-ಸಂತೋಷ ಜಾಬೀನ್ ಸುಲೇಪೇಟ
ರಾಜ್ಯ ಸರಕಾರವು ಕಳೆದ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಬೇಕು ಎಂಬ ಒತ್ತಾಯ ಕನ್ನಡಿಗರದ್ದು. ಆದರೆ ಈ ಭಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ದೂರೆಯದಿರುವುದು
ಬೇಸರದ ಸಂಗತಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ವಿವಿಧ ಸಂಘಟನೆಗಳು ಕೇಂದ್ರ ಸರಕಾರದ ಮೇಲೆ ಹಲವು ವರ್ಷಗಳಿಂದ ಒತ್ತಡ ಹೇರುತ್ತಲೇ ಇವೆ.
ಆದರೆ ಕೇಂದ್ರ ಸರಕಾರವು ನಿರ್ಲಕ್ಷಿಸುತ್ತಿರುವುದು ಖಂಡನೀಯ. ಕನ್ನಡ ಅಭ್ಯರ್ಥಿಗಳಿಗೆ ಅವಕಾಶ ದೂರೆಯದೆ ಇರುವುದರಿಂದ ವಂಚನೆಗೆ ಬಲಿಯಾಗುತ್ತಿದ್ದಾರೆ. ಕಳೆದ ವರ್ಷ ನೀಡಿದ ಭರವಸೆ ಈ ವರ್ಷ ಈಡೇರುತ್ತದೆ ಎಂದು ಬಹಳಷ್ಟು ಕನ್ನಡಿಗರು ಕಾದು ಕುಳಿತ್ತಿದ್ದರು. ಆದರೂ ಕನ್ನಡ ಅಭ್ಯರ್ಥಿಗಳಲ್ಲಿ ನಿರಾಶೆ ಮೂಡಿದೆ. ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ದೊರಕಿಸಿ ಕೊಟ್ಟಿದ್ದರೆ ಅವರ ಕಾಳಜಿಗೆ ಹೆಚ್ಚು ತೂಕ ಬರುತ್ತಿತ್ತು. ಮುಖ್ಯ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಲು ಐಬಿಪಿಎಸ್ ಸಿದ್ಧತೆ ನಡೆಸುವ ಮೂಲಕ, ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಹುಮ್ಮಸ್ಸಿನಲ್ಲಿದ್ದವರನ್ನು ನಿರಾಶೆ ಗೊಳಿಸಿದೆ. ತಮ್ಮದಲ್ಲದ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಬೇಕಾದ ಒತ್ತಡವು ಅವರ ಫಲಿತಾಂಶದ ಮೇಲೆ ಸಹಜವಾಗಿ ಪರಿಣಾಮ ಬೀರುತ್ತದೆ.
ಹಿಂದಿ ಮತ್ತು ಇಂಗ್ಲಿಷ್ ಗುಮ್ಮಗಳ ಕಾರಣದಿಂದಾಗಿ ಸಾವಿರಾರು ಪ್ರತಿಭಾವಂತ ಅಭ್ಯರ್ಥಿಗಳು ಕೇಂದ್ರ ಸರಕಾರದ ಉದ್ಯೋಗ ಗಳಿಂದ ವಂಚಿತರಾಗುತ್ತಾರೆ. ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಲ್ಲಿ ಹಿಂದಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಾರ್ವ ಜನಿಕ ವ್ಯವಹಾರಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬ್ಯಾಂಕುಗಳು ಸೇರಿದಂತೆ ಕೇಂದ್ರ ಸರಕಾರದ ಕಚೇರಿಗಳಲ್ಲಿ ಕನ್ನಡೇತರರೇ ತುಂಬಿಕೊಂಡಾಗ, ಹಿಂದಿ ಅಥವಾ ಇಂಗ್ಲಿಷ್ ಗೊತ್ತಿಲ್ಲದ ಗ್ರಾಹಕರು ಹಿಂಜರಿಕೆಗೆ ಒಳಗಾಗುವ ಸಾಧ್ಯತೆಯಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಅವಕಾಶವನ್ನು ಒದಗಿಸುವುದರಿಂದ ಪ್ರತಿಭಾವಂತರಿಗೆ ಸಮಾನ ಸ್ಪರ್ಧೆಯ ಅವಕಾಶ ಗಳನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಕೇವಲ ಭಾಷಣದ ಮೂಲಕ ಕನ್ನಡದ ಬೆಳೆಸಿ ಕನ್ನಡ ಉಳಿಸಿ ಎಂದು ಹೇಳಿದರೆ ಸಾಲದು. ಕನ್ನಡ ಭಾಷೆ ಉಳಿಯಬೇಕಾದರೆ ಇಂತಹ ಪರಿಕ್ಷೆಗಳಿಗೆ ಅವಕಾಶ ಒದಗಿಸುವುದು ಮೊದಲ ಆದ್ಯತೆಯಾಗಬೇಕು. ಆಗ ಮಾತ್ರ
ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಲು, ಬೆಳೆಸಲು ಸಾಧ್ಯವಾಗುತ್ತದೆ. ಆದ್ದರಿಂದ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಕೇಂದ್ರದ ವಿರುದ್ಧ ಪ್ರತಿಭಟಿಸಿ ಹೆಚ್ಚು ಒತ್ತಡ ತರಬೇಕು.