Friday, 20th September 2024

Rahul Gandhi : ರಾಹುಲ್ ಗಾಂಧಿಯ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಇನಾಮು; ವಿವಾದ ಸೃಷ್ಟಿಸಿದ ಶಿವಸೇನೆ ಶಾಸಕನ ಹೇಳಿಕೆ

Rahul Gandhi

ಬೆಂಗಳೂರು : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಹೇಳಿಕೆ ನಿಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅದು ಸೋಮವಾರ ವಿವಾದಕ್ಕೆ ಕಾರಣವಾಗಿದೆ. ಮೀಸಲಾತಿ ವ್ಯವಸ್ಥೆ ಕುರಿತ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಟೀಕಿಸುವಾಗ ಗಾಯಕ್ವಾಡ್ ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಹೇಳಲಾಗಿದೆ.

ವಿದೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ಕೊನೆಗೊಳಿಸಬೇಕು ಎಂದು ಹೇಳಿಕೆ ನೀಡಿದ್ದಾರೆ ಎಂಬುದಾಗಿ ಗಾಯಕ್ವಾಡ್ ಹೇಳಿದ್ದಾರೆ. ಇದು ಕಾಂಗ್ರೆಸ್‌ನ ನೈಜ ಮುಖವನ್ನು ತೋರಿಸಿದೆ. ಇದು ಮೀಸಲಾತಿಯನ್ನು ಒಳಗೊಳಗೆ ವಿರೋಧಿಸುವ ಮನಸ್ಥಿತಿಯನ್ನು ತೋರಿಸುತ್ತದೆ. ಹೀಗಾಗಿ ರಾಹುಲ್ ಗಾಂಧಿಯ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಗಾಯಕ್ವಾಡ್ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ರಾಹುಲ್ ಗಾಂಧಿ ಅವರ ಹೇಳಿಕೆಯನ್ನು “ಜನರಿಗೆ ಮಾಡುವ ಅತಿದೊಡ್ಡ ದ್ರೋಹ” ಎಂದು ಕರೆದ ಶಿವಸೇನೆ ಶಾಸಕ, “ಮರಾಠರು, ಧಂಗರ್‌ಗಳು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿವೆ. ಅದಕ್ಕೂ ಮೊದಲು ರಾಹುಲ್ ಗಾಂಧಿ ಅದರ ಪ್ರಯೋಜನಗಳನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಸಂವಿಧಾನ ಪ್ರತಿಯನ್ನು ತೋರಿಸಿ, ಬಿಜೆಪಿ ಇದನ್ನು ಬದಲಾಯಿಸುತ್ತದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ದೇಶವನ್ನು 400 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಷಡ್ಯಂತ್ರ ಮಾಡಿದೆ. ಮಹಾರಾಷ್ಟ್ರದಲ್ಲಿ ಮೀಸಲಾತಿಯ ಬೇಡಿಕೆಗಳು ಹೆಚ್ಚುತ್ತಿವೆ. ಅಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ಮೀಸಲಾತಿಯನ್ನು ಕೊನೆಗೊಳಿಸುವ ಹೇಳಿಕೆ ನೀಡಿದ್ದಾರೆ” ಎಂದು ಅವರು ಹೇಳಿದರು.

ಗಾಯಕ್ವಾಡ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಮಹಾರಾಷ್ಟ್ರದ ಹಲವಾರು ಕಾಂಗ್ರೆಸ್ ನಾಯಕರು ಗಾಯಕ್ವಾಡ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಹೇಳಿಕೆ ನೀಡಿ, ಶಿವಸೇನಾ ಶಾಸಕರ ಹೇಳಿಕೆ “ಅಸಂಬದ್ಧ”. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬೇಡಿಕೆ, ವಿದೇಶಕ್ಕೆ ತೆರಳುವ ಅಗತ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ

ಇಂತಹ ಹೇಳಿಕೆ ನೀಡುವುದು ಕಾನೂನಿಗೆ ವಿರುದ್ಧ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಸಾರ್ವಜನಿಕರು ನೀವು ಇರಬೇಕಾದ ಜಾಗ ತೋರಿಸುತ್ತಾರೆ” ಎಂದು ಅವರು ಪಿಟಿಐಗೆ ತಿಳಿಸಿದರು.

ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ, “ಸಂಜಯ್ ಗಾಯಕ್ವಾಡ್ ಸಮಾಜ ಮತ್ತು ರಾಜಕೀಯದಲ್ಲಿ ಬದುಕಲು ಅರ್ಹರಲ್ಲ. ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ಗಾಯಕ್ವಾಡ್ ವಿರುದ್ಧ ನರಹತ್ಯೆಯ ಆರೋಪಗಳನ್ನು ಹೊರಿಸುತ್ತಾರೆಯೇ ಎಂದು ನಾವು ನೋಡಲು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಎಂಎಲ್ಸಿ ಭಾಯ್ ಜಗತಾಪ್ ಕೂಡ ಈ ಹೇಳಿಕೆ ಖಂಡಿಸಿದ್ದು, “ಈ ಜನರು ರಾಜ್ಯದ ರಾಜಕೀಯವನ್ನು ಹಾಳು ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಅಂತರ ಕಾಯ್ದುಕೊಂಡ ಬಿಜೆಪಿ

ಗಾಯಕ್ವಾಡ್ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ ಅವರು ಶಿವಸೇನೆ ಶಾಸಕರ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮೀಸಲಾತಿಯು ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅದನ್ನು ವಿರೋಧಿಸಿದ್ದರು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಮೀಸಲಾತಿ ನೀಡುವುದು ಎಂದರೆ ಮೂರ್ಖರನ್ನು ಬೆಂಬಲಿಸುವುದು ಎಂದು ರಾಜೀವ್ ಗಾಂಧಿ ಹೇಳಿದ್ದರು. ಈಗ ರಾಹುಲ್ ಗಾಂಧಿ ಮೀಸಲಾತಿಯನ್ನು ಕೊನೆಗೊಳಿಸುವುದಾಗಿ ಹೇಳುತ್ತಾರೆ ಎಂದು ಅವರು ಹೇಳಿದ್ದಾರೆ.