Thursday, 19th September 2024

Amazon: ಉದ್ಯೋಗಿಗಳ ವರ್ಕ್‌ ಫ್ರಂ ಹೋಮ್‌ ಕಡಿತಗೊಳಿಸಿದ ಅಮೆಜಾನ್; ಕಚೇರಿಗೆ ಹಾಜರಾಗಲು ಸೂಚನೆ

Amazon

ನವದೆಹಲಿ: ಮುಂದಿನ ವರ್ಷದಿಂದ ಅಮೆಜಾನ್ (Amazon) ಉದ್ಯೋಗಿಗಳ ವರ್ಕ್‌ ಫ್ರಂ ಹೋಮ್‌ ಆಯ್ಕೆಯನ್ನು ಕಡಿತಗೊಳಿಸಲಾಗುತ್ತದೆ. ವಾರದಲ್ಲಿ ಐದು ದಿನ ಕಚೇರಿಯಿಂದಲೇ ಉದ್ಯೋಗ ನಿರ್ವಹಿಸಬೇಕಾಗುತ್ತದೆ ಎಂದು ಸಿಇಒ ಆ್ಯಂಡಿ ಜಸ್ಸಿ (Andy Jassy) ಸೂಚಿಸಿದ್ದಾರೆ. ಸಿಬ್ಬಂದಿಗೆ ಕಳುಹಿಸಿದ ಸುದೀರ್ಘ ಮೆಮೋದಲ್ಲಿ ಅವರು ಸೋಮವಾರ (ಸೆಪ್ಟೆಂಬರ್‌ 16) ಈ ಆದೇಶವನ್ನು ಹೊರಡಿಸಿದ್ದಾರೆ.

“ಕೋವಿಡ್ ಪ್ರಾರಂಭವಾಗುವ ಮೊದಲು ಇದ್ದಂತೆಯೇ ನಾವು ಕಚೇರಿಯಲ್ಲಿಯೇ ಉದ್ಯೋಗ ನಿರ್ವಹಿಸಲು ನಿರ್ಧರಿಸಿದ್ದೇವೆ. ಕಚೇರಿಯಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುವುದರಿಂದ ಕಾರ್ಯಕ್ಷಮತೆ ಹೆಚ್ಚಾಗಲಿದೆ ಎನ್ನುವುದನ್ನು ನಾವು ನಂಬುತ್ತೇವೆ” ಎಂದು ಜಸ್ಸಿ ಉದ್ಯೋಗಿಗಳಿಗೆ ಬರೆದ ಮೆಮೋದಲ್ಲಿ ವಿವರಿಸಿದ್ದಾರೆ.

4 ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇ-ಕಾಮರ್ಸ್‌ ದೈತ್ಯ ಅಮೆಜಾನ್ ಕೂಡ ಇತರ ಕಂಪನಿಗಳಂತೆ ಉದ್ಯೋಗಿಗಳಿಗೆ ಮನೆಯಿಂದಲೇ ಉದ್ಯೋಗ ನಿರ್ವಹಿಸುವಂತೆ ಸೂಚಿಸಿತ್ತು. ಕೋವಿಡ್‌ ಹತೋಟಿಯ ಬಳಿಕ ಅಮೆಜಾನ್‌ ಹೈಬ್ರಿಡ್ ನೀತಿಯನ್ನು ಜಾರಿಗೆ ತಂದಿತ್ತು. ಈ ಮೂಲಕ ನೌಕರರು ವಾರದಲ್ಲಿ ಮೂರು ದಿನ ಕಚೇರಿಗೆ ಹಾಜರಾಗುವಂತೆ ಸೂಚಿಸಿತ್ತು. ಇದೀಗ ಮತ್ತೆ ಮೊದಲಿನಂತೆ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುವಂತೆ ತಿಳಿಸಿದೆ.

ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದರ ಪ್ರಯೋಜನಗಳ ಪ್ರಸ್ತಾಪಿಸಿದ ಜಸ್ಸಿ ಅವರು, “ತಂಡದ ಸದಸ್ಯರಿಗೆ ಪರಿಣಾಮಕಾರಿಯಾಗಿ ಜವಾಬ್ದಾರಿ ತಿಳಿಸಲು ಸಾಧ್ಯವಾಗುತ್ತದೆ. ಪರಸ್ಪರ ಬೋಧನೆ ಮತ್ತು ಕಲಿಕೆಗೆ ಹೆಚ್ಚು ಅನುಕೂಲವಾಗುತ್ತದೆ. ತಂಡಗಳು ಪರಸ್ಪರ ಉತ್ತಮವಾಗಿ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.

2025ರ ಜನವರಿ 2ರಿಂದ ಉದ್ಯೋಗಿಗಳು ವಾರದಲ್ಲಿ 5 ದಿನ ಕಚೇರಿಯಲ್ಲಿರಬೇಕು ಎಂದು ಜಸ್ಸಿ ತಿಳಿಸಿದ್ದಾರೆ. ಟೀಮ್ ಲೀಡರ್ ಮನವಿಯನ್ನು ಮಂಜೂರು ಮಾಡಿದರೆ ವರ್ಕ್‌ ಫ್ರಂ ಹೋಮ್‌ ನಿರ್ವಹಿಸಬಹುದು ಎಂದಿದ್ದಾರೆ. ʼʼತೀರಾ ಅನಿವಾರ್ಯ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಮ್‌ ಅಗತ್ಯವಿದ್ದರೆ ಅನುಮತಿಸಲಾಗುತ್ತದೆ. ಇದಕ್ಕಾಗಿ ಟೀಮ್‌ ಲೀಡರ್‌ಗೆ ಮನವಿ ಸಲ್ಲಿಸಬೇಕುʼʼ ಎಂದು ಜಸ್ಸಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Edible Oils: ಖಾದ್ಯ ತೈಲಗಳ ಆಮದು ಸುಂಕ ಹೆಚ್ಚಿಸಿದ ಕೇಂದ್ರ