Friday, 22nd November 2024

Pitru Paksha 2024: ಪಿತೃ ಪಕ್ಷ ಆಚರಣೆಯ ಹಿನ್ನೆಲೆ ಏನು? ಏನಿದರ ಮಹತ್ವ?

Pitru Paksha 2024

ಹಿಂದೂ ಧರ್ಮದಲ್ಲಿ (hindu dharma) ಜನಿಸಿದ ಪ್ರತಿಯೊಬ್ಬರಿಗೂ ಐದು ಋಣಗಳಿವೆ. ಈ ಐದು ಋಣಗಳಿಂದ (Five debt) ಮುಕ್ತಿ ಪಡೆದರೆ ಮಾತ್ರ ಮೋಕ್ಷ (Salvation) ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಇದೆ. ಈ ಐದು ಋಣಗಳಲ್ಲಿ ಒಂದಾದ ಪಿತೃಋಣವನ್ನು ತೀರಿಸುವ ಸಲುವಾಗಿ ಪ್ರತಿ ವರ್ಷ ಶ್ರಾದ್ಧವನ್ನು ನಡೆಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಿತೃ ಪಕ್ಷದಲ್ಲಿ (Pitru Paksha 2024) ಮಾಡುವುದು ವಾಡಿಕೆ.

ಪುರಾಣಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ದೇವಋಣ, ಋಷಿಋಣ, ಪಿತೃಋಣ, ಭೂತಋಣ ಮತ್ತು ಸಮಾಜಋಣವಿರುತ್ತದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸುವ ಸಲುವಾಗಿ ಮಾಡುವ ಪಕ್ರಿಯೆಯನ್ನು ಶ್ರಾದ್ಧ ಅಥವಾ ತಿಥಿ ಎನ್ನಲಾಗುತ್ತದೆ. ನಮ್ಮ ಜನ್ಮಕ್ಕೆ ಕಾರಣರಾದ ತಂದೆ, ತಾಯಿ ಮತ್ತು ವಂಶದವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಶ್ರಾದ್ಧ ಎನ್ನಲಾಗುತ್ತದೆ. ಈ ಶ್ರಾದ್ಧ ಕಾರ್ಯವನ್ನು ಮರಣ ಹೊಂದಿದ ತಿಥಿಯ ದಿನದಂದು ಮಾಡುವುದು ವಾಡಿಕೆ. ಆದರೆ ಪೋಷಕರು, ವಂಶಜರು ದೈವಾಧೀನರಾದ ತಿಥಿ ಸರಿಯಾಗಿ ಗೊತ್ತಿಲ್ಲದಿದ್ದರೆ ಅದನ್ನು ಪಿತೃ ಪಕ್ಷದಲ್ಲಿ ಮಾಡಬಹುದು.

Pitru Paksha 2024

ಪಿತೃ ಪಕ್ಷ ಯಾವುದು?

ಭಾದ್ರಪದ ಮಾಸದ ಕೃಷ್ಣಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ಪಿತೃಪಕ್ಷ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ಗಣೇಶ ಹಬ್ಬದ ಅನಂತರ ಅಂದರೆ ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ. ಈ ಬಾರಿ ಸೆಪ್ಟೆಂಬರ್ 17ರಂದು ಪ್ರಾರಂಭಗೊಂಡು ಅಕ್ಟೋಬರ್ 2ರಂದು ಅಂದರೆ ಮಹಾಲಯ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದು ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಮಂಗಳಕರ ಅವಧಿ ಎಂದು ಪರಿಗಣಿಸಲ್ಪಟ್ಟಿದೆ.

ಪಿತೃ ಪಕ್ಷದ ಹದಿನೈದು ದಿನಗಳಲ್ಲಿ ತಮ್ಮ ವಂಶದ ಎಲ್ಲ ಪಿತೃಗಳು, ಆಪ್ತರು, ಬಂಧು, ಮಿತ್ರರು, ಸಾಕುಪ್ರಾಣಿಗಳಿಗೂ ಸಹಾ ತರ್ಪಣ ನೀಡುವ ಮೂಲಕ ಶ್ರಾದ್ಧವನ್ನು ಮಾಡಬಹುದು. ಹದಿನೈದು ದಿನಗಳ ಕಾಲ ಪಿತೃಕಾರ್ಯವನ್ನು ಮಾಡಲು ಸಾಧ್ಯವಾಗದೇ ಇದ್ದರೆ ಪಿತೃಪಕ್ಷದ ಕಡೆಯ ದಿನವಾದ ಅಮಾವಾಸ್ಯೆಯಂದು ಮಾಡುವುದು ಅತ್ಯಂತ ಹೆಚ್ಚು ಯೋಗ್ಯವಾದ ದಿನ ಎಂದು ಪರಿಗಣಿಸಲಾಗಿದೆ.

ಪಿತೃ ಪಕ್ಷದ ಪ್ರಮುಖ ದಿನಗಳು

ಈ ವರ್ಷದ ಪಿತೃ ಪಕ್ಷದಲ್ಲಿ ಸೆಪ್ಟೆಂಬರ್ 17 ಮಂಗಳವಾರ ಪೂರ್ಣಿಮಾ ಶ್ರಾದ್ಧ, 18 ಬುಧವಾರ ಪ್ರತಿಪದ ಶ್ರಾದ್ಧ, 19 ಗುರುವಾರ ದ್ವಿತೀಯ ಶ್ರಾದ್ಧ, 20 ಶುಕ್ರವಾರ ತೃತೀಯಾ ಶ್ರಾದ್ಧ, 21 ಶನಿವಾರ ಚತುರ್ಥಿ ಶ್ರಾದ್ಧ, ಮಹಾ ಭರಣಿ, 22 ಭಾನುವಾರ ಪಂಚಮಿ ಶ್ರಾದ್ಧ, 23 ಸೋಮವಾರ ಷಷ್ಠಿ ಶ್ರಾದ್ಧ, ಸಪ್ತಮಿ ಶ್ರಾದ್ಧ, 24 ಮಂಗಳವಾರ ಅಷ್ಟಮಿ ಶ್ರಾದ್ಧ, 25 ಬುಧವಾರ ನವಮಿ ಶ್ರಾದ್ಧ, 26 ಗುರುವಾರ ದಶಮಿ ಶ್ರಾದ್ಧ, 27 ಶುಕ್ರವಾರ ಏಕಾದಶಿ ಶ್ರಾದ್ಧ, 29 ಭಾನುವಾರ ದ್ವಾದಶಿ ಶ್ರಾದ್ಧ, ಮಾಘ ಶ್ರಾದ್ಧ, 30 ಸೋಮವಾರ ತ್ರಯೋದಶಿ ಶ್ರಾದ್ಧ, ಅಕ್ಟೋಬರ್ 1 ಮಂಗಳವಾರ ಚತುರ್ದಶಿ ಶ್ರಾದ್ಧ, ಅಕ್ಟೋಬರ್ 2 ಬುಧವಾರ: ಸರ್ವ ಪಿತೃ ಅಮವಾಸ್ಯೆ ಇರಲಿದೆ.

Pitru Paksha 2024

ಪಿತೃಪಕ್ಷದ ಮಹತ್ವ ಏನು?

ಪಿತೃ ಪಕ್ಷವು ಶ್ರಾದ್ಧ ಕಾರ್ಯಗಳನ್ನು ಮಾಡಲು ಅತ್ಯಂತ ಪವಿತ್ರ ಸಮಯವಾಗಿದೆ. ಈ ಸಂದಭದಲ್ಲಿ ಮರಣ ಹೊಂದಿದ ಪೂರ್ವಜರಿಗೆ ಆಹಾರ, ನೀರು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಈ ಆಚರಣೆಗಳು ಅಗಲಿದವರಿಗೆ ಶಾಂತಿಯನ್ನು ನೀಡುತ್ತವೆ ಮತ್ತು ಅವರನ್ನು ಲೌಕಿಕ ಬಾಂಧವ್ಯಗಳಿಂದ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಸಾಂಪ್ರದಾಯಿಕವಾಗಿ ಮನೆಯ ಹಿರಿಯ ಮಗ ಇದರ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರನ್ನು ಗೌರವಿಸಲು ನಡೆಸುವ ವಿವಿಧ ಸಂಪ್ರದಾಯದಲ್ಲಿ ಪಿಂಡ ದಾನ, ತರ್ಪಣ, ಬಡವರಿಗೆ ಆಹಾರ, ಅಗತ್ಯ ವಸ್ತುಗಳ ದಾನ ನೀಡಲಾಗುತ್ತದೆ.

Pitru Paksha 2024

ಇದರ ಹಿನ್ನೆಲೆ ಏನು?

ಪಿತೃ ಪಕ್ಷಕ್ಕೆ ಸಂಬಂಧಿಸಿ ಒಂದು ಪೌರಾಣಿಕ ಕಥೆ ಇದೆ. ಇದರ ಪ್ರಕಾರ ಪಿತೃಪಕ್ಷದ ಆರಂಭದಲ್ಲಿ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿ ಬಳಿಕ ಮುಂದಿನ ರಾಶಿಗೆ ಹೋಗುವ ಮಧ್ಯೆ ಇರುವ ದಿನಗಳಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ವಾಸಿಸುತ್ತವೆ.

ದಾನ ವೀರ ಎಂದೇ ಖ್ಯಾತಿ ಪಡೆದಿರುವ ಕರ್ಣನನ್ನು ಮರಣದ ಬಳಿಕ ದೇವದೂತರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುತ್ತಾರೆ. ದಾರಿಯಲ್ಲಿ ಆತನಿಗೆ ಹಸಿವಾಗುತ್ತದೆ. ಸುತ್ತಲೂ ನೋಡಿದರೆ ಕೇವಲ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳು ಮಾತ್ರ ಇರುತ್ತದೆ. ಅವನಿಗೆ ತಿನ್ನಲು ಏನೂ ಸಿಗುವುದಿಲ್ಲ. ಹೀಗಾಗಲು ಕಾರಣ ಏನು ಎಂದು ಆತ ದೇವದೂತರಲ್ಲಿ ಪ್ರಶ್ನೆ ಮಾಡುತ್ತಾನೆ. ಆಗ ಅವರು, ನೀನು ನಿನ್ನ ಜೀವಿತಾವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳನ್ನು ದಾನ ಮಾಡಿದ್ದರೂ ಪೂರ್ವಜರಿಗೆ ಶ್ರಾದ್ಧ ಮಾಡದೇ ಇರುವುದರಿಂದ ಅವರಿಗೆ ಯಾವುದೇ ಆಹಾರ ಸಿಗದ ಕಾರಣ ನಿನಗೆ ಇವತ್ತು ಈ ಪರಿಸ್ಥಿತಿಯಾಗಿದೆ ಎನ್ನುತ್ತಾರೆ. ಆಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ.

Unique Tradition: ಇಲ್ಲಿನ ಗಂಡಸರಿಗೆ ಎರಡು ಮದುವೆ ಕಡ್ಡಾಯ; ಇದರ ಹಿಂದಿದೆ ವಿಚಿತ್ರ ಕಾರಣ!

ಹೀಗಾಗಿ ತಮ್ಮ ಮೂರು ತಲೆಮಾರಿನ ಪೂರ್ವಜರಿಗೆ ಶ್ರದ್ಧೆಯಿಂದೆ ಶ್ರಾದ್ಧ ಮಾಡುವ ಮೂಲಕ ಅವರಿಗೆ ಇಷ್ಟವಾದ ಭೋಜನವನ್ನು ಹಾಕಿಸಿ ಋಣವನ್ನು ತೀರಿಸುವ ಸಂಪ್ರದಾಯ ಪಿತೃಪಕ್ಷದಲ್ಲಿ ಆರಂಭವಾಯಿತು ಎನ್ನುವ ನಂಬಿಕೆ ಇದೆ.