Friday, 22nd November 2024

Vande Bharat Train: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲು ಹೋಗಿ ರೈಲು ಹಳಿಗೆ ಬಿದ್ದ ಶಾಸಕಿ; ವೈರಲ್‌ ವಿಡಿಯೊ ಇಲ್ಲಿದೆ

Vande Bharat Train

ಲಕ್ನೋ: ಆಗ್ರಾ-ವಾರಾಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat Train) ಹಸಿರು ನಿಶಾನೆ ತೋರಿಸಲು ಮುಂದಾಗಿದ್ದ ಉತ್ತರ ಪ್ರದೇಶದ ಇಟಾವಾ ಶಾಸಕಿ, ಬಿಜೆಪಿಯ ಸರಿತಾ ಬಹ್ದೌರಿಯಾ (Sarita Bahdauriya) ರೈಲ್ವೆ ಹಳಿಯ ಮೇಲೆ ಬಿದ್ದ ಘಟನೆ ಸೋಮವಾರ ನಡೆದಿದ್ದು, ವಿಡಿಯೊ ವೈರಲ್‌ ಆಗಿದೆ. ಅದೃಷ್ಟವಶಾತ್‌ ಅವರು ಯಾವುದೇ ಅಪಾಯವಿದಲ್ಲದೆ ಪಾರಾಗಿದ್ದಾರೆ (Viral Video).

ಸಂಜೆ 6 ಗಂಟೆ ಸುಮಾರಿಗೆ ರೈಲು ಇಟಾವಾ ನಿಲ್ದಾಣ (Etawah Junction)ಕ್ಕೆ ಬರುತ್ತಿದ್ದಂತೆ ಈ ಘಟನೆ ಸಂಭವಿಸಿದೆ. ಹಸಿರು ಧ್ವಜವನ್ನು ಹಿಡಿದುಕೊಂಡಿದ್ದ 61 ವರ್ಷದ ಶಾಸಕಿ ಸರಿತಾ ಬಹ್ದೌರಿಯಾ ಇದ್ದಕ್ಕಿದ್ದಂತೆ ಹಳಿಗೆ ಬಿದ್ದುಬಿಟ್ಟಿದ್ದಾರೆ. ಕೂಡಲೇ ನೆರೆದಿದ್ದ ಹಲವರು ಧಾವಿಸಿ ಅವರನ್ನು ಮೇಲಕ್ಕೆ ಎತ್ತಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಶಾಸಕಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು 20175 ಸಂಖ್ಯೆಯ ವಂದೇ ಭಾರತ್ ರೈಲನ್ನು ವರ್ಚುವಲ್ ಆಗಿ ಉದ್ಘಾಟಿಸಿದ ನಂತರ ಆಗ್ರಾದಲ್ಲಿ ರೈಲ್ವೆ ಸಚಿವ ರಣವೀತ್‌ ಸಿಂಗ್ ಬಿಟ್ಟು ಹಸಿರು ನಿಶಾನೆ ತೋರಿದ್ದರು.

ಬಿಜೆಪಿಯ ಇಟಾವಾ ಘಟಕದ ಖಜಾಂಚಿ ಸಂಜೀವ್ ಭದೌರಿಯಾ ಅವರು ಈ ಬಗ್ಗೆ ಮಾಹಿತಿ ನೀಡಿ, “ಆಕಸ್ಮಿಕವಾಗಿ ರೈಲು ಹಳಿಗೆ ಬಿದ್ದ ಶಾಸಕರನ್ನು ಕೂಡಲೇ ಮೇಲಕ್ಕೆತ್ತಲಾಯಿತು. ನಂತರ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಈಗ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ” ಎಂದು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸದ ಜಿತೇಂದ್ರ ದೌಹಾರೆ, ಬಿಜೆಪಿ ಸಂಸದ ರಾಮ್ ಶಂಕರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಗದ್ದಲ ಉಂಟಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಾಸಕಿ ರೈಲಿನಿಂದ ಸ್ವಲ್ಪವೇ ದೂರದ ಅಂತರದಲ್ಲಿ ಬಿದ್ದಿದ್ದು, ಕೂದಲೆಳೆ ಅಂತರದಿಂದ ಬಹುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಆಪ್ತ ಮೂಲಗಳು ಹೇಳಿದ್ದೇನು?

ʼʼಅದೃಷ್ಟವಶಾತ್ ಸ್ಥಳದಲ್ಲಿದ್ದವರು ಮತ್ತು ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ರೈಲನ್ನು ನಿಲ್ಲಿಸಿ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಸರಿತಾ ಅವರನ್ನು ತಕ್ಷಣವೇ ಹಳಿಗಳಿಂದ ಹೊರ ಕರೆತರಲಾಯಿತು. ಸದ್ಯ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಾಹ್ಯವಾಗಿ ಯಾವುದೇ ಗಾಯಗಳಾಗಿಲ್ಲ. ಹೆಚ್ಚಿನ ವಿವರಗಳಿಗೆ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ.

ನೆಟ್ಟಿಗರ ಪ್ರತಿಕ್ರಿಯೆ

ʼʼಶಾಸಕಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆʼʼ ಎಂದು ನೆಟ್ಟಿಗರೊಬ್ಬರು ಉದ್ಘಾರ ಎಳೆದಿದ್ದಾರೆ. ʼʼಶಾಸಕಿಯ ಪಕ್ಕದಲ್ಲಿ ನಿಂತಿದ್ದ ಭದ್ರತಾ ಪಡೆಯ ಸಿಬ್ಬಂದಿಯೇ ಈ ಘಟನೆಗೆ ಕಾರಣʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಆಕೆಯ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬ ತಳ್ಳಿದ್ದರಿಂದ ಈ ಘಟನೆ ನಡೆದಿದೆʼʼ ಎಂದು ಮಗದೊಬ್ಬರು ಊಹಿಸಿದ್ದಾರೆ. ಹಲವರು ಶಾಸಕಿಯ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಘಟನೆ ಜನಪ್ರತಿನಿಧಿಗಳ ಸುರಕ್ಷತೆಯ ಬಗ್ಗೆ ಕಳವಳವನ್ನೂ ಹುಟ್ಟು ಹಾಕಿದೆ.

ಈ ಸುದ್ದಿಯನ್ನೂ ಓದಿ: Viral News: ಬಿಜೆಪಿ ಮುಖಂಡನ ಬೆದರಿಕೆ; ಉನ್ನತ ಅಧಿಕಾರಿಗಳ ಮುಂದೆಯೇ ಸಮವಸ್ತ್ರ ಕಳಚಿದ ಎಎಸ್‌ಐ: ವಿಡಿಯೊ ಇಲ್ಲಿದೆ