Thursday, 19th September 2024

Kolkata Doctor Murder: ʻವೈದ್ಯೆಯರಿಗೆ ಭದ್ರತೆ ಕೊಡುವುದಷ್ಟೇ ನಿಮ್ಮ ಕೆಲಸ…ʼ ದೀದಿ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಫುಲ್‌ ಕ್ಲಾಸ್‌

supreme-court

ನವದೆಹಲಿ: ಕೋಲ್ಕತ್ತಾ ಟ್ರೈನಿ ವೈದ್ಯೆ ಕೊಲೆ ಅತ್ಯಾಚಾರ ಪ್ರಕರಣ(Kolkata Doctor Murder)ಕ್ಕೆ ಸಂಬಂಧಿಸಿದಂತೆ ಸೂಮೋಟೋ ಕೇಸ್‌ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್‌(Supreme Court) ಇಂದು ವಿಚಾರಣೆ ನಡೆಸಿದ್ದು, ಮಹಿಳಾ ಸುರಕ್ಷತೆಗೆ ಅಗತ್ಯ ಕ್ರಮ ಜರುಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ತಾಕೀತು ಮಾಡಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸುವುದಾಗಿ ಹೇಳಿದ್ದ ಪಶ್ಚಿಮ ಬಂಗಾಳ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಇದ್ದ ನ್ಯಾಯಪೀಠ, ತರಾಟೆಗೆ ತೆಗೆದುಕೊಂಡಿದೆ. ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಮಹಿಳಾ ವೈದ್ಯರಿಗೇಕೆ ಇಂತಹ ಕಟ್ಟ ಮಿತಿಯನ್ನು ಹೇರುತ್ತೀರಿ? ಅವರಿಗೆ ಇಂತಹ ವಿನಾಯಿತಿ ಬೇಕಿಲ್ಲ. ಸಿಫ್ಟ್‌ ಯಾವುದೇ ಆಗಲೀ ಅವರಿಗೆ ಸುರಕ್ಷತೆಯ ಅಗತ್ಯವಿದೆ ಎಂದು ಖಡಕ್‌ಕ್ಕಾಗಿ ಹೇಳಿಕೆ ನೀಡಿದೆ.

ರಾತ್ರಿ ಪಾಳಿಯಲ್ಲಿ ಮಹಿಳಾ ವೈದ್ಯರು ಕೆಲಸ ಮಾಡದೇ ಇದ್ದರೆ ಅವರ ಭವಿಷ್ಯಕ್ಕೆ ಬಹುದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳುವ ಸಾಧ್ಯತೆ ಇದೆ. ಒಬ್ಬೊಬ್ಬರನ್ನೇ ನೈಟ್‌ ಶಿಫ್ಟ್‌ಗೆ ಹಾಕುವ ಬದಲು ಶಿಫ್ಟ್‌ನಲ್ಲಿ ಇಬ್ಬರು ಮಹಿಳಾ ವೈದ್ಯರು ಇರುವಂತೆ ನೋಡಿಕೊಳ್ಳಬೇಕು. ಅವರಿಗೆ ಭದ್ರತೆ ಸುರಕ್ಷತೆ ನೀಡುವುದು ಸರ್ಕಾರದ ಜವಾಬ್ದಾರಿ. ಅದು ನಿಮ್ಮ ನಿಮ್ಮ ಕರ್ತವ್ಯ. ಅದನ್ನು ಬಿಟ್ಟು ಮಹಿಳೆಯರು ರಾತ್ರಿ ಹೊತ್ತು ಕೆಲಸ ಮಾಡುವಂತಿಲ್ಲ ಅಂತ ಹೇಳುವುದು ಸರಿಯಲ್ಲ. ಸೇನೆ, ಪೈಲಟ್‌ಗಳೆಲ್ಲಾ ರಾತ್ರಿ ಪಾಳಿಯಲ್ಲೇ ಕೆಲಸ ಮಾಡಬೇಕಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಇನ್ನು ಆಸ್ಪತ್ರೆಗಳಲ್ಲಿ ಎರಡು ವಾರಗಳಲ್ಲಿ ಸಾಕಷ್ಟು ಸಂಖ್ಯೆಯ ಶೌಚಾಲಯಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೀಠವು ಆದೇಶಿಸಿದೆ.

ವಿಕಿಪೀಡಿಯಾಕ್ಕೆ ಖಡಕ್‌ ಸೂಚನೆ

ಸಂತ್ರಸ್ತೆಯ ಹೆಸರು ಮತ್ತು ಚಿತ್ರವನ್ನು ತೆಗೆದುಹಾಕಲು ವಿಕಿಪೀಡಿಯಾ ನಿರಾಕರಿಸಿದೆ ಎಂದು ಸಂತ್ರಸ್ತೆಯ ಪೋಷಕರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಸಿಬಿಐ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ಕೂಡ ಇದೇ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ತನ್ನ ವೆಬ್‌ಸೈಟ್‌ನಿಂದ ಸಂತ್ರಸ್ತ ವೈದ್ಯರ ಗುರುತನ್ನು ಬಹಿರಂಗಪಡಿಸುವ ಹೆಸರು ಮತ್ತು ಫೋಟೋವನ್ನು ತೆಗೆದುಹಾಕುವಂತೆ ವಿಕಿಪೀಡಿಯಾಕ್ಕೆ ಸೂಚಿಸಿದೆ.

ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಕೈಬಿಡುವ ಅಥವಾ ಮುಂದುವರೆಸುವ ಬಗ್ಗೆ ಇಂದು ಮಹತ್ವದ ನಿರ್ಧಾರ ಘೋಷಣೆಯಾಗಲಿದೆ. ಕಳೆದ 38 ದಿನಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಇಂದು ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸ್ ಕಮಿಷನರ್ ವಿನೀತ್ ಕುಮಾರ್ ಗೋಯಲ್ ಮತ್ತು ಇಬ್ಬರು ಆರೋಗ್ಯ ಅಧಿಕಾರಿಗಳನ್ನು ವಜಾಗೊಳಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದ್ದು, ಈ ಹಿನ್ನೆಲೆ ಇಂದಿನಿಂದ ವೈದ್ಯರು ಪ್ರತಿಭಟನೆ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೆ.10ರ ಸಂಜೆ ಐದು ಗಂಟೆಯಿಂದ ವೈದ್ಯರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಇದರ ಬೆನ್ನಲಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟಿ ಸಿಎಂ ಮಮತಾ ಬ್ಯಾನರ್ಜಿ ವೈದ್ಯರ ಮನವೊಲಿಸಲು ಯತ್ನಿಸಿದರು. ಇದೀಗ ವೈದ್ಯರ ಬೇಡಿಕೆಗೆ ಸರ್ಕಾರ ಬಹುತೇಕ ಒಪ್ಪಿಗೆ ಸೂಚಿಸಿದ್ದು, ಹೀಗಾಗಿ ಪ್ರತಿಭಟನೆ ಕೈಬಿಡುವ ಸಾಧ್ಯತೆ ಹೆಚ್ಚಿದೆ.

ಈ ಸುದ್ದಿಯನ್ನೂ ಓದಿ: Kolkata Doctors Protest: 38 ದಿನಗಳ ಪ್ರತಿಭಟನೆ ಇಂದೇ ಅಂತ್ಯ? ಕೋಲ್ಕತ್ತಾ ವೈದ್ಯರ ನಿರ್ಧಾರ ಏನು?