Thursday, 21st November 2024

Laxmi Hebbalkar: ಮಾಡಿದ್ದುಣ್ಣೋ ಮಾರಾಯ; ಮುನಿರತ್ನ ಬಂಧನದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ

Laxmi Hebbalkar

ಬೆಳಗಾವಿ: ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಅವರ ಬಂಧನದ ಹಿಂದೆ ಯಾವುದೇ ದ್ವೇಷ ರಾಜಕಾರಣವಿಲ್ಲ, ಅವರಿಗೀಗ ಮಾಡಿದ್ದುಣ್ಣೋ ಮಾರಾಯ ಎಂಬಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ವೇಳೆ ಮಾತನಾಡಿದ ಸಚಿವರು, ಶಾಸಕ ಮನಿರತ್ನ ಅವರ ವಿಚಾರದಲ್ಲಿ ಯಾರು ದ್ವೇಷ ರಾಜಕಾರಣ ಮಾಡುತ್ತಾರೆ? ಅವರು ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರೇನು ಮುನಿರತ್ನ ಅವರಿಗೆ ಕೆಟ್ಟ ಮಾತುಗಳಿಂದ ಬೈಯಿರಿ, ಅಥವಾ ಬ್ಲಾಕ್ ಮೇಲ್ ಮಾಡಿ ಎಂದು ಹೇಳಿದ್ದಾರಾ? ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ ಅವರ ಸ್ಥಿತಿ ಎಂದು ಕಿಡಿಕಾರಿದರು.

ಮಾತಿಗೆ ಕನ್ನಡಿ ಹಿಡಿಯುವ ಅವಶ್ಯತೆ ಇಲ್ಲ
ಕೆಲ ರಾಜಕಾರಣಗಳು ಮೊದಲು ಕೆಟ್ಟದಾಗಿ ಮಾತನಾಡುತ್ತಾರೆ; ಆಮೇಲೆ ತಿರುಚಿದ್ದಾರೆ, ದ್ವೇಷದ ರಾಜಕಾರಣ ಎಂದೆಲ್ಲ ಹೇಳುತ್ತಾರೆಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೆಲವೊಬ್ಬರು ಮಾತನಾಡುತ್ತಾರೆ ನಿಜ; ಆದರೆ, ಅದನ್ನು ಪ್ರಮಾಣಿಕರಿಸಿ ನೋಡಬೇಕು. ಆದರೆ, ಮುನಿರತ್ನ ವಿಚಾರದಲ್ಲಿ ಏನಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.

ಮುನಿರತ್ನ ಅವರು ಮಹಿಳೆಯರ ಬಗ್ಗೆ ಆಡಿರುವ ಕೀಳು ಮಾತುಗಳನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವಂತಹ ಮಾತುಗಳನ್ನು ಯಾರೂ ಕೂಡ ಆಡಬಾರದೆಂದು ಸಚಿವರು ಇದೇ ವೇಳೆ ಕಿವಿಮಾತು ಹೇಳಿದರು.

ಮಾನವ ಸರಪಳಿಯಲ್ಲಿ 1.50 ಲಕ್ಷ ಇಲಾಖಾ ನೌಕರರು ಭಾಗಿ
ರಾಜ್ಯ ಸರ್ಕಾರ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮಾನವೀಯ ಮೌಲ್ಯಗಳ ಸಾಕಾರಗೊಳಿಸುವ ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ನೌಕರವರ್ಗ ಭಾಗವಹಿಸಿದ್ದು ಹೆಮ್ಮೆ ಎನಿಸಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ನಾಗಮಂಗಲ ಗಲಭೆ ಹಿಂದೆ ನಿಷೇಧಿತ ಸಂಘಟನೆಗಳ ಕೈವಾಡ: ಆರ್.ಅಶೋಕ್‌ ಆರೋಪ

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ (Mandya Violence) ಪಿಎಫ್‌ಐ, ಕೆಎಫ್‌ಡಿ ಅಂತಹ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಈ ದುರುಳರು ಗಲಭೆಗೊ ಮುನ್ನ 150 ಮಾಸ್ಕ್‌ ಖರೀದಿಸಿದ್ದು, ಸಿಸಿಟಿವಿಗಳನ್ನು ನಾಶ ಮಾಡಿದ್ದು ಹಾಗೂ ಈ ದುಷ್ಕೃತ್ಯ ಸಂಪೂರ್ಣ ಪ್ರಾಯೋಜಿತ ಮತ್ತು ಪೂರ್ವನಿಯೋಜಿವಾಗಿದೆ ಎಂಬುದು ಸ್ಥಳೀಯರ ಅನುಮಾನವಾಗಿದೆ ಎಂದು ವಿಪಕ್ಷ ನಾಯಕ ಆರ್‌.ಅಶೊಕ್‌ (R Ashok) ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಅಷ್ಟೇ ಅಲ್ಲದೆ ಸರ್ಕಾರ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೊದಲ 23 ಆರೋಪಿಗಳು ಹಿಂದುಗಳೇ ಆಗಿರುವುದರಿಂದ ಪೋಲಿಸರು ನಿಷೇಧಿತ ಸಂಘಟನೆಗಳ ಒತ್ತಡದಲ್ಲಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆ.

ಈ ಕೋಮುಗಲಭೆಯಲ್ಲಿ ನಿಷೇಧಿತ ಸಂಘಟನೆಗಳು ಮತ್ತು ಮತೀಯ ಮೂಲಭೂತವಾದಿಗಳ ಕೈವಾಡವಿರುವ ಬಲವಾದ ಸಂದೇಹವಿರುವುದರಿಂದ ಸ್ಥಳೀಯ ಪೋಲಿಸರು ಈ ಪ್ರಕರಣವನ್ನು ಭೇದಿಸುವುದು ಕಷ್ಟಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗು ಗೃಹ ಸಚಿವ ಪರಮೇಶ್ವರ್ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.