Saturday, 23rd November 2024

IND vs BNG: ಬಾಂಗ್ಲಾ ಮಣಿಸಲು ರೆಡ್‌ ಪಿಚ್‌ ನಿರ್ಮಿಸಿದ ಭಾರತ

IND vs BNG

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ(IND vs BNG) ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಭಾರತ ತಂಡ ಸಜ್ಜಾಗಿದೆ. ಇತ್ತಂಡಗಳ ನಡುವಣ ಮೊದಲ ಟೆಸ್ಟ್‌ ಸೆಪ್ಟೆಂಬರ್‌ 19ರಿಂದ ಚೆನ್ನೈಯ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ(M.A. Chidambaram Stadium) ಆರಂಭಗೊಳ್ಳಲಿದೆ. ಈಗಾಗಲೇ ಭಾರತೀಯ ಆಟಗಾರರು ಅಭ್ಯಾಸ ಕೂಡ ಶುರುಮಾಡಿದ್ದಾರೆ. ಈ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್‌ನಲ್ಲಿ(Red soil) ನಡೆಯಲಿದೆ ಎಂದು ತಿಳಿದುಬಂದಿದೆ.

ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡದ ಮೇಲುಗೈಗೆ ಅನುಕೂಲಕರ ಎನಿಸುವಂಥ ಕೆಂಪು ಮಣ್ಣಿನ ಪಿಚ್​ ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಬಾಂಗ್ಲಾ ತಂಡ ತವರಿನಲ್ಲಿ ಕಪ್ಪು ಮಣ್ಣಿನ ಪಿಚ್​ನಲ್ಲಿ ಹೆಚ್ಚು ಆಡಿದ ಅನುಭವ ಹೊಂದಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್​ಗೆ ಹೊಂದಿಕೊಳ್ಳುವುದು ಬಾಂಗ್ಲಾ ಪಾಲಿಗೆ ಸವಾಲೆನಿಸಲಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.

ಈ ಪಿಚ್‌ ಯಾರಿಗೆ ಸಹಕಾರಿ

ಕೆಂಪು ಮಣ್ಣಿನ ಪಿಚ್​ ಮೊದಲಿಗೆ ವೇಗದ ಬೌಲರ್​ಗಳಿಗೆ ಹೆಚ್ಚಿನ ನೆರವು ಒದಗಿಸುತ್ತದೆ. ಕೆಂಪು ಮಣ್ಣಿನಲ್ಲಿ ಕಡಿಮೆ ಆವೆ ಅಂಶ ಇರುವುದರಿಂದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಬೌನ್ಸ್​ ಕಂಡುಬರಲಿದೆ. ಆರಂಭದಲ್ಲಿ ವೇಗಿಗಳು ಮೇಲುಗೈ ಸಾಧಿಸಬಹುದು. ಆದರೆ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಬೇಕು. ಪಿಚ್​ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕವಷ್ಟೇ ಸ್ಪಿನ್ನರ್​ಗಳಿಗೆ ಪಿಚ್​ ನೆರವಾಗುತ್ತದೆ.

ಶನಿವಾರದಂದು ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌ ಸೇರಿದಂತೆ, ಬಹುತೇಕ ಎಲ್ಲ ಆಟಗಾರರು ಬ್ಯಾಟಿಂಗ್‌ ಅಭ್ಯಾಸ ನಡೆಸಿದರೆ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಆರ್‌.ಅಶ್ವಿನ್‌, ಕುಲ್‌ದೀಪ್‌ ಪೂರ್ತಿ ಫಿಟ್‌ನೆಸ್‌ನೊಂದಿಗೆ ಬೌಲಿಂಗ್‌ ನಡೆಸಿ ಗಮನ ಸೆಳೆದರು.

ಇದನ್ನೂ ಓದಿ IND vs BNG: ಚೆಪಾಕ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ ಕೊಹ್ಲಿ, ಬುಮ್ರಾ

ಬಾಂಗ್ಲಾದ 6.3 ಅಡಿ ಎತ್ತರದ ಯುವ ವೇಗಿ ನಹಿದ್​ ರಾಣಾ ಇತ್ತೀಚೆಗೆ ರಾವಲ್ಪಿಂಡಿ ಟೆಸ್ಟ್​ನಲ್ಲಿ 5 ವಿಕೆಟ್​ ಕಬಳಿಸಿ ಆತಿಥೇಯ ಪಾಕಿಸ್ತಾನ ತಂಡವನ್ನು ಕಂಗೆಡಿಸಿದ್ದರು. ಹೀಗಾಗಿ ಭಾರತ ತಂಡವೂ ನಹಿದ್​ರನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಪಂಜಾಬ್​ನ 6.45 ಅಡಿ ಎತ್ತರದ ವೇಗಿ ಗುರ್​ನೂರ್​ ಬ್ರಾರ್​ ಎದುರು ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದೆ.

ಬಾಂಗ್ಲಾದೇಶ ತಂಡ 2019ರಲ್ಲಿ ಭಾರತ ಪ್ರವಾಸ ಕೈಗೊಂಡಾಗಲೂ ಇಂದೋರ್​, ಕೋಲ್ಕತದಲ್ಲಿ ವೇಗದ ಬೌಲರ್​ಗಳಿಗೆ ನೆರವಾಗುವಂಥ ಕೆಂಪು ಮಣ್ಣಿನ ಪಿಚ್ ನಿರ್ಮಿಸಲಾಗಿತ್ತು. ಈ ಸಲವೂ ಅದೇ ಕಾರ್ಯತಂತ್ರ ಮುಂದುವರಿಸುವ ನಿರೀಕ್ಷೆ ಇದೆ. ಬಾಂಗ್ಲಾದೇಶ ತಂಡ ಇಂದು ಚೆನ್ನೈಗೆ ಆಗಮಿಸಲಾಗಿದೆ.