Friday, 22nd November 2024

KEA Exam: ಪಿಎಸ್‌ಐ, ವಿಎಒ, ಕೆ-ಸೆಟ್‌ ಸೇರಿ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

VAO Exam 2024

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆ, ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಪರೀಕ್ಷೆ, ಕೆ-ಸೆಟ್‌ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ರಾಜ್ಯ ಸರ್ಕಾರವು ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕಾದ ಹಿನ್ನೆಲೆಯಲ್ಲಿ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು (KEA Exam) ಕೆಇಎ ಮುಂದೂಡಿ, ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಕೆಇಎ ಪ್ರಕಟಣೆ ಹೊರಡಿಸಿದ್ದು, ಪಿಎಸ್‌ಐ ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಿಎಸ್‌ಐ ಪರೀಕ್ಷೆ ಅ.3ಕ್ಕೆ ನಡೆಯಲಿದೆ. ವಯೋಮಿತಿ ಸಡಿಲಿಕೆ ಮಾಡಿರುವ ಕಾರಣ ವಿಎಒ ಮತ್ತು ಜಿಟಿಟಿಸಿ ಹುದ್ದೆಗಳಿಗೆ ಸೆ.19ರಿಂದ 9 ದಿನ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿ

  • ಪಿಎಸ್‌ಐ ಪರೀಕ್ಷೆ- ಅಕ್ಟೋಬರ್ 3‌
  • ಗ್ರಾಮ ಆಡಳಿತ ಅಧಿಕಾರಿ, ಜಿಟಿಟಿಸಿ ಹುದ್ದೆ(ಕಡ್ಡಾಯ ಕನ್ನಡ)- ಸೆ. 29 ಮತ್ತು ಅ.26 (ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ)
  • ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ- ಅಕ್ಟೋಬರ್‌ 27
  • ಕೆ-ಸೆಟ್-‌ ನವೆಂಬರ್‌-24
  • ಸಹಾಯಕ ಪ್ರಾಧ್ಯಾಪಕರು(ರಾಯಚೂರು ವಿವಿ)- ನವೆಂಬರ್‌-24

ಈಗಾಗಲೇ ಗ್ರಾಮಾಡಳಿತಾಧಿಕರಿ ಹುದ್ದೆಗೆ ಅರ್ಜಿ ಸಲ್ಲಿಸಿರುವವರು ಸೆ.29ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಿ, ಅರ್ಹತಾ ಅಂಕಗಳಿಸದವರಿಗೆ ಮಾತ್ರ ಅ. 27ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು. ಗ್ರಾಮ ಆಡಳಿತ ಅಧಿಕಾರಿ, ಜಿಟಿಟಿಸಿ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆ ಸೆ. 29 ನಡೆಯಲಿದ್ದು, ವಯೋಮಿತಿ ಸಡಿಲಿಕೆಯಿಂದ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ.26ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Government Job News: ವಯೋಮಿತಿ ಮೀರಿದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್;‌ ಎಲ್ಲ ವರ್ಗಕ್ಕೂ 3 ವರ್ಷ ಸಡಿಲಿಕೆ

ಈ ಹಿಂದೆ ಸೆ.22ಕ್ಕೆ ಪಿಎಸ್‌ಐ ಪರೀಕ್ಷೆ (ಕೆಇಎ) ಹಾಗೂ ಸೆ.14, 15ರಂದು ಗ್ರೂಪ್‌ ಬಿ ಹುದ್ದೆಗಳ ಪರೀಕ್ಷೆ (ಕೆಪಿಎಸ್‌ಸಿ) ನಿಗದಿಯಾಗಿತ್ತು. ಆದರೆ, ಸೆ. 22ಕ್ಕೆ ಯುಪಿಎಸ್‌ಸಿ ಪರೀಕ್ಷೆ ನಿಗದಿಯಾಗಿದ್ದರಿಂದ ಪಿಎಸ್‌ಐ ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳು ಆಗ್ರಹಿಸಿದ್ದರು. ಹೀಗಾಗಿ ಪರೀಕ್ಷೆ ಮುಂದೂಡಿಕೆಯಾಗಿದೆ. ಇನ್ನು ರಾಜ್ಯ ಸರ್ಕಾರ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಸೆ.14, 15ರಂದು ನಿಗದಿಯಾಗಿದ್ದ ಗ್ರೂಪ್‌ ಬಿ ಹುದ್ದೆಗಳ ಪರೀಕ್ಷೆಯನ್ನು ಕೆಪಿಎಸ್‌ಸಿ ಮುಂದೂಡಿತ್ತು.