Thursday, 19th September 2024

R Ashok: ಕೋಮುಗಲಭೆ ಪ್ರಕರಣಗಳನ್ನು ಎನ್‌ಐಎ ತನಿಖೆಗೆ ವಹಿಸಿ: ಆರ್‌. ಅಶೋಕ್‌ ಆಗ್ರಹ

R Ashok

ಬೆಂಗಳೂರು: ನಾಗಮಂಗಲದ ಕೋಮುಗಲಭೆ (Mandya Violence), ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಿಸಿದ ಘಟನೆ ಹಾಗೂ ಮಂಗಳೂರಿನ ಕೋಮುಗಲಭೆ ಪ್ರಕರಣವನ್ನು ಎನ್‌ಐಎ (NIA) ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok), ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ಮುಸ್ಲಿಮರು ಪೆಟ್ರೋಲ್‌ ಬಾಂಬ್‌ ಎಲ್ಲಿಂದ ತಂದಿದ್ದಾರೆ, ಅದು ಮಸೀದಿಗಳಿಂದ ಬಂದಿದೆಯೇ ಎಂಬುದೂ ಸೇರಿದಂತೆ ಎಲ್ಲ ಸಂಗತಿಗಳನ್ನು ತನಿಖೆ ಮಾಡಬೇಕಿದೆ. ಇದಕ್ಕಾಗಿ ಈ ಎಲ್ಲ ಪ್ರಕರಣಗಳನ್ನು ಎನ್‌ಐಎ ಗೆ ವಹಿಸಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | IND vs BAN: ರದ್ದಾಗುವ ಭೀತಿಯಲ್ಲಿ ಭಾರತ-ಬಾಂಗ್ಲಾ ನಡುವಣ ಸರಣಿ; ಎಚ್ಚರಿಕೆ ನೀಡಿದ ಸಂಘಟನೆ

ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿ

ನಾಗಮಂಗಲದ ಕೋಮುಗಲಭೆ ಪ್ರಕರಣದಲ್ಲಿ ಮೊದಲು ಹಿಂದೂಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ಇದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿ. ಇದೇ ರೀತಿ ಮಂಗಳೂರಿನಲ್ಲೂ ಆಗಿದೆ. ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಿಡಿದು ಓಡಾಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಸಂಘಟನೆಗಳಿಗೆ ಹಾಗೂ ಭಯೋತ್ಪಾದಕರಿಗೆ ಯಾವುದೇ ಭಯವಿಲ್ಲ. ನಮ್ಮನ್ನು ಕಾಂಗ್ರೆಸ್‌ ಬೆಂಬಲಿಸುತ್ತದೆ ಎಂಬ ಧೈರ್ಯದಿಂದ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶ ವಿರೋಧಿ ಶಕ್ತಿಗಳ ಜತೆ ಟೀ ಪಾರ್ಟಿ

ರಾಹುಲ್‌ ಗಾಂಧಿ ವಿದೇಶಕ್ಕೆ ಹೋಗಿ ದೇಶ ವಿರೋಧಿ ಶಕ್ತಿಗಳ ಜತೆ ಟೀ ಪಾರ್ಟಿ ಮಾಡುತ್ತಿದ್ದಾರೆ. ದೇಶ ವಿಭಜನೆ ಮಾಡಿದ ಕಾಂಗ್ರೆಸ್‌, ಈಗ ಮತ್ತೆ ದೇಶ ವಿರೋಧಿ ಶಕ್ತಿಗಳು ತಲೆ ಎತ್ತಲು ಸಹಕಾರ ನೀಡುತ್ತಿದೆ. ಪ್ರಗತಿಪರರ ಮುಖವಾಡ ಹಾಕಿಕೊಂಡ ಸಾಹಿತಿಗಳು ಹಾಗೂ ನಗರ ನಕ್ಸಲರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಇವರ‍್ಯಾರೂ ಈ ಘಟನೆಗಳನ್ನು ಖಂಡಿಸುತ್ತಿಲ್ಲ.‌ ಪ್ರತಿ ದಿನ ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಬಂಧನ ಏಕೆ?

ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಾಗ ಈ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಆದರೆ ಶಾಸಕ ಮುನಿರತ್ನ ವಿಚಾರದಲ್ಲಿ ತಕ್ಷಣ ಬಂಧಿಸಲಾಗಿದೆ. ಶಾಸಕರು ನಿಂದಿಸಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ಫೋರೆನ್ಸಿಕ್‌ ಲ್ಯಾಬ್‌ಗೆ ಧ್ವನಿಮುದ್ರಣ ಕಳುಹಿಸದೆ ಎಲ್ಲ ತೀರ್ಮಾನ ಮಾಡುವುದಾದರೆ ಆ ಲ್ಯಾಬ್‌ಗಳನ್ನು ಮೊದಲು ಮುಚ್ಚಿಸಲಿ. ಶಾಸಕರ ವಿವರಣೆ ಕೂಡ ಕೇಳದೆ ಕೂಡಲೇ ಕ್ರಮ ವಹಿಸಲಾಗಿದೆ. ಕಾನೂನು ಪ್ರಕಾರ ಸರ್ಕಾರ ನಡೆದುಕೊಳ್ಳದೆ ದ್ವೇಷದ ರಾಜಕಾರಣ ಮಾಡಿದೆ ಎಂದು ದೂರಿದರು.

ನಾಗಮಂಗಲದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವುದರ ಕುರಿತು ಬಿಜೆಪಿ ಸತ್ಯಶೋಧನಾ ಸಮಿತಿ ಪರಿಶೀಲನೆ ಮಾಡಲಿದೆ. ಅದು ನಿಜವಾಗಿದ್ದರೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Job Guide: 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ NTPC; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಅರವಿಂದ ಕೇಜ್ರಿವಾಲ್‌ ನಾಟಕದ ಕಂಪನಿ ನಡೆಸುತ್ತಿದ್ದಾರೆ. ಇವರು ಅಪರಾಧಿ ಎಂದು ಸಾಬೀತಾಗುವ ಮೊದಲೇ ರಾಜೀನಾಮೆ ಕೊಡುವ ನಾಟಕವಾಡುತ್ತಿದ್ದಾರೆ. ಅಧಿಕಾರದ ದುರಾಸೆಗಾಗಿ ಅವರು ರಾಜಕೀಯಕ್ಕೆ ಬಂದಿದ್ದಾರೆ ಎಂದು ಅರೋಪಿಸಿದರು.