ದಶಕದ ನಂತರ ಕಲಬುರಗಿಯಲ್ಲಿ ಸಚಿವ ಸಂಪುಟ
ಹಳೆಯ ಯೋಜನೆಗಳ ಅನುಷ್ಠಾನ, ಹೊಸ ಯೋಜನೆಗಳ ನಿರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಜನ
ದೇವೇಂದ್ರ ಜಾಡಿ ಕಲಬುರಗಿ
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿ ಯಲ್ಲಿ ದಶಕದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರಕಾರದ 19ನೇ ಸಚಿವ ಸಂಪುಟ ಸಭೆ ನಡೆಸುತ್ತಿದ್ದು, ತೀರಾ ಹಿಂದುಳಿದ ಪ್ರದೇಶದ ಜನರಲ್ಲಿ ಎಲ್ಲಿಲ್ಲದ ನಿರೀಕ್ಷೆಗಳು ಗರಿಗೆದರಿವೆ.
ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರುಗಳ ಸಂಖ್ಯೆ ಅಧಿಕವಾಗಿದ್ದು, ಆದರಿಂದ ಸೆ.17ರಂದು ನಡೆಯುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ,
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಚನಾತ್ಮಕ ಪ್ರಗತಿಗೆ ವಿಶೇಷ ಸ್ಪಂದನೆ ನೀಡಲಿದ್ದಾರೆ ಎನ್ನುವ ಆಕಾಂಕ್ಷೆಯಲ್ಲಿ ಸಾರ್ವಜನಿಕರ ನಿರೀಕ್ಷೆಯಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಆಡಳಿತಾತ್ಮಕ, ಶೈಕ್ಷಣಿಕ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಲೋಕೋಪಯೋಗಿ, ಕೃಷಿ, ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು 371(ಜೆ) ಕಲಂ ಅನ್ನು ಪರಿಣಾಮಕಾರಿ ಜಾರಿ, ಸ್ಥಳೀಯ ವೃಂದದ ೩೦ ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಅಭಿವೃದ್ಧಿಯ ದೊಡ್ಡ ದೊಡ್ಡ ಉಡುಗೊರೆ ನೀಡುವ ನಿರೀಕ್ಷೆಯಿದೆ.
ವಿಶೇಷವಾಗಿ ೩೭೧ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಂಘ ಸಂಸ್ಥೆ ಗಳಿಂದ ಹಕ್ಕೊತ್ತಾಯದ ಕೂಗು ಕೇಳಿ ಬಂದಿವೆ.
2014 ಕ್ಯಾಬಿನೆಟ್ ನಿರ್ಣಯಗಳು ಬಹುತೇಕ ಪೂರ್ಣ: ಈ ಹಿಂದೆ 2014ರ ನವೆಂಬರ್ 28ರಂದು ಕಲಬುರಗಿ ಯಲ್ಲಿ ನಡೆದ ೬ನೇ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 32 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಎಚ್ ಕೆಎಆರ್ಡಿಬಿ)ಗೆ ೪೦೦ ಕೋಟಿ ರು. ಹೆಚ್ಚುವರಿ ಅನುದಾನ ನೀಡಲು ತೀರ್ಮಾನಿಸಲಾಗಿತ್ತು. ಅದರಂತೆ ಈಗ ೪೦೦ ಕೋಟಿ ರು.ಗಿಂತ ಹಂತ ಹಂತವಾಗಿ ೫ ಸಾವಿರ ಕೋಟಿ ರು.ವರೆಗೆ ಅನುದಾನ ಬಂದು ತಲುಪಿದೆ.
ಈಗ ದಶಕದ ಬಳಿಕ ನಡೆಯುತ್ತಿರುವ ೧೯ನೇ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಗಾಗಿ ಹಳೆಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಹೊಸ ಯೋಜನೆಗಳ ಘೋಷಣೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಸಂಪುಟದ ಯಶಸ್ವಿಗೆ ೧೧ ಸಮಿತಿ ರಚನೆ: ಸಚಿವ ಸಂಪುಟ ಸಭೆ ಯಶಸ್ವಿಗಾಗಿ 11 ಸಮಿತಿಗಳನ್ನು ರಚಿಸ ಲಾಗಿದ್ದು, ಸ್ವಾಗತ, ಹಣಕಾಸು, ಆಹಾರ ಮತ್ತು ಕುಡಿಯುವ ನೀರು, ಸಮನ್ವಯ ಮತು ಸಹಾಯವಾಣಿ, ವಸತಿ, ಸಾರಿಗೆ ಮತ್ತು ಸಂಪರ್ಕ, ಭದ್ರತಾ, ಮಾಧ್ಯಮ, ಆರೋಗ್ಯ, ಪ್ರಸ್ತಾವನೆ ತಯ್ಯಾರಿ ಹಾಗೂ ಸಂಪುಟ ಸಭೆ ಕೋಣೆ ನಿರ್ವಹಣೆ ಸಮಿತಿ ಸೇರಿ ಒಟ್ಟು 11 ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಕೃಷ್ಣ ವಾಜಪೇಯಿ ಮಾಹಿತಿ ನೀಡಿದ್ದಾರೆ.
ಕಲ್ಯಾಣದ ನಿರೀಕ್ಷೆಗಳೇನು?
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371(ಜೆ) ಕಲಂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಖಾಲಿಯಿರುವ 20 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಕ್ರಮ ಜರೂರ್ ಕೈಗೊಳ್ಳಬೇಕು. ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಕೆಕೆಆರ್ಡಿಬಿ ವತಿಯಿಂದ ದೂರ ದೃಷ್ಟಿಯಿಟ್ಟುಕೊಂಡು 10 ವರ್ಷಗಳ ಕ್ರೀಯಾ ಯೋಜನೆ, ಕಲ್ಯಾಣ ಭಾಗದ ಕಲಬುರಗಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ತೊಗರಿ ಅಭಿವೃದ್ಧಿ ಮಂಡಳಿಗೆ ಹೊಸ ಕಾಯಕಲ್ಪ, ವರ್ತುಲ ರಸ್ತೆಯ ಬೀದರ್, ಬೆಂಗಳೂರು ಎಕನಾಮಿಕ್ ಕಾರಿಡಾರ್ ಗೆ ಒತ್ತು ನೀಡಬೇಕು.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರರ ಹೆಸರು ನಾಮಕರಣ, ವಿಜಯನಗರ ಜಿಲ್ಲೆಗೆ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಕ್ಕೆ ಅನುದಾನ, ಮೆಡಿಕಲ್ ಕಾಲೇಜು, ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನ ವಿಶ್ವವಿದ್ಯಾಲಯಕ್ಕೆ ಅನುದಾನ ಹಾಗೂ ವಿಮಾನ ನಿಲ್ದಾಣದ ಕಾಮಗಾರಿಗೆ ವೇಗ, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೃಷಿ ಮತ್ತು ಕೈಗಾರಿಕಾ ನೀತಿ ರೂಪಿಸುವುದು, ಕೊಪ್ಪಳದ ನೀರಾವರಿ ಯೋಜನೆಗಳಿಗೆ ಅನುದಾನ, ಯಾದಗಿರಿಯಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು, ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು, ಬೀದರ್ ಜಿಲ್ಲೆಯ ಅನುಭವ ಮಂಟಪಕ್ಕೆ ಹೆಚ್ಚಿನ ಅನುದಾನ ದೊರಕಬೇಕು ಎಂಬ ನಿರೀಕ್ಷೆಗಳಿವೆ.
ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಕುರಿತಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸ ಲಾಗುವುದು. ಈ ಭಾಗದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಿ ಮೂಲಸೌಲಭ್ಯಗಳನ್ನು ಒದಗಿಸುವುದು, ಕೈಗಾರಿಕೆ ನೀತಿ ರೂಪಿಸುವುದು ಸೇರಿದಂತೆ ಉದ್ಯೋಗ ಸೃಷ್ಟಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ
ಉತ್ಸವದಂದೆ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ನಡೆಯುತ್ತಿದ್ದು, ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಲಿದೆ.
-ಡಾ.ಅಜಯ್ ಸಿಂಗ್ ಅಧ್ಯಕ್ಷ ಕೆಕೆಆರ್ಡಿಬಿ
ದಶಕದ ಬಳಿಕ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು,
೩೭೧(ಜೆ) ಜಾರಿಗೊಂಡು ಹತ್ತು ವರ್ಷ ಕಳೆದಿದೆ. ಹೀಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಈ ಭಾಗದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಹಾಗೂ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಹತ್ತು ವರ್ಷಗಳ
ಕ್ರಿಯಾಯೋಜನೆ ರೂಪಿಸಲಿ. ೩೭೧(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಗೊಳಿಸಲಿ.
ಲಕ್ಷ್ಮಣ ದಸ್ತಿ, ಸಂಸ್ಥಾಪಕ ಅಧ್ಯಕ್ಷ ಕಲ್ಯಾಣ
ಕರ್ನಾಟಕ ಹೋರಾಟ ಸಮಿತಿ
ಆಗಬೇಕಾದದ್ದೇನು.? ಈ ಭಾಗದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಡಿಸೆಂಬರ್ ೨೦೧೪ರೊಳಗೆ ಗುರುತಿಸಿ, ಜೂನ್ ೨೦೧೫ರ ಒಳಗಡೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂಬ ನಿರ್ಣಯ ಇನ್ನೂ ಪೂರ್ಣಗೊಂಡಿಲ್ಲ. ಸುಮಾರು ೫೦ ಸಾವಿರ ಹುದ್ದೆಗಳು ಇನ್ನೂ ಖಾಲಿ ಉಳಿದಿದ್ದವು. ಈಗ ಆರ್ಧದಷ್ಟು ಹುದ್ದೆಗಳು ಭರ್ತಿಗೊಂಡಿವೆ.
ಬೀದರ್ ಜಿಲ್ಲೆಯ ಕಾರಂಜಾ ಯೋಜನೆಯ ಮರು ಪರಿಷ್ಕರಣೆಗಾಗಿ ೬೩೫ ಕೋಟಿ ರು. ಅನುಮೋದನೆ
ನೀಡಲಾಗಿತ್ತು. ಈ ಪೈಕಿ ೭೫ ಕೋಟಿ ರು. ಮಾತ್ರ ಬಿಡುಗಡೆಯಾಗಿದೆ. ಹುಮನಾಬಾದ್ ತಾಲೂಕಿನ
ಬೋರಂಪಳ್ಳಿ ಗ್ರಾಮದಲ್ಲಿ ೩೪ ಎಕರೆ ಜಮೀನಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಟ್ರೈಬಲ್ ಪಾರ್ಕ್
ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಇದನ್ನೂ ಓದಿ: Kalaburagi News: ಪೂಜ್ಯ ದೊಡ್ಪಪ್ಪ ಅಪ್ಪನವರ ಪುಣ್ಯಸ್ಮರಣೋತ್ಸವ ಇಂದು