Saturday, 21st September 2024

Vishweshwar Bhat Column: 7, ಲೋಕಕಲ್ಯಾಣ ಮಾರ್ಗ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ರಾಜೀವ್ ಗಾಂಧಿ ಪ್ರಧಾನಿಯಾಗುವುದಕ್ಕಿಂತ ಮುನ್ನ, ಭಾರತದ ಪ್ರಧಾನ ಮಂತ್ರಿಗೆ ನಿರ್ದಿಷ್ಟವಾದ ನಿವಾಸವೇ ಇರಲಿಲ್ಲ ಎಂದರೆ ಆಶ್ಚರ್ಯವಾಗಬಹುದು. ಅದಕ್ಕೂ ಮುನ್ನ ಪ್ರಧಾನಿಗಳು ತಾವು ಸಂಸದರು ಅಥವಾ ಮಂತ್ರಿ ಯಾದಾಗ ನೀಡಿದ್ದ ನಿವಾಸದಲ್ಲಿಯೇ ವಾಸಿಸುತ್ತಿದ್ದರು. ದೇಶದ ಪ್ರಥಮ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಜವಾಹರಲಾಲ್ ನೆಹರು ಅವರು ‘ತೀನ್ ಮೂರ್ತಿ ಭವನ’ವನ್ನು ತಮ್ಮ ಅಧಿಕೃತ ನಿವಾಸವಾಗಿ ಮಾಡಿಕೊಂಡರು. ಅದಕ್ಕೂ ಮುನ್ನ ಆ ಭವನದಲ್ಲಿ ಬ್ರಿಟಿಷ್ ಆಡಳಿತದಲ್ಲಿ ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ವಾಸಿಸು ತ್ತಿದ್ದರು. ‌

ಆಗ ಇದನ್ನು ‘ಫ್ಲಾಗ್ ಸ್ಟಾಫ್ ಹೌಸ್’ ಎಂದು ಕರೆಯುತ್ತಿದ್ದರು. ನೆಹರು ಆ‌ ನಿವಾಸದಲ್ಲಿ ವಾಸಿಸಲು ಆರಂಭಿಸಿದಾಗ, ತೀನ್ ಮೂರ್ತಿ ಭವನವಾಯಿತು. ಅವರ ನಂತರ ಪ್ರಧಾನಿಯಾದ ಲಾಲ್ ಬಹಾದುರ್ ಶಾಸ್ತ್ರಿ ಅವರು ೧೦, ಜನಪತ್ ಮಾರ್ಗದಲ್ಲಿರುವ ನಿವಾಸವನ್ನು ಆಯ್ದುಕೊಂಡರು. 1964ರಿಂದ ಮುಂದಿನ 2 ವರ್ಷಗಳ ಕಾಲ ಅದು ಅವರ ಅಧಿಕೃತ ನಿವಾಸವಾಗಿತ್ತು. ನಂತರ ಅದನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಯಿತು. ಅದರ ಒಂದು ಭಾಗವನ್ನು ಲಾಲ್ ಬಹಾದುರ್ ಶಾಸ್ತ್ರಿ ಅವರ ವಸ್ತು ಸಂಗ್ರಹಾಲಯಕ್ಕೆ ನೀಡಲಾಯಿತು.

ಅದನ್ನು 1, ಮೋತಿಲಾಲ್ ನೆಹರು ಮಾರ್ಗದಿಂದಲೂ ಪ್ರವೇಶಿಸಬಹುದು. ಪ್ರಸ್ತುತ 10 ಜನಪತ್‌ನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 1989ರಿಂದ ವಾಸಿಸುತ್ತಿದ್ದಾರೆ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿ 1,
ಸಫ್ದರ್‌ಜಂಗ್ ರಸ್ತೆಯಲ್ಲಿರುವ ನಿವಾಸವನ್ನು ತಮ್ಮ ಅಧಿಕೃತ ನಿವಾಸವನ್ನಾಗಿ ಮಾಡಿಕೊಂಡರು. ಈ ನಿವಾಸ ದಲ್ಲಿಯೇ ಅವರ ಹತ್ಯೆಯಾಯಿತು. ಅನಂತರ ಅದನ್ನು ಇಂದಿರಾ ಗಾಂಧಿ ಮೆಮೋರಿಯಲ್ ಮತ್ತು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

ಇಂದಿರಾ ಗಾಂಧಿಯವರು ಆ ನಿವಾಸದಲ್ಲಿ ಉಳಿಯುವ ಮೊದಲು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಸುಧಿ ರಂಜನ್ ದಾಸ್ ಆ ಮನೆಯಲ್ಲಿ ಉಳಿದಿದ್ದರು. ಇಂದಿರಾ ತರುವಾಯ, 1984ರಲ್ಲಿ ಅವರ ಪುತ್ರ ರಾಜೀವ್ ಗಾಂಧಿ ಪ್ರಧಾನಿಯಾದರು. ಅವರು ತಮ್ಮ ಪತ್ನಿ ಸೋನಿಯಾ, ಪುತ್ರ ರಾಹುಲ್ ಮತ್ತು ಪುತ್ರಿ ಪ್ರಿಯಾಂಕಾ ಜತೆ 7, ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಉಳಿಯಲಾರಂಭಿಸಿದರು.

ನಂತರ ವಿಶ್ವನಾಥ್ ಪ್ರತಾಪ್ ಸಿಂಗ್ ಪ್ರಧಾನಿಯಾದಾಗ 7, ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ‘ಪ್ರಧಾನಿಯ
ಅಧಿಕೃತ ನಿವಾಸ’ ಎಂದು ಘೋಷಿಸಿದರು. ದೇಶದ ಪ್ರಧಾನಿ ಯಾರೇ ಆಗಲಿ, ಅವರು ಈ ನಿವಾಸದಲ್ಲಿಯೇ ಉಳಿಯ ಬೇಕು ಎಂಬ ಆದೇಶವನ್ನು ಹೊರಡಿಸಿದರು. ಅದಾದ ಬಳಿಕ ಅದು ಎಲ್ಲ ಪ್ರಧಾನಿಗಳ ಅಧಿಕೃತ ನಿವಾಸವಾಯಿತು. ದೇವೇಗೌಡ, ಐ.ಕೆ.ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್ ಅದೇ ನಿವಾಸವನ್ನು ಆಯ್ಕೆ ಮಾಡಿಕೊಂಡರು.

ಮೋದಿಯವರು ಪ್ರಧಾನಿಯಾದ ಬಳಿಕ, ಡಾ.ಸಿಂಗ್‌ ಅವರು 7, ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ಖಾಲಿ ಮಾಡಲು ತುಸು ಸಮಯ ತೆಗೆದುಕೊಂಡರು. ಅಲ್ಲಿ ತನಕ ಅವರು 5, ರೇಸ್ ಕೋರ್ಸ್ ರಸ್ತೆಯಲ್ಲಿ ಉಳಿದು ಕೊಂಡರು. 7, ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ನವೀಕರಣಗೊಳಿಸಿದ ಬಳಿಕ ಅಲ್ಲಿಗೆ ಹೋದರು. ೨೦೧೬ರ ಸೆಪ್ಟೆಂಬರಿನಲ್ಲಿ ಮೋದಿಯವರು ೭, ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ‘7, ಲೋಕಕಲ್ಯಾಣ ಮಾರ್ಗ’ ಎಂದು ಮರುನಾಮಕರಣ ಮಾಡಿದರು.

12 ಎಕರೆ ಜಾಗದಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಐದು ಭವ್ಯ ಬಂಗಲೆಗಳಿವೆ. ಪ್ರಧಾನಿಯವರು ಉಳಿಯುವ ಬಂಗಲೆಗೆ ‘ಪಂಚವಟಿ’ ಎಂದು ಹೆಸರು. ಒಂದು ಬಂಗಲೆಯಲ್ಲಿ ಪ್ರಧಾನಿಯವರ ಭದ್ರತೆಯನ್ನು ನೋಡಿಕೊಳ್ಳುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಅಧಿಕಾರಿಗಳಿರುತ್ತಾರೆ. ‘7, ಲೋಕಕಲ್ಯಾಣ ಮಾರ್ಗ’ದಲ್ಲಿ ಪ್ರಧಾನಿ ಯವರ ಅಧಿಕಾರಿಗಳು, ಆಪ್ತ ಸಿಬ್ಬಂದಿ, ಅಡುಗೆ ಭಟ್ಟರು, ಉದ್ಯಾನದ ಸಿಬ್ಬಂದಿ, ಇಲೆಕ್ಟ್ರಿಶಿಯನ್‌ಗಳು ಸೇರಿದಂತೆ, ಸುಮಾರು 200 ಮಂದಿ ಕೆಲಸ ಮಾಡುತ್ತಾರೆ. ಈ ನಿವಾಸದಲ್ಲಿ ನವಿಲುಗಳು ಸೇರಿದಂತೆ 50ಕ್ಕೂ ಹೆಚ್ಚು ಪಕ್ಷಿಗಳು, ದನ-ಕರುಗಳು ಇರುವುದು ವಿಶೇಷ.

ಇದನ್ನೂ ಓದಿ: Vishweshwar Bhat Column: ಬೈಗುಳಗಳ ಕುರಿತು