Friday, 22nd November 2024

ತಪ್ಪಿಸಿಕೊಳ್ಳಲು ಓಡಿದ ಉಗ್ರನನ್ನು ಹೊಡೆದುರುಳಿಸಿದ ಸೇನೆ; ರೋಚಕ ವಿಡಿಯೊ ಇಲ್ಲಿದೆ

Jammu and Kashmir

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಸಮರ ಸಾರಿದೆ. ಭಯೋತ್ಪಾದನೆಯ ಧಮನಕ್ಕೆ ಟೊಂಕ ಕಟ್ಟಿ ನಿಂತಿರುವ ಸೇನೆ ಉಗ್ರರ ಹೆಡೆಮುರಿ ಕಟ್ಟುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಶನಿವಾರ ಭದ್ರತಾ ಪಡೆಗಳು ಕಟ್ಟಡದ ಹೊರಗೆ ಓಡುತ್ತಿದ್ದ ಭಯೋತ್ಪಾಕನ ಮೇಲೆ ಗುಂಡಿನ ಮಳೆಗೆರೆದು ಆತನನ್ನು ಹೊಡೆದುರುಳಿಸಿದ ವೀಡಿಯೊ ಇದೀಗ ವೈರಲ್‌ ಆಗಿದೆ (Viral Video). ಬಾರಾಮುಲ್ಲಾದಲ್ಲಿ ಶನಿವಾರ ರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ.

ʼʼಬಾರಾಮುಲ್ಲಾದ ಚಕ್ ಟ್ಯಾಪರ್ ಕ್ರೀರಿ (Chak Tapper Kreeri)ಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ಬ್ರಿಗೇಡಿಯರ್ ಸಂಜಯ್ ಕಣ್ಣೋತ್ ತಿಳಿಸಿದ್ದಾರೆ.

ವೈರಲ್‌ ಆದ ವೀಡಿಯೊದಲ್ಲಿ ಭಯೋತ್ಪಾದಕನೊಬ್ಬ ತಪ್ಪಿಸಿಕೊಳ್ಳಲು ಕಟ್ಟಡದ ಕಾಂಪೌಂಡ್ ಕಡೆಗೆ ಓಡುತ್ತಾನೆ. ಈ ವೇಳೆ ಅವನು ನೆಲದ ಮೇಲೆ ಬೀಳುತ್ತಾನೆ. ಬಳಿಕ ಕೆಲವು ಮೀಟರ್‌ಗಳಷ್ಟು ತೆವಳುತ್ತಾನೆ. ಆ ವೇಳೆ ಸೇನೆ ಕಟ್ಟಡದೊಳಗಿನಿಂದ ಗುಂಡಿನ ಮಳೆಗೆರೆಯುವುದು ಕಂಡು ಬಂದಿದೆ.

“ಚಕ್ ಟ್ಯಾಪರ್‌ / ವತರ್ಗಾಮ್‌ನಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಮಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭಿಸಿತ್ತು. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿ ಅದರಲ್ಲಿ ಗಮನಾರ್ಹ ಯಶಸ್ಸು ಪಡೆದಿದ್ದೇವೆʼʼ ಎಂದು ಸಂಜಯ್ ಕಣ್ಣೋತ್ ವಿವರಿಸಿದ್ದಾರೆ. ಈ ಮಧ್ಯೆ ಕುಪ್ವಾರಾದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

“ಹಳೆಯ ಕಟ್ಟಡದಲ್ಲಿ ಅಡಗಿದ್ದ ಭಯೋತ್ಪಾದಕರು ಆರಂಭದಲ್ಲಿ ನಮ್ಮ ತುಕಡಿಗಳ ಮೇಲೆ ಗುಂಡು ಹಾರಿಸಿದರು. ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ಪ್ರಕಾರ, ನಾವು ಪ್ರತಿ ದಾಳಿ ನಡೆಸಿದ್ದೇವೆ” ಎಂದು ಅವರು ಹೇಳಿದ್ದಾರೆ. “ನಮ್ಮ ಪಡೆಯ ಸಿಬ್ಬಂದಿ ಅತ್ಯಂತ ವೃತ್ತಿಪರ ರೀತಿಯಲ್ಲಿ ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿದ್ದಾರೆ. ನಾಗರಿಕರ ಜೀವ ಮತ್ತು ಆಸ್ತಿಗೆ ಯಾವುದೇ ಹಾನಿಯಾಗದಂತೆ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆʼʼ ಎಂದು ತಿಳಿಸಿದ್ದಾರೆ.

ಚುನಾವಣೆಗೆ ಕ್ಷಣಗಣನೆ

ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆ ಸೆಪ್ಟೆಂಬರ್‌ 18ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾಸಭೆ ಚುನಾವಣೆಗೆ ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಸೆ. 18, ಸೆ. 25 ಮತ್ತುಅಕ್ಟೋಬರ್‌ 1ರಂದು ದಿನಾಂಕ ನಿಗದಿಪಡಿಸಲಾಗಿದೆ. ಚುನಾವಣಾ ಫಲಿತಾಂಶ ಅ. 8ರಂದು ಪ್ರಕಟವಾಗಲಿದೆ.

ಸೆ. 18 ರಂದು ರಾಜ್ಯದ 24 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.  ಸೆ. 25ರಂದು 26 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಅ. 1ರಂದು 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಇದೇ ಮೊದಲ ಬಾರಿ ಚುನಾವಣೆ ನಡೆಯುತ್ತಿದ್ದು, ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: Terror attack: ಜಮ್ಮು-ಕಾಶ್ಮೀರ ಎನ್‌ಕೌಂಟರ್‌- ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ