Friday, 22nd November 2024

V Somanna: ರಾಜಕಾರಣಿಗಳು ರಾಜಕಾರಣ ಬಿಟ್ಟು ಅಭಿವೃದ್ಧಿ ಕಾರ್ಯ ಮಾಡಬೇಕು- ಸಚಿವ ಸೋಮಣ್ಣ 

konkan railway

ತುಮಕೂರು: ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಉಳಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದಿಲ್ಲಿ ಹೇಳಿದರು.

ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ-2024, ಸ್ವಚ್ಛತೆಯೆಡೆ ದಿಟ್ಟ ಹೆಜ್ಜೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಮಾಡುವುದು ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಅದನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಜನಪ್ರತಿನಿಧಿಗಳು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಜನರ ಬದುಕು ಹಸನಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಹಳ್ಳಿಗಳ ಸರ್ವತೋಮುಖ ಪ್ರಗತಿಗೆ ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.

ಬೆಳಗುಂಬ ಪಂಚಾಯ್ತಿ ದತ್ತು

ಬೆಳಗುಂಬ ಪಂಚಾಯ್ತಿ, ಸ್ವಾಂದೇನಹಳ್ಳಿ, ಗೂಳೂರು, ಹೆತ್ತೇನಹಳ್ಳಿ, ಹೆಗ್ಗೆರೆ ಈ 5 ಪಂಚಾಯ್ತಿಗಳನ್ನು ಆಂದೋಲ ನವನ್ನಾಗಿ ಪರಿವರ್ತನೆ ಮಾಡುವ ಜತೆಯಲ್ಲಿ ಈ ಪಂಚಾಯ್ತಿಗಳನ್ನು ದತ್ತು ತೆಗೆದುಕೊಳ್ಳುವಂತೆ ಜಿ.ಪಂ. ಸಿಇಓಗೆ ಸೂಚನೆ ನೀಡಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ ಗ್ರಾಮ ಪಂಚಾಯ್ತಿಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಸಚಿವ ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. 

5 ಪಂಚಾಯ್ತಿಗಳಲ್ಲಿ ತಿಂಗಳಿಗೆ 2-3 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಮನೆ ಬಾಗಿಲಿಗೆ ಹೋಗುವ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬೇಕಾಗಿದೆ ಎಂದರು. 

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಸಾಮಾನ್ಯ ಜನರಿಗೆ ವೈಯುಕ್ತಿಕ ಶೌಚಾಲಯ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. 

50:50ರ ಅನುಪಾತದಲ್ಲಿ ಅನುದಾನ ಸಹ ಒದಗಿಸಲಾಗುತ್ತಿದೆ. ಆದರೆ ಯೋಜನೆಯ ಉಸ್ತುವಾರಿಯನ್ನು ರಾಜ್ಯ ಸರ್ಕಾರಗಳೇ ನೋಡಿಕೊಳ್ಳುತ್ತಿವೆ ಎಂದರು. 

ಶಾಸಕ ಸುರೇಶ್‌ಗೌಡ ಮಾತನಾಡಿ, ಕೇಂದ್ರ ಸಚಿವ ಸೋಮಣ್ಣ ಅವರು ರೈಲ್ವೆ ಸಚಿವರಾಗಿ ಕೇವಲ 3 ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರಾಂತಿ ಮಾಡಿದ್ದಾರೆ. ಶರವೇಗದಲ್ಲಿ ಕೆಲಸ ಮಾಡಿದ ಯಾವ ಸಂಸದರನ್ನು ನಾವು ನೋಡಿರಲಿಲ್ಲ. ಅಷ್ಟು ವೇಗದಲ್ಲಿ ಸೋಮಣ್ಣನವರು ಕೆಲಸ ಮಾಡುತ್ತಿದ್ದಾರೆ ಎಂದರು.

ಅಧಿಕಾರಿಗಳು ಕಾಲಹರಣ ಮಾಡಬೇಡಿ

ತಾ.ಪಂ.ಇಒ ಹಾಗೂ ಪಂಚಾಯ್ತಿ ಪಿಡಿಒಗಳು ಕಚೇರಿಯಲ್ಲಿ ಕುಳಿತು ಕಾಲ ಹರಣ ಮಾಡದೆ ಹಳ್ಳಿಗಳಿಗೆ ತೆರಳಿ ಕಸ ವಿಲೇವಾರಿ ಸೇರಿದಂತೆ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. 

ಪ್ರತಿಯೊಬ್ಬರೂ ಮನೆಯಲ್ಲಿನ ಕಸವನ್ನು ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಕಸದ ವಾಹನಗಳಿಗೆ ನೀಡಿದರೆ ತುಂಬಾ ಅನುಕೂಲವಾಗಲಿದೆ ಎಂದರು. 

 ಜಿ.ಪಂ ಸಿಇಒ ಜಿ. ಪ್ರಭು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಾರ್ಷಿಕ ಬಜೆಟ್ 9 ಲಕ್ಷ ಕೋಟಿ. ಇದರಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು 4 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ. ಹಾಗಾಗಿ ಪ್ರತಿಯೊ ಬ್ಬರೂ ಸಹ ತಮ್ಮ ಮನೆ ಜತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಕಸ ಸಂಗ್ರಹಣೆಯಿಂದ ಬರುವ ಪ್ಲಾಸ್ಟಿಕ್‌ನ್ನು ಸರ್ಕಾರವೇ ಖರೀದಿಸಲು ಮುಂದಾಗಿದೆ. ಈ ಪ್ಲಾಸ್ಟಿಕ್ ಪುಡಿಯಿಂದ ಡಾಬರೀಕರಣಕ್ಕೆ ನೇರವಾಗಿ ಬಳಸಲು ಸರ್ಕಾರ ಆದೇಶಿಸಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬೆಳಗುಂಬ ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ, ತಾ.ಪಂ. ಮಾಜಿ ಅಧ್ಯಕ್ಷ ಗಂಗಾಂಜನೇಯ ತಾ.ಪಂ. ಇಓ ಹರ್ಷಕುಮಾರ್, ಬೆಳಗುಂಬ ಗ್ರಾ.ಪಂ. ಪಿಡಿಓ ಯೋಗ ಶ್ರೀನಿವಾಸ್, ಸಣ್ಣಮಸಿಯಪ್ಪ, ಕುಂಭಯ್ಯ, ಶಂಕರಣ್ಣ, ಬೆಳಗುಂಬ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: tumkuruniversity: ಭಾರತದ ಭವಿಷ್ಯ ರೂಪಿಸುವಲ್ಲಿ ಯುವಜನರ ಪಾತ್ರ ಪ್ರಮುಖ