Friday, 20th September 2024

Vande Bharat train : 6 ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ; ವಿವರ ಇಲ್ಲಿದೆ…

Vande Bharat train

ಬೆಂಗಳೂರು: ಪ್ರಧಾನಿ ಮೋದಿ ಸೆಪ್ಟೆಂಬರ್ 15 ರಂದು (ಭಾನುವಾರ) ಆರು ವಂದೇ ಭಾರತ್ ರೈಲುಗಳಿಗೆ (Vande Bharat train) ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು. ಹೊಸ ರೈಲುಗಳು ಟಾಟಾನಗರ-ಪಾಟ್ನಾ, ಭಾಗಲ್ಪುರ್-ದುಮ್ಕಾ-ಹೌರಾ, ಬ್ರಹ್ಮಪುರ-ಟಾಟಾನಗರ್, ಗಯಾ-ಹೌರಾ, ದಿಯೋಘರ್-ವಾರಣಾಸಿ ಮತ್ತು ರೂರ್ಕೆಲಾ-ಹೌರಾ ಮಾರ್ಗಗಳಲ್ಲಿ ಸಂಪರ್ಕ ಸಾಧಿಸಲಿವೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳು ನಿತ್ಯ ಪ್ರಯಾಣಿಸುವ ಪ್ರಯಾಣಿಕರು, ವೃತ್ತಿಪರರು, ವ್ಯವಹಾರಗಳು ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಜನ ಕೊಡುತ್ತದೆ ಎಂದು ರೈಲ್ವೇ ಇಲಾಖೆ ಹೇಳಿದೆ.

ದಿಯೋಘರ್‌ನ (ಜಾರ್ಖಂಡ್) ಬೈದ್ಯನಾಥ ಧಾಮ್, ವಾರಣಾಸಿಯ (ಉತ್ತರ ಪ್ರದೇಶ) ಕಾಶಿ ವಿಶ್ವನಾಥ ದೇವಾಲಯ, ಕಾಳಿಘಾಟ್ ಮತ್ತು ಕೋಲ್ಕತ್ತಾದ (ಪಶ್ಚಿಮ ಬಂಗಾಳ) ಬೇಲೂರು ಮಠದಂತಹ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಈ ರೈಲು ಅನುಕೂಲ ಮಾಡಿಕೊಡಲಿದೆ. ಈ ಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಹೆಚ್ಚಿಸಲು ಈ ರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ.

ಜಾರ್ಖಂಡ್‌ನ ಟಾಟಾನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ) ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿದರು ಮತ್ತು ಅವರಿಗೆ ಮೊದಲ ಕಂತಿನ ಆರ್ಥಿಕ ಅನುದಾನ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಮೋದಿ, ಆರು ಹೊಸ ವಂದೇ ಭಾರತ್ ರೈಲುಗಳು, 650 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳು, ಸಂಪರ್ಕ ಮತ್ತು ಪ್ರಯಾಣ ಸೌಲಭ್ಯಗಳ ವಿಸ್ತರಣೆ ಮತ್ತು ಸಾವಿರಾರು ಜನರಿಗೆ ಮನೆ ಸೇರಿದಂತೆ ಹಲವು ಯೋಜನೆಗಳನ್ನು ಪಡೆದ ಜಾರ್ಖಂಡ್ ಜನರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: PM Narendra Modi : ಜಾರ್ಖಂಡ್‌ನಲ್ಲಿ 660 ಕೋಟಿ ರೂ.ಗಳ ಯೋಜನೆಗಳನ್ನು ಅನಾವರಣಗೊಳಿಸಿದ ಮೋದಿ

“ಜಾರ್ಖಂಡ್ ನಂತಹ ರಾಜ್ಯಗಳು ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದಿವೆ. ಆದರೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ವಿಧಾನವು ದೇಶದ ಮನಸ್ಥಿತಿ ಬದಲಾಯಿಸಿದೆ. ಈಗ ಬಡವರು, ಆದಿವಾಸಿಗಳು ಮತ್ತು ದಲಿತರು ನಮ್ಮ ರಾಷ್ಟ್ರದ ಆದ್ಯತೆಯಾಗಿದೆ. ಮಹಿಳೆಯರು, ರೈತರು ಮತ್ತು ಯುವಕರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಜಾರ್ಖಂಡ್ ನ ರೈಲ್ವೆ ಅಭಿವೃದ್ಧಿಗೆ 7000 ಕೋಟಿ ರೂ ಬಜೆಟ್ ನೀಡಲಾಗಿದ್ದು, ಹಿಂದಿನ ಬಜೆಟ್‌ಗಳಿಗೆ ಹೋಲಿಸಿದರೆ ಇದು 16 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಫೆಬ್ರವರಿ 15, 2019 ರಂದು ನವದೆಹಲಿ-ಕಾನ್ಪುರ-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಚಾಲನೆ ನೀಡಲಾಯಿತು. ಈ ರೈಲು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಸಾಗಿತ್ತು.