ಶರಣಬಸವ ಹುಲಿಹೈದರ ಕೊಪ್ಪಳ
ನರಗಳ ಮೂಲಕ ಲೈಂಗಿಕ ಉನ್ಮಾದ ಹೆಚ್ಚಿಸುವ ಮಾತ್ರೆ ಸೇವನೆ
ಕೈ ಕಟ್ಟಿ ಕುಳಿತಿರುವ ಆಡಳಿತ ವ್ಯವಸ್ಥೆ
ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ಮಾದಕ ವ್ಯಸನಿಗಳ ಬೀಡಾಗಿ ಬದಲಾಗುತ್ತಿದ್ದು, ನಗರದಲ್ಲಿ ನೂರಾರು ಮಕ್ಕಳು ಮತ್ತು ಯುವಕರು ಡ್ರಗ್ ಮಾಫಿಯಾಕ್ಕೆ ಬಲಿ ಆಗಿದ್ದಾರೆ.
ಮೆಡಿಕಲ್ ಶಾಪ್ ನಲ್ಲಿ ದೊರೆಯುವ ಒಂದಷ್ಟು ಔಷಧಿಗಳನ್ನು ಅಸಹಜವಾಗಿ ಸೇವನೆ ಮಾಡಿ, ನಶೆಯಲ್ಲಿ ತೇಲು ತ್ತಿದ್ದಾರೆ. ಗಂಗಾವತಿಯ ಹೃದಯ ಭಾಗವಾದ ಕೇಂದ್ರಿಯ ಬಸ್ ನಿಲ್ದಾಣದ ಸಮೀಪದ ತುಳಸಪ್ಪನ ಛತ್ರದ ಕಟ್ಟಡ ಮತ್ತು ಅದರ ಸುತ್ತಲಿನ ಪ್ರದೇಶ, ಎಪಿಎಂಸಿ ಆವರಣ ಸೇರಿ ವಿವಿಧ ಕಡೆ ಮಕ್ಕಳು ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದಾರೆ. ಯುವಕನೊಬ್ಬ ನರಗಳ ಮೂಲಕ ಮಾದಕ ತೆಗದುಕೊಳ್ಳುವ ವಿಡಿಯೋ ವಿಶ್ವವಾಣಿಗೆ ಲಭ್ಯ ವಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳು, ಚಿಂದಿ ಕಲೆಹಾಕುವವರು ಮತ್ತು ವಲಸೆ ಕಾರ್ಮಿಕ ಮಕ್ಕಳು ಹೆಚ್ಚಿನ ಪ್ರಮಾಣ ದಲ್ಲಿ ಇಂಥ ವ್ಯಸನಕ್ಕೆ ಬಲಿ ಆಗಿದ್ದಾರೆ. ಇದರ ಜತೆಗೆ ಕೆಲವು ಶಾಲಾ- ಕಾಲೇಜು ಮಕ್ಕಳೂ ಈ ವ್ಯಸನಕ್ಕೆ ಆಕರ್ಷಿತ ರಾಗಿದ್ದಾರೆ. ತುಳಸಪ್ಪನ ಛತ್ರದ ಸಮೀಪದಲ್ಲೇ ಬಾಲಕಿಯರ ವಸತಿ ನಿಲಯ ಇದ್ದು, ವ್ಯಸನಕ್ಕೆ ಒಳಗಾದ ಮಕ್ಕಳು ನಶೆ ಏರಿಸಿಕೊಳ್ಳುವುದನ್ನು ನೋಡಿ, ಶಾಲೆ- ಕಾಲೇಜು ವಿದ್ಯಾರ್ಥಿಗಳೂ ಈ ಚಟಕ್ಕೆ ಬಲಿ ಆಗುವ ಆತಂಕ ಎದು ರಾಗಿದೆ. ಮಕ್ಕಳು ವ್ಯಸನಕ್ಕೆ ಬಳಕೆ ಮಾಡುತ್ತಿರುವ ಮಾತ್ರೆಗಳು ಎಲ್ಲಿದ ಸರಬರಾಜು ಆಗುತ್ತಿವೆ ಎಂಬ ಬಗ್ಗೆ ತನಿಖೆ ಆಗಬೇಕಿದೆ.
ಜಂಟಿ ಕಾರ್ಯಾಚರಣೆ
ಸದ್ಯ ಗಂಗಾವತಿಯಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ತಡೆಗೆ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆಯ ಅಗತ್ಯವಿದೆ. ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ- ೧೦೯೮, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರ ಕಚೇರಿಯಿಂದ ಜಂಟಿ
ಕಾರ್ಯಾಚರಣೆ ನಡೆಯಬೇಕಿದೆ. ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಗಳು ಈ ಎಲ್ಲ ಇಲಾಖೆ ಮುಖ್ಯಸ್ಥರನ್ನು ಒಳಗೊಂಡು ಸಭೆ ನಡೆಸುವ ಮೂಲಕ ಶೀಘ್ರವೇ ಕಾರ್ಯಾ ಪ್ರವೃತ್ತರಾಗುವ ತುರ್ತು ಅಗತ್ಯವಿದೆ. ಇಲ್ಲವಾದರೆ ಮಾತ್ರೆ ಮಾರಾಟ ಮಾಡುವ ಈ ಮಾಫಿಯಾ ಶಾಲೆ- ಕಾಲೇಜು ವಿದ್ಯಾರ್ಥಿಗಳನ್ನೂ ಮಾದಕ ವ್ಯಸನಿಗಳಾಗಿರುವ ಕಾಲ ದೂರವಿಲ್ಲ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಲ್ಲಿ?
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಜಿಲ್ಲೆಯ ಶೇಖರಗೌಡ ರಾಮತ್ನಾಳ ಅವರು ಸದಸ್ಯರಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ನಿಯಮಿತವಾಗಿ ಸಭೆಯನ್ನೂ ನಡೆಸುತ್ತಿದ್ದಾರೆ. ಆದರೆ, ಯಾವೊಂದು ಸಭೆಯಲ್ಲೂ ಕೂಡ ಜಿಲ್ಲೆಯ ಮಕ್ಕಳು ಇಂಥ ಆಘಾತಕಾರಿ ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ಚರ್ಚೆ ನಡೆದಿಲ್ಲ. ಜಿಲ್ಲೆಯ ಎಲ್ಲಲ್ಲಿ ಮಕ್ಕಳು ಇಂಥ ಮಾದಕ ವ್ಯಸನಕ್ಕೆ ಬಲಿ ಆಗಿದ್ದಾರೆ. ಎಷ್ಟು ಮಕ್ಕಳು ಯಾವ ಹಂತದಲ್ಲಿ ವ್ಯಸನಿಗಳಾಗಿ, ಬದುಕು ಹಾಳು ಮಾಡಿ ಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಯಾವೊಂದು ಸರ್ವೆ ನಡೆದಿಲ್ಲ. ಈ ಬಗ್ಗೆ ಆಯೋಗ ತುರ್ತು ಕ್ರಮಕ್ಕೆ ಮುಂದಾಗ ಬೇಕಿದೆ.
ಸೇವನೆ ಮಾಡುವುದು ಹೇಗೆ?
ವ್ಯಸನಕ್ಕೆ ಒಳಗಾಗಿರುವ ಮಕ್ಕಳು ಮತ್ತು ಯುವಕರು ಮಾದಕ ವಸ್ತುಗಳನ್ನು ಸೇವನೆ ಮಾಡುವ ಶೈಲಿ ಕೂಡ ಅತ್ಯಂತ ಅಪಾಯಕಾರಿಯಾಗಿದೆ. ಕೆಲವರು ಈ ಮಾತ್ರೆಗಳನ್ನು ನೀರಿನಲ್ಲಿ ಕರಗಿಸಿ ಸಿರಂಜಿ ಮೂಲಕ ಕೈ- ಕಾಲುಗಳ ನರಗಳ ಮೂಲಕ ದೇಹಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಮೊದಲಿಗೆ ಸಿರಂಜಿ ಮೂಲಕ ತಮ್ಮ ದೇಹದ ರಕ್ತವನ್ನು ಡ್ರಾ ಮಾಡಿಕೊಳ್ಳುತ್ತಾರೆ. ಹೀಗೆ ಡ್ರಾ ಮಾಡಲಾದ ರಕ್ತದಲ್ಲಿ ನೀರಿನಲ್ಲಿ ಕರಗಿಸಿದ ಮಾತ್ರೆಗಳನ್ನು ಮಿಕ್ಸ್ ಮಾಡಿಕೊಂಡು ಮತ್ತೊಂದು ಕಡೆಯಿಂದ ನರಗಳ ಮೂಲಕ ಇಂಜಕ್ಟ್ ಮಾಡಿಕೊಳ್ಳುತ್ತಿದ್ದಾರೆ. ವ್ಯಸನಿಗಳು ಮಾದಕ ದ್ರವ್ಯಗಳನ್ನು ದೇಹಕ್ಕೆ ತೆಗೆದುಕೊಳ್ಳುವ ರೀತಿಯ ಕೂಡ ಎದೆ ಝಲ್ ಎನ್ನುವಂತಿವೆ.
ವ್ಯಸನಕ್ಕೆ ಬಳಸುವ ಮಾತ್ರೆಗಳಿವು!
ನಿದ್ರೆ ತರಿಸುವ ಮತ್ತು ಲೈಂಗಿಕ ಉನ್ಮಾದ ತರಿಸುವ ಮಾತ್ರೆಗಳನ್ನು ನೇರವಾಗಿ ನರಗಳ ಮೂಲಕ ದೇಹಕ್ಕೆ ಏರಿಸಿ ಕೊಂಡು ಮತ್ತಿನಲ್ಲಿ ತೇಲುತ್ತಾರೆ. ಸಿಡ್ನಾಫಿಲ್ ಸಿಟ್ರೇಟ್, ಟೆಡಾಲ್ ಫಿಲ್, ಅಲ್ಟ್ರಾ ಜೋಲಮ್ ನಂತಹ ಕಂಟೆಂಟ್ ನ ವಿವಿಧ ಬ್ರಾಂಡ್ ನ ಮಾತ್ರೆಗಳನ್ನು ವ್ಯಸನಿಗಳು ಮಾದಕ ವಸ್ತುಗಳಾಗಿ ಬಳಕೆ ಮಾಡುತ್ತಿದ್ದಾರೆ. ಇಂಥ ವ್ಯವಸಕ್ಕೆ ಬಲಿಯಾದವರ ಪೈಕಿ ಮಕ್ಕಳು ಮತ್ತು ೨೧ ವರ್ಷದ ಒಳಗಿನ ಯುವಕರೇ ಹೆಚ್ಚಿದ್ದಾರೆ.
*
ವ್ಯಸನಿಗಳು ಏನು ಸೇವನೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಬೇಕು. ಒಂದೊಮ್ಮೆ ಮಾತ್ರೆಗಳೇ ಅಗಿದ್ದು, ಅದರ
ಮೇಲಿನ ಕವರ್ ದೊರೆತರೆ ಅದು ಎಲ್ಲಿಂದ ಮಾರಾಟ ಆಗಿದೆ ಎಂಬುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬಹುದು. ವ್ಯಸನಿಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ.
ವೆಂಕಟೇಶ ರಾಠೋಡ, ಸಹಾಯಕ ಔಷಧ ನಿಯಂತ್ರಕರು
ಇದನ್ನೂ ಓದಿ: Koppal News: ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಸಿದ್ದಾಪುರ ಗ್ರಾಮಸ್ಥರು