Thursday, 21st November 2024

Elephant Death: ಬಿಳಿಗಿರಿರಂಗನ ಬೆಟ್ಟ ಅರಣ್ಯದಲ್ಲಿ ಮತ್ತೊಂದು ಹೆಣ್ಣಾನೆ ಸಾವು; 15 ದಿನಗಳಲ್ಲಿ 2ನೇ ಸಾವು

elephant death

ಹನೂರು: ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ (BRT tiger reserve) ವ್ಯಾಪ್ತಿಯಲ್ಲಿ ಹೆಣ್ಣಾನೆಯೊಂದು (Elephant Death) ಮೃತಪಟ್ಟಿದೆ. ಸಂರಕ್ಷಿತಾರಣ್ಯದ ಬೈಲೂರು ವನ್ಯಜೀವಿ ವಲಯದ ಪಿಜಿ ಪಾಳ್ಯ ಶಾಖೆ ಮಾವತ್ತೂರು ಎ ಗಸ್ತಿನಲ್ಲಿ ಈ ಘಟನೆ ನಡೆದಿದೆ. ಇದರೊಂದಿಗೆ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ 2 ಆನೆಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ವನ್ಯಪ್ರಿಯರಲ್ಲಿ (Wildlife lovers) ಆತಂಕ ಮೂಡಿಸಿದೆ.

ಕಳೆದ 15 ದಿನಗಳ ಹಿಂದೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯದ ಆಳದಕೆರೆ ಅರಣ್ಯ ಪ್ರದೇಶದಲ್ಲಿ ಎಂಟು ತಿಂಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿದ್ದ ಗಂಡಾನೆಯ ಎರಡು ದಂತಗಳು ಪತ್ತೆಯಾಗಿತ್ತು. ಇದಾದ ಎರಡೇ ದಿನಕ್ಕೆ, ಆಗಸ್ಟ್ 30ರಂದು ಬೈಲೂರು ವನ್ಯಜೀವಿ ವಲಯ ಪಿಜಿ ಪಾಳ್ಯ ಮಾವತ್ತೂರು ಶಾಖೆ ಬಿ ಗಸ್ತಿನಲ್ಲಿ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಸುಮಾರು 60 ರಿಂದ 65 ವಯಸ್ಸಿನ ಹೆಣ್ಣಾನೆ ಮೃತಪಟ್ಟ ಎಂಟು ದಿನಗಳ ನಂತರ ಪತ್ತೆಯಾಗಿತ್ತು.

ಇದೀಗ ಸೆಪ್ಟೆಂಬರ್ 16ರಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದ ಪಿಜಿ ಪಾಳ್ಯ ಶಾಖೆ ಮಾವತ್ತೂರು ಎ ಗಸ್ತಿನಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿರುವುದು ಕಂಡುಬಂದಿದೆ. ಹೆಣ್ಣಾನೆ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಆರ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಎಸಿಎಫ್ ಕೆ ಸುರೇಶ್, ಆರ್ಎಫ್ ಒ ಪ್ರಮೋದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ವಾಸಿಂ ಮಿರ್ಜಾ ಅವರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವನ್ಯ ಜೀವಿ ಪ್ರಿಯರಲ್ಲಿ ಆತಂಕ

ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ಎರಡು ಆನೆಗಳು ಮೃತಪಟ್ಟಿವೆ. ಆನೆಗಳು ಸಾಲುಸಾಲಾಗಿ ಮೃತಪಡುತ್ತಿದ್ದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಆನೆಗಳ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಇನ್ನಷ್ಟು ಆನೆಗಳು ಸಾಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಮುಂದೆ ಆನೆಗಳು ಸಾಯದಂತೆ ಎಚ್ಚರ ವಹಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Anant Ambani: ನಮೀಬಿಯಾದ 700ಕ್ಕೂ ಅಧಿಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾದ ಅನಂತ್ ಅಂಬಾನಿ!