Friday, 20th September 2024

Dr M C Sudhakar: ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಯಶಸ್ಸಿನೊಂದಿಗೆ ಮುಂದುವರೆಯು ತ್ತಿರುವುದಕ್ಕೆ ಭಾರತದ ಸಂವಿಧಾನವೇ ಕಾರಣ- ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ : ಜಗತ್ತಿನ ಅನೇಕ ರಾಷ್ಟ್ರಗಳು  ವಿವಿಧ ರೀತಿಯ ಆಡಳಿತ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದು, ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಿ ಯಶಸ್ವಿಯಾಗಿ ಮುಂದುವರೆಯುತ್ತಿರುವುದಕ್ಕೆ ಕಳೆದ 78 ವರ್ಷಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನವೇ ಕಾರಣ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಭಾನುವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಮಾನವ ಸರಪಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಕಳೆದ 78 ವರ್ಷಗಳಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮುಂದುವರೆದಿದೆ. ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ಸಮಾನ ಅವಕಾಶ, ಹಕ್ಕುಗಳು, ನ್ಯಾಯ, ಸಮಾನತೆ ದೊರೆಯಬೇಕೆಂದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮುಂದುವರೆಯಲೇಬೇಕು. ಇಲ್ಲವಾದಲ್ಲಿ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಮತ್ತು ರಾಜಕೀಯ ತಾರತಮ್ಯ, ಮೇಲು ಕೀಳುಗಳು ಹೆಚ್ಚಾಗಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಸರಿಯುತ್ತದೆ. ರಾಜ್ಯ ಸರ್ಕಾರಕ್ಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಗೌರವ, ಬದ್ದತೆ ಇರುವ ಕಾರಣದಿಂದಲೇ 2500 ಕಿ.ಮೀ ಉದ್ದದ ಬೃಹತ್  ಮಾನವ ಸರಪಳಿ ನಿರ್ಮಾಣ ಮಾಡಿದೆ. ಪ್ರಜಾಪ್ರಭುತ್ವ ಉಳಿಯಬೇಕು, ಸಂವಿಧಾನ ಉಳಿಯಬೇಕು ಎಂದರು.

ವಿಶ್ವಸಂಸ್ಥೆಯಿಂದ 2007ರ ಸೆಪ್ಟೆಂಬರ್ 15 ರಂದು ನಿರ್ಣಯವಾಗಿ 2008ರಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದ ದಿನ ಆಚರಣೆಯನ್ನು ಮಾಡಲಾಯಿತು. ಸಂವಿಧಾನದ ಪೀಠಿಕೆ, ಅದರ ಅರ್ಥ ಮತ್ತು ಮಹತ್ವದ ಬಗ್ಗೆ ಸಮಾಜದ ಮಕ್ಕಳಿಗೆ  ಅರ್ಥೈಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಂದಿನ ಮತ್ತು ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಅರಿವು ಮತ್ತು ಪ್ರಾಮುಖ್ಯತೆ ಬಗ್ಗೆ ನಿರಂತರ ಅರಿವು ಮೂಡಿಸುವಂತಹ ಕರ್ತವ್ಯವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವ ಉಳಿದರೆ ನಾವು ಉಳಿಯಲು ಸಾಧ್ಯ, ಸ್ವಾತಂತ್ರ, ಸಮಾನತೆ, ಭಾತೃತ್ವ ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವದ ಜೀವಾಳವಾಗಿದೆ. ಪ್ರಜಾಪ್ರಭುತ್ವ ದಿನಾಚರಣೆ ಅಂಗ ವಾಗಿ ರಾಜ್ಯದಾದ್ಯಂತ 10 ಲಕ್ಷದ ಗಿಡಗಳನ್ನು ನೆಡಲಾಗುತ್ತಿದೆ ಎಂದರು.

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ  ಹಿಂದಿ ಭಾಷೆಯು ರಾಷ್ಟ್ರಭಾಷೆ ಅಲ್ಲ ಅಧಿಕೃತ ಭಾಷೆ ಆಗಿದೆ. ನವೆಂಬರ್ ೨೬ಕ್ಕೆ ಸಂವಿಧಾನ ದಿನಾಚರಣೆಯನ್ನು ಮಾಡಲಾಗುತ್ತದೆ. ಜನವರಿ ೨೬ ರಂದು ಗಣರಾಜ್ಯೋತ್ಸವ ದಿನಾಚರಣೆ ಮಾಡಲಾಗುತ್ತದೆ. ಜಗತ್ತಿನ ಸಂವಿಧಾನಗಳಲ್ಲಿ ನಮ್ಮದು ಶ್ರೇಷ್ಠ ಸಂವಿಧಾನವಾಗಿದೆ ಸಂವಿಧಾನವು ಎಲ್ಲಾ ವರ್ಗ,ಜಾತಿ, ಧರ್ಮ, ಬಡವ ಶ್ರೀಮಂತ ಎಲ್ಲ ಜನಾಂಗಕ್ಕೆ ಅನ್ವಯಿಸುವಂತಹ ಸಂವಿಧಾನವಾಗಿದೆ ಎಂದರು.

ಇದನ್ನೂ ಓದಿ: Minister M C Sudhakar: ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಅಭಿವೃದ್ದಿ ಮಾಡುತ್ತೇನೆ- ಸಚಿವ ಎಂ ಸಿ ಸುಧಾಕರ್

ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಮಾತನಾಡಿ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ  ಅಂಗವಾಗಿ ಬೀದರ್ ನಿಂದ  ಚಾಮರಾಜನಗರದವರೆಗೆ ೨೫ ಲಕ್ಷ ಜನ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಾರೆ. ಅದರಂತೆ ನಮ್ಮ ಜಿಲ್ಲೆಯಲ್ಲಿ ೪೮ ಕಿಲೋಮೀಟರ್  ಉದ್ದದ  ಬೃಹತ್ ಮಾನವ ಸರಪಳಿಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಮಡುಕು ಹೊಸಳ್ಳಿ ಗ್ರಾಮದಿಂದ ಜಿಲ್ಲಾ ಕೇಂದ್ರದ ಮೂಲಕ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್ ನ ಬಳಿಯ ಚಿಕ್ಕಂಡಹಳ್ಳಿ ವರೆಗೆ  ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿ ಸರಪಳಿಗೆ ಸಾಥ್ ನೀಡಿ ಯಶಸ್ವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ೪೮ ಕಿಲೋಮೀಟರ್ ಉದ್ದಕ್ಕೂ ೧೦೦ ಮೀಟರ್ ಗೆ ಒಂದು ಗಿಡ ನೆಡಲಾಗಿದೆ ಇದು ಹೆಚ್ಚು ಅರ್ಥ ಪೂರ್ಣ ಕೆಲಸ ವಾಗಿದೆ ಎಂದರು.

ಬೆAಗಳೂರು ಗ್ರಾಮಾಂತರ ಜಿಲ್ಲೆಯನ್ನು ಸಂಪರ್ಕ ಮಾಡುವ ಮೊಡಕು ಹೊಸಹಳ್ಳಿಯಿಂದ ಕೋಲಾರ ಜಿಲ್ಲೆಯ ಗಡಿಯಲ್ಲಿರುವ ಹೆಚ್.ಕ್ರಾಸ್ ವರೆಗೂ ೪೮ಕಿಮೀ ಉದ್ದ ನಿರ್ಮಾಣವಾಗಿದ್ದ ಮಾನವ ಸರಪಳಿಯಲ್ಲಿ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು, ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಸ್ವಯಂ ಸೇವಾ ಮತ್ತು ಸಂಘ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದ್ದರು.

ಪ್ರಜಾಪ್ರಭುತ್ವ ದಿನದ ಅಂಗವಾಗಿ ಅರಣ್ಯ ಇಲಾಖೆ ಮಾನವ ಸರಪಳಿ ನಿರ್ಮಾಣದ ದಾರಿಯುದ್ದಕ್ಕೂ ೧೦೦ ಮೀಟರ್ ಗೆ ಒಂದರAತೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ ಟಿ ನಿಟಾಲಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ,ಜನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್, ಅಪರ ಜಿಲ್ಲಾಧಿಕಾರಿ  ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಅಶ್ವಿನ್,  ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ, ನಗರ ಸಭೆ ಸದಸ್ಯರಾದ ವೆಂಕಟೇಶ್, ಅಂಬರೀಶ್, ರಫೀಕ್, ಚಂದ್ರು, ಮೂರ್ತಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಹಾಗೂ ಮುಖಂಡರು, ರಾಜಕೀಯ ಪ್ರತಿನಿಧಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.