ಸಕಾಲಿಕ
ಡಾ.ನಾ.ಸೋಮೇಶ್ವರ
(ನಿನ್ನೆೆಯ ಸಂಚಿಕೆಯ ಲೇಖನದ ಮುಂದುವರಿದ ಭಾಗ)
ಭುವನೇಶ್ವರಿಯ ಆಲಯಗಳು ಕರ್ನಾಟಕಕ್ಕಿಂತ, ಕರ್ನಾಟಕದ ಹೊರಗಡೆ ಅಧಿಕವಾಗಿವೆ. ಶಾಕ್ತಪಂಥದಲ್ಲಿ ಶ್ರೀವಿದ್ಯೆಯ ಆರಾಧಕರು(ಮತ್ತೊಂದುಗುಂಪು ಕಾಳೀಕುಲ ಆರಾಧಕರು) ಇರುವ ಕಡೆಯಲ್ಲಿ ಸಾಮಾನ್ಯವಾಗಿ ಭುವನೇಶ್ವರಿಯ ಆಲಯ ಹಾಗೂ ಆರಾಧನೆಯನ್ನು ನೋಡಬಹುದು.
ಒಡೀಶದಲ್ಲಿರುವ ಉತ್ಕಲ ಬ್ರಾಹ್ಮಣರು ಈಕೆಯ ಪರಮ ಆರಾಧಕರು. ತಮಿಳುನಾಡಿನ ಪುದುಕೋಟ್ಟೆ , ಸೆಲೆಯೂರು, ಆಡಂಬಾಕ್ಕಮ್, ಪಳನಿ, ಮಧುರೈ, ಮಂದಾರಕುಪ್ಪಂ, ಅಮ್ಬತ್ತೂರು, ಕೊಯಂಬತ್ತೂರುಗಳಲ್ಲಿ ಭುವನೇಶ್ವರಿಯ ಆಲಯಗಳಿವೆ. ಆಂಧ್ರಪ್ರದೇಶದ ಕೋಟಿಲಿಂಗಾಲ ಘಾಟ್, ಭಿಲ್ಲವಾಡಿ, ಕೊವ್ವೂರು, ಶ್ರೀಶೈಲಗಳಲ್ಲಿ ಹಾಗೂ ಕೇರಳದ ತ್ರಿಸ್ಸೂರು, ಮರತ್ಕಾರಿ ಕಲರಿ, ಆಕಪ್ಪರಂಬು, ವಳ್ಳೀವಾಟಂಗಳಲ್ಲಿ ಆಲಯಗಳಿವೆ.
ಅಸ್ಸಾಮಿನ ಗುವಾಹಟಿಯಲ್ಲಿರುವ ನೀಲಾಚಲ ಪರ್ವತದಲ್ಲಿ ದಶಮಹಾವಿದ್ಯೆಗಳ ಎಲ್ಲ ಅಧಿದೇವತೆಯರ ಆಲಯಗಳಿವೆ. ಕಾಮಾಖ್ಯ ದೇವಾಲಯ ಸಮುಚ್ಚಯದಲ್ಲೂ ಭುವನೇಶ್ವರಿ ಆಲಯವಿದೆ. ತ್ರಿಪುರ, ಪಶ್ಚಿಮ ಬಂಗಾಳ, ನೇಪಾಳಗಳಲ್ಲಿ ಆಲಯ
ಗಳಿವೆ. ಅಮೆರಿಕದ ಟೊರಾಂಟೊ, ವೆಸ್ಟ್ ಕೆನ್ನೆತ್ ಪೋಂಟಿಯಾಕ್, ಸ್ಯಾನ್ ಹೋಸೆ, ಈಸ್ಟ್ ಹ್ಯಾಮ್ ನಗರಗಳಲ್ಲೂ ಆಲಯಗಳಿವೆ.
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ, ಸಿದ್ದಾಪುರ – ಕುಮುಟ ಮಾರ್ಗದಲ್ಲಿ ಭುವನಗಿರಿ ಎನ್ನುವ ಸ್ಥಳವಿದೆ. ಇಲ್ಲಿ ಸುಮಾರು 300 ಅಡಿ ಎತ್ತರವಿರುವ ಬೆಟ್ಟದ ಮೇಲೆ ಭುವನೇಶ್ವರಿಯ ಆಲಯವಿದೆ. ಭುವನೇಶ್ವರಿಗಾಗಿ ಕರ್ನಾಟಕದಲ್ಲಿರುವ
ಏಕೈಕ ಸ್ವತಂತ್ರ ಆಲಯವಿದು. ಬೀಳಗಿ ವಂಶದ ಕೊನೆಯ ಅರಸ ಬಸವೇಂದ್ರ 1692ರಲ್ಲಿ ಈ ಆಲಯವನ್ನು ಕಟ್ಟಿಸಿದ. ಆದರೆ ಕರ್ನಾಟಕದಲ್ಲಿರುವ ಅತ್ಯಂತ ಪ್ರಾಚೀನ ಭುವನೇಶ್ವರಿಯ ಆಲಯವು ಹಂಪೆಯ ವಿರೂಪಾಕ್ಷನ ದೇವಾಲಯ ಸಮುಚ್ಚಯ ದಲ್ಲಿದೆ.
ಇದನ್ನು ವಿಜಯನಗರದ ಅರಸರು ನಿರ್ಮಿಸಿದರೆಂದು ಪ್ರತೀತಿ. ವಿಜಯ ನಗರದ ಅರಸರು ಈ ಪುಟ್ಟ ಆಲಯವನ್ನು ನಿರ್ಮಿಸುವ ಮೊದಲೇ, ಸುಮಾರು 11ನೆಯ ಶತಮಾನದ ಹೊತ್ತಿಗೇ ಇಲ್ಲಿ ಭುವನೇಶ್ವರಿಯು ನೆಲೆಸಿದ್ದಳು ಎಂಬ ಹೇಳಿಕೆಯೂ ಇದೆ. ಮೈಸೂರಿನ ಅರಮನೆಯ ಒಳಗೆ, ಕೋಟೆಯ ಉತ್ತರ ದಿಕ್ಕಿನಲ್ಲಿ ಭುವನೇಶ್ವರಿಯ ಆಲಯವಿದೆ. ಇದನ್ನು ಜಯಚಾಮರಾಜ್ ಒಡೆಯರ್ ಕಟ್ಟಿಸಿದರು.
1951ರಲ್ಲಿ ಸಿದ್ಧಲಿಂಗಸ್ವಾಮಿ ಎಂಬ ಸ್ಥಪತಿಗಳು ಭುವನೇಶ್ವರಿಯ ವಿಗ್ರಹವನ್ನು ಕೆತ್ತಿದರು. ಶೃಂಗೇರಿಯ ಶಾರದೆಯ ದೇವಾಲಯದ ಹಿಂದೆ, ಸಿರಸಿಯ ದಾನಂದಿ, ಗುಬ್ಬಿ ಬಳಿಯ ನಿಟ್ಟೂರು, ಯಾದಗಿರಿಯ ಕೋಟೆಯ ಒಳಗೆ ಭುವನೇಶ್ವರಿಯ ವಿಗ್ರಹಗಳಿವೆ. ಭುವನೇಶ್ವರಿಯು ದೇವಾಲಯದ ಹಲವು ವಿಗ್ರಹಗಳಲ್ಲಿ ಒಂದು ವಿಗ್ರಹ ಮಾತ್ರವಾಗಿದೆ. ಈ ಸ್ಥಳಗಳಲ್ಲಿ
ಭುವನೇಶ್ವರಿಗಾಗಿ ಪ್ರತ್ಯೇಕ ಪೂಜೆಯೇನೂ ನಡೆಯುವುದಿಲ್ಲ.
ಕನ್ನಡ ಸಂಬಂಧ: ಭುವನೇಶ್ವರಿಗೂ ಹಾಗೂ ಕನ್ನಡಕ್ಕೆ ಏನು ಸಂಬಂಧ? ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವು ನಮಗೆ ತಿಳಿದಿಲ್ಲ. ಭುವನೇಶ್ವರಿಯು ಕನ್ನಡ ಮತ್ತು ಕನ್ನಡಿಗರ ಕುಲದೇವತೆ ಎನ್ನುವ ಎರಡು ಹೇಳಿಕೆಗಳು ಮಾತ್ರ ದೊರೆಯುತ್ತವೆ. ಮೊದಲನೆಯದು, ಹಂಪಿಯ ವಿರೂಪಾಕ್ಷನ ಆಲಯದಲ್ಲಿರುವ ಭುವನೇಶ್ವರಿಯು ಕನ್ನಡದ ಕುಲದೇವತೆ ಎನ್ನುವ ಪಾರಂಪರಿಕೆ ನಂಬಿಕೆ. ಇದಕ್ಕೆ ನಿಖರವಾದ ಆಧಾರವಿಲ್ಲ. ಎರಡನೆಯದು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸಂಬಂಧಪಟ್ಟಿರುವಂತ ಹದ್ದು.
ಹಕ್ಕಬುಕ್ಕರು ಹೊಸ ಸಾಮ್ರಾಜ್ಯವನ್ನು ಕಟ್ಟುವ ಬಯಕೆಯಿಂದ ವಿದ್ಯಾರಣ್ಯರನ್ನು ಭೇಟಿಯಾದರಂತೆ. ವಿದ್ಯಾರಣ್ಯರ ಆಶೀರ್ವಾದವು ದೊರೆಯಿತು. ಆದರೆ ಸೈನ್ಯವನ್ನು ಕಟ್ಟಲು ಅಪಾರ ಹಣ ಬೇಕಾಗುವ ಬಗ್ಗೆ ಚಿಂತೆ ಹೆಚ್ಚಿತು. ಆಗ ವಿದ್ಯಾರಣ್ಯರು
ಭುವನೇಶ್ವರಿಯನ್ನು ಪ್ರಾರ್ಥಿಸಿದರಂತೆ. ವಿದ್ಯಾರಣ್ಯರ ಪ್ರಾರ್ಥನೆಗೆ ಮನ್ನಿಸಿ ಭುವನೇಶ್ವರಿಯು ಅವರ ಮುಂದೆ ಪ್ರತ್ಯಕ್ಷ ವಾದಳಂತೆ. ವಿದ್ಯಾರಣ್ಯರ ಆಶಯದಂತೆ ಸಾಮ್ರಾಜ್ಯ ಸ್ಥಾಪಿಸಲು ಅಗತ್ಯವಾದ ಚಿನ್ನದ ನಾಣ್ಯಗಳ ಮಳೆಯನ್ನು ಮೂರೂ ಮುಕ್ಕಾಲು ಘಳಿಗೆ ಸುರಿಸಿದಳಂತೆ. ಈ ವಿವರಣೆಯು ನಮಗೆ ಗಳಗನಾಥರು ಬರೆದ ಮಾಧವ ಕರುಣಾ ವಿಲಾಸ ಎನ್ನುವ
ಕಾದಂಬರಿಯಲ್ಲಿ ಬರುವ ವಿವರಣೆ. ಈ ಪ್ರಸಂಗವು ಗಳಗನಾಥರ ಕಲ್ಪನೆ. ಇದು ವಾಸ್ತವ ಇರಲಾರದು.
ಗಳಗನಾಥರ ಬರಹವನ್ನು ಬಿಟ್ಟು ಉಳಿದ ಬೇರೆಲ್ಲೂ ಭುವನೇಶ್ವರಿಯು ಚಿನ್ನದ ನಾಣ್ಯಗಳ ಮಳೆ ಸುರಿಸಿದ ವಿವರ ದೊರೆಯುವುದಿಲ್ಲ. ಬಹುಶಃ ಈ ಕಾದಂಬರಿಯ ಪ್ರಕಟಣೆಯ ನಂತರ ಕನ್ನಡಕ್ಕೂ, ಭುವನೇಶ್ವರಿಗೂ ನಂಟು ಬೆಳೆಯಿತೆಂದು ಕಾಣುತ್ತದೆ. ಈ ನಂಟಿಗೆ ಬಲವಾದ ಅಂಟನ್ನು ಹಾಕಿದ್ದು ಕನ್ನಡದ ಕಣ್ವ ಬಿ.ಎಂ.ಶ್ರೀ ಕಂಠಯ್ಯನವರ ಬರಹ. ‘ಭುವನೇಶ್ವರಿ ದೇವಿ ರಥವನ್ನೇರಿದಳು, ದಾರಿ ಬಿಡಿ, ದಾರಿ ಬಿಡಿ, ಅಡ್ಡ ಬಾರದಿರಿ’ ಎಂಬ ಕರೆಯು, ನಿಜಕ್ಕೂ ಭುವನೇಶ್ವರಿಯು ಕನ್ನಡದ ತಾಯಿ ಎಂಬ ನಂಬಿಕೆಯನ್ನು ಹುಟ್ಟಿಸುತ್ತದೆ.
ಸ್ವಾತಂತ್ರ್ಯ ಹೋರಾಟ: ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ರಾಜಕೀಯವಾಗಿ ಅಖಂಡ ಭಾರತ ಎನ್ನುವ ಪರಿಕಲ್ಪನೆಯು ಇರಲಿಲ್ಲ. ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಸಮಗ್ರ ಭಾರತದ ರಾಜಕೀಯ ಪರಿಕಲ್ಪನೆಯು ಬಲವಾಯಿತು. ನಮ್ಮ
ಹೋರಾಟಗಾರರು ಭಾರತ ಮಾತೆ ಎಂಬ ಪರಿಕಲ್ಪನೆಯನ್ನು ಮಂಡಿಸಿದರು. ನಮ್ಮ ತಾಯಿ ಬಂಧನದಲ್ಲಿದ್ದಾಳೆ, ಆಕೆಯನ್ನು ಬಂಧಮುಕ್ತಳನ್ನಾಗಿ ಮಾಡಲು ನಾವೆಲ್ಲ ಹೋರಾಡೋಣ ಎನ್ನುವ ಭಾವನಾತ್ಮಕ ಹೇಳಿಕೆಯು ಭಾರತೀಯರಿಗೆ ಅಪ್ಯಾಮಾನ ವಾಗಿತ್ತು.
ಇದೇ ವೇಳೆಗೆ ಬಂಕಿಮ ಚಂದ್ರ ಚಟರ್ಜಿಯವರು ತಮ್ಮ ಆನಂದಮಠ ಕಾದಂಬರಿಯಲ್ಲಿ ವಂದೇಮಾತರಂ ಗೀತೆಯನ್ನು ಪ್ರಕಟಿಸಿದರು. ಈ ಗೀತೆಯು ಭಾರತೀಯರಲ್ಲಿ ಸ್ಪೂರ್ತಿ ತುಂಬಿದ್ದನ್ನು, ಇಂದಿಗೂ ತುಂಬುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಾಗಿ ಭಾರತ ಸರಕಾರವು ರವೀಂದ್ರನಾಥ ಠಾಕೂರರ ಜನಗಣಮನ ಜೊತೆಯಲ್ಲಿ ಬಂಕಿಮರ ವಂದೇಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಬೇಕಾಯಿತು.
ಬಂಕಿಮಚಂದ್ರರು ಇಡೀ ಭಾರತವನ್ನು ಭಾರತಮಾತೆ ಎಂದು ಕಲ್ಪಿಸಿಕೊಂಡದ್ದು ಗಳಗನಾಥರ ಮೇಲೆ ಪ್ರಭಾವವನ್ನು ಬೀರಿರಬೇಕು. ಹಾಗಾಗಿ ಗಳಗನಾಥರು ಕನ್ನಡಮಾತೆಯನ್ನು ಕಲ್ಪಿಸಿಕೊಂಡಿರಬೇಕು (ಜಯಭಾರತ ಜನನಿಯೇ ತನುಜಾತೆ,
ಜಯಹೇ ಕರ್ನಾಟಕ ಮಾತೆ-ಕುವೆಂಪು) ಅಂತಹ ಕನ್ನಡಮಾತೆಯನ್ನು ಭುವನೇಶ್ವರಿಯ ರೂಪದಲ್ಲಿ ಕಲ್ಪಿಸಿಕೊಂಡು, ಸೊಗಸಾದ ದೃಶ್ಯವನ್ನು ಕಟ್ಟಿಕೊಟ್ಟರು. ಭುವನೇಶ್ವರಿಯು ಕನ್ನಡದ ಕುಲದೇವತೆ ಎಂದರು. ಅದು ಕನ್ನಡಿಗರ ಮನಸ್ಸನ್ನು ಪೂರ್ತಿಯಾಗಿ ಗೆದ್ದಿತು. ಹೀಗೆ ಕನ್ನಡಮ್ಮನ ಕನಸನ್ನು ಮೊದಲು ಕಂಡವರು ಗಳಗನಾಥರು. ಆ ಪರಿಕಲ್ಪನೆಯು ಈಗ ಸೊಗಸಾಗಿ ಕನ್ನಡಿಗರಲ್ಲಿ ಬೇರುಬಿಟ್ಟಿದೆ.
ಗೊಂದಲ: ಗಳಗನಾಥರ ಕನ್ನಡ ಕುಲದೈವದ ಕಲ್ಪನೆ ನಮ್ಮ ಸಾಹಿತಿಗಳಿಗೆ, ಭಾಷಣಕಾರರಿಗೆ ಹಿಡಿಸಿತು. ಜೊತೆಗೆ ಅದರೊಡನೆಯೇ ಗೊಂದಲವೂ ಮೂಡಿತು. ಕೆಲವರು ಗಳಗನಾಥರ ಭುವನೇಶ್ವರಿಯೇ ಕನ್ನಡ ಕುಲದೇವತೆ ಎಂದರು. ಉಳಿದವರು ರಾಜರಾಜೇಶ್ವರಿಯೇ ಕನ್ನಡಮ್ಮ ಎಂದರು. ಹಳೆಯ ಮೈಸೂರಿನ ಕಡೆಯವರು ಚಾಮುಂಡೇಶ್ವರಿ ನಮ್ಮ ತಾಯಿ ಎಂದರು. ಈ ಪಟ್ಟಿಯಲ್ಲಿ ಬನಶಂಕರಿಯೂ ಹೆಸರೂ ಬಂದಿದೆ.
ಆಕೆ ಕರ್ನಾಟಕದ ಪ್ರಾಚೀನ ಶಕ್ತಿ ದೇವತೆ. ಕದಂಬರ ಕಾಲದವಳು. ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ ತಾಯಿ’ ಎಂದು ದೇವಿಯ ಒಂದು ವರ್ಣಚಿತ್ರವನ್ನು ಜನಪ್ರಿಯಗೊಳಿಸಿದೆ. ಆದರೆ ಈಕೆಯ ಲಕ್ಷಣಗಳು ಭುವನೇಶ್ವರಿಯನ್ನು ಹೋಲುವುದಿಲ್ಲ. ಹಾಗಾಗಿ ಈಕೆ ನಿಜಕ್ಕೂ ಯಾರು? ಈಕೆಯನ್ನು ಪರಿಷತ್ತು ಕಲ್ಪಿಸಿದೆಯೋ ಅಥವ ಈಕೆಯ ಅಸ್ತಿತ್ವಕ್ಕೆ ಐತಿಹಾಸಿಕ ಇಲ್ಲವೇ ಪೌರಾಣಿಕ
ಆಧಾರ ಇದೆಯೋ? ಇದನ್ನು ಪರಿಷತ್ತೇ ತಿಳಿಸಬೇಕು.
(ಈಕೆ ಹಳದಿ-ಕೆಂಪು ಕನ್ನಡ ಬಾವುಟವನ್ನು ಹಿಡಿದಿರುವಂತೆ ಚಿತ್ರಿಸಿರುವುದರಿಂದ, ಈಕೆಯು ಪರಿಷತ್ತಿನ ಸೃಷ್ಟಿಯೇ ಇರಬೇಕು. ಕಲಾವಿದರು: ಬಿ. ಕೆ.ಎಸ್. ವರ್ಮ).
ಕವಿಸಮಯವೆ? ಹಾಲು ಮತ್ತು ನೀರನ್ನು ಒಂದು ಬಟ್ಟಲಿನಲ್ಲಿ ಬೆರೆಸಿ ಇಟ್ಟರೆ, ಹಂಸವು ಹಾಲನ್ನು ನೀರಿನಿಂದ ಬೇರ್ಪಡಿಸಿ ಹಾಲನ್ನು ಮಾತ್ರ ಕುಡಿಯುತ್ತದೆ ಎಂಬುದು ಒಂದು ಕವಿಸಮಯ. ಚಾತಕ ಪಕ್ಷಿಯು ಮಳೆಹನಿಗಳನ್ನು ಮಾತ್ರ ಕುಡಿಯುತ್ತದೆ ಯಂತೆ. ಚಕೋರ ಪಕ್ಷಿಯು ಬೆಳದಿಂಗಳನ್ನು ಕುಡಿದು ಬದುಕುತ್ತದೆಯಂತೆ. ಸ್ವಾತಿ ಮಳೆಯ ಹನಿಗಳು ಮುತ್ತಿನ ಸಿಂಪಿನ ಬಾಯಿಯಲ್ಲಿ ಬಿದ್ದಾಗ ಅದು ಮುತ್ತಾಗಿ ಪರಿಣಮಿಸುವುದಂತೆ – ಹೀಗೆಲ್ಲ ಆಗುತ್ತದೆ ಎಂದು ಕವಿಗಳೇ ಮಾಡಿಕೊಂಡಿರುವ
ಒಂದು ಒಪ್ಪಂದ! ಇದನ್ನು ಕವಿಸಮಯ ಎನ್ನುವರು.
ರಾಷ್ಟ್ರಕವಿ ಕುವೆಂಪು ಅವರು ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ!‘ ಎಂದು ಹಾಡಿದ್ದಾರೆ. ಬಂಕಿಮ ಚಂದ್ರರ ಭಾರತ ಮಾತೆಯ ಸುಪುತ್ರಿ ನಮ್ಮ ಕನ್ನಡ ತಾಯಿ ಎಂದು ಕುವೆಂಪು ಅವರು ಪರಿಗಣಿಸಿದುದು ಒಂದು ರೀತಿಯ
ಕವಿಸಮಯವೇ! ಈ ಗೀತೆಯನ್ನು ಬರೆಯುವಾಗ ಅವರ ಮನಸ್ಸಿನಲ್ಲಿ ಭುವನೇಶ್ವರಿ ಇದ್ದಳೆ, ರಾಜರಾಜೇಶ್ವರಿ ಇದ್ದಳೆ? ಯಾರಿದ್ದರು? ಅದನ್ನು ತಿಳಿಯುವುದು ಇಂದು ಸಾಧ್ಯವಿಲ್ಲ.
ಗಳಗನಾಥ ಹಾಗೂ ಕುವೆಂಪು ಅವರ ನಂತರ ಕನ್ನಡ ಕವಿಗಳೆಲ್ಲ ಕನ್ನಡ ತಾಯಿಯ ಪರಿಕಲ್ಪನೆಯನ್ನು ಸ್ವಾಗತಿಸಿ, ಆಕೆಯ ಬಗ್ಗೆ ಸಾಕಷ್ಟು ಬರೆದರು. ಹಾಗಾಗಿ ನನಗನಿಸುವಂತೆ, ಕನ್ನಡದ ಕುಲದೇವತೆಯು ಸ್ವಾತಂತ್ರೋತ್ತರ ಕನ್ನಡ ಕವಿಗಳ ಒಂದು ಕವಿಸಮಯ ಮಾತ್ರ! ಏಕೆಂದರೆ ಸ್ವಾತಂತ್ರ್ಯ ಪೂರ್ವ ಕರ್ನಾಟಕದ ಕವಿಗಳು ಕನ್ನಡ ಕುಲದೇವತೆಯ ಬಗ್ಗೆ ಬರೆದಿರುವ
ಮಾಹಿತಿ ನನಗೆ ತಿಳಿದಿಲ್ಲ.
ಸಾರಾಂಶ: ದೇವೀ ಭಾಗವತದ ಅನ್ವಯ ಭುವನೇಶ್ವರಿಯು ಮೂರು ಲೋಕಗಳ ಅಧಿದೇವತೆ. ಇಂತಹವಳು ಕನ್ನಡಿಗರಿಗೆ ಮಾತ್ರ ಹೇಗೆಸೀಮಿತವಾದಳು? ಭುವನೇಶ್ವರಿಯ ಆವಾಸಸ್ಥಾನ ‘ಮಣಿದ್ವೀಪ‘ ಎನ್ನುತ್ತದೆ ದೇವೀ ಭಾಗವತ. ಈ ಮಣಿದ್ವೀಪವು
ಕರ್ನಾಟಕದಲ್ಲಿದೆಯೆ? ಎಲ್ಲಿದೆ? ಅಥವ ಇದು ಪೂರ್ಣ ಕಲ್ಪನೆಯೆ?
ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿಯದು ಎನ್ನಲಾದ ಒಂದು ಆಲಯವಿದೆ. ಇಲ್ಲಿರುವ ದೇವಿಯನ್ನು ಪಾರಂಪರಿಕವಾಗಿ ‘ಭುವನೇಶ್ವರಿ ಎಂದು ಕರೆಯಲಾಗಿದೆ. ಈಕೆಯು ಭುವನೇಶ್ವರಿಯೇ ಹೌದು ಎನ್ನುವುದಕ್ಕೆ ಯಾವುದೇ
ಆಧಾರವಿಲ್ಲ. ವಾಸ್ತವದಲ್ಲಿ ಈಕೆಯು ನಿಜವಾಗಿಯೂ ದಶಾಮಹಾವಿದ್ಯೆಯಲ್ಲಿ ಬರುವ ಭುವನೇಶ್ವರಿಯೇ ಎಂಬ ಅನುಮಾನ ನನಗಿದೆ. ಈ ಆಲಯವು ಹೊಯ್ಸಳರ ಶಿಲ್ಪಶೈಲಿಯಲ್ಲಿರುವುದರಿಂದ, ಆಲಯದ ಮಹಾದ್ವಾರದ ಬಳಿ ಇರುವ ರಚನೆಯನ್ನು ಶಿಲ್ಪ ತಾಂತ್ರಿಕ ಪರಿಭಾಷೆಯಲ್ಲಿ ‘ಭುವನೇಶ್ವರಿ ಎಂದು ಕರೆಯುತ್ತಾರೆ.
ಹಾಗಾಗಿ, ಜನಸಾಮಾನ್ಯರು ಒಳಗಿರುವ ದೇವಿಯನ್ನೂ ಭುವನೇಶ್ವರಿ ಎಂದು ಕರೆದಿರಬಹುದೆ ಎಂಬ ಅನುಮಾನವೂ ನನಗಿದೆ. ಇದರ ಜೊತೆಗೆ ವಿಜಯನಗರದ ಇತರ ಶಿಲ್ಪಗಳಲ್ಲಿ ಭುವನೇಶ್ವರಿಯ ವಿಗ್ರಹ ದೊರೆಯುವುದಿಲ್ಲ. ವಿಜಯನಗರ ಸ್ಥಾಪನೆಗೆ ಭುವನೇಶ್ವರಿಯು ಕಾರಣವಾಗಿದ್ದರೆ, ಆಕೆಗೆ ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಮುಖ ಸ್ಥಾನ ಇರಬೇಕಿತ್ತಲ್ಲವೆ? (ಭುವನೇಶ್ವರಿಯ ಸ್ಥಾನದಲ್ಲಿ ಪಂಪಾ ವಿರೂಪಾಕ್ಷರಿದ್ದಾರೆ!)
ಪ್ರತಿಯೊಂದು ಊರಿನಲ್ಲೂ ಆಕೆಗೆ ಅಸ್ತಿತ್ವ ಇರಬೇಕಿತ್ತಲ್ಲವೆ? ಆಕೆಯ ಬಗ್ಗೆ ಶಾಸನಗಳಲ್ಲಿ, ಸಾಹಿತ್ಯ ಕೃತಿಗಳಲ್ಲಿ ಪ್ರಸ್ತಾಪವಾಗ ಬೇಕಿತ್ತಲ್ಲವೆ? ಹಾಗೆ ಆಗಿರುವುದರ ಬಗ್ಗೆ ನನಗೆ ಮಾಹಿತಿಯಿಲ್ಲ.ಭುವನೇಶ್ವರಿಯು ಮೂಲತಃ ದಶಮಹಾವಿದ್ಯೆಯ, ಅಂದರೆ ತಾಂತ್ರಿಕ ಲೋಕದ ದೇವತೆ. ಕರ್ನಾಟಕವು ಆಕೆಯ ಜಾಗೃತ ಸ್ಥಾನವಾಗಿದ್ದಲ್ಲಿ, ಆಕೆಯ ಆರಾಧಕರು ಇಲ್ಲಿರಬೇಕಿತ್ತಲ್ಲವೆ? ಹಾಗೆ ಇದ್ದರು ಎನ್ನುವುದಕ್ಕೆ ಯಾವುದಾದರೂ ಆಧಾರವಿದೆಯೆ?
ಭುವನೇಶ್ವರಿಯು ಕನ್ನಡದವಳೇ ಆಗಿದ್ದರೆ, ಇಡೀ ಕರ್ನಾಟಕದ ತುಂಬಾ ಆಕೆಯ ಆಲಯಗಳಿರಬೇಕಿತ್ತು. ಆದರೆ ವಾಸ್ತವತೆ ಭಿನ್ನವಾಗಿದೆ. ನಮ್ಮ ನೆರೆಯ ತಮಿಳುನಾಡಿನಲ್ಲಿ ಹಾಗೂ ಕೇರಳದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಭುವನೇಶ್ವರಿ ಆಲಯಗಳಿವೆ!
ಅನುಮಾನಗಳು: ಕನ್ನಡಕ್ಕೆ ಕುಲದೇವತೆ ಎನ್ನುವವಳು ಇರುವಳೆ? ಇರುವುದಾದರೆ ಆಕೆ ಯಾರು? ಎಲ್ಲಿರುವಳು? ಯಾವಾಗ ಆಕೆ ಕನ್ನಡ ಕುಲದೇವತೆ ಯೆನಿಸಿಕೊಂಡಳು? ಇದಕ್ಕೆ ಇರುವ ಆಧಾರಗಳು ಯಾವುವು? ಈ ಬಗ್ಗೆ ನಮಗೆ ತಿಳಿಸುವವರು ಯಾರು?