ನವದೆಹಲಿ: ದೇಶದ 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಮತದಾನ ಬಹುತೇಕ ಶಾಂತಿ ಯುತವಾಗಿತ್ತು.
ಮಧ್ಯಪ್ರದೇಶದ 28, ಗುಜರಾತ್‍ನ 8, ಉತ್ತರಪ್ರದೇಶದ 7, ಕರ್ನಾಟಕ, ಒಡಿಶಾ, ನಾಗಾಲ್ಯಾಂಡ್ ಮತ್ತು ಜಾರ್ಖಂಡ್ ರಾಜ್ಯಗಳ ತಲಾ ಎರಡು ಹಾಗೂ ಛತ್ತೀಸ್‍ಗಢ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳ ತಲಾ ಒಂದೊಂದು ವಿಧಾನಸಭೆಗಳಿಗೆ ಉಪ ಚುನಾವಣೆ ನಡೆದಿದೆ.
ಮಧ್ಯಪ್ರದೇಶದಲ್ಲಿ ಉಪ ಚುನಾವಣೆ ನಡೆಯುತ್ತಿರುವ 28 ವಿಧಾನಸಭಾ ಕ್ಷೇತ್ರಗಳಲ್ಲಿ 25 ಕ್ಷೇತ್ರಗಳು ಕಾಂಗ್ರೆಸ್ ನ ಬಂಡಾಯ ಶಾಸಕರ ರಾಜೀನಾಮೆಯಿಂದ ತೆರವಾಗಿತ್ತು. ಶಾಸಕರ ರಾಜೀನಾಮೆಯಿಂದ ಮಧ್ಯಪ್ರದೇಶದಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದು ಪತನಗೊಂಡಿತ್ತು.
ಬಳಿಕ ಬಂಡಾಯ ಶಾಸಕರ ಬೆಂಬಲ ಪಡೆದು ಬಿಜೆಪಿ ಧುರೀಣ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಸರ್ಕಾರ ರಚಿಸಿ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾದರು. ಗುಜರಾತ್‍ನಲ್ಲಿ ಜೂನ್‍ನಲ್ಲಿ ನಡೆದ ರಾಜ್ಯಸಭಾ ಚುನಾ ಔಣೆಗೂ ಮುನ್ನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಉಪ ಚುನಾವಣೆ ಅನಿವಾರ್ಯವಾಗಿದೆ.
ಕೊರೊನಾ ನಿಯಂತ್ರಣದ ಕಠಿಣ ನಿಯಮಗಳ ನಡುವೆ ಬೆಳಗ್ಗೆ 7 ಗಂಟೆಯಿಂದ ಮತದಾನವಾಗುತ್ತಿದೆ. ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ನ.10ರಂದು 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಶ ಪ್ರಕಟಗೊಳ್ಳಲಿದೆ.