Thursday, 14th November 2024

Prof R G Hegde Column: ಸಂವಹನ: ಆಡುಭಾಷೆ- ದೇಹಭಾಷೆಗಳ ರಸಪಾಕ

ನಿಜಕೌಶಲ

ಪ್ರೊ.ಆರ್‌.ಜಿ.ಹೆಗಡೆ

ಸಂವಹನ ಕಲೆ ಅಥವಾ ‘ಕಮ್ಯುನಿಕೇಷನ್ ಸ್ಕಿಲ್’ ಎಂದರೇನು, ಅದರ ಮಹತ್ವವೇನು, ಅದರ ಮೇಲೆ ಹೇಗೆ ಪ್ರಭುತ್ವ ಸಾಧಿಸಬೇಕು ಇತ್ಯಾದಿಗಳನ್ನು ತಿಳಿದುಕೊಳ್ಳುವುದಕ್ಕೂ ಮೊದಲು, ಹಾಗೆಂದರೆ ಏನು ಅಲ್ಲ ಎಂಬುದನ್ನು ಅರಿಯ ಬೇಕು. ಏಕೆಂದರೆ ಈ ಕೌಶಲದ ಕುರಿತು ಸುಶಿಕ್ಷಿತ ಸಮಾಜಕ್ಕೆ ಕೂಡ ತಪ್ಪು ಗ್ರಹಿಕೆಗಳು ಇದ್ದಂತಿವೆ.

ಅಂಥ ಕೆಲವು ಹೀಗಿವೆ: ಸಂವಹನ ಕಲೆ ಎಂದರೆ ದಟ್ಟವಾಗಿ ಲಿಪ್‌ಸ್ಟಿಕ್ ಹಚ್ಚಿಕೊಂಡು, ಕೋಟು-ಟೈ ಧರಿಸಿ, ಕೃತಕ
ಹಾವಭಾವ ಮಾಡುತ್ತಾ, ಗುಡ್-ಮಾರ್ನಿಂಗ್, ಗುಡ್-ಈವ್ನಿಂಗ್ ಎನ್ನುತ್ತ ಚಟಪಟನೆ ಮಾತನಾಡುವುದು; ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರೇರೇಪಿತವಾದ ಮಾತು ಮತ್ತು ವರ್ತನೆ; ಮಾರಾಟದ ಕಸುಬಿನ ಕಲೆ; ಹೃದಯರಹಿತ ಪ್ರಕ್ರಿಯೆ; ಸುಳ್ಳು ಹೇಳುವ ಕಲೆ; ಆಕ್ರಮಣಕಾರಿ ಮನೋಭಾವದ, ತನ್ನ ಮಾತನ್ನೇ ಕೇಳಿ ಎನ್ನುವ ರೀತಿಯ ಮಾತಿನ ವಿಧಾನ -ಹೀಗೆ ಗ್ರಹಿಕೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಿಜ ಸಂಗತಿಯೆಂದರೆ ಇದು ಸಂವಹನ ಅಲ್ಲ.

ಸಂವಹನ ಕಲೆಯ ಕುರಿತು ತಕರಾರುಗಳೂ ಇವೆ. ನಮಗೆ ಮಾತನಾಡಲು ಬರುವುದಿಲ್ಲವೇ? ಅದನ್ನು ಬೇರೆಯವರು ಕಲಿಸಬೇಕೇ? ಹೇಳುವುದನ್ನು ನೇರವಾಗಿ ಹೇಳಿದರಾಯಿತು, ಮತ್ತೇನು? ಸುತ್ತುಬಳಸಿ ಹೇಳುವುದೇಕೆ? ಎಂಬ ಪ್ರಶ್ನೆ ಗಳೂ ಈ ತಕರಾರುಗಳಲ್ಲುಂಟು. ‘ಈ ಸಂವಹನ ಕಲೆಯೆಂಬುದು ಅಪ್ರಾಮಾಣಿಕತೆಯ ವ್ಯವಹಾರ; ಡಿಪ್ಲೊಮ್ಯಾಟಿಕ್ ಆಗಿ, ನಾಜೂಕಾಗಿ ಮಾತನಾಡು ವವರು ಹಲವೊಮ್ಮೆ ಆಂತರ್ಯದಲ್ಲಿ ಕಳ್ಳರೂ, ದಗಾಕೋರರೂ ಆಗಿರುತ್ತಾರೆ’ ಎಂಬ ಅಭಿಪ್ರಾಯವೂ ಇದರಲ್ಲಿ ಸೇರಿದೆ. ಮತ್ತೊಂದೆಡೆ, ‘ಸಂವಹನ ಕಲೆ ಕೇವಲ ತೆಳುಮಾತು; ಅದರ ಮೂಲಕ ಗಂಭೀರವಾದದ್ದನ್ನು, ಆಳವಾದದ್ದನ್ನು, ಉನ್ನತ ವಿಚಾರಗಳನ್ನು ಹೇಳಲಾಗುವುದಿಲ್ಲ’ ಎಂಬ ವಾದವೂ ಇದೆ.

ಇಂಥ ತಕರಾರುಗಳು, ದೂರುಗಳೆಲ್ಲ ಸಂವಹನ ಕೌಶಲದ ಕುರಿತ ತಿಳಿವಳಿಕೆಯ ಕೊರತೆಯಿಂದ ಹೊಮ್ಮಿದಂಥವು. ಏಕೆಂದರೆ, ಸಂವಹನ ಎಂದರೆ ಕೇವಲ ಮಾತಲ್ಲ; ಕೇಳುವುದೂ ಅದರಲ್ಲಿ ಮಹತ್ವದ ಭಾಗ. ಸಂವಹನ ಕೌಶಲ ವನ್ನು ಬಳಸಿ ಗಂಭೀರ ವಿಷಯಗಳನ್ನು ಹೇಳಲಾಗುವುದಿಲ್ಲ ಎಂಬುದೂ ತಪ್ಪು ಕಲ್ಪನೆ. ಆ ಕುರಿತು ಮುಂದೆ ಹೇಳುವೆ. ಸರಳವಾಗಿ ಹೇಳುವುದಾದರೆ, ಸಂವಹನ ಕೌಶಲ ಎಂಬುದು ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು, ಇನ್ನೊಬ್ಬ ವ್ಯಕ್ತಿ ಅಥವಾ ಇನ್ನೊಂದು ಗುಂಪಿಗೆ ಒಂದು ಸಂದೇಶವನ್ನು ಸಲೀಸಾಗಿ, ಸಂಪೂರ್ಣವಾಗಿ, ಅವರು ಅರ್ಥಮಾಡಿಕೊಳ್ಳಬಲ್ಲಂತೆ/ ಅರ್ಥಮಾಡಿಕೊಳ್ಳಬೇಕಾದಂತೆ ತಿಳಿಸಬಲ್ಲ ಒಂದು ಪ್ರಕ್ರಿಯೆ.

ಇದು ಆಳವಾಗಿ, ಸಮಗ್ರವಾಗಿ ಗ್ರಹಿಸಬಲ್ಲ, ಪರಸ್ಪರ ಅನುಭೂತಿ ಸಾಧಿಸಬಲ್ಲ ಚಟುವಟಿಕೆ; ಗೆಳೆತನವನ್ನು, ಭಾವನೆಗಳನ್ನು ಹಂಚಿಕೊಳ್ಳಬಲ್ಲ ಕ್ರಿಯೆ; ವ್ಯಕ್ತಿಗಳ ಜತೆ, ಸುತ್ತಲಿನ ಸಮಾಜದ ಜತೆ ಹಾಗೂ ವಿಶಾಲ ಮನುಕುಲದ ಜತೆ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳುವ- ಉಳಿಸಿಕೊಳ್ಳುವ ಕ್ರಿಯೆ. ‘ವ್ಯಕ್ತಿ ವ್ಯಕ್ತಿಗಳ ನಡುವಿನ, ಸಮಾಜದ ನಡುವಿನ ವ್ಯವಹಾರದಲ್ಲಿ ಸಂಬಂಧ ಮತ್ತು ವಿಶ್ವಾಸದ ಅಭಿವೃದ್ಧಿಯೇ ಎಲ್ಲಕ್ಕಿಂತಲೂ ಮುಖ್ಯ ವಾದುದು; ಉಳಿದೆಲ್ಲವೂ ನಗಣ್ಯ ವಿಷಯಗಳು’ ಎಂಬ ಉದ್ಯಮಿ ಧೀರೂಬಾಯಿ ಅಂಬಾನಿ ಅವರ ಮಾತು ಇಲ್ಲಿ ಉಲ್ಲೇಖ ನೀಯ.

ಸಂಬಂಧಗಳು ಆಳವಾ ದಂತೆ ಸಂತೋಷವು ಮನಸ್ಸನ್ನು ತುಂಬಿಕೊಳ್ಳುತ್ತಾ ಹೋಗುತ್ತದೆ. ವ್ಯಾವಹಾರಿಕ ವಾಗಿಯೂ ಬದುಕು ಸರಾಗವಾಗುತ್ತದೆ, ಜನರು ಸಹಾಯಕ್ಕೆ ನಿಲ್ಲುತ್ತಾರೆ. ಜತೆಯಲ್ಲಿ ನಗುತ್ತಾರೆ, ಅಳುತ್ತಾರೆ, ಪ್ರೀತಿಸುತ್ತಾರೆ. ಸಂವಹನ ಬಲ್ಲ ವ್ಯಕ್ತಿಯು ಬೇರೆಯವರ ಅರಿವಿಗೇ ಬಾರದಂತೆ ತನ್ನ ಸಮುದಾಯದ ನಾಯಕನಾಗಿ ಬಿಡುತ್ತಾನೆ.

ಒಟ್ಟಾರೆ ಹೇಳುವುದಾದರೆ, ಹೇಳುಗ ಮತ್ತು ಕೇಳುಗನ ನಡುವೆ ಆಳವಾದ ಮಾನಸಿಕ ಬಾಂಧವ್ಯದ ಸೇತುವೆ ಕಟ್ಟುವುದು ಸಂವಹನ ಕೌಶಲದ ಉದ್ದೇಶ. ಸರಳವೆನಿಸುವ ಸಂವಹನವು ಸಂಕೀರ್ಣವಾಗುವುದೇ ಇಲ್ಲಿ. ಏಕೆಂದರೆ, ಇಲ್ಲಿ ಹಲವು ವಿಷಯಗಳು ಬಂದುಬಿಡುತ್ತವೆ. ತಾನು ಏನನ್ನು ಹೇಳಬೇಕಿದೆ, ಹೇಗೆ ಹೇಳಬೇಕಿದೆ ಎನ್ನುವುದರ ಕುರಿತು ಹೇಳುವವನಿಗೆ ಮೊದಲು ಸ್ಪಷ್ಟತೆ ಇರಬೇಕು. ವಿಷಯವನ್ನು ಚಿಕ್ಕದಾಗಿ ಅಥವಾ ಸವಿಸ್ತಾರವಾಗಿ, ಧ್ವನಿಯನ್ನು ಎಷ್ಟು ಎತ್ತರಿಸಿ ಅಥವಾ ಕುಗ್ಗಿಸಿ ಹೇಳುವುದು, ವಾಕ್ಯದಲ್ಲಿ ವಿರಾಮ ಚಿಹ್ನೆಗಳನ್ನು ನೀಡುವುದು ಹೇಗೆ?
ಸಂದೇಶದ ಯಾವ ಭಾಗಕ್ಕೆ ಒತ್ತುಕೊಟ್ಟು ಹೇಳಬೇಕು? ಆಗ ದೇಹಭಾಷೆ ಹೇಗಿರಬೇಕು? ಎಂಬುದೆಲ್ಲಾ ಆತನಿಗೆ ಅರಿವಿರಬೇಕು.

ವಿಷಯ ಹೇಳಿ ಮುಗಿದ ನಂತರ ಆತನಿಗೆ, ಕೇಳುಗನ ಪ್ರತಿಕ್ರಿಯೆಯ ಕಡೆ ಲಕ್ಷ್ಯವಿರಬೇಕು. ಕೇಳುಗನ ಹಿನ್ನೆಲೆ, ಮನಸ್ಸು, ಸಂಸ್ಕೃತಿ, ತಾನು ಮಾತಾಡುತ್ತಿರುವ ಸಮಯ-ಸಂದರ್ಭ ಇತ್ಯಾದಿಗಳು ತಿಳಿದಿರಬೇಕು. ಇವೆಲ್ಲದರ ಫಲವಾದ ಸಂವಹನಕ್ಕೆ ಬೆಂಕಿಯಂಥ ಶಕ್ತಿ ಇರುತ್ತದೆ. ಈ ಶಕ್ತಿಯು ಸಂವಹನದಲ್ಲಿ ತೊಡಗಿಕೊಂಡವರನ್ನು ಆಳವಾಗಿ ಹುರಿದುಂಬಿಸುತ್ತದೆ, ಪ್ರಚೋದಿಸುತ್ತದೆ.

ಕುರುಕ್ಷೇತ್ರ ಯುದ್ಧದ ವೇಳೆ ಶಸಗಳನ್ನು ಕೈಚೆಲ್ಲಿ ಕೂತಿದ್ದ ಅರ್ಜುನನು ಶ್ರೀಕೃಷ್ಣನಿಂದ ಭಗವದ್ಗೀತೆ ಯನ್ನು
ಕೇಳಿದ ನಂತರ ಯುದ್ಧದಲ್ಲಿ ತೊಡಗಿಸಿ ಕೊಂಡಿದ್ದು ಹೀಗೆಯೇ. ಸಂವಹನಕ್ಕೆ ಸಾಂತ್ವನ ಹೇಳುವ, ಉಲ್ಲಾಸ ಗೊಳಿಸುವ, ಮನರಂಜಿಸುವ ಶಕ್ತಿಯಿದೆ, ಸಹಾಯ ಕೇಳುವ/ಪಡೆದುಕೊಳ್ಳುವ, ಕೆಲಸ ಮಾಡಿಸುವ ವ್ಯಾವಹಾರಿಕ ಚಾಕಚಕ್ಯತೆಯೂ ಇದರಲ್ಲಿ ಅಡಗಿದೆ. ಆದರೆ ಒಂದು ವಿಷಯ- ಸಂವಹನಕಾರನ ಪ್ರಾಮಾಣಿಕತೆ ಇಲ್ಲಿ ಮುಖ್ಯ ವಾಗಿರುತ್ತದೆ. ಆತ ಸುಳ್ಳುಗಾರ/ಮೋಸಗಾರ ಆಗಿರಬಾರದು.

ಏಕೆಂದರೆ, ಸಂವಹಿಸುವ ವ್ಯಕ್ತಿ ಎಷ್ಟೇ ಚಂದದ ಮಾತನಾಡಿದರೂ, ಆತ ಸುಳ್ಳುಗಾರ/ ಮೋಸಗಾರ ಎಂಬುದು ಕೇಳುಗನಿಗೆ ಗೊತ್ತಾದರೆ, ಅಂಥವನ ಮಾತಿನ ಮೇಲೆ ಯಾರೂ ವಿಶ್ವಾಸವಿಡುವುದಿಲ್ಲ. ಅಂಥವನ ಸಂವಹನ ವಿಫಲವಾಗಿ ಬಿಡುತ್ತದೆ.

ಸಂವಹನ ಸಾಮರ್ಥ್ಯವು ವಿರಾಟ್ ಸ್ವರೂಪವನ್ನು ತಳೆಯುತ್ತಿದ್ದಂತೆ ವ್ಯಕ್ತಿ ಮಹಾನಾಯಕನಾಗುತ್ತಾನೆ. ಬೃಹತ್ ಮನುಕುಲದೊಂದಿಗೇ ಸಂವಹಿಸುವ ಕಲೆ ಅವನಿಗೆ ಸಿದ್ಧಿಸುತ್ತದೆ. ಇಂದಿರಾ ಗಾಂಧಿ, ವಾಜಪೇಯಿ, ರಾಮಕೃಷ್ಣ ಹೆಗಡೆ ಮುಂತಾದ ಜನನಾಯಕರ ಜನಪ್ರಿಯತೆಯ ಗುಟ್ಟು ಇದು. ಆದರೆ, ಸಂವಹನ ಕೌಶಲವೆಂಬುದು
ಎಲ್ಲರನ್ನೂ ಒಂದೇ ರೀತಿಯಲ್ಲಿ ಮಾತನಾಡುವಂತೆ ಸಿದ್ಧಪಡಿಸುವ ಇಟ್ಟಿಗೆಯ ಭಟ್ಟಿ ಅಲ್ಲ; ಸಂವಹನಕಾ
ರನೊಬ್ಬ ತನ್ನ ಒಳವ್ಯಕ್ತಿತ್ವ, ವಿಶಿಷ್ಟ ಭಾಷಾವಿಧಾನ, ಶೈಲಿಯನ್ನು ಇಟ್ಟುಕೊಂಡೇ ಬೆಳೆಯಬೇಕಾಗುತ್ತದೆ;
ಬದಲಿಗೆ, ಅನುಕರಿಸುವ ವ್ಯಕ್ತಿ ಸೋಲುತ್ತಾನೆ.

ಸಂವಹನಕಾರನ ಶೈಲಿಯು ಮೂಲತಃ ಅವನ ಉದ್ದೇಶದಿಂದ ನಿರೂಪಿತವಾಗಿರುತ್ತದೆ. ಉದಾಹರಣೆಗೆ, ಗಾಂಧೀಜಿ ಶಾಂತಿದೂತರಾಗಿದ್ದರು. ಹಾಗಾಗಿ ಅವರ ಭಾಷೆ, ದನಿ ಹಾಗೂ ವ್ಯಕ್ತಿತ್ವದಲ್ಲಿ ಶಾಂತಿಯು ತುಂಬಿ ತುಳುಕುತ್ತಿತ್ತು. ಅವರು ‘ಪ್ರಚಂಡ’ ಮಾತುಗಾರರಾಗಿರಲಿಲ್ಲ. ಆಡುಭಾಷೆ- ದೇಹಭಾಷೆಯನ್ನು ಅವರು ಉದ್ವೇಗಕಾರಿಯಾಗಿ ಬಳಸು
ತ್ತಲೇ ಇರಲಿಲ್ಲ. ಆದರೆ ಯುದ್ಧಕ್ಕೆ ಪ್ರೇರೇಪಿಸುವುದು, ತನ್ನ ಜನರನ್ನು ಹುರಿದುಂಬಿಸುವುದು ಹಿಟ್ಲರ್‌ನ ಗುರಿಯಾ ಗಿತ್ತು; ಹಾಗಾಗಿ ಆತ ಆಡುಭಾಷೆ-ದೇಹಭಾಷೆಗಳನ್ನು ವಿಪರೀತ ಸ್ತರದಲ್ಲಿ ಬಳಸುತ್ತಿದ್ದ.

ಗಾಂಧಿ ಮತ್ತು ಹಿಟ್ಲರ್ ಒಂದೇ ಕಾಲಘಟ್ಟದಲ್ಲಿದ್ದವರು, ಇಬ್ಬರೂ ತಮ್ಮದೇ ನೆಲೆಯಲ್ಲಿ ಮಹಾನಾಯಕರು, ಕೋಟ್ಯಂತರ ಜನರಿಗೆ ಆರಾಧ್ಯದೈವವಾದವರು. ಆದರೆ ತಮ್ಮ ಸಂವಹನ ಕೌಶಲವನ್ನು ಅವರು ಬಳಸಿದ್ದು ಬೇರೆ
ಬೇರೆ ಉದ್ದೇಶಗಳಿಗೆ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡರೆ, ಸಂವಹನ ಕೌಶಲದ ಹಲವು ಸೂಕ್ಷ್ಮಗಳು ಅರಿವಾಗುತ್ತವೆ.

ಸಂವಹನ ಕೌಶಲದಲ್ಲಿ ವ್ಯಕ್ತಿಗಳ ನಡುವಿನ ಸಂವಹನ, ಗುಂಪು ಸಂವಹನ ಮತ್ತು ಸಾರ್ವಜನಿಕ ಸಂವಹನ ಎಂಬ ವಿಧಗಳಿವೆ ಹಾಗೂ ಆಡುಭಾಷೆ-ದೇಹಭಾಷೆ-ಕೃತಿ ಎಂಬ ಪ್ರಬಲ ಮಾಧ್ಯಮಗಳಿವೆ. ಸಂವಹನದಲ್ಲಿ ಭಾಷೆಯೇ
ಎಲ್ಲವೂ ಅಲ್ಲ; ಅಧ್ಯಯನಗಳ ಪ್ರಕಾರ ಒಟ್ಟಾರೆ ಸಂವಹನದಲ್ಲಿ ಅದರ ಪಾತ್ರ ಶೇ.15ರಷ್ಟು ಮಾತ್ರ. ಆದ್ದರಿಂದ, ಸಂವಹನದಲ್ಲಿ ದೇಹಭಾಷೆ, ಚಹರೆ, ಕೃತಿಗಳು ಮಹತ್ತರ ಪಾತ್ರ ವಹಿಸುತ್ತವೆ.

ಎದುರಿನವರೊಂದಿಗೆ ಸಂವಹಿಸುವಾಗ ನಮ್ಮ ಬಾಯಿ ಮಾತ್ರವಲ್ಲದೆ, ಕಣ್ಣುಗಳು, ಹುಬ್ಬು, ತುಟಿ, ಕೈಕಾಲು ಗಳು ಹೀಗೆ ಶರೀರದ ವಿವಿಧ ಅಂಗಗಳು ಮಾತನಾಡುತ್ತಿರುತ್ತವೆ, ನಮ್ಮ ಮನಸ್ಸಿನ ಮಾತನ್ನು ಅಭಿವ್ಯಕ್ತಿಸುತ್ತಿರುತ್ತವೆ. ಧ್ವನಿಯ ಏರಿಳಿತಕ್ಕೂ ಒಂದು ಭಾಷೆಯಿದ್ದು, ಅದು ಕೂಡ ವಿಷಯ ಗಳನ್ನು ಹೇಳಿಬಿಡುತ್ತದೆ. ನಮ್ಮ ಮನದಾಳದ ಸಂತಸ, ದುಃಖ ಇತ್ಯಾದಿ ಭಾವನೆಗಳೆಲ್ಲವೂ ಆ ಮೂಲಕ ಮತ್ತೊಬ್ಬರಿಗೆ ಅರ್ಥವಾಗಿಬಿಡುತ್ತವೆ. ಬಹಳ ಸತ್ವಯುತ ಭಾಷೆಯಾಗಿರುವ ‘ಕೃತಿ’ಯ ಮೂಲಕವೂ ನಮ್ಮ ಸಂದೇಶ ಮತ್ತು ಭಾವನೆಗಳು ಬೇರೆಯವರಿಗೆ ಅರ್ಥವಾಗಿ ಬಿಡುತ್ತವೆ; ಇಂದಿನ ಕೆಲ ರಾಜಕಾರಣಿಗಳ ಮಾತು ಟೊಳ್ಳು ಎಂದು ನಮಗೆ ಗೊತ್ತಾಗಲು ಕಾರಣ, ಮಾತಿನ ಜತೆಗೆ ‘ಕೃತಿ’ ಇಲ್ಲದಿರುವುದು.

ಆಡುಭಾಷೆ-ದೇಹಭಾಷೆ-ಕೃತಿ ಇವು ಒಂದು ಹದವಾಗಿ ಬೆರೆತು ರಸಾಯನವಾದಾಗ ಅದ್ಭುತ ಶಕ್ತಿ ಸೃಷ್ಟಿಯಾಗುತ್ತದೆ. ಅದುವೇ ನಿಜವಾದ ಸಂವಹನ ಕೌಶಲ. ಇಂಥ ಕಲೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಬಯಸುವವನು ಈ ಮೂರೂ ಅಂಶಗಳನ್ನು ಸತತವಾಗಿ ಶ್ರೇಷ್ಠಮಟ್ಟದಲ್ಲಿ ಒಗ್ಗೂಡಿಸಿಟ್ಟುಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ತನ್ನಿಡೀ ವ್ಯಕ್ತಿತ್ವವನ್ನು ಮಾರ್ಪಡಿಸಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಸದಾಕಾಲ ಎಚ್ಚರಿಕೆಯಿಂದಿದ್ದು ಮಾತು-ವ್ಯಕ್ತಿತ್ವ-ಕೃತಿಗಳಲ್ಲಿ ಸ್ವಚ್ಛತೆ, ಘನತೆ ಮತ್ತು ಶ್ರೇಷ್ಠತೆಯನ್ನು ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಇಂಥವರಿಗೆ ಸಂವಹನ ಕಲೆ ಸಿದ್ಧಿಸುತ್ತದೆ. ಇದನ್ನು ಅರಿತಿದ್ದ ಗಾಂDIಜಿಯವರು ತಮ್ಮ ಮಾತು-ದೇಹಭಾಷೆ-ಕೃತಿಗಳನ್ನು ಎಚ್ಚರದಿಂದ ನೋಡಿಕೊಳ್ಳುತ್ತಿದ್ದರು.

ಹಾಗಾಗಿ ಅವರು ಉಪವಾಸ ಕೂತಿದ್ದು ಕೂಡ ಒಂದು ಭಾಷೆಯಾಗಿ ವಿಷಯಗಳನ್ನು ಜನರಿಗೆ ಹೇಳಿತು. ಅವರ ಸರಳತೆ, ನಡಿಗೆ, ನೂಲು ತೆಗೆಯುವಿಕೆ ಎಲ್ಲವೂ ಭಾಷೆಗಳಾಗಿ ಜನರಿಗೆ ವಿವಿಧ ವಿಷಯಗಳನ್ನು ಬಲವಾಗಿ ಹೇಳಿದವು. ಬರೀ ಮಾತಾಡಿದ್ದರೆ ಪ್ರಾಯಶಃ ಗಾಂಧಿಯವರು ಜೊಳ್ಳಾಗಿ ಹೋಗುತ್ತಿದ್ದರು; ಹೀಗಾಗಿ ಮಾತು ಮತ್ತು ಕೃತಿಗಳ ನಡುವೆ ಅವರು ಸಮನ್ವಯ ಸಾಧಿಸಿ, ಒಂದು ಶ್ರೇಷ್ಠ ವ್ಯಕ್ತಿತ್ವವಾಗಿ ಹೋದರು.

ಆಗ ಲಕ್ಷಾಂತರ ಜನರು ಅವರನ್ನು ನಂಬುವಂತಾಯಿತು. ಹಿಟ್ಲರ್ ಬಳಿಯಲ್ಲೂ ಸಂವಹನ ಕೌಶಲವಿತ್ತು, ಆದರೆ ಅದನ್ನು ಆತ ದುರುಪಯೋಗಪಡಿಸಿಕೊಂಡ. ಕೆಲವರು ಎಷ್ಟೇ ಚಂದವಾಗಿ ಮಾತನಾಡಿದರೂ ಯಾರೂ ಅದನ್ನು
ಗಂಭೀರವಾಗಿ ಪರಿಗಣಿಸುವುದಿಲ್ಲ; ಏಕೆಂದರೆ, ಅವರ ಮಾತು ಮತ್ತು ಕೃತಿಗಳ ನಡುವೆ ಅಗಾಧ ವ್ಯತ್ಯಾಸವಿರುತ್ತದೆ. ಆದ್ದರಿಂದ, ಏನು ಹೇಳುತ್ತೇವೋ ಅದನ್ನೇ ಮಾಡುವುದು ಮತ್ತು ಏನು ಮಾಡುತ್ತೇವೆಯೋ ಅದನ್ನಷ್ಟೇ ಹೇಳುವುದು
ಸಂವಹನ ಕ್ಷೇತ್ರದಲ್ಲಿ ಬಹು ಮುಖ್ಯ.

(ಲೇಖಕರು ನಿವೃತ್ತ ಪ್ರಾಂಶುಪಾಲರು ಮತ್ತು
ಸಂವಹನಾ ಸಮಾಲೋಚಕರು)

ಇದನ್ನೂ ಓದಿ: Shishir Hegde Column: ಮಕ್ಕಳಿಗೆ ಮೊಬೈಲ್‌ ಸಂಸ್ಕಾರ- ಹೇಗೆ, ಯಾವಾಗ ಮತ್ತು ಎಷ್ಟು ?