Thursday, 19th September 2024

ರಂಗಭೂಮಿಯ ಸಣ್ಣ ಕವಲಾದ ಸಿನಿಮಾ ಇಂದು ಉದ್ಯಮವಾಗಿ ಬೆಳೆದು ಲಕ್ಷಾಂತರ ಮಂದಿಯ ಬಾಳು ಬೆಳಗಿದೆ: ಸಮಾಜಸೇವಕ ಸಂದೀಪ್‌ರೆಡ್ಡಿ

ಚಿಕ್ಕಬಳ್ಳಾಪುರ: ರಂಗಭೂಮಿಯಿಂದ ಹೊರಬಂದ ಕಲೆ, ಇಂದು ಸಿನಿಮಾಗಳ ಮೂಲಕ ಕೋಟಿ ರೂ.ಗಳ ಉದ್ಯಮವಾಗಿ ಮಾರ್ಪಟ್ಟಿದೆ. ಇದರಿಂದ ಲಕ್ಷಾಂತರ ಜನರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಸಮರ್ಥ ಕಲಾವಿದರನ್ನು ಹುಟ್ಟು ಹಾಕುವಂತ ರಂಗ ತರಬೇತಿಯಿಂದ ಮಕ್ಕಳಲ್ಲಿನ ಜ್ಞಾನದ ಸಬಲೀಕರಣವಾಗಲಿ ಎಂದು ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಸಂದೀಪ್‌ರೆಡ್ಡಿ ತಿಳಿಸಿದರು.

ಚಿಕ್ಕಬಳ್ಳಾಪುರ ನಗರ ಹೊರವಲಯದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅನನ್ಯ ಕಲಾರಂಗ, ಗೌತಮಬುದ್ಧ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದೆ. ಆದರೆ ಇದೆಲ್ಲಕ್ಕೂ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಮುನ್ನೆಲೆಗೆ ಬರಬೇಕು. ನಮ್ಮಲ್ಲಿರುವ ಶಕ್ತಿಯನ್ನ ಉಪಯೋಗಿಸಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬುದ್ಧ ಎಂದರೆ ಸತ್ಯಶೋಧನೆಯ ಪ್ರತಿರೂಪ. ಸರಳೆತೆಗೆ ಜೀವಬುದ್ಧ. ಅಂತಹ ಬುದ್ಧನನ್ನು ಕವಿಗಳು, ವಿಮರ್ಶ ಕರು, ಲೇಖಕರು ಅವರದ್ದೇ ದಾಟಿಯಲ್ಲಿ ವರ್ಣಿಸಿದ್ದಾರೆ.ಕುವೆಂಪು ಕೂಡ ಸಿದ್ಧಾರ್ಥ ಅರಮನೆಬಿಟ್ಟು ಹೊರಟ ಸಂದರ್ಭವನ್ನು ಮಹಾರಾತ್ರಿ ನಾಟಕದ ವಸ್ತುವಾಗಿಸಿಕೊಂಡು ಬರೆದಿದ್ದಾರೆ. ಇದರ ರಂಗರೂಪಕ್ಕೆ ಮುಂದಾದ ಅಶ್ವತ್ಥ್ ಅವರಿಂದ ವಿದ್ಯಾರ್ಥಿಗಳ ಜ್ಞಾನ ವಿಕಾಸಗೊಳ್ಳಲಿ ಎಂದು ಹೇಳಿದರು.

ಸರಕಾರದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಘೋಷಣೆಯಾಗುವವರೆಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುವುದು ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಘೋಷಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ.ನಾಯಕ್(ಆಮಾಸ) ಮಾತನಾಡಿ,ರಂಗಭೂಮಿ ಎಂಬುದು ನೈಜಕಲಾಭಿವ್ಯಕ್ತಿಯ ಸುಂದರ ವೇದಿಕೆ.ಪ್ರತಿಭಾವಂತರನ್ನು ಸಮಾಜ ಪರಿಚಯಿಸುವ ಜಾನಪದ ಜಗಲಿ.ಕಾಲೇಜು ವಿದ್ಯಾರ್ಥಿಗಳಿಗೆ ಕುವೆಂಪು ಅವರ ನಾಟಕವನ್ನು ಪರಿಚಯಿಸುತ್ತಿರುವ ಇಂತಹ ಕಾರ್ಯಕ್ರಮಕ್ಕೆ ನನ್ನನ್ನು ಕರೆದು ಮಾತನಾಡಿಸಿದ್ದು ಸಂತೋಷ ತಂದಿದೆ. ಯುವಸಮೂಹ ರಂಗ ತರಬೇತಿಯ ಸದುಪಯೋಗಪಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು ಎಂದು ಸಲಹೆ ನೀಡಿದರು.

ಅನನ್ಯ ಕಲಾರಂಗದ ನಿರ್ದೇಶಕ ಗ.ನ.ಅಶ್ವತ್ಥ್ ಮಾತನಾಡಿ ಜೀವನದಲ್ಲಿ ಹುಡುಕಾಟವನ್ನು ಮಾಡಿದಾಗ ನಾವು ಮನುಷ್ಯರಾಗುತ್ತೇವೆ. ಹುಟ್ಟುತ್ತಾ ವಿಶ್ವಮಾನವರಾಗಿ ಹುಟ್ಟುತ್ತೇವೆ. ಆದರೆ, ಸಮಾಜ ಬೆಳೆಯುತ್ತಾ ಜಾತಿ ಹೆಸರಿನಲ್ಲಿ ನಮ್ಮನ್ನು ಅಲ್ಪಮಾನವರನ್ನಾಗಿ ಮಾಡುತ್ತದೆ. ಇಂತಹ ಅಲ್ಪ ಮಾನವರನ್ನು ವಿಶ್ವ ಮಾನವರನ್ನಾಗಿ ಮಾಡುವ ಶಿಕ್ಷಣ ವ್ಯವಸ್ಥೆ, ಸಂಘ ಸಂಸ್ಥೆಗಳು ರೂಪುಗೊಳ್ಳಬೇಕು ಎಂದು ವಿಶ್ವಮಾನವ ಸಂದೇಶವನ್ನು ಪುನರುಚ್ಚರಿಸಿದರು.

ನಿವೃತ್ತ ಶಿಕ್ಷಕ ಚಾಂದ್ ಪಾಷ ಮಾತನಾಡಿ, ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ಖುಷಿಯಾಗಿ ಇರುತ್ತಾರೆ.. ಪ್ರತೀ ಸಮಾಜ ಬದಲಾವಣೆಯತ್ತ ಸಾಗುತ್ತಲೇ ಇರುತ್ತದೆ. ಶಾಶ್ವತವಾಗಿ ಉಳಿಯುವುದು ಆ ಬದಲಾವಣೆ ಮಾತ್ರವೇ. ಬದಲಾವಣೆಯ ಪ್ರೇರಕ ಶಕ್ತಿಯಾಗಿ ನೀವು ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಅತಿಥಿ ಉಪನ್ಯಾಸಕ ಎಂ.ಮುನಿರಾಜು ಮಾತನಾಡಿ, ನಾಟಕಂ ಭಾವಾನು ಕೀರ್ತನಂ ಎಂಬ ಮಾತಿದೆ.

ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸುವ ಉತ್ತಮ ಮಾಧ್ಯಮವೇ ನಾಟಕ. ಓದಿ ಭೋಧಕನಾಗು, ಕಾದಿಯೋದನೆ ಆಗು, ಏನಾದರಾಗು ಮೊದಲು ಮಾನವನಾಗು ಎನ್ನುವ ಕುವೆಂಪು ವಾಣಿ ನಮ್ಮ ಅಂತರಾತ್ಮ ಭ್ರಷ್ಟವಾಗದಂತೆ ಕಾಪಾಡಿಕೊಳುವ ಎಚ್ಚರವನ್ನು ನೀಡುತ್ತದೆ ಎಂದು ಕುವೆಂಪು ಅವರ ಸಾಲುಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ವಕೀಲ ಮಂಜುನಾಥ್ ಮಾತನಾಡಿದರು.ಗೌತಮಬುದ್ಧ ಪೌಂಡೇಷನ್ ಸಂಸ್ಥಾಪಕ ಗಂಗರಾಜು,ಪ್ರಕೃತಿ ಶಾಲೆಯ ಮುನಿಕೃಷ್ಣ ಮಾತನಾಡಿದರು.

ಸರಕಾರಿ ಪ್ರ.ದ.ಮಹಿಳಾ ಕಾಲೇಜು ಪ್ರಾಂಶುಪಾಲರಾದ ಚಂದ್ರಯ್ಯ, ಪ್ರಾಧ್ಯಾಪಕ ರಾಮಕೃಷ್ಣಯ್ಯ, ಹರೀಶ್, ವ್ಯವಸ್ಥಾಪಕ ಜಿ.ಡಿ, ರಾಮು, ಗೌತಮ ಬುದ್ಧ ಫೌಂಡೇಶನ್‌ನ ಗಂಗರಾಜು.ಬಿ, ಜಿ.ಆರ್.ನಾರಾಯಣ್‌ ಸ್ವಾಮಿ, ಕಿರಣ್, ಶ್ರೀನಿವಾಸ್, ಮಂಜುನಾಥ್ ಹಾಗೂ ನೂರಾರು ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

Your email address will not be published. Required fields are marked *