ಲಕ್ನೋ: ಉತ್ತರಪ್ರದೇಶ (Uttar Pradesh)ದ ಮೀರತ್(Meerut)ನಲ್ಲಿ ಬಹು ಮಹಡಿಯ ಕಟ್ಟಡ ಕುಸಿದು (House collapsed) ಬಿದ್ದಿದ್ದು, ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಮಧ್ಯೆಯೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ತಂಡ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.
ಮೃತರನ್ನು ಒಂದೂವರೆ ವರ್ಷದ ಸಿಮ್ರಾ, ಆಲಿಯಾ (6), ರೀಜಾ (7), ಸಾಕಿಬ್ (11), ಸಾನಿಯಾ (15), ಸಾಜಿದ್ (40), ನಫೊ (63), ಫರ್ಹಾನಾ (20) ಮತ್ತು ಅಲಿಸಾ (18) ಎಂದು ಗುರುತಿಸಲಾಗಿದೆ. ಗಾಯಗೊಂಡ ಸೋಫಿಯಾನ್ (6), ನಯೀಮ್ (22), ನದೀಮ್ (26), ಸಾಕಿಬ್ (20) ಮತ್ತು ಸೈನಾ (38) ಅವರನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಕಟ್ಟಡ ಕುಸಿದು ಬಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
#WATCH | Meerut Building Collapse | Uttar Pradesh: 9 people out of the 14 rescued have lost their lives.
— ANI (@ANI) September 15, 2024
A three-storey building collapsed in the Zakir Colony of Meerut yesterday. 15 people were trapped inside. The rescue operations are underway. pic.twitter.com/B0O525KayO
ಕಟ್ಟಡದ ಮಾಲೀಕನನ್ನು ನಾಫೋ ಅಲ್ಲಾವುದ್ದೀನ್ ಎಂದು ಗುರುತಿಸಲಾಗಿದೆ. ಆತ ಕಟ್ಟಡದಲ್ಲಿ ಹಾಲಿನ ವ್ಯಾಪಾರ ನಡೆಸುತ್ತಿದ್ದ. ಈತ ಇಬ್ಬರು ಮಕ್ಕಳು ಅವರ ಪತ್ನಿಯರು ಹಾಗೂ ಮೊಮ್ಮಕ್ಕಳೊಂದಿಗೆ ಇಲ್ಲಿ ವಾಸವಾಗಿದ್ದ. ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಿ.ಕೆ.ಠಾಕೂರ್, ವಿಭಾಗೀಯ ಆಯುಕ್ತೆ ಸೆಲ್ವ ಕುಮಾರಿ ಜೆ., ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ನಚಿಕೇತ ಝಾ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.
“ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದ ಎಲ್ಲಾ 15 ಜನರನ್ನು ಹೊರ ತರಲಾಗಿದ್ದು, ಈ ಪೈಕಿ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶವನ್ನು ಸೀಲ್ ಮಾಡಲಾಗಿದೆ ಮತ್ತು ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ವಿವರಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
50 ವರ್ಷ ಹಳೆಯ ಕಟ್ಟಡ
ಜಾಕಿರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 50 ವರ್ಷ ಹಳೆಯ ಈ ಕಟ್ಟಡ ಇದ್ದಕ್ಕಿದ್ಧಂತೆ ಕುಸಿದು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಇದೊಂದು ಅತ್ಯಂತ ಹೆಚ್ಚು ಜನ ನಿಬಿಡ ಪ್ರದೇಶವಾಗಿರುವುದರಿಂದ ಬುಲ್ಡೋಜರ್‌ಗಳು ಕೂಡ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಸಂಬಂಧಿತ ದುರಂತದಲ್ಲಿ ಇದುವರೆಗೆ 17 ಮಂದಿ ಮೃತಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Nitin Gadkari: ಪ್ರತಿಪಕ್ಷಗಳಿಂದ ನಿತಿನ್ ಗಡ್ಕರಿಗೆ ಪ್ರಧಾನಿ ಹುದ್ದೆಯ ಆಫರ್! ಇವರ ಪ್ರತಿಕ್ರಿಯೆ ಏನಿತ್ತು?