಿನ್ನ ಅನುಭವ ತೆರೆದುಕೊಳ್ಳುತ್ತೆ.
ಆರ್ಮಿಯಲ್ಲಿ ನಮ್ಮ ಹೀರೋ ಮಾಡೋ ಸಾಹಸ ನೋಡಿ ಅವನ ಊರಿನ ಜನ ಅವನಿಗೋಸ್ಕರ ಊರಲ್ಲಿ ಒಂದು ಮೂರ್ತಿಯನ್ನ ಕಟ್ಟಿಸುತ್ತಾರೆ. ಚಿತ್ರದ ಕಥೆಗಾರ ಸತ್ಯಪ್ರಕಾಶ್ ಮತ್ತು ನಿರ್ದೇಶಕ ವಿಕ್ಕಿ ಇದೇ ಎಳೆ ಇಟ್ಕೊಂಡು ಒಂದು ವಿಶಿಷ್ಟ ಚಿತ್ರವನ್ನು ಕಟ್ಟಿದ್ದಾರೆ. ಊರಲ್ಲಿ ನಾಯಕನ ಶಿಲೆಯನ್ನು ನಿಲ್ಲಿಸಿದ ಜನ ಅವನನ್ನು ಹಾಡಿ ಹೊಗಳುತ್ತಾರೆ.
ಹಾಗಾಗಿ ಇಲ್ಲಿ ‘ಶಿಲೆಗಳು ಸಂಗೀತವಾ ಹಾಡಿವೆ’ ಅನ್ನೋ ಹಾಡು ನೆನಪಾಗುತ್ತೆ. ಆದರೆ ನಂತರ ಊರ ಜನ
ಬದಲಾದ ಮೇಲೆ ಆ ಹಾಡಿನಲ್ಲಿ ಅಪಸ್ವರವೂ ಕೇಳಿಬರುತ್ತದೆ. ‘ಕಲ್ಲು ಕನುತಾ’ ನಾಯಕ ಕೂಡಾ ತನ್ನ ಪ್ರತಿಮೆ ಬಗ್ಗೆ ಅಪಾರವಾದ ಮೋಹ ಬೆಳೆಸಿಕೊಳ್ತಾನೆ. ಆಮೇಲೆ ಅವನ ಬೆಳವಣಿಗೆನೇ ನಿಂತುಹೋಗುತ್ತೆ. ಅದಕ್ಕೆ ಕಾರಣ ಏನು ಅನ್ನೋದು ಮಾತ್ರ ನಿಜಕ್ಕೂ ಇಂಟರೆಸ್ಟಿಂಗ್ ಆಗಿರೋ ಕಥೆ. ಒಂದು ಶಿಲೆಗೂ ಜೀವ ಇದೆಯಾ ಅಂತ ಅನುಮಾನ ಮೂಡಿಸೋ ಕಥೆ ಇಲ್ಲಿದೆ. ಹಾಗಂತ ಇದನ್ನು ‘ಶಿಲಾಯುಗದ ಕಥೆ’ ಅನ್ನೋಕಾಗಲ್ಲ. ಈ ಕಥೆ ನೋಡಿದ್ರೆ ನಿಮಗೆ ನಮ್ಮ ಜನಪದ ದೇಸಿ ಕಥೆಗಳ ನೆನಪಾಗಬಹುದು.
ಇದನ್ನೂ ಓದಿ: hari paraak column: ಕಂಗನಾ ಎಮರ್ಜೆನ್ಸಿ ಬ್ರೇಕ್
ಊರಲ್ಲಿ ನಾಯಕನ ಪ್ರತಿಮೆ ನಿಲ್ಲಿಸೋ ಮೂಲಕ ಕಲ್ಲು ಹಾಕೋ ಕೆಲಸ ಮಾಡಿ ಅಂದ್ರೆ ಪ್ರತಿಮೆಗೆ ಶಂಕುಸ್ಥಾಪನೆ
ಮಾಡೋ ಊರ ಜನ ತಮ್ಮ ಖುಷಿಗೆ ಹಾಕಿಸಿದ ಕಲ್ಲು ನಾಯಕನ ನೆಮ್ಮದಿಗೂ ಕಲ್ಲು ಹಾಕುತ್ತದೆ. ಅದರ ನಂತರ ಪ್ರತಿಮೆ ನಿಲ್ಲಿಸಿದ ಜನ ನಾಯಕನನ್ನು ಪ್ರೀತಿಸೋದನ್ನೂ ನಿಲ್ಲಿಸುತ್ತಾರೆ. ಚಿತ್ರದ ನಿರೂಪಣೆ ಯಲ್ಲಿ ಹೊಸತನ ತೋರಿಸೋದಕ್ಕಿಂತ ಕಥೆಯಲ್ಲಿರೋ ಶಕ್ತಿಯನ್ನೇ ಪ್ರಮುಖವಾಗಿ ಬಳಸಿಕೊಂಡಿzರೆ ನಿರ್ದೇಶಕ ವಿಕ್ಕಿ ವರುಣ್. ಹಾಗೆ ನೋಡಿದರೆ ಈ ಕಥೆ ದೃಶ್ಯಮಾಧ್ಯಮವನ್ನ ಅಷ್ಟಾಗಿ ಕೇಳೋದಿಲ್ಲ.
ಇದನ್ನ ನೋಡಲೇಬೇಕು ಅಂತೇನಿಲ್ಲ. ಬರೀ ಕೇಳಿದರೂ ಪ್ರೇಕ್ಷಕರಿಗೆ ಹೊಸತನದ ಅನುಭವ ಆಗುತ್ತದೆ. ಒಟ್ಟಾರೆ ಹೇಳೋದಾದ್ರೆ ನಮ್ ಸಿನಿಮಾಗಳಲ್ಲಿ ಕಥೆನೇ ಇರಲ್ಲ ಅಂತ ಮನಸ್ಸನ್ನ ಕಲ್ಲು ಮಾಡಿಕೊಂಡ ಪ್ರೇಕ್ಷಕರು
ಕೂಡಾ ‘ಕಲ್ಲು ಕನುತಾ’ ಈ ಕಲ್ಲಿನ ಕಥೆ ನೋಡೋಕೆ ಹೋಗಬಹುದು.
ಲೂಸ್ ಟಾಕ್ : ದರ್ಶನ್
ಏನ್ರೀ ನಿಮ್ದು ಮತ್ತೆ? ಮೀಡಿಯಾದ ವರಿಗೆ ಏನೋ ಬೆರಳು ತೋರಿಸಿ ಸುದ್ದಿ ಆಗಿದ್ದೀರಾ?
ಏನ್ರೀ ಮೀಡಿಯಾ, ಬೆರಳು ತೋರಿಸಿದ್ರೆ ಹಸ್ತನೇ ನುಂಗೋಕೆ ಬರ್ತಾರಲ್ಲ ಹಂಗ್ ಆಡ್ತೀರಾ?
ಅವೆಲ್ಲ ಬೇಡ. ಅದ್ಯಾಕೆ ನೀವು ಬೆರಳು ತೋರಿಸಿದ್ದು?
ಮೀಡಿಯಾದವ್ರ್ ಮಾತ್ರ 24 ಗಂಟೆ ನನ್ನ ಕಡೆ ಕೈ ತೋರಿಸಿ ಮಾತಾಡಬಹುದು. ನಾನು ಬೆರಳೂ ತೋರಿಸೋ ಹಾಗಿಲ್ವಾ?
ಅಲ್ರೀ, ಅದಕ್ಕೆ ಅರ್ಥ ಏನು ಅಂತ ಕೇಳಿದ್ದು..
ಏನೀಗ, ಅರ್ಥ ಇರ್ಲೇಬೇಕಾ, ಇ ಅಂದ್ರೆ ‘ಬೆರಳ್‌ಗೆ ಕೊರಳ್’ ಅಂತ ಕೊರಳಿಗೆ ನೇಣು ಹಾಕಿ ಗಲ್ಲಿಗೇರಿಸಿಬಿಡ್ತೀರಾ?
ಬಿಡಿ ಹೋಗ್ಲಿ, ಸರಿ, ನಿಮಗೆ ಜಾಮೀನು ಸಿಗುತ್ತಂತಾ?
ಸಿಗ್ತಾ ಇತ್ತೇನೋ.. ಆದ್ರೆ, ಮೀಡಿಯಾದವ್ರ್ ಮಾಡ್ತಿರೋ ಅಪಪ್ರಚಾರ ನೋಡಿ, ಹಿತ್ತಲ ದಾರಿಯಲ್ಲಿ ಕೊಡಿಸೋಕೆ
ಬಂದೋರು ಕೂಡಾ, ‘ಹಿತ್ಲಲ್ಲಿ ದರ್ಶನ್‌ಗೆ ಜಾಮೀನು ಕೊಡಿಸೋಕೆ ಯಾವತ್ತು ಹೋಗ್ಬಾರ್ದು ರೀ’ ಅಂತ ದೂರನೇ
ಉಳಕೊಂಡುಬಿಟ್ಟಿದ್ದಾರೆ.
ಥೋ, ಹೋಗ್ಲಿ, ಎಲ್ಲಾ ಮೀಡಿಯಾಗಳೂ ನಿಮ್ಮ ಮೇಲೆ ಯಾಕೆ ಕೆಂಡ ಕಾರ್ತಿವೆ?
ಅದೇನೋ ಗೊತ್ತಿಲ್ಲ, ಆದ್ರೆ ಎಲ್ಲ ಮೀಡಿಯಾಗಳೂ ಒಟ್ಟಾಗಿ ಸೇರಿ, ‘ಮಲ್ಟಿ ಮೀಡಿಯಾ’ ಆಗಿ ಅಟ್ಯಾಕ್ ಮಾಡ್ತಾ
ಇರೋದಂತೂ ಸತ್ಯ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದ್ ದಿನ ಸರಿ ಇದ್ರೆ ಒಂದ್ ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡೈವೋರ್ಸ್ಗೆ ಅಪ್ಲೈ ಮಾಡೋದು ಅಂತ ತೀರ್ಮಾನ ಮಾಡಿದ್ರು. ಹಂಗೇ ಮಾಡಿದ್ರು.
ಕೋರ್ಟ್‌ನಲ್ಲಿ ಜಡ್ಜ್ ತುಂಬಾ ಸಂಭಾವಿತರು. ಹಾಗಾಗಿ ಇಬ್ಬರಿಗೂ ಒಳ್ಳೆ ಮಾತಿನಲ್ಲಿ ಜತೆಯಾಗಿ ಬದುಕೋಕೆ ಸಲಹೆ ನೀಡಿದ್ರು. ನೋ ಯೂಸ್, ಖೇಮು-ಖೇಮುಶ್ರೀ ಇಬ್ರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜಡ್ಜ್ ಇವರಿಬ್ಬರಿಗೂ ಡೈವೋರ್ಸ್ ಕೊಡೋಕೆ ಅನುಮತಿ ಕೊಟ್ರು. ಈಗ ವಿಷಯ ಜೀವನಾಂಶಕ್ಕೆ ಬಂತು. ಖೇಮುಶ್ರೀ ‘ನಂಗೆ ತಿಂಗಳಿಗೆ 20 ಸಾವಿರ ರುಪಾಯಿ ಜೀವನಾಂಶ ಬೇಕು’ ಅಂತ ಪಟ್ಟುಹಿಡಿದು ಕೂತಳು. ಖೇಮು ‘ನನ್ ಕೈಲಿ ಸಾಧ್ಯಾನೇ ಇಲ್ಲ’ ಅಂತ ಕೂತ.
ಕೊನೆಗೆ ಖೇಮುನ ಒಟ್ಟಾರೆ ಇನ್‌ಕಮ, ಖೇಮುಶ್ರೀಯ ಅವಶ್ಯಕತೆ ಎಲ್ಲವನ್ನೂ ಪರಿಶೀಲಿಸಿದ ಜಡ್ಜ್ ತೀರ್ಪು ಕೊಟ್ಟರು, ‘ಎಲ್ಲ ದಾಖಲೆಗಳನ್ನು ನೋಡಿ, ಖೇಮುಶ್ರೀಯ ಪರಿಸ್ಥಿತಿಯನ್ನು ಗಮನಿಸಿ ಆಕೆಗೆ ಪ್ರತಿ ತಿಂಗಳು ೨೦ ಸಾವಿರ ರುಪಾಯಿಗಳ ಜೀವನಾಂಶ ಕೊಡಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ’ ಎಂದರು. ಅದನ್ನು ಕೇಳಿದ ಖೇಮು ಫುಲ್ ಖುಷಿಯಾಗಿ ಹೇಳಿದ- ‘ನಿಮ್ದು ಭಾಳಾ ದೊಡ್ ಮನಸು ಸ್ವಾಮಿ; ಸಾಧ್ಯ ಆದ್ರೆ ಅವಳಿಗೆ ನಾನೂ ಆವಾಗಾವಾಗ ಅಲ್ಪ ಸ್ವಲ್ಪ ದುಡ್ ಕೊಡೋಕೆ ಟ್ರೈ ಮಾಡ್ತೀನಿ’
ಲೈನ್ ಮ್ಯಾನ್
ರಜೆ ಕಳೆಯೋಕೆ ಅಂತ HILL STATION ಗೆ ಹೋಗಿ ಅಲ್ಲಿ ಆರೋಗ್ಯ ಕೆಟ್ಟರೆ
ಅದು ILL STATION
ಹೆಂಡತಿ ಗಂಡನಿಗೆ ತುಂಬಾ ಕಿರುಕುಳ ಕೊಡ್ತಾ ಇದ್ರೆ ಅವಳು
ಮಿಸ್-ಸ್ಟ್ರೆಸ್
ಬಿಜೆಪಿಯವರು ಹೇಳೋ ಮಾತು-ಕೇಸರಿಬಾತ್
ಎಎಪಿಯವರು ಹೇಳೋ ಮಾತು- ಕೇಜ್ರಿಬಾತ್
ಹಿಂದಿ ಮಾತಾಡೋಕೆ ಬರದೇ ಇರೋರೆ ಭಾರತೀಯರಲ್ಲ, ವಿದೇಶಕ್ಕೆ ಹೋಗಿ: ಬಿಜೆಪಿ ಸಚಿವ
ಹಂಗಾದ್ರೆ, ನಮ್ಮೂರಲ್ಲಿ ಗೋಲ್ ಗಪ್ಪ ಮಾರ್ತಾ ಇರೋರೆಲ್ಲ, ಮನೆಯಿಂದ ಬರುವಾಗ ಫಾರಿನ್ನಿಗ್ ಹೋಗ್ತಾ ಇದ್ದೀವಿ ಅಂತ ಹೇಳಿ ಬಂದಿರ್ತಾರಾ?
ಐಪಿಎಲ್‌ನಲ್ಲಿ ‘Pan’ India star ಯಾರು?
ರಿಯಾನ್ ‘ಪರಾಗ್’
ಬಾಲಿವುಡ್ ಖಾನ್‌ಗಳು ಇನ್ನೊಬ್ಬರಿಗೆ ಹೇಳೋ ‘ಕಿವಿ’ಮಾತನ್ನ ಏನಂತಾರೆ?
‘ಕಾನ್’ ಕೀ ಬಾತ್
‘ನಮ್ ಹೊಲದಲ್ಲಿ 3 ಸಲ ಬೋರ್ ಹಾಕಿಸಿದೆ, ಆದ್ರೂ ನೀರ್ ಬೀಳಲಿಲ್ಲ, ಇನ್ನೊಂದ್ಸಲ
ಹಾಕಿಸ್ಬೇಕು’
-‘3 ಸಲ ಹಾಕ್ಸಿದ್ ಮೇಲೂ ನಿಮಗೆ ಬೋರ್ ಆಗಿಲ್ವಾ’
ಸಿನಿಮಾ ಸತ್ಯ
ಸಿಂಗಲ್ ಥಿಯೇಟರ್ ಮುಂದೆ ಮೂರ್ನಾಲ್ಕು -P ಹಾಕಿಸಿದ ತಕ್ಷಣ ಅದು ‘ಮಲ್ಟಿಪ್ಲೆಕ್ಸ್’ ಆಗಲ್ಲ
ಪ್ರೀತಿ ಮಾಡೋರಿಗೂ ಎಂಜಿನಿಯರ್‌ಗಳಿಗೂ ಇರೋ ಹೋಲಿಕೆ
ಇವರು ಯಾರನ್ನೋ ಪ್ರೀತಿ ಮಾಡಿ ಇನ್ಯಾರನ್ನೋ ಮದ್ವೆ ಆಗ್ತಾರೆ, ಅವ್ರು ಎಂಜಿನಿಯರಿಂಗ್ ಓದಿ ಇನ್ನೇನೋ ಕೆಲಸ ಮಾಡ್ತಾರೆ.
‘ಕ್ಲೀನ್ ಹ್ಯಾಂಡ್’ ಪೊಲಿಟಿಷಿಯನ್ ಅಂದ್ರೆ ಯಾರು?
ದೇಶದ ಆಸ್ತಿಯನ್ನೆ ಮಾರಿ ‘ಕೈ ತೊಳ್ಕೊಂಡವನು’.