Saturday, 23rd November 2024

Supriya Desai : ‘ಕರ್ನಾಟಕ ಕಲಾಶ್ರೀ’ ಸುಪ್ರಿಯಾ ದೇಸಾಯಿ ಅವರಿಗೆ ಅಮೆರಿಕದ ಮೊರೀಸ್ವಿಲ್ ಮೇಯರ್‌ರಿಂದ ಸನ್ಮಾನ

Supriya Desai
ವರದಿ: ಬೆಂಕಿ ಬಸಣ್ಣ , ನ್ಯೂಯಾರ್ಕ್

ಅಮೆರಿಕಾದ ಉತ್ತರ ಕ್ಯಾರೋಲಿನಾ ರಾಜ್ಯದ ಮೊರೀಸ್ವಿಲ್ ನಗರದ ಮೇಯರ್ ಟಿ.ಜೆ. ಕಾಲಿ, ಇದೇ ಸೆಪ್ಟೆಂಬರ್ 7ರಂದು ಕರ್ನಾಟಕ ಕಲಾಶ್ರೀ, ನೃತ್ಯಗುರು, ಕ್ರಿಕೆಟ್ ಪೋಷಕಿ, ಸಮಾಜ ಸೇವಕಿ ಸುಪ್ರಿಯಾ ದೇಸಾಯಿ (Supriya Desai) ಅವರಿಗೆ ಮೂರು ದಶಕಗಳ ಕಲೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಮಾನ್ಯತಾ ಪತ್ರ (Proclamation) ನೀಡಿ ಸನ್ಮಾನಿಸಿದರು .

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು 33 ವರ್ಷಗಳ ಹಿಂದೆ ಉತ್ತರ ಕ್ಯಾರೋಲಿನಾದ ರಿಸರ್ಚ್ ಟ್ರೈ ಆಂಗಲ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಅಲ್ಲಿ ಅವರು ಅಪಾರ ಸಾಧನೆಗಳನ್ನು ಮತ್ತು ಸಮಾಜ ಸೇವೆಯನ್ನು ಮಾಡಿದ್ದಾರೆ. ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗುರು ಸುಪ್ರಿಯಾ ದೇಸಾಯಿಯವರು 1993ರಲ್ಲಿ ತಮ್ಮ ನೃತ್ಯಶಾಲೆ ‘ಪಾಯಲ್ ಡಾನ್ಸ್ ಅಕಾಡೆಮಿ’ ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಇವರಿಗೆ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇವರು ಅತ್ಯುತ್ತಮ ನಾಯಕಿ ಮತ್ತು ಬೇರೆಯವರ ಸಹಾಯಕ್ಕೆ ಸದಾ ಸಿದ್ದ. ಉತ್ತರ ಕ್ಯಾರೋಲಿನಾ ರಾಜ್ಯದ ‘ಸಂಪಿಗೆ’ ಕನ್ನಡ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ್ದು, ಪ್ರಥಮ ಅಧ್ಯಕ್ಷೆಯಾಗಿ ಕನ್ನಡ ಸೇವೆಯನ್ನು ಮಾಡಿದ್ದಾರೆ.

ಅಕ್ಕ ಸಂಸ್ಥಾಪಕ ಸದಸ್ಯರು

ಕನ್ನಡ ಸೇವೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಗಿಟ್ಟಿರುವ ಇವರು ಪ್ರತಿಷ್ಠಿತ ‘ ಅಕ್ಕ ‘ (ಅಮೆರಿಕನ್‌ ಕನ್ನಡ ಸಂಘಟನೆಗಳ ಕೂಟ) ಸಂಸ್ಥೆಯ ಸಂಸ್ಥಾಪಕ ಸದಸ್ಯರು ಹಾಗೂ ಮೊದಲ ಖಜಾಂಚಿ. ಅನೇಕ ಅಕ್ಕ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜನೆಯ ವೇಳೆ ವಿವಿಧ ಕಮಿಟಿಗಳ ನಾಯಕತ್ವ ವಹಿಸಿದ್ದಾರೆ .

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕ್ರಿಕೆಟ್ ಪ್ರಚಾರ ಮಾಡುವಲ್ಲಿ, ಬರಹಗಾರರಾಗಿ ಮತ್ತು ಕ್ರೀಡಾ ವಕ್ತಾರರಾಗಿ, ಪಾತ್ರ ವಹಿಸಿದ್ದಾರೆ. ಮೊರೀಸ್ವಿಲ್ ನಗರವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೇಂದ್ರವನ್ನಾಗಿ ರೂಪಿಸಲು ಹಗಳಿರಲು ದುಡಿದಿದ್ದಾರೆ.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಎಂದಿಗೂ ನಿತ್ಯ, ಸತ್ಯ, ನಿರಂತರ ಎಂದ ಲಕ್ಷ್ಮೀ ಹೆಬ್ಬಾಳಕರ್

ಮೇಲಿನ ಎಲ್ಲಾ ಸಾಧನೆಗಳನ್ನು ಮೆಚ್ಚಿಕೊಂಡು, ಮೊರಿಸ್ವಿಲ್ಲ್ ನಗರವು ಆಗಸ್ಟ್ 13ರಂದು ಇವರಿಗೆ ಸನ್ಮಾನ ಪದಕ ಘೋಷಣೆ ಮಾಡಿತ್ತು ಸೆಪ್ಟೆಂಬರ್ 7ರಂದು ಮೇಯರ್ ಟಿ.ಜೆ. ಕಾಲಿ ಸುಪ್ರಿಯಾ ಅವರಿಗೆ ಪ್ರದಾನ ಮಾಡಿದರು.