Saturday, 23rd November 2024

Virat Kohli: ದ್ರಾವಿಡ್‌ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್‌ ಕೊಹ್ಲಿ

virat kohli

ಬೆಂಗಳೂರು: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆ ಬರೆದಿರುವ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌(Rahul Dravid) ಅವರ ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ(Most runs for IND vs BAN Tests) ನಡುವಣ ಟೆಸ್ಟ್‌ ಸರಣಿಯಲ್ಲಿ ಅತ್ಯಧಿಕ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್‌ ದ್ರಾವಿಡ್‌ 7 ಪಂದ್ಯವನ್ನಾಡಿ 560 ರನ್‌ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ 6 ಪಂದ್ಯಗಳಿಂದ 437* ರನ್‌ ಗಳಿಸಿದ್ದಾರೆ. ಈ ಬಾರಿಯ ಸರಣಿಯಲ್ಲಿ ಕೊಹ್ಲಿ ಒಟ್ಟು 124 ರನ್‌ ಗಳಿಸಿದರೆ ದ್ರಾವಿಡ್‌ ದಾಖಲೆ ಮುರಿದು ಮೂರನೇ ಸ್ಥಾನಕ್ಕೇರಲಿದ್ದಾರೆ.

820 ರನ್‌ ಬಾರಿಸಿರುವ ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅಗ್ರಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ಹಿರಿಯ ಆಟಗಾರ, ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ 8 ಪಂದ್ಯಗಳನ್ನಾಡಿ 604 ರನ್‌ ಬಾರಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಈ ಬಾರಿಯ ಸರಣಿಯಲ್ಲಿಯೂ ಅವರು ಆಡುತ್ತಿರುವ ಕಾರಣ ರನ್‌ ಗಳಿಕೆ ಹೆಚ್ಚಳ ಮಾಡಬಹುದು. ಸಚಿನ್‌ ದಾಖಲೆ ಮುರಿಯಬೇಕಿದ್ದರೆ ರಹೀಮ್‌ಗೆ 217 ರನ್‌ಗಳ ಅಗತ್ಯವಿದೆ.

ಭಾರತ-ಬಾಂಗ್ಲಾ ಟೆಸ್ಟ್‌ ಮುಖಾಮುಖಿ

ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ ಒಟ್ಟು 13 ಟೆಸ್ಟ್‌ ಪಂದ್ಯಗಳನ್ನು ಅಡಿದೆ. ಈ ಪೈಕಿ ಭಾರತ ಅಜೇಯ 11 ಗೆಲುವು ಸಾಧಿಸಿದೆ. 2 ಪಂದ್ಯ ಡ್ರಾ ಗೊಂಡಿದೆ. ಬಾಂಗ್ಲಾದೇಶ ಇದುವರೆಗೂ ಒಂದೇ ಒಂದು ಪಂದ್ಯ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಒಟ್ಟು ಇತ್ತಂಡಗಳು 8 ಟೆಸ್ಟ್‌ ಸರಣಿ ಆಡಿವೆ.

ಕೆಂಪು ಪಿಚ್‌ನಲ್ಲಿ ಪಂದ್ಯ

ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡದ ಮೇಲುಗೈಗೆ ಅನುಕೂಲಕರ ಎನಿಸುವಂಥ ಕೆಂಪು ಮಣ್ಣಿನ ಪಿಚ್​ ಸಿದ್ಧಪಡಿಸಲಾಗಿದೆ. ಬಾಂಗ್ಲಾ ತಂಡ ತವರಿನಲ್ಲಿ ಕಪ್ಪು ಮಣ್ಣಿನ ಪಿಚ್​ನಲ್ಲಿ ಹೆಚ್ಚು ಆಡಿದ ಅನುಭವ ಹೊಂದಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್​ಗೆ ಹೊಂದಿಕೊಳ್ಳುವುದು ಬಾಂಗ್ಲಾ ಪಾಲಿಗೆ ಸವಾಲೆನಿಸಲಿದೆ. ಕೆಂಪು ಮಣ್ಣಿನ ಪಿಚ್​ ಮೊದಲಿಗೆ ವೇಗದ ಬೌಲರ್​ಗಳಿಗೆ ಹೆಚ್ಚಿನ ನೆರವು ಒದಗಿಸುತ್ತದೆ. ಕೆಂಪು ಮಣ್ಣಿನಲ್ಲಿ ಕಡಿಮೆ ಆವೆ ಅಂಶ ಇರುವುದರಿಂದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಬೌನ್ಸ್​ ಕಂಡುಬರಲಿದೆ. ಆರಂಭದಲ್ಲಿ ವೇಗಿಗಳು ಮೇಲುಗೈ ಸಾಧಿಸಬಹುದು. ಆದರೆ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಬೇಕು. ಪಿಚ್​ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕವಷ್ಟೇ ಸ್ಪಿನ್ನರ್​ಗಳಿಗೆ ಪಿಚ್​ ನೆರವಾಗುತ್ತದೆ.