Friday, 25th October 2024

Dr Sudhakar Hosalli Column: ಇವರು ಕೂಡ ಗುಲಾಮರೇ, ಗುಲಾಮರಂತೆ ಇದ್ದಾರಷ್ಟೇ !

ಒಡಲಾಳ

ಡಾ.ಸುಧಾಕರ ಹೊಸಳ್ಳಿ

ಸೆಪ್ಟೆಂಬರ್ ತಿಂಗಳು ತನ್ನದೇ ಆದ ಒಂದಷ್ಟು ವಿಶೇಷತೆಗಳನ್ನು ಹೊಂದಿದೆ. ಶಿಕ್ಷಕರ ದಿನಾಚರಣೆ ಅವುಗಳ ಲ್ಲೊಂದು. ಅಂತೆಯೇ ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಮುಗಿದುಹೋಯಿತು, ಶಿಕ್ಷಕರು/ಗುರುಗಳು ಸಂಭ್ರಮಿಸಿದರು. ಆದರೆ ಕೆಲ ತಿಂಗಳ ಹಿಂದೆ ಬದುಕಿಗೆ ವಿದಾಯ ಹೇಳಿದ ಚೆಲುವರಾಜು ಎಂಬ ಅತಿಥಿ ಉಪನ್ಯಾಸಕರು ಶಿಕ್ಷಕರ ದಿನವನ್ನು ಮತ್ತೆ ನೆನಪು ಮಾಡುತ್ತಿದ್ದಾರೆ, ಆ ದಿವಸ ಕಹಿಯಾಗಿ ಕಾಡುತ್ತಿದೆ, ಆರ್ತನಾದದ ಭಾವವನ್ನು ಮೂಡಿ ಸುತ್ತಿದೆ.

ಶಿಕ್ಷಕರ ದಿನಾಚರಣೆಯಂದು ಶೈಕ್ಷಣಿಕ ವಲಯವಷ್ಟೇ ಅಲ್ಲದೆ, ಸಾಧಕರೆಲ್ಲರೂ ತಂತಮ್ಮ ಗುರುಗಳನ್ನು ಹೃದಯ ಪೂರ್ವಕವಾಗಿ ನೆನೆದು ಸಂಭ್ರಮಿಸುವುದಿದೆ. ತಾವು ಬದುಕು ಕಟ್ಟಿಕೊಳ್ಳುವುದಕ್ಕೆ ಮತ್ತು ತಮ್ಮಿಂದ ಸಾಧನೆ ಹೊಮ್ಮುವುದಕ್ಕೆ ಶಿಕ್ಷಕರು ವಿವಿಧ ಹಂತಗಳಲ್ಲಿ ಒತ್ತಾಸೆಯಾಗಿ ನಿಂತು ಭದ್ರಬುನಾದಿ ಹಾಕಿದ್ದೇ ಕಾರಣ ಎಂದು ಈ ಸಾಧಕರು ಹೇಳಿಕೊಳ್ಳುವುದಕ್ಕೆ ಈ ಸಂದರ್ಭ ಸಾಕ್ಷಿಯಾಗುತ್ತದೆ. ಸರಕಾರಿ ಮಟ್ಟದಲ್ಲಿ ಅಭಿನಂದನಾ ಸಮಾರಂಭ ಗಳು, ‘ಉತ್ತಮ ಶಿಕ್ಷಕ’ ಪ್ರಶಸ್ತಿಗಳ ಪ್ರಕಟಣೆ ಮತ್ತು ಪ್ರದಾನ ನಡೆಯುತ್ತವೆ.

ವಿವಿಧ ಸಂಘ-ಸಂಸ್ಥೆಗಳು ಅನೇಕಾನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಶಿಕ್ಷಕರನ್ನು ಸ್ಮರಿಸುತ್ತವೆ, ಸತ್ಕರಿಸುತ್ತವೆ. ಶಾಲಾ-ಕಾಲೇಜು ಗಳಲ್ಲಂತೂ ವಿದ್ಯಾರ್ಥಿಗಳು ಶಿಕ್ಷಕರನ್ನು ಭಿನ್ನಮಜಲು ಗಳಲ್ಲಿ ಗೌರವಿಸಿ ಸಂಭ್ರಮಿಸುತ್ತಾರೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಭಾವ ಸಮಾಜದಲ್ಲೂ ಮೂಡುತ್ತದೆ.
ಇಷ್ಟೆಲ್ಲ ಸಂಭ್ರಮಗಳ ನಡುವೆಯೂ ಒಂದು ವರ್ಗವು ಸೂತಕದ ಭಾವವನ್ನು ಹೊಂದಿರುತ್ತದೆ- ಅದುವೇ ‘ಅತಿಥಿ ಉಪನ್ಯಾಸಕರು’ ಎಂಬ ಹಣೆಪಟ್ಟಿಯ ನತದೃಷ್ಟರ ಗುಂಪು. ಮೊನ್ನೆ ಸ್ನೇಹಿತರೊಬ್ಬರು ಕರೆ ಮಾಡಿ, ‘ಅತಿಥಿ ಉಪನ್ಯಾಸಕ ನರಸಿಂಹಣ್ಣ ತೀರಿಹೋದ’ ಎಂದು ಹೇಳಿದಾಗ ನನಗೆ ಅಪಾರ ನೋವಾಯಿತು.

ಅದಾಗಿಯೂ ಅಚ್ಚರಿಯೇನೂ ಆಗಲಿಲ್ಲ. ಕಾರಣ, ಅತಿಥಿ ಉಪನ್ಯಾಸಕರು ಪ್ರತಿದಿನ ಮಾನಸಿಕವಾಗಿ ಸಾಯುತ್ತಲೇ
ಇರುತ್ತಾರೆ; ಅಂದು ಮಾತ್ರ ನರಸಿಂಹಣ್ಣನ ಭೌತಿಕ ಸಾವು ಆಗಿತ್ತಷ್ಟೇ! ಸತ್ತುಹೋದ ನರಸಿಂಹ ಸ್ವಾಮಿ ಸಾಮಾನ್ಯ ರಾಗಿರಲಿಲ್ಲ; ಎಂಎ, ಎಂಫಿಲ್, ಪಿಎಚ್‌ಡಿ ಮಾಡಿಕೊಂಡು 20 ವರ್ಷಕ್ಕೂ ಹೆಚ್ಚು ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ತ್ಯಾಗಿ, ಸಂಘಟಕರು ಮತ್ತು ಹೋರಾಟಗಾರರು. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಈ ಶಿಕ್ಷಕರು ಅಂದು ಅಸುನೀಗಿದಾಗ ಪ್ರಾಯಶಃ ಅವರೊಂದಿಗೆ ಸಾಗಿದ್ದು ಒಂದಷ್ಟು ನೆನಪುಗಳು ಮಾತ್ರ. ಕಾರಣ ಅವರು ಬದುಕಿದ್ದಾಗಲೂ ವೃತ್ತಿ ಭದ್ರತೆ, ಆಧಾರ ಇರಲಿಲ್ಲ.

ಮಣ್ಣೊಳಗೆ ಸೇರುವಾಗಲೂ ಅಭದ್ರತೆಯನ್ನೇ ಹೊದ್ದು ಮಲಗಿದ್ದರು. ಹೆಲ್ತ್ ಇಲ್ಲ, ಹೆಲ್ತ್ ಇನ್ಷೂರೆನ್ಸ್ ಇಲ್ಲ. ಪಿಂಚಣಿಯೂ ಇಲ್ಲ, ನವಪಿಂಚಣಿಗೂ ಸೇರಲಿಲ್ಲ. ಸಾಕಷ್ಟು ಓದಿದ್ದರೂ, ಪದವಿ ಇದ್ದರೂ ಅವಿದ್ಯಾವಂತ ರಂತೆಯೇ ದಿನದೂಡಬೇಕಾಯಿತು!

ಹೌದು, ತಾನು ದಕ್ಕಿಸಿಕೊಂಡಿರುವ ಉನ್ನತ ಜ್ಞಾನದ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗುವ ಅತಿಥಿ ಉಪನ್ಯಾಸಕ, ಸೆಪ್ಟೆಂಬರ್ 5ರಂದು ಹೆಮ್ಮೆ ಪಡುವಂತೆಯೂ ಇಲ್ಲ, ‘ನಾನು ಶಿಕ್ಷಕನಲ್ಲ’ ಎಂದು ಹೇಳಿ ಕೊಳ್ಳುವ ಸ್ಥಿತಿಯಲ್ಲೂ ಇರುವುದಿಲ್ಲ. ವರ್ಷದಲ್ಲಿ 10 ತಿಂಗಳ ಕಾಲ ಮೇಷ್ಟ್ರು ಎನಿಸಿಕೊಂಡರೆ, 2 ತಿಂಗಳ ಕಾಲ ಕಟ್ಟಡ ಕಾರ್ಮಿಕ, ಕಬ್ಬು ಕಡಿಯುವವ, ಮೂಟೆ ಹೊರುವವ, ಸೊಪ್ಪು ಮಾರುವವ ಇತ್ಯಾದಿ ಪಾಟ್ ಟೈಮ್ ಕೆಲಸಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಆತನದ್ದು. ಅತಿಥಿ ಉಪನ್ಯಾಸಕರು ಪಾಠ ಮಾಡುತ್ತಾರೆ, ಮೌಲ್ಯಮಾಪನದಲ್ಲಿ ತೊಡಗಿಸಿಕೊಳ್ಳುತ್ತಾರೆ, ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಾರೆ; ಇಷ್ಟಾಗಿಯೂ ಎರಡು ತಿಂಗಳು ಮಾತ್ರ ಶಿಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಇವರಿಗೆ ಬೆನಿಫಿಟ್ ಇಲ್ಲ, ರಿಟೈರ್‌ಮೆಂಟ್ ಇದೆ. ಕೋವಿಡ್ ಸಂದರ್ಭ ದಲ್ಲಂತೂ ಅನೇಕ ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾದರು.

ಮೇಲೆ ಉಲ್ಲೇಖಿಸಿದ ನರಸಿಂಹಣ್ಣನದ್ದು ಒಂದು ಉದಾಹರಣೆ ಅಷ್ಟೇ. ವಯೋವೃದ್ಧ ತಂದೆ-ತಾಯಿಗೆ ಸಕಾಲದಲ್ಲಿ ಮಾತ್ರೆ-ಔಷಧಿ ಕೊಡಿಸಲಾಗದ, ಅಕ್ಕ-ತಂಗಿಯರ ಜತೆ ಹಬ್ಬ ಮಾಡಲಾಗದ, ಮಗಳಿಗೆ ಬಳೆ ಕೊಡಿಸಲಾಗದ ಹತಭಾಗ್ಯರು ಬಹುತೇಕ ಅತಿಥಿ ಉಪನ್ಯಾಸಕರು.

ಇಡೀ ರಾಜ್ಯದಲ್ಲಿ ಸುಮಾರು 11 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಕೆಲವರಿಗೆ 4 ಗಂಟೆ, ಮತ್ತೆ ಕೆಲವರಿಗೆ ೮ ಗಂಟೆ, ಕೆಲವೇ ಕೆಲವರಿಗೆ ೧೫ ಗಂಟೆ ಕೆಲಸ; ೪ ಗಂಟೆಗೆ ೮ ಸಾವಿರ, ೮ ಗಂಟೆಗೆ ೨೦ ಸಾವಿರ, ೧೫ ಗಂಟೆಗೆ ೪೦ ಸಾವಿರ ಸಂಬಳ. ಇವರು ಹೀಗೆ ದಯನೀಯವಾಗಿ ಬದುಕು ಸಾಗಿಸುತ್ತಿರುವುದು ನಮ್ಮ ವ್ಯವಸ್ಥೆಯೇ ತಲೆ ತಗ್ಗಿಸಬೇಕಾದಂಥ ವಿದ್ಯಮಾನ.

ಪಶ್ಚಿಮ ಬಂಗಾಳ, ಹರಿಯಾಣದಂಥ ಕೆಲ ರಾಜ್ಯಗಳಲ್ಲಿ ಇವರಿಗೆ ಒಂದಷ್ಟು ಭದ್ರತೆ ಕೊಟ್ಟು ನಿರಾಳತೆ ಒದಗಿಸ ಲಾಗಿದೆಯಷ್ಟೇ. ಸಮಾಜದಲ್ಲಿ ಎಲ್ಲ ವರ್ಗದ ಕಾರ್ಮಿಕ ವಲಯಕ್ಕೂ ಒಂದಿಷ್ಟು ಭದ್ರತೆ ಒದಗಿಸುವ ಕೆಲಸ ವಾಗುತ್ತಿದೆ, ಸಂವಿಧಾನದ ಆಶಯಗಳ ಅಡಿಯಲ್ಲಿ ಅವರಿಗೆ ಸವಲತ್ತುಗಳನ್ನು ವಿಸ್ತರಿಸಲಾಗುತ್ತದೆ. ಆದರೆ ಅತಿಥಿ ಉಪನ್ಯಾಸಕರಿಗೆ ಮಾತ್ರ ಸಂವಿಧಾನ, ನಿಯಮಗಳು, ಮಾನವೀಯತೆ ಸಹಕರಿಸುತ್ತಿಲ್ಲ. ವೃತ್ತಿಯಲ್ಲೂ ‘ಅತಿಥಿ’, ಬದುಕಿನಲ್ಲೂ ‘ಅತಿಥಿ’ಯಾಗಿಯೇ ಏಗಬೇಕಾದ ಇವರ ಗೋಳು ಕೇಳುವವರಾರು? ಇವರ ಬಾಳಲ್ಲಿ ‘ಸೆಪ್ಟೆಂಬರ್ ೫’ ಬರಲೇಬಾರದಾ? ಅಥವಾ ಮುಂಬರುವ ಸೆಪ್ಟೆಂಬರ್ ಇವರ ಬಾಳಲ್ಲಿ ಬೆಳಕು ತರಬಹುದಾ?

(ಲೇಖಕರು ಸಂವಿಧಾನ ತಜ್ಞರು)

ಇದನ್ನೂ ಓದಿ: Teachers Day: ಕಲಿಯುಗದಲ್ಲಿ ಶಿಷ್ಯರಿಗೆ ಗುರುಗಳು ವಂದಿಸಿ ವಿದ್ಯೆ ಕಲಿಸುವಂತಾಗಿದೆ: ಡಿಕೆಶಿ