ಶಹಾಪುರ: ತಾಲೂಕಿನ ಗಂಗನಾಳ ಗ್ರಾಮದಲ್ಲಿ ತಾನು ಮಾಡಿದ ಸಾಲ ತೀರಿಸಲು ಸಾಲಗಾರರಿಗೆ ಸಹಕಾರ ನೀಡಲು ಒಪ್ಪದ ಪತ್ನಿಯನ್ನೇ ಪತಿಯೇ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶರಣಬಸಮ್ಮ ಬಾಗಿಲೇರ 25 ಮೃತ ದುರ್ದೈವಿ. ಕೊಲೆಗೈದ ಪತಿ ಹುಣಸಿಗಿ ಭೀಮಣ್ಣ ಸಾಬಣ್ಣ ಭಾಗಲೇರ್ ಜೈಲು ಸೇರಿದ್ದಾನೆ.
ಈ ಕೊಲೆ ನಡೆದಿದ್ದು 2024 ಜೂನ್ 25ರಂದು ಶರಣಬಸಮ್ಮ ಸಾವಿನ ಬಗ್ಗೆ ಅನುಮಾನಗೊಂಡಿದ್ದ ಈಕೆಯ ಸಹೋದರ ಅಂಬಲಪ್ಪ ಶರಣಗೌಡ ಬಿರಾದಾರ್ ಗೋಗಿ ಠಾಣೆಗೆ ದೂರು ನೀಡಿದ್ದ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಮೊಬೈಲ್ ನಲ್ಲಿ ಆರೋಪಿ ತನ್ನ ಪತ್ನಿ ಜೊತೆ ಮಾತನಾಡಿದ್ದ ಆಡಿಯೋ ರೆಕಾರ್ಡಿಂಗ್ ಕೊಲೆಯ ಸುಳಿವು ನೀಡಿದೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ಕೊಲೆ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಘಟನೆ ಹಿನ್ನಲೆ: ಗಂಗನಾಳ ಗ್ರಾಮದ ಶರಣ ಬಸಮ್ಮಾಳನ್ನು 2023 ಮೇ 30 ರಂದು ಹುಣಸಿಗಿ ಪಟ್ಟಣದ ಭೀಮಣ್ಣ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ಜು. 25 ರಂದು ಆರೋಪಿ ಭೀಮಣ್ಣ ಮತ್ತು ಆತನ ಪತ್ನಿ ಮೃತ ಶರಣಬಸಮ್ಮ ಬಾಗಲೇರ್ ಗಂಗನಾಳ ಗ್ರಾಮಕ್ಕೆ ಬಂದು ರಾತ್ರಿ ಊಟ ಮಾಡಿ ಮಹಡಿ ಮನೆಯ ಮೇಲೆ ಮಲಗಿದ್ದಾರೆ.
ಏಕಾಏಕಿ ರಾತ್ರಿ 12 ಸುಮಾರಿಗೆ ತನ್ನ ಪತ್ನಿ ಶರಣಬಸಮ್ಮ ಮಾತನಾಡುತ್ತಿಲ್ಲ ಸತ್ತಿರಬಹುದು ಎಂದು ಆಕೆಯ ಮನೆಯವರಿಗೆ ಕರೆದಿದ್ದಾನೆ. ಆಗ ಮನೆಯವರು ನೋಡಿ ಮರುದಿನ ಅಂತ್ಯಕ್ರಿಯ ನೆರವೇರಿಸಿದ್ದಾರೆ. ಮೃತಳ ಸಹೋದರ ಅಂಬಲಪ್ಪ ತಮ್ಮ ತಂಗಿ ಶರಣಬಸಮ್ಮಾಳದ್ದು ಅಸಹಜ ಸಾವು ಎಂದು ಗೋಗಿ ಠಾಣೆಯಲ್ಲಿ ದೂರು ನೀಡಿದ್ದ. ಕೆಲ ದಿನಗಳ ನಂತರ ಮೃತ ಶರಣಬಸಮ್ಮಾಳ ಮೊಬೈಲ್ ಪರಿಶೀಲನೆ ನಡೆಸಿದಾಗ ಕಾಲ್ ರೆಕಾರ್ಡಿಂಗ್ ನಲ್ಲಿ ಮೃತಾಳ ಪತಿ ಭೀಮಣ್ಣ ತನ್ನ ಪತ್ನಿ ಜೊತೆ ಮಾತಾಡಿದ್ದಾನೆ.
ನನಗೆ ತುಂಬಾ ಸಾಲವಾಗಿದ್ದು ನೀನು ಸಹಕರಿಸಬೇಕು ನಿರಾಕರಿಸಿದಲ್ಲಿ ನಿನ್ನನ್ನು ಕೊಲೆ ಮಾಡುವೆ ಎಂದು ಬೆದರಿಕೆ ಹಾಕಿದ್ದಾನೆ.
ಇದಕ್ಕೆ ತಮ್ಮ ತಂಗಿ ಮೃತ ಶರಣಬಸಮ್ಮ ನಿರಾಕರಿಸಿದ್ದರಿಂದ ಆಕೆಯನ್ನು ಆತನ ಪತಿ ಭೀಮಣ್ಣ ತನ್ನ ಊರಲ್ಲಿ ಕೊಲೆ ಮಾಡಿದರೆ ಸಿಕ್ಕಿಹಾಕಿಕೊಳ್ಳಬಹುದು ಎಂದು ಗಂಗನಾಳ ಗ್ರಾಮಕ್ಕೆ ಕರೆತಂದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಸಹೋದರ ಅಂಬಲಪ್ಪ ದೂರು ದಾಖಲಿಸಿದ್ದಾನೆ.
ತಾಯಿ ನೀಲಮ್ಮ ಸಾಬಣ್ಣ, ಸಹೋದರರಾದ ಮುತ್ತಪ್ಪ ಜಟ್ಟಪ್ಪ ದೇವಪ್ಪ ಮತ್ತು ಶಾಂತಪ್ಪ ಸೇರಿ ಒಟ್ಟು 7 ಜನರ ವಿರುದ್ಧ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: Bagalkot story: ಭ್ರೂಣಹತ್ಯೆಗೆ ಬೀಳದ ಕಡಿವಾಣ