ಅಭಿವ್ಯಕ್ತಿ
ಉಮಾ ಮಹೇಶ ವೈದ್ಯ
ವೃತ್ತಿಗಳಲ್ಲಿ, ಆರೋಗ್ಯ ಹಾಗೂ ಆಯುಷ್ಯನ್ನು ರಕ್ಷಿಸುವ ಹಾಗೂ ವೃದ್ಧಿಸುವ ವೈದ್ಯಕೀಯ ವೃತ್ತಿ ಪವಿತ್ರವಾದದ್ದು. ರೋಗಿ ಗಳಿಂದ ಪ್ರತಿಫಲಾಪೇಕ್ಷೆ ಪಡದೇ ನಾರಾಯಣನ ಸೇವೆಯೆಂದೇ ಪರಿಗಣಿಸಿ, ವೈದ್ಯ ವೃತ್ತಿಯನ್ನು ನಿರ್ವಹಿಸುತ್ತಿದ್ದ ಹಿಂದಿನ ಕಾಲದ ನೆನಪುಗಳು ಇನ್ನೂ ಮಾಸಿಲ್ಲ. ಇಂದಿಗೂ ವಂಶ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ರೂಢಿಸಿ ಕೊಂಡು ತಮ್ಮ ಬಳಿ ಚಿಕಿತ್ಸೆಗೆ ಬಂದವರಿಂದ ಯಾವುದೇ ಮುಂಗಡ ಹಣ ಸ್ವೀಕರಿಸದೇ, ಕೇವಲ ಔಷಧದ ಬೆಲೆಯನ್ನು ಅಥವಾ ಉಚಿತವಾಗಿ
ಅಥವಾ ಕನಿಷ್ಠ ಶುಲ್ಕದಲ್ಲಿ ಗರಿಷ್ಠ ಸೇವೆ ನೀಡುತ್ತಿರುವ ಮಹಾನುಭಾವರನ್ನೂ ಸಹ ನೋಡುತ್ತಿದ್ದೇವೆ.
ಈ ಕಾರಣದಿಂದಲೇ ಗ್ರಾಮದ ಆರೋಗ್ಯ ಕಾಪಾಡುವ ವೈದ್ಯರ ಬಗ್ಗೆ ಎಲ್ಲರ ಮನದಲ್ಲಿ ಗೌರವ ಭಾವ ಇದೆ. ಇದಕ್ಕೆ ಉದಾಹರಣೆ ಯಾಗಿ, ಈ ಪಾರಂಪರಿಕ ಅಥವಾ ನಾಟೀ ವೈದ್ಯ ವೃತ್ತಿಯನ್ನು ಕೈಗೊಳ್ಳುವ ವೈದ್ಯರ ವಿರುದ್ಧ ಜಿಲ್ಲಾ ಆರೋಗ್ಯ ಅಧಿಕಾರಿಗಳು ಅರ್ಹತೆಯಿಲ್ಲದೇ, ನೋಂದಣಿಯಾಗದೇ ವೈದ್ಯ ವೃತ್ತಿಯನ್ನು ಕೈಗೊಳ್ಳುತ್ತಿರುವ ಬಗ್ಗೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಹೋದಾಗ, ಗ್ರಾಮಸ್ಥರ ಪ್ರತಿಭಟನೆ ಹಾಗೂ ಘೆರಾವು ಮಾಡಿದ ಘಟನೆಗಳನ್ನು ನಾವು ಸುದ್ದಿ ಪತ್ರಿಕೆಗಳಲ್ಲಿ ಹಾಗೂ ವಾಹಿನಿ ಗಳನ್ನು ನೋಡಿದ್ದೇವೆ.
ಇಂದು ವೈದ್ಯ ವೃತ್ತಿ ವಾಣಿಜ್ಯೀಕರಣಗೊಂಡು, ತನ್ನ ಹೊಟ್ಟೆ ತುಂಬಿಸಿಕೊಳ್ಳುವುದರ ಜತೆ ತನ್ನ ಎಲ್ಲ ಆಕಾಂಕ್ಷೆಗಳನ್ನು
ಈಡೇರಿಸಿಕೊಂಡು, ಭವಿಷ್ಯವನ್ನು ಭದ್ರಪಡಿಸಿಕೊಂಡು ತನ್ನ ಮುಂದಿನ ಪೀಳಿಗೆಯ ಭವಿಷ್ಯವನ್ನು ತನ್ನ ಈ ವಾಣಿಜ್ಯೀಕರಣದ ವೈದ್ಯ ವೃತ್ತಿಯ ಆದಾಯದಿಂದ ಸುಭದ್ರಗೊಳಿಸುತ್ತಿರುವುದು ನಮಗೆಲ್ಲ ಕಾಣಬರುವ ವಾಸ್ತವ ಸಂಗತಿ. ಈ ಹಿನ್ನೆಲೆಯಲ್ಲಿ, ತನ್ನ ಬಳಿ ಬಂದ ರೋಗಿಯನ್ನು ಡಾಕ್ಟರ್‌ಗಳು ಒಂದು ಆದಾಯದ ಮೂಲವಾಗಿ ನೋಡುತ್ತಿರುವುದು ಸಹ ಅಷ್ಟೇ ಕಟು ಸತ್ಯ.
ಕಾಲ ಬದಲಾದಂತೆ, ವಾಣಿಜ್ಯಕರಣಗೊಂಡ ವೈದ್ಯ ವೃತ್ತಿಯು ಮತ್ತಷ್ಟು ವ್ಯಾಪಾರೀಕರಣಗೊಂಡು, ಆದಾಯದ ಹಾಗೂ ಲಾಭದ ಗುರಿಗಳನ್ನು ನಿಶ್ಚಿತಗೊಳಿಸಿಕೊಂಡು ಪದವಿ ಪಡೆದ ಡಾಕ್ಟರ್‌ಗಳನ್ನು ಸಂಬಳದ ಆಧಾರದ ಮೇಲಿನ ನೌಕರರಂತೆ ನೇಮಿಸಿಕೊಂಡು, ಅವರಿಂದ ಗಳಿಕೆಯ ಗುರಿಯನ್ನು ತಲುಪಲು ಲಿಮಿಟೆಡ್ ಕಂಪನಿ ಆಧಾರಿತ ಆಸ್ಪತ್ರೆಗಳು ಮುನ್ನೆಲೆಗೆ ಬಂದಂತೆ ಸಮಾಜದಲ್ಲಿ ವೈದ್ಯ ವೃತ್ತಿ ಒಂದು ಪವಿತ್ರವಾದ ವೃತ್ತಿಯಾಗಿ ಉಳಿಯದೇ ಜನರ ಬೆವರು ಹಾಗೂ ನೆತ್ತರು ಬಸಿದು, ಉಸಿರು ಸೋಸಿ ಉಳಿಸಿದ ಉಳಿತಾಯದ ಹಣವನ್ನು ಲಪಟಾಯಿಸುವ ದಂಧೆಯಾಗಿ ಬೆಳೆಯಿತು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಈ ಕಾರ್ಪೋರೇಟ್ ಆಸ್ಪತ್ರೆಗಳು ತಮ್ಮಲ್ಲಿ ಜಾಗತಿಕ ಮಟ್ಟದ ಶ್ರೇಷ್ಠ ಡಾಕ್ಟರುಗಳು ಸೇವೆಗಾಗಿ ಲಭ್ಯವಿದ್ದು, ರೋಗಗಳನ್ನು ಪತ್ತೆ ಮಾಡುವ ಆಧುನಿಕ ತಂತ್ರಜ್ಞಾನದ ಜತೆ ಪಂಚತಾರಾ ಸೌಲಭ್ಯದ ಸೌಕರ್ಯ ಗಳಿವೆ ಎಂದು ಜಾಹೀರಾತನ್ನು ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಈ ಜಾಹೀರಾತುಗಳನ್ನು ನಂಬಿ ಅಥವಾ ಈ ಕಾರ್ಪೋರೇಟ್ ಆಸ್ಪತ್ರೆಗಳ ಕಮಿಷನ್ ಏಜೆಂಟರಾಗಿ ಕೆಲಸ ಮಾಡುವ ಡಾಕ್ಟರ್ ಮುಖವಾಡದ ದಲ್ಲಾಳಿಗಳ ಮೂಲಕ ಈ ಆಸ್ಪತ್ರೆಗಳಲ್ಲಿ ದಾಖಲಾಗಲು ಬರುವ ರೋಗಿಗಳಿಂದ ಮೊದಲು ಮುಂಗಡವಾಗಿ ಹಣವನ್ನು ಪಡೆದುಕೊಳ್ಳಲಾಗುತ್ತದೆ. ಈ ರೀತಿಯಾಗಿ ಮುಂಗಡ ಹಣ ಪಡೆಯುವ ಪದ್ಧತಿ ಭಾರತೀಯ ವೈದ್ಯಕೀಯ ಮಂಡಳಿಯಿಂದ ಮನ್ನಣೆ ಪಡೆದ ರೂಢಿಯಲ್ಲ ವೆಂಬುದು ಇಲ್ಲಿ ಗಮನಾರ್ಹ.
ಮುಂಗಡ ಪಡೆದು, ಕೋಣೆಯನ್ನು ವಿತರಿಸಿದ ನಂತರ ಆ ರೋಗಿಯನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ
ಶುರುವಾಗುತ್ತದೆ. ಈ ಹಿಂದೆ ಆ ರೋಗಿ ಮಾಡಿಸಿಕೊಂಡ ಲ್ಯಾಬರೇಟರಿ ವರದಿಗಳನ್ನು ಬದಿಗಿಟ್ಟು, ಮತ್ತೊಮ್ಮೆ ತಮ್ಮ
ಆಸ್ಪತ್ರೆಯಲ್ಲಿರುವ ಲ್ಯಾಬರೇಟರಿಯಲ್ಲಿ ಮತ್ತದೇ ಪರೀಕ್ಷೆಗಳನ್ನು ಮಾಡಿಸಿ ಶುಲ್ಕ ಪಡೆದು ನಂತರ ಚಿಕಿತ್ಗೆ ಎಂದು ಔಷಧಿಗಳನ್ನು ತಮ್ಮ ಆಸ್ಪತ್ರೆಯಲ್ಲಿರುವ ಮೆಡಿಕಲ್ ಸ್ಟೋರ್‌ನಲ್ಲಿ ಖರೀದಿಸಿ ತರುವಂತೆ ಹೇಳಿ ಉದ್ದನೆಯ ದೊಡ್ಡ ಪಟ್ಟಿಯನ್ನು ನೀಡಿ, ಆ ಔಷಧಿಗಳನ್ನು ತರಿಸಿಕೊಳ್ಳುತ್ತಾರೆ. ಈ ರೀತಿಯಾಗಿ ದಾಖಲಾಗಿರುವ ರೋಗಿಯ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದೆ ಎಂದು ತಿಳಿದು ಬಂದರೆ ಅಥವಾ ಆರೋಗ್ಯದ ವಿಮೆ ಎಂದು ಕಂಡುಬಂದ ತಕ್ಷಣ ಚಿಕಿತ್ಸೆಯ ದರಗಳು, ಹಾಗೂ ಒಳರೋಗಿಯಾಗಿ ಪಡೆಯುವ ಅವಧಿ ಹೆಚ್ಚತೊಡಗುತ್ತವೆ.
ಇದರಿಂದ ಚಿಕಿತ್ಸಾ ವೆಚ್ಚದ ಬಾಲ ಬೆಳೆಯತೊಡಗುತ್ತದೆ. ಇವುಗಳ ನಡುವೆಯೇ ಮತ್ತಷ್ಟು ಮುಂಗಡ ಹಣವನ್ನು ಪಡೆದು ಕೊಳ್ಳುವುದು, ಔಷಧಗಳನ್ನು ಬರೆದುಕೊಟ್ಟು ತರಿಸುವುದು ಅವ್ಯಾಹತವಾಗಿ ನಡದೇ ಇರುತ್ತದೆ. ವಿಮೆ ಹಣದ ವ್ಯಾಪ್ತಿ ಮುಗಿದ ನಂತರ ಅಥವಾ ರೋಗಿಯ ಆರ್ಥಿಕ ಸ್ಥಿತಿ ಶಿಥಿಲವಾಗುತ್ತಿದರುವುದು ಅರಿವಿಗೆ ಬರುತ್ತಿರುವಂತೆಯೇ, ರೋಗಿಯನ್ನು
ವಾಸಿ ಯಾಗಿದ್ದಾನೆಂದು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ಹೇಳಿ, ಸಂಬಂಧಿಕರಿಗೆ ಅಂತಿಮ ಬಿಲ್ಲನ್ನು ಪಾವತಿಸುವಂತೆ ಹೇಳಿ ಬಿಲ್ಲಿನ ಮೊತ್ತವನ್ನು ಹೇಳಿದಾಗ, ಅದನ್ನು ಕೇಳಿ ಸಂಬಂಧಿಕರಿಗೆ ಆಘಾತವಾಗುವದಂತೂ ನಿಜ.ಹಲವು ಲಕ್ಷಗಳಲ್ಲಿ ಹಣವನ್ನು ಪಾವತಿಸುವಂತೆ ಆ ಬಿಲ್ಲು ಸಂಬಂಧಿಕರಿಗೆ ಬಾಣದಂತೆ ಚುಚ್ಚತ್ತಿರುವಾಗ, ಆರ್ಥಿಕ ಅನಾನುಕೂಲತೆಯಿಂದ ಅಷ್ಟು ಹಣ ವನ್ನು ಪಾವತಿಸಲು ಸಾಧ್ಯವಿಲ್ಲವೆಂದು ಹೇಳಿದಾಗ, ವಿಶೇಷ ಪ್ರಕರಣವೆಂದು ಹೇಳಿ ಕೆಲವು ಸಾವಿರ ರುಪಾಯಿಗಳನ್ನು
ವಿನಾಯತಿ ನೀಡುವ ನೆಪದಲ್ಲಿ, ಅಂತಿಮ ಬಿಲ್ಲನ್ನು ಪಾವತಿಸಿವಂತೆ ಹೇಳಿ, ಪಾವತಿಸುವವರೆಗೂ ರೋಗಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ವೆಂದು ಖಂಡ ತುಂಡವಾಗಿ ಹೇಳಿ ಬಿಡುತ್ತಾರೆ.
ರೋಗಿಯನ್ನು ಆಸ್ಪತ್ರೆಯ ಕಪಿಮುುಷ್ಠಿಯಿಂದ ಬಿಡುಗಡೆ ಮಾಡಿಸಿಕೊಳ್ಳಲು ಸಾಲಸೋಲ ಮಾಡಿ, ಹಣವನ್ನು ಹೊಂದಿಸಿ ಕೊಂಡು ಬಂದು ಆಸ್ಪತ್ರೆಗೆ ಪಾವತಿಸಿದ ನಂತರ ಆ ಒಳ ರೋಗಿಗೆ ಬಿಡುಗಡೆಯ ಭಾಗ್ಯ ದೊರಕುತ್ತದೆ. ಇದೇ ಘಟನೆಯನ್ನು ಚಿಕಿತ್ಸೆಗೆ ಒಳ ರೋಗಿಯಾಗಿ ಸೇರಿದ ರೋಗಿ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದರೆ, ಶವವನ್ನು ಶೀತಲ ಕೋಣೆಯಲ್ಲಿರಿಸಿ ಅಂತಿಮ ಬಿಲ್ಲಿನ ಮೊತ್ತ ಪಾವತಿಸುವವರೆಗೂ ಶವವನ್ನು ಸಂಬಂಧಿಕರಿಗೆ ನೀಡುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯು ಹೇಳಿದ ನಂತರ, ಸಂಬಂಧಿಕರಿಗೆ ಇತ್ತ ತಮ್ಮವನನ್ನು ಕಳೆದುಕೊಂಡ ಬಗ್ಗೆೆ ದುಃಖ, ನೋವು ಅನುಭವಿಸಬೇಕೋ? ಅಥವಾ ಶವವನ್ನು ಆಸ್ಪತ್ರೆಯವರಿಂದ ಬಿಡಿಸಿಕೊಳ್ಳಲು ಹರಸಾಹಸ ಮಾಡಿ ಹಣವನ್ನು ಹೊಂದಾಣಿಕೆ
ಮಾಡಲು ಅಡ್ಡಾಡಬೇಕೋ? ಎಂಬ ದ್ವಂದ್ವದಲ್ಲಿಯೇಮಾನವೀಯತೆ ಯೇ ಇಲ್ಲದ ಆಸ್ಪತ್ರೆಗಳು ಎಂದು ಹಿಡಿ ಶಾಪ
ಹಾಕುತ್ತ ಆಸ್ತಿಯನ್ನು ಅಡವಿಟ್ಟೋ, ಮಾರಿಯೋ ಹಣವನ್ನು ಹೊಂದಾಣಿಕೆ ಮಾಡಿಕೊಂಡು ಬಂದು ಬಿಲ್ಲು ಪಾವತಿಸಿದ
ನಂತರ ಶವಕ್ಕೆ ಆ ಶೀತಲಕೋಣೆಯಿಂದ ಹೊರತಂದು ಸಂಬಂಧಿಕರಿಗೆ ನೀಡುವ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ.
ಶವದ ಜೊತೆ ಈ ಜೀವಂತ ಶವಗಳೂ ಸಹ ಆಸ್ಪತ್ರೆಯಿಂದ ಹೊರಡುವುದನ್ನು ನೋಡುವ ನಾಗರಿಕ ಸಮಾಜ ನಿಜಕ್ಕೂ ವೈದ್ಯ ವೃತ್ತಿ ಇಂದು ಅಮಾನವೀಯ ವೃತ್ತಿಯಾಗಿ ಇನ್ನೊಬ್ಬರ ರಕ್ತ ಮಾಂಸಗಳನ್ನೇ ಬುನಾದಿಯಾಗಿರಿಸಿಕೊಂಡು ತಮ್ಮ ಅರಮನೆ ಗಳನ್ನು ಕಟ್ಟಿಕೊಳ್ಳುವ ವೃತ್ತಿಯಾಗಿದೆ ಎಂದು ಅಸಹಾಯಕ ನಿಟ್ಟುಸಿರು ಬಿಡುತ್ತಿರುವ ಅನುಭವ ನಮಗೆಲ್ಲ ಆಗಿರಲಿಕ್ಕೆ ಸಾಕು. ನಿಜಕ್ಕೂ ಆಸ್ಪತ್ರೆಗಳಿಗೆ, ತಮ್ಮ ಸೇವಾ ಶುಲ್ಕದ ಬಿಲ್ಲನ್ನು ಪಾವತಿಸುವವರೆಗೂ ಒಳರೋಗಿಯನ್ನು ಅಥವಾ ಶವವನ್ನು ಬಂಧಿಯಾಗಿರಿಸುವ ಅಥವಾ ಒತ್ತೆಯಾಳಾಗಿ ಇರಿಸಿಕೊಳ್ಳಲು ಅಧಿಕಾರವಿದೆಯೇ? ಇದಕ್ಕೆ ಸ್ಪಷ್ಟವಾಗಿ ಉತ್ತರವನ್ನು ನಕಾರಾತ್ಮಕ ವಾಗಿಯೇ ನೀಡಬೇಕಾಗುತ್ತದೆ.
ಯಾವಾಗ, ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಶುಲ್ಕವನ್ನು ನೀಡಿ ಆಸ್ಪತ್ರೆಯ ಡಾಕ್ಟರ್‌ಗಳಿಂದ ಚಿಕಿತ್ಸೆಯನ್ನು ಪಡೆಯುತ್ತಾರೋ, ಆಗ ಆ ಡಾಕ್ಟರ್ ಹಾಗೂ ರೋಗಿಯ ನಡುವೆ ಒಂದು ಒಡಂಬಡಿಕೆ (ಕಾಂಟ್ರ್ಯಾಕ್ಟ್) ಉಂಟಾಗುತ್ತದೆ. ಶುಲ್ಕ
ನೀಡಿದರೆ, ನಿನಗೆ ಚಿಕಿತ್ಸೆಯನ್ನು ನೀಡುತ್ತೇನೆಂದು ಹೇಳುವ ಡಾಕ್ಟರ್ ಹಾಗೂ ಅದನ್ನು ಒಪ್ಪಿ ಚಿಕಿತ್ಸೆ ಪಡೆಯುವ ರೋಗಿಯ ನಡುವಿನ ಈ ಒಪ್ಪಂದವು ಭಾರತೀಯ ಕರಾರು ಅಧಿನಿಯಮದಡಿಯ ಕಾನೂನುಗಳಿಗೆ ಒಳಪಡುತ್ತದೆ.
ಹಾಗಿದ್ದ ಮೇಲೆ ಅಂತಿಮ ಬಿಲ್ಲುಗಳನ್ನು ಪಾವತಿಸಲು ವಿಫಲರಾದ ರೋಗಿ ಯನ್ನು ಅಥವಾ ಶವವನ್ನು ಆ ಬಿಲ್ಲುಗಳ ಮೊತ್ತ ಪಾವತಿಯಾಗುವವರೆಗೆ ಇಟ್ಟುಕೊಳ್ಳಲು ಆ ಕಾನೂನಿನಡಿ ಅವಕಾಶವಿದೆಯೇ? ಖಂಡಿತ ವಾಗಿಯೂ ಭಾರತೀಯ ಕರಾರು ಅಧಿನಿಯಮದಲ್ಲಿ ಆಸ್ಪತ್ರೆಗಳಿಗೆ ಅಥವಾ ಡಾಕ್ಟರುಗಳಿಗೆ ತಮ್ಮ ಪಾಲಿನ ಹಣವು ಪಾವತಿಯಾಗುವವರೆಗೂ ಯಾವುದೇ ರೋಗಿಯನ್ನಾಗಲಿ ಅಥವಾ ಶವವನ್ನಾಗಲ್ಲಿ ಇಟ್ಟುಕೊಳ್ಳಲು ಕಾನೂನಿನಡಿ ಅವಕಾಶವಿಲ್ಲ. ಇದನ್ನು ಸಾರ್ವಜನಿಕರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು.
ಬಿಲ್ ಪಾವತಿಸದ ರೋಗಿಯ ಅಥವಾ ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಂದ ಅಂತಿಮ ಬಿಲ್ಲಿನ ಮೊತ್ತವನ್ನು ಪಡೆದುಕೊಳ್ಳಲು ಇರುವ ದಾರಿಯಾದರೂ ಯಾವುದು? ಎಂದು ಪ್ರಶ್ನಿಸಿದರೆ, ಉತ್ತರ ಬಹಳ ಸರಳ. ಈ ಅಧಿನಿಯಮದಲ್ಲಿಯೇ ಉಲ್ಲೇಖವಿರುವಂತೆ, ತನಗೆ ಬರಬೇಕಾದ ಹಣವನ್ನು ಪಡೆಯಲು ಆ ಆಸ್ಪತ್ರೆ ಅಥವಾ ಡಾಕ್ಟರಗಳು ಸಕ್ಷಮ ನ್ಯಾಯಾಲಯಕ್ಕೆ ಸಿವಿಲ್ ದಾವೆಯನ್ನು ದಾಖಲಿಸಿ ನ್ಯಾಯಾಲಯದ ಡಿಕ್ರೀ ಮೂಲಕ ಬಿಲ್ಲಿನ ಹಣವನ್ನು ಪಡೆಯಲು ಕ್ರಮ ಕೈಗೊಳ್ಳಬೇಕೇ ವಿನಃ
ರೋಗಿಯನ್ನು ಅಥವಾ ಶವವನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಬರುವುದಿಲ್ಲ.
ಒಂದು ವೇಳೆ, ರೋಗಿಯನ್ನು ಅಥವಾ ಶವವನ್ನು ಒತ್ತೆಯಾಳಾಗಿ ಇರಿಸಿಕೊಂಡರೆ ಶಿಕ್ಷಾರ್ಹ ಅಪರಾಧವಾಗುತ್ತದೆಯೇ? ಖಂಡಿತವಾಗಿಯೂ ಇದೊಂದು ಶಿಕ್ಷಾರ್ಹ ಅಪರಾಧವೆಂದರೆ ತಪ್ಪಾಗಲಿಕ್ಕಿಲ್ಲ. ಭಾರತೀಯ ದಂಡ ಸಂಹಿತೆಯ ಕಲಂ 340ರಲ್ಲಿ ಅಕ್ರಮ ಕೂಡಿಡುವಿಕೆ ಪರಿಭಾಷೆಯಲ್ಲಿ ಯಾವುದೇ ವ್ಯಕ್ತಿಯನ್ನು ಅಕ್ರಮವಾಗಿ ಆತನು ಬಯಸಿದಂತೆ ಹೋಗಗೊಡದೇ ಒಂದು ಮಿತಿಯಲ್ಲಿ ತಡೆದು ಕೂಡಿಟ್ಟರೆ ಅದನ್ನು ಅಕ್ರಮ ಕೂಡಿಡುವಿಕೆ ಎಂದು ಪರಿಗಣಿಸಬೇಕಾಗುತ್ತದೆ. ಈ ರೀತಿಯ ಕೃತ್ಯವು ಕಲಂ
342ರಡಿ ಒಂದು ವರ್ಷದವರೆಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ಒಳಗೊಂಡ ಅಪರಾಧವಾಗುತ್ತದೆ. ಇದಕ್ಕೆ
ಪೂರಕವಾಗಿ, ಆ ಗುಣ ಹೊಂದಿದ ರೋಗಿಗೆ ಚಿಕಿತ್ಸೆಯ ಹೆಸರಿನಲ್ಲಿ ಅನಾವಶ್ಯಕವಾಗಿ ಔಷಧಗಳನ್ನು ನೀಡಿದರೆ, ಆ ರೀತಿಯ ಕೃತ್ಯವನ್ನು ನ್ಯಾಯೋಚಿತವಲ್ಲದ ಸೇವಾ ನ್ಯೂನ್ಯತೆಯೆಂದು ಪರಿಗಣಿತವಾಗಿ ಆ ರೋಗಿಗೆ ಪರಿಹಾರವನ್ನು ನೀಡಬೇಕಾದ ಹೊಣೆಗಾರಿಕೆಯನ್ನು ಸ್ಥಿರೀಕರಿಸುತ್ತದೆ. ಒಂದು ವೇಳೆ ಗುಣವಾಗಿದ್ದಾನೆಂದು ಹೇಳಿ, ಅಂತಿಮ ಬಿಲ್ಲಿನ ಮೊತ್ತವನ್ನು ಪಾವತಿಸುವವರೆಗೂ ರೋಗಿಯನ್ನು ಬಿಡುಗಡೆ ಮಾಡದೇ, ಚಿಕಿತ್ಸೆಯ ಹೆಸರಿನಲ್ಲಿ ಅನಗತ್ಯವಾಗಿ ಔಷಧವನ್ನು ನೀಡಿ ಅಥವಾ
ತುರ್ತು ಚಿಕಿತ್ಸಾ ಘಟಕದಲ್ಲಿರಿಸಿಕೊಂಡು ವೆಂಟಿಲೇಟರ್ ಹಾಕಿ ಮಲಗಿಸಿ, ನಂತರ ಆ ರೋಗಿ ಮೃತಪಟ್ಟರೆ, ಈ ರೀತಿಯ ಕೃತ್ಯಗಳು ಭಾರತೀಯ ದಂಡ ಸಂಹಿತೆಯ ನರ ಹತ್ಯೆ ಪರಿಭಾಷೆಯಲ್ಲಿ ಬರುತ್ತವೆ.
ಇವೆಲ್ಲವುಗಳಿಗಿಂತ ಮಿಗಿಲಾಗಿ, ರೋಗದಿಂದ ವಾಸಿಗೊಂಡ ರೋಗಿಯನ್ನು ಅಕ್ರಮವಾಗಿ ತಮ್ಮ ಬಳಿಯೇ ಇಟ್ಟುಕೊಳ್ಳುವುದು ಆ ರೋಗಿಯ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಂಡಂತೆ. ಇತ್ತೀಚಿಗೆ, ಕೇರಳ ರಾಜ್ಯದ ಉಚ್ಛ ನ್ಯಾಯಾಲಯ ರೀಜಾ ಎಸ್. ವಿರುದ್ಧ ಠಾಣಾಧಿಕಾರಿ ಮ್ಯುಸಿಯಂ ಪೊಲೀಸ್ ಠಾಣೆ, ಆಡಳಿತಾಧಿಕಾರಿ, ಎಸ್.ಕೆ.ಹಾಸ್ಪಿಟಲ್ ತಿರವನಂತಪುರಂ ಇತರರ ಮೆಲೆ ರಿಟ್ ಅರ್ಜಿ ದಾಖಲಿಸಿ, ಬಿಲ್ ಹಣವನ್ನು ಪಾವತಿಸಿಲ್ಲವೆಂದು ಹೇಳಿ ಆಸ್ಪತ್ರೆಯವರು ತನ್ನ ಮಗನನ್ನು ಒತ್ತೆಯಾಳಾಗಿ
ಇರಿಸಿಕೊಂಡಿದ್ದು, ಬಿಡುಗಡೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು ದಿನಾಂಕ 23/10/2020ರಂದು ಆ ಅಸ್ಪತ್ರೆಗೆ ಛೀಮಾರಿ ಹಾಕಿದ ಹೈಕೋರ್ಟ್ ಮಗನನ್ನು ಕೂಡಲೆ ಬಿಡುಗಡೆ ಮಾಡುವಂತೆ ಆದೇಶ ನೀಡಿತು. ಹಾಗೂ ಪಾವತಿಸದ ಬಿಲ್ಲಿನ ಮೊತ್ತವನ್ನು ಕಾನೂನಿನಲ್ಲಿ ಇರುವ ನಿಯಮಗಳನುಸಾರ ವಸೂಲಿಗೆ ಕ್ರಮ ಕೈಗೊಳ್ಳಬೇಕೆ ವಿನಃ ರೋಗಿಯನ್ನು ಒತ್ತೆಯಾಳಾಗಿ ಇಟ್ಟುಕೊಳ್ಳು ವಂತಿಲ್ಲವೆಂದು ನಿರ್ಣಯ ನೀಡಿದೆ. ಆದರೆ, ಮೃತ ಹೊಂದಿದ ರೋಗಿಯ ಶವವನ್ನು ಬಿಲ್ಲು ಪಾವತಿಸುವವರೆಗೂ ನೀಡುವು ದಿಲ್ಲವೆಂಬ ಕ್ರಮವು ಆ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಗಂಭೀರವಾದ ಶಿಕ್ಷಾರ್ಹ ಅಪರಾಧಕ್ಕೆ ಒಳಪಡಿಸುತ್ತದೆ.
ಒಬ್ಬ ವ್ಯಕ್ತಿಯು ಮರಣದ ನಂತರ ಅವನ ಶವವನ್ನು ವಾರಸುದಾರರಿಗೆ ಸೇರಿದ ಸ್ವತ್ತೆಂದು ಕಾನೂನಿನಡಿ ಪರಿಗಣಿಸಲಾಗುತ್ತದೆ. ಈ ವಾರಸುದಾರರಿಗೆ ಆ ಶವವನ್ನು ಹಸ್ತಾಂತರಿಸದೇ ಅಕ್ರಮವಾಗಿ ಇಟ್ಟುಕೊಂಡಲ್ಲಿ ಈ ಕೃತ್ಯವು ಭಾರತೀಯ ದಂಡ ಸಂಹಿತೆಯ ಕಲಂ 390ರಡಿ ಸುಲಿಗೆ ಪರಿಭಾಷೆಯಲ್ಲಿ ಬರುತ್ತಿದ್ದು ಈ ಅಪರಾಧಕ್ಕೆ ಹತ್ತು ವರ್ಷದವರೆಗೆ ಕಾರಾಗೃಹವಾಸ ಹಾಗೂ ದಂಡದ ಶಿಕ್ಷೆನಿಗದಿಪಡಿಸಲಾಗಿದೆ. ಇದೇ ಸುಲಿಗೆ ಕೃತ್ಯವನ್ನು ಐದು ಅಥವಾ ಹೆಚ್ಚು ಜನ ಸೇರಿ ಎಸಗಿದರೆ ಅಥವಾ ಪ್ರಯತ್ನಸಿದರೆ
ಆ ಕೃತ್ಯವನ್ನು ದರೋಡೆ ಪರಿಭಾಷೆಯಲ್ಲಿ ಪರಿಗಣಿಸಬೇಕಾಗುತ್ತದೆ. ಇದಕ್ಕೆ ಕಾನೂನಿನಡಿ ಶಿಕ್ಷೆ ಹತ್ತು ವರ್ಷಗಳವರೆಗೆ ಕಠಿಣ ಕಾರಾಗೃಹ ಸಜೆ ಹಾಗೂ ದಂಡ ಇದೆ.
ಇದರ ಅರ್ಥ, ಆಸ್ಪತ್ರೆಗಳು ಹಾಗೂ ಡಾಕ್ಟರಗಳು ತಮ್ಮ ಚಿಕಿತ್ಸಾ ಬಿಲ್ ಪಾವತಿಸಿಲ್ಲವೆಂದು ರೋಗಿಯನ್ನು ಅಥವಾ ಮೃತಪಟ್ಟ ರೋಗಿಯ ಶವವನ್ನು ಬಿಲ್ಲಿನ ಹಣ ಪಾವತಿಸುವವರೆಗೂ ಒತ್ತೆಯಾಳಾಗಿರಿಸಿಕೊಂಡರೆ ಅದನ್ನು ಶಿಕ್ಷಾರ್ಹ ಅಪರಾಧ, ಸುಲಿಗೆ, ದರೋಡೆಯೆಂದೇ ಪರಿಗಣಿಸಬೇಕಾಗುತ್ತದೆ.
ಈ ಕುರಿತಂತೆ, ಆಸ್ಪತ್ರೆಯ ಅಥವಾ ಡಾಕ್ಟರ್ ವಿರುದ್ಧ ಈ ಕುರಿತಂತೆ ಪೊಲೀಸ್ ಠಾಣಾಧಿಕಾರಿ ದೂರನ್ನು ಸ್ವೀಕರಿಸಿದರೆ, ಕೂಡಲೇ ಪ್ರಕರಣ ದಾಖಲಿಸಿಕೊಳ್ಳಬೇಕು, ಏಕೆಂದರೆ ಈ ಎಲ್ಲ ಶಿಕ್ಷಾರ್ಹ ಅಪರಾಧಿಕ ಕೃತ್ಯಗಳು ಸಂಜ್ಞೆಯ ಅಪರಾಧ ಗಳಾಗಿದ್ದು, ಪ್ರಕರಣ ದಾಖಲಿಸಲು ನಿರಾಕರಿಸುವಂತಿಲ್ಲ. ನಾಗರಿಕ ಸಮಾಜದಲ್ಲಿ, ಆರೋಗ್ಯವನ್ನು ಕಾಪಾಡುವ ಡಾಕ್ಟರ್‌ಗಳು, ಆಸ್ಪತ್ರೆಗಳು ಸಾವನ್ನು ಎದರಿಸುತ್ತಿರುವ ರೋಗಿಗಳ ಪಾಲಿಗೆ ದೈವ ಸಮಾನರು, ಸಂಜೀವಿನಿಗಳು ಆದರೆ, ತಮ್ಮ ಅನೈತಿಕ ವೃತ್ತಿ ನೀತಿಗಳಿಂದ, ಹಣ ಗಳಿಕೆಯ ಹಂಬಲದಲ್ಲಿ ಮಾನವೀಯತೆಯನ್ನು ಮರೆತು ದಾನವರಂತೆ ವರ್ತಿಸಿದರೆ ಕಾನೂನಿನಡಿ ಯಾವುದೇ ವಿನಾಯತಿ
ಇಲ್ಲವೆಂಬುದನ್ನು ಅರಿಯಬೇಕು. ಜನ ಜಾಗೃತವಾಗಿ ಹಾಗೂ ನ್ಯಾಯಾಲಯಗಳು ಮತ್ತಷ್ಟು ಕಠಿಣವಾದರಷ್ಟೇ ಈ ರೀತಿಯ ಸುಲಿಗೆ, ದರೋಡೆಗಳಿಗೆ ವಿರಾಮ ಹಾಕಲು ಸಾಧ್ಯ.
ಕಾನೂನುಗಳನ್ನು ಮೀರುವುದರ ಜೊತೆ ಮಾನವೀಯತೆ ಯನ್ನೂ ಮರೆತ ಈ ಆಸ್ಪತ್ರೆಗಳಿಗೆ, ಡಾಕ್ಟರ್‌ಗಳಿಗೆ ಸರಕಾರವೇ ಸೂಕ್ತ ವಾಗಿ ಕಾನೂನಿನ ಚೌಕಟ್ಟಿನಲ್ಲಿ ತರುವುದು ಇಂದಿನ ಅತ್ಯಗತ್ಯವಾಗಿದೆ, ಸಂಬಂಧಿತರು ಇತ್ತ ಚಿತ್ತ ಹರಿಸುವರೇ?
***
ಒಂದು ವೇಳೆ, ರೋಗಿಯನ್ನು ಅಥವಾ ಶವವನ್ನು ಒತ್ತೆಯಾಳಾಗಿ ಇರಿಸಿಕೊಂಡರೆ ಶಿಕ್ಷಾರ್ಹ ಅಪರಾಧ ವಾಗು ತ್ತದೆಯೇ? ಖಂಡಿತವಾಗಿಯೂ ಇದೊಂದು ಶಿಕ್ಷಾರ್ಹ ಅಪರಾಧವೆಂದರೆ ತಪ್ಪಾಗಲಿಕ್ಕಿಲ್ಲ. ಭಾರತೀಯ ದಂಡ ಸಂಹಿತೆಯ ಕಲಂ 340ರಲ್ಲಿ ಅಕ್ರಮ ಕೂಡಿಡುವಿಕೆ ಪರಿಭಾಷೆಯಲ್ಲಿ ಯಾವುದೇ ವ್ಯಕ್ತಿಯನ್ನು ಅಕ್ರಮವಾಗಿ ಆತನು ಬಯಸಿದಂತೆ ಹೋಗಗೊಡದೇ ಒಂದು ಮಿತಿಯಲ್ಲಿ ತಡೆದು ಕೂಡಿಟ್ಟರೆ ಅದನ್ನು ಅಕ್ರಮ ಕೂಡಿಡುವಿಕೆ ಎಂದು ಪರಿಗಣಿಸಬೇಕಾಗುತ್ತದೆ. ಈ ರೀತಿಯ ಕೃತ್ಯವು ಕಲಂ 342ರಡಿ ಒಂದುವರ್ಷದವರೆಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ಒಳಗೊಂಡ ಅಪರಾಧವಾಗುತ್ತದೆ.