ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಹಿರಿಯ ಜೀವಿಯೊಬ್ಬರ ಮಾತುಗಳನ್ನು ನನ್ನ ಮೊಬೈಲ್ ನಲ್ಲಿ ಕೇಳುತ್ತಿದ್ದೆ. ಯಾರೋ ವಾಟ್ಸಪ್‌ನಲ್ಲಿ ಸೌಂಡ್ ಕ್ಲಿಪ್‌ನ್ನು ಕಳಿಸಿಕೊಟ್ಟಿದ್ದರು. ಆರಂಭದಲ್ಲಿ ಮಾತಾಡುತ್ತಿರುವವರು ಯಾರು ಎಂಬುದು ಗೊತ್ತಾಗಲಿಲ್ಲ. ಮಾತಾಡಿದವರು ಕೊನೆಯಲ್ಲಿ ತಮ್ಮ ಪರಿಚಯ ಮಾಡಿಕೊಂಡಾಗ ಬಹಳ ಆಶ್ಚರ್ಯವಾಯಿತು. ನಾನು ಅಲ್ಲಿಯವರೆಗೆ ಕೇಳಿದ್ದು ಅಮೆರಿಕದ ಮಾಜಿ
(ಮೂವತ್ತೊಂಬತ್ತನೇ) ಅಧ್ಯಕ್ಷ ಜಿಮ್ಮಿಿ ಕಾರ್ಟರ್ ಅವರ ದನಿ.
ಅದು ಅವರ ಪುಸ್ತಕ (ಫೈತ್: ಆ ಜರ್ನಿ ಫಾರ್ ಆಲ್) ದ ಒಂದು ಅಧ್ಯಾಯದ ಧ್ವನಿಮುದ್ರಿಕೆ. ಯಾಕೋ ಅವರ ಬಗ್ಗೆ ಅಭಿಮಾನ ಮೂಡಿತು. ತೊಂಬತ್ನಾಲ್ಕು ವರ್ಷದ ಕಾರ್ಟರ್ ತಮ್ಮ ಅನುಭವದ ಹಿನ್ನೆಲೆ ಯಲ್ಲಿ ಬದುಕಿನಲ್ಲಿ ನಂಬಿಕೆ, ವಿಶ್ವಾಸ ಎಷ್ಟು ಮುಖ್ಯ ಎಂಬುದನ್ನು ಅತ್ಯಂತ ಪರಿಣಾಮಕಾರಿ ಮಾತುಗಳಲ್ಲಿ ಹೇಳಿದ್ದರು. ಅದಾಗಿ ಕೆಲವು ದಿನಗಳ ನಂತರ ಅವರಿಗೆ ಗ್ರಾಮಿ ಅವಾರ್ಡ್ ಬಂದಿದೆ ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ.
ಸ್ವಲ್ಪ ಆಶ್ಚರ್ಯವಾಯಿತು. ಜಿಮ್ಮಿ ಕಾರ್ಟರ್ ಅವರಿಗೂ ಗ್ರಾಮಿ ಅವಾರ್ಡಿಗೂ ಏನು ಸಂಬಂಧ ಎಂದು ಯೋಚಿಸಲಾ ರಂಭಿಸಿದೆ. ಕಾರಣ ಈ ಪ್ರಶಸ್ತಿಯನ್ನು ಸಂಗೀತಗಾರರಿಗೆ, ಸಂಗೀತ ವಾದಕರಿಗೆ ಮಾತ್ರ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಕಳೆದ ಕೆಲ ವರ್ಷಗಳಿಂದ ‘ಬೆಸ್ಟ್ ಸ್ಪೋಕನ್ ವರ್ಡ್’ ಎಂಬ ಕೆಟಗರಿ ಮಾಡಿದ್ದಾರೆ. ಕಾರ್ಟರ್ ಅವರ ಹೆಸರು ಒಂಬತ್ತು ಸಲ ಆ ಪ್ರಶಸ್ತಿಗೆ ಸೂಚಿತವಾಗಿದೆ. ಆದರೆ, ಮೂರು ಸಲ ಅವರು ಈ ವರ್ಗದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಪೈಕಿ ‘ಫೈತ್’ ಪುಸ್ತಕವೂ ಒಂದು. ಈ ಇಳಿವಯಸ್ಸಿನಲ್ಲಿ ಆಸಾಮಿ ಪುಸ್ತಕ ಬರೆಯುತ್ತಾರೆ.
ತಮ್ಮ ದನಿಯಲ್ಲೇ ಆಡಿಯೋ ಪುಸ್ತಕವನ್ನು ಸಹ ಮಾಡುತ್ತಾರೆ. ಅಲ್ಲದೇ ಅದಕ್ಕೆ ಪ್ರಶಸ್ತಿಯನ್ನೂ ಪಡೆಯುತ್ತಾರೆ. ನನಗೆ ಕಾರ್ಟರ್ ಬಗ್ಗೆ ಅಭಿಮಾನ ಮೂಡಿತು. ಕಾರ್ಟರ್ ಅಮೆರಿಕ ಅಧ್ಯಕ್ಷ ಪದವಿಯಿಂದ ಇಳಿದು ಮೂವತ್ತೆಂಟು ವರ್ಷಗಳಾದವು. ಮಾಜಿ ಆಗಿ, ಬದುಕಿರುವ ಅಧ್ಯಕ್ಷರ ಪೈಕಿ ಕಾರ್ಟರ್ ಅವರೇ ಅತ್ಯಂತ ಹಿರಿಯರು. ಕಳೆದ ಎಪ್ಪತ್ತೆರಡು ವರ್ಷಗಳಿಂದ (ಒಬ್ಬಳೇ ಪತ್ನಿ ಜತೆಗೆ) ಸಂತಸದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಬದುಕಿನಲ್ಲಿ ಬೇಸರ, ಪಶ್ಚಾತ್ತಾಪ ಇಲ್ಲವೇ ಇಲ್ಲ. ಇಂದಿಗೂ ಅವರ ಲವಲವಿಕೆ, ಉತ್ಸಾಹ ಇಪ್ಪತ್ತರ ಯುವಕರನ್ನು ಕೂಡ ನಾಚಿಸುತ್ತದೆ. ಅವರಲ್ಲಿ ತಾನು ಒಂದು ಕಾಲಕ್ಕೆ ಅಮೆರಿಕದ ಅಧ್ಯಕ್ಷನಾಗಿದ್ದೆ ಎಂಬ ಪೊಗರು, ಡೌಲು, ಜಂಭದ ಲವಲೇಶವೂ ಇಲ್ಲ.
ಮೊದಲ ಬಾರಿಗೆ ಅವರ ಹೆಸರನ್ನು ಕೇಳಿದಾಗ ಮತ್ತು ಪತ್ರಿಕೆಯಲ್ಲಿ ಫೋಟೋ ನೋಡಿದಾಗ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದ.
ಆಗ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ವಿದೇಶಾಂಗ ವ್ಯವಹಾರಗಳ
ಸಚಿವರಾಗಿದ್ದರು. ಆ ಅವಧಿಯಲ್ಲಿ ಕಾರ್ಟರ್ ಅವರು ಭಾರತಕ್ಕೆ ಬಂದಿದ್ದರು. ವಾಜಪೇಯಿ ಅವರನ್ನು ಕಾರ್ಟರ್ ಶ್ವೇತ ಭವನಕ್ಕೆ ಆಹ್ವಾನಿಸಿದ್ದರು. ಆ ದಿನಗಳಲ್ಲಿ ಅವರ ಹೆಸರು ಪತ್ರಿಕೆಗಳಲ್ಲಿ ಓದುತ್ತಿದ್ದೆ.
ಕಾರ್ಟರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಮೆರಿಕದಲ್ಲಿ ವಿಪರೀತ ಹಣದುಬ್ಬರ ತಲೆದೋರಿ ಅವರ ಆಡಳಿತದ ಬಗ್ಗೆ ಜನರಿಗೆ ಜುಗುಪ್ಸೆ ಬಂದಿದ್ದು ಅವರ ದುರ್ದೈವ. ಆನಂತರ ಅವರ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಸೋತುಹೋಗಿ, ರಿಪಬ್ಲಿಕನ್ ಪಕ್ಷದ ರೊನಾಲ್ಡ್ ರೇಗನ್ ಅಧ್ಯಕ್ಷರಾದರು. ಅಧ್ಯಕ್ಷರಾಗುವ ಮುನ್ನ ಕಾರ್ಟರ್ ಅವರು ಜಾರ್ಜಿಯಾ ರಾಜ್ಯದ ಸೆನೆಟರ್ ಮತ್ತು ಅದೇ ರಾಜ್ಯದ ಗವರ್ನರ್ ಸಹ ಆಗಿದ್ದರು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ರಾಜ್ಯಪಾಲ, ಪ್ರಧಾನಿ ಅಥವಾ ರಾಷ್ಟ್ರಪತಿಯಂಥ ಉನ್ನತ ಸ್ಥಾನಗಳನ್ನು ಅಲಂಕರಿಸಿದ ಬಳಿಕ ಸಾರ್ವಜನಿಕ ಜೀವನದಿಂದ ನಿವೃತ್ತರಾಗುತ್ತಾರೆ. ದೇವೇಗೌಡರು ಇದಕ್ಕೆ ಅಪವಾದ ಬಿಡಿ. ನಿವೃತ್ತರಾಗಲು ಮುಖ್ಯ ಕಾರಣ, ಅಷ್ಟೊತ್ತಿಗೆ ಅವರಿಗೆ ಎಂಬತ್ತೋ, ತೊಂಬತ್ತೋ ವರ್ಷಗಳಾಗಿರುತ್ತವೆ. ಕೆಲವರಿಗೆ ಆ ವಯಸ್ಸಿನಲ್ಲಿ ಕೆಲವು ಅಂಗಾಂಗಗಳು ಕೆಲಸ ಮಾಡುವುದಿಲ್ಲ. ಆದರೆ, ಅಮೆರಿಕದಲ್ಲಿ ಐವತ್ತು – ಅರವತ್ತು ವರ್ಷಗಳ ಆಸುಪಾಸಿ ನಲ್ಲಿದ್ದವರು ಅಧ್ಯಕ್ಷರಾಗುತ್ತಾರೆ. ಅದರಲ್ಲೂ ಕಾರ್ಟರ್ ಅಧ್ಯಕ್ಷರಾದಾಗ ಅವರಿಗೆ ಕೇವಲ ನಲವತ್ಮೂರು ವರ್ಷ ವಯಸ್ಸು. ಅವರು ಅಧ್ಯಕ್ಷ ಪದವಿಯಿಂದ ಇಳಿದಾಗ ನಲವತ್ತೇಳು ವರ್ಷ.
ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅಷ್ಟು ವಯಸ್ಸಿಗೆ ರಾಜಕೀಯ ಪ್ರವೇಶಿಸಿದರೂ ಯಾವುದೇ ಪ್ರಮುಖ ಸ್ಥಾನಮಾನ ಗಳಿಸಿರುವು ದಿಲ್ಲ. ಆದರೆ, ಅವರು ಜಗತ್ತಿನ ಅತ್ಯಂತ ಪ್ರಮುಖ ಮತ್ತು ಉನ್ನತ ಸ್ಥಾನವನ್ನು ಅಲಂಕರಿಸಿ ಇಳಿದಿದ್ದರು. ಹಾಗೆ ನೋಡಿದರೆ ಅವರ ಬದುಕು ಅಲ್ಲಿಗೆ ಬಂದ್ ಆಗಿತ್ತು. ಅವರು ಹೆಚ್ಚು ಸಾಧಿಸುವುದೇನೂ ಇರಲಿಲ್ಲ. ಒಮ್ಮೆ ಹುಲಿ ಸವಾರಿ ಮಾಡಿದ ನಂತರ ಇಳಿಯಲು ಮನಸ್ಸಾಗುವುದಿಲ್ಲ. ಸದಾ ಅದರ ಮೇಲೆಯೇ ಕುಳಿತಿಬೇಕು ಎಂದೆನಿಸುತ್ತದೆ. ಅದರಲ್ಲೂ ಅಧಿಕಾರದಲ್ಲಿ ಇದ್ದವರು, ಸಾಮಾನ್ಯ ಜೀವನಕ್ಕೆ ಮರಳುವುದು ಬಹಳ ಕಷ್ಟ. ಅದಕ್ಕಾಗೇ ನಮ್ಮ ದೇಶದಲ್ಲಿ ರಾಜಕಾರಣಿಗಳು ಯಾರೂ ನಿವೃತ್ತರಾಗುವುದಿಲ್ಲ. ಕಾರ್ಟರ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಜೀವನ ಅಧ್ಯಕ್ಷ ಪದವಿಗೆ ಮಾತ್ರ ಸೀಮಿತ ಎಂದೂ ಭಾವಿಸಲಿಲ್ಲ. ತಮ್ಮ ಮುಂದಿರುವ ಸುದೀರ್ಘ ಜೀವನವನ್ನು ಮೌಲಿಕವಾಗಿ, ಅರ್ಥಪೂರ್ಣವಾಗಿ ಕಳೆಯಲು ನಿರ್ಧರಿಸಿದರು. ಈ ತೀರ್ಮಾನ ತೆಗೆದುಕೊಳ್ಳುವ ಮುನ್ನ ಅವರೊಂದು ನಿರ್ಧಾರಕ್ಕೆ ಬಂದರು.
ಅದನ್ನು ಕಾರ್ಟರ್ ತಮ್ಮ ಕೃತಿಯಲ್ಲಿ ಬರೆದುಕೊಂಡಿದ್ದಾರೆ: ‘ಅಮೆರಿಕ ಅಧ್ಯಕ್ಷ ಪದವಿಗಿಂತ ಉನ್ನತ ಸ್ಥಾನ ಇಲ್ಲವೆಂದು ಎಲ್ಲರೂ ನಂಬಿದ್ದಾರೆ. ಅದು ನಿಜವೂ ಇರಬಹುದು. ಈ ಪದವಿಯಲ್ಲಿ ಹೆಚ್ಚೆಂದರೆ ಎಂಟು ವರ್ಷ ಇರಬಹುದು. ಆನಂತರ ಕೆಳಗಿಳಿಯಲೇ ಬೇಕು. ನಾನು ಒಂದು ಅವಧಿ ಅರ್ಥಾತ್ ನಾಲ್ಕು ವರ್ಷಕ್ಕೆ ಇಳಿದೆ. ನನ್ನ ಮುಂದೆ ಸುದೀರ್ಘ ಜೀವನವಿತ್ತು. ಸುಮ್ಮನೆ ಕುಳಿತು ಕೊಳ್ಳುವಂತಿರಲಿಲ್ಲ. ಹಾಗಂತ ಸಿಕ್ಕ ಸಿಕ್ಕ ಕೆಲಸ ಅಥವಾ ಜವಾಬ್ದಾರಿಗಳನ್ನು ಕೈಗೆತ್ತಿಕೊಳ್ಳುವಂತೆಯೂ ಇರಲಿಲ್ಲ. ಆಗ ನಾನು ಮಾಡಿದ ಮೊದಲ ಕೆಲಸ ಅಂದರೆ ನನ್ನೊಳಗಿನ ಅಹಂ ಅನ್ನು ಓಡಿಸಿದ್ದು. ಅಮೆರಿಕದ ಮಾಜಿ ಅಧ್ಯಕ್ಷ ಎಂಬ ಹ್ಯಾಂಗೋವರ್‌ನಿಂದ ಮುಕ್ತವಾಗಿದ್ದು. ನಾನೂ ಸಹ ಸಾಮಾನ್ಯ ಪ್ರಜೆ ಎಂದು ನನ್ನನ್ನು ನಾನು ನಂಬಿಸಿಕೊಂಡಿದ್ದು. ಇಲ್ಲದಿದ್ದರೆ ಹೆಜ್ಜೆ ಹೆಜ್ಜೆಗೆ ಅಧ್ಯಕ್ಷ ಅಧ್ಯಕ್ಷ ಎಂಬ ಪೊಗರು ನನ್ನನ್ನು ಬಾಧಿಸುತ್ತಿತ್ತು. ಯಾವಾಗ ಇದರಿಂದ ಮುಕ್ತನಾದೆನೋ, ನನ್ನೆಲ್ಲ ಸಮಸ್ಯೆಗಳು ಸಹಜವಾಗಿ ಬಗೆಹರಿಯಲಾರಂಭಿಸಿದವು.’
ಅಮೆರಿಕದ ಅಧ್ಯಕ್ಷರಾಗಿ ಅನೇಕರು ಮಹಾ ಮಹಾ ಕೆಲಸ ಮಾಡಿದ್ದಾರೆ. ಇತಿಹಾಸ ಅವರನ್ನೆಲ್ಲ ಮಹಾನ್ ನಾಯಕರೆಂದು
ಸ್ಮರಿಸುತ್ತದೆ. ಕಾರ್ಟರ್ ಅಧ್ಯಕ್ಷರಾಗಿದ್ದು ಕೇವಲ ನಾಲ್ಕು ವರ್ಷಗಳೇ ಆಗಿರಬಹುದು. ಆದರೆ, ಅವರು ಮಾತ್ರ ಅದ್ವಿತೀಯ ‘ಮಾಜಿ
ಅಧ್ಯಕ್ಷ’ ಎಂದೇ ಕರೆಯಲ್ಪಡುತ್ತಾರೆ. ಮಾನವ ಹಕ್ಕು, ಬಡ ಮಕ್ಕಳ ಕಲ್ಯಾಣ, ಪ್ರಜಾಪ್ರಭುತ್ವ ಸ್ಥಾಪನೆ, ಬಡವರಿಗೆ ವಸತಿ ಸೇರಿದಂತೆ ಹತ್ತಾರು ಲೋಕ ಕಲ್ಯಾಣ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಾರ್ಟರ್, ನೂರಾರು ಸಂಘ-ಸಂಸ್ಥೆ,
ಧರ್ಮದರ್ಶಿ ಮಂಡಳಿಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ.
ತಾವು ಯಾವುದೇ ಹುದ್ದಯನ್ನು ಅಲಂಕರಿಸಲಿ, ಕಾರ್ಟರ್ ಅದಕ್ಕೆ ಭೂಷಣಪ್ರಾಯರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಹತ್ತಾರು ಸಮಸ್ಯೆಗಳನ್ನು ಎದುರಿಸಿದ ಕಾರ್ಟರ್, ತಮ್ಮ ಅನುಭವಗಳನ್ನು ಧಾರೆ ಯೆರೆಯಲು ನಿರ್ಧರಿಸಿದರು. ಎರಡು ದೇಶಗಳ ನಡುವಿನ ಬಿಕ್ಕಟ್ಟು ಶಮನಕ್ಕೆೆ ವಿಶೇಷ ರಾಯಭಾರಿಯಂತೆ ಕೆಲಸ ಮಾಡಿದರು. ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಕ್ಕಟ್ಟು ತಲೆದೋರಿ ದಾಗಲೆಲ್ಲ ಅವರು ಆಯಾ ಕಾಲದಲ್ಲಿ ಅಧಿಕಾರದಲ್ಲಿದ್ದ ಅಧ್ಯಕ್ಷರಿಗೆ ಸಲಹೆ ನೀಡುತ್ತಿದ್ದರು. ಉತ್ತರ ಕೊರಿಯಾದ ಕಿಮ್, ಲಿಬಿಯಾದ ಗಡಾಫಿ ಮುಂತಾದ ಕಠಿಣ ನಾಯಕರನ್ನು ನಿಭಾಯಿಸುವ ಪ್ರಸಂಗ ಬಂದಾಗಲೆಲ್ಲ ಅಮೆರಿಕ ಸರಕಾರ ಕಾರ್ಟರ್ ನೆರವು ಪಡೆಯುತ್ತಿತ್ತು.
1994ರಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಅಣ್ವಸ್ತ್ರ ಬಿಕ್ಕಟ್ಟು ತಲೆದೋರಿದಾಗ, ಕಾರ್ಟರ್ ಅದನ್ನು
ಬಗೆಹರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅಧ್ಯಕ್ಷರಾಗಿ ತಮ್ಮ ಅವಧಿ ಮುಗಿಸಿದ ನಂತರ ಅವರು ಯಾವುದಾದರೂ ಬಹು ರಾಷ್ಟ್ರೀಯ ಕಂಪನಿಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಬಹುದಾಗಿತ್ತು. ಗೆರಾಲ್‌ಡ್ ಫೋರ್ಡ್, ಬಿಲ್ ಕ್ಲಿಂಟನ್,
ಬರಾಕ್ ಒಬಾಮ ಮುಂತಾದವರು ಈ ರೀತಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರಿಂದ ಕೈತುಂಬಾ ಹಣ ಸಂಪಾದಿಸಿದ್ದಾರೆ,
ಸಂಪಾದಿಸುತ್ತಿದ್ದಾರೆ.
ಕೆಲವರು ತಮ್ಮ ಪತ್ನಿಯರೊಂದಿಗೆ ದೇಶ ದೇಶ ತಿರುಗುತ್ತಾ ಭಾಷಣ ಮಾಡುತ್ತಾ, ಸಾವಿರಾರು ಡಾಲರ್ ಗಳಿಸುತ್ತಾ ಅದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕಾರ್ಟರ್ ಸಹ ಹಾಗೆ ಮಾಡಬಹುದಿತ್ತು. ಆದರೆ, ಅವರು ತಮ್ಮ ವೈಟ್ ಹೌಸ್ ಸಂಪರ್ಕವನ್ನು ತಮ್ಮ ಅನುಕೂಲಕ್ಕೆೆ ಬಳಸಿಕೊಳ್ಳಲಿಲ್ಲ. ಅದರ ಬದಲು ತಮ್ಮ ಹುಟ್ಟೂರಾದ ಜಾರ್ಜಿಯಾ ಸ್ಟೇಟ್‌ನಲ್ಲಿರುವ ಪ್ಲೈನ್ಸ್ ಎಂಬ ಊರಿಗೆ ಹೋಗಿ ನೆಲೆಸಿದರು. ಇಂದಿಗೂ ಅಲ್ಲಿ ಶೇ.40 ಮಂದಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ತಂದೆಯಿಂದ ಬಂದ ಶೇಂಗಾ ಮತ್ತು ನೆಲಗಡಲೆ ಕೃಷಿ ಭೂಮಿಯಿತ್ತು. ಕಾರ್ಟರ್ ಅಲ್ಲಿ ನೆಲೆಸಿ ಪೂರ್ಣಾವಧಿ ಕೃಷಿಯಲ್ಲಿ ತೊಡಗಿಸಿಕೊಂಡರು. ಪ್ಲೈನ್‌ಸ್ ಗೆ ಬಂದ ಮೊದಲ ಮೂರು ವರ್ಷ ಅವರು ಕೃಷಿ ಹೊರತಾಗಿ ಬೇರೇನೂ ಮಾಡಲಿಲ್ಲ.
ಕಾರ್ಟರ್ ಅಷ್ಟು ಗಮನಹರಿಸದಿದ್ದರೆ ಅವರ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ‘ಅಮೆರಿಕ ಅಧ್ಯಕ್ಷರಾಗಿ ನಿಮ್ಮ ಜೀವನವನ್ನು ಇನ್ನೂ ಸುಂದರವಾಗಿ ಕಳೆಯಬಹುದಲ್ಲ’ ಎಂದು ಅನೇಕರು ಅವರನ್ನು ಕೇಳಿದರು. ಟಿವಿ ಮತ್ತು ಪತ್ರಿಕಾ ಸಂದರ್ಶನಗಳಲ್ಲೂ ಅನೇಕರು ಅವರಿಗೆ ಇದೇ ಪ್ರಶ್ನೆಗಳನ್ನು ಕೇಳಿದರು. ಆದರೆ, ಕಾರ್ಟರ್ ನಿರ್ಧಾರದಲ್ಲಿ ಸ್ಪಷ್ಟತೆ ಇತ್ತು. ಅವರು ಕೃಷಿ ಹೊರತಾಗಿ ಬೇರೆ ಕಡೆ ಗಮನಹರಿಸಲಿಲ್ಲ. ಪಾಳುಬಿದ್ದ ತಮ್ಮ ಹೊಲ ಸಮಸ್ಥಿತಿಗೆ ಬಂದ ನಂತರವೇ ಅವರು ಬಿಡುವಿನ ವೇಳೆಯಲ್ಲಿ ಉಳಿದ ಚಟುವಟಿಕೆಗಳತ್ತ ನೋಡಿದ್ದು.
ಇಂದಿಗೂ ಕಾರ್ಟರ್ ತಾವು ಅಧ್ಯಕ್ಷರಾಗುವುದಕ್ಕಿಂತ ಮುನ್ನ ಯಾವ ಮನೆಯಲ್ಲಿ ವಾಸಿಸುತ್ತಿದ್ದರೋ ಅದೇ ಎರಡು ಬೆಡ್
ರೂಮ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅವರ ನಂತರ ಅಧ್ಯಕ್ಷರಾದವರು ಖಾಸಗಿ ಜೆಟ್‌ಗಳಲ್ಲಿ ಪ್ರಯಾಣಿಸಿದರೆ ಕಾರ್ಟರ್
ಮಾತ್ರ ಕಮರ್ಷಿಯಲ್ ವಿಮಾನದಲ್ಲಿ ಪ್ರಯಾಣಿಸುತ್ತಾರೆ, ಒಮ್ಮೊಮ್ಮೆ ಎಕಾನಮಿ ಕ್ಲಾಸಿನಲ್ಲಿಯೂ. ಈಗ ಬದುಕಿರುವ ಮಾಜಿ ಅಧ್ಯಕ್ಷರಾದ ಬುಷ್, ಕ್ಲಿಂಟನ್ ಮತ್ತು ಒಬಾಮ ಇವರೆಲ್ಲರ ಅರ್ಧದಷ್ಟು ಖರ್ಚನ್ನೂ ಕಾರ್ಟರ್ ಮಾಡುವುದಿಲ್ಲ. ಸರಕಾರದಿಂದ ಅವರು ನಿವೃತ್ತಿಯ ಆರೋಗ್ಯ ವಿಮೆ ಸೌಲಭ್ಯವನ್ನೂ ಪಡೆಯುತ್ತಿಲ್ಲ. ಎಮೋರಿ ವಿಶ್ವವಿದ್ಯಾಲಯದಲ್ಲಿ 36 ವರ್ಷ ಪಾಠ ಮಾಡಿದ್ದರಿಂದ ಸಿಗುವ ಆ ವಿಮಾ ಸವಲತ್ತು ಪಡೆಯುತ್ತಿದ್ದಾರೆ.
ಕಾರ್ಟರ್ ತಮ್ಮ ಊರಿಗೆ ಬಂದು ನೆಲೆಸಿದ ದಿನಗಳಲ್ಲಿ ತಾಯಿ ಜತೆ ಹೊಲಕ್ಕೆ ಹೋಗುತ್ತಿದ್ದರು. ತಾಯಿ ಮಗನಿಗೆ ಕೃಷಿ ಬಗ್ಗೆ
ಹೇಳುತ್ತಿದ್ದರು. ತಾಯಿ ಜತೆ ಪ್ರತಿ ದಿನ ಮೂರ್ನಾಲ್ಕು ಗಂಟೆ ಕಳೆಯುತ್ತಿದ್ದರು. ಅಮೆರಿಕದ ಅಧ್ಯಕ್ಷನಾದರೂ ತಾಯಿಗೆ ಮಗನೇ
ತಾನೆ. ಆನಂತರ ತಾಯಿಯ ಕುರಿತು A Remarkable Mother ಎಂಬ ಪುಸ್ತಕ ಬರೆದರು. ಅಧ್ಯಕ್ಷರಾಗಿ ನಿವೃತ್ತರಾದ ಈ 38 ವರ್ಷಗಳಲ್ಲಿ ಕಾರ್ಟರ್ ಸುಮಾರು 32 ಪುಸ್ತಕಗಳನ್ನು ಬರೆದಿದ್ದಾರೆ.
ತಮ್ಮ ಮನೆಯ ಗ್ಯಾರೇಜ್‌ನಲ್ಲಿ ಮಾರ್ಪಡಿಸಿದ ಪುಟ್ಟ ಅಧ್ಯಯನ ಕೋಣೆಯಲ್ಲಿ ಈಗಲೂ ಬರೆಯುತ್ತಾರೆ. ತಾವು ಕಂಡ ಬದುಕಿನ ಸೂಕ್ಷ್ಮಗಳನ್ನೆಲ್ಲ ಅಕ್ಷರಗಳಲ್ಲಿ ಸುತ್ತಿಕೊಟ್ಟಿದ್ದಾರೆ. ಮಕ್ಕಳಿಗಾಗಿಯೂ ಬರೆದಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಮೀನು ಹಿಡಿಯುವುದು, ಸೈಕಲ್ ಸವಾರಿ, ಲಘು ಚಾರಣ ಮುಂತಾದ ಹವ್ಯಾಸಗಳಲ್ಲಿ ನಿರತರಾಗುತ್ತಾರೆ. ಸರಕಾರದ ಒತ್ತಾಯ ಮತ್ತು ಪ್ರೋಟೋಕಾಲ್ ನಿಯಮದ ಪ್ರಕಾರ, ಎರಡು ಭದ್ರತಾ ಸಿಬ್ಬಂದಿ ಅವರ ಜತೆಗಿದ್ದಾರೆ. ತಮಗೆ ಇವರ ಅಗತ್ಯ ಇಲ್ಲವೆಂದು ಕಾರ್ಟರ್ ಕಾಲಕಾಲಕ್ಕೆ ಬರೆದರೂ ಸರಕಾರ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿಲ್ಲ.
ಅಟ್ಲಾಂಟಾ ದಕ್ಷಿಣಕ್ಕೆ ಸುಮಾರು 150 ಮೈಲಿ ದೂರದಲ್ಲಿರುವ ಪ್ಲೈನ್ಸ್ ಎಂಬ ಪುಟ್ಟ ಊರು ಕಾರ್ಟರ್ ಕಾರ್ಯಕ್ಷೇತ್ರ. ವೈಟ್
ಹೌಸ್ ನಿಂದ ನೇರವಾಗಿ ಇದೇ ಊರಿಗೆ ಬಂದು ನೆಲೆಸಿದ್ದು. ಈ ಊರಿನ ಜನಸಂಖ್ಯೆೆ ಏಳು ನೂರಾ ಐವತ್ತನ್ನು ದಾಟಲಿಕ್ಕಿಲ್ಲ.
ಅಷ್ಟು ಚಿಕ್ಕ ಹಳ್ಳಿ. ಅಲ್ಲೊಂದು ಚರ್ಚ್ ಇದೆ. ಕಳೆದ ಏಳು ವರ್ಷಗಳಿಂದ ಕಾರ್ಟರ್ ಪ್ರತಿ ಭಾನುವಾರ ಆ ಚರ್ಚ್ ನಲ್ಲಿ ಸರಿಯಾಗಿ ಬೆಳಗ್ಗೆ 5.30 ಕ್ಕೆ ಭಾಷಣ (ಪ್ರವಚನ) ಮಾಡುತ್ತಾರೆ. ಈ ಪ್ರವಚನ ಕೇಳಲು ಮೂರ್ನಾಲ್ಕು ತಿಂಗಳು ಮೊದಲೇ ಮುಂಗಡ ಸೀಟು ಕಾದಿರಿಸಬೇಕು. ಅದನ್ನು ಕೇಳಲು ಜನ ಸಾವಿರಾರು ಕಿಮೀ ದೂರದಿಂದ ಡ್ರೈವ್ ಮಾಡಿಕೊಂಡು ಬರುತ್ತಾಾರೆ.
ಬದುಕು, ಆತ್ಮವಿಶ್ವಾಸ, ನಾಯಕತ್ವ, ದಯೆ, ಧರ್ಮ, ಕಾಯಕ, ಹೊಣೆಗಾರಿಕೆ, ಬದುಕಿನ ಸಂಕಷ್ಟ ಎದುರಿಸುವುದು ಹೇಗೆ, ಜೀವನದ ಸವಾಲುಗಳನ್ನು ನಿಭಾಯಿಸುವುದು ಹೇಗೆ, ಸಾರ್ಥಕ ಬದುಕು ಅಂದರೇನು, ಉತ್ತಮ ತಂದೆಯಾಗುವುದು ಹೇಗೆ, ಮಕ್ಕಳನ್ನು ಬೆಳೆಸುವುದು ಹೇಗೆ, ಆದರ್ಶ ಜೀವನ ಎಂದರೇನು, ಬದುಕಿನ ಮೌಲ್ಯಗಳು, ಬಿಡುವಿನ ವೇಳೆ ಸಾರ್ಥಕಗೊಳಿಸುವುದು
ಹೇಗೆ, ಉತ್ತಮ ದಾಂಪತ್ಯ, ನೆಮ್ಮದಿಯ ಬದುಕು, ನಿವೃತ್ತಿಯ ನಂತರದ ಜೀವನ, ಅಮೆರಿಕದ ವೈಶಿಷ್ಟ್ಯ, ಅಮೆರಿಕದ ಇತಿಹಾಸ,
ಗುಣಕಥನ…ಹೀಗೆ ಬದುಕಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಸರಿಯಾಗಿ ಒಂದು ಗಂಟೆ ಮಾತಾಡುತ್ತಾರೆ. ಜನ ಮೈಯೆಲ್ಲಾ ಕಿವಿಯಾಗಿ ಕೇಳುತ್ತಾರೆ.
ಪ್ರವಚನದ ನಂತರ ಕಾರ್ಟರ್ ಜತೆ ನಿಂತು ಫೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಐದು ವರ್ಷಗಳ ಹಿಂದೆ ಕಾರ್ಟರ್ ಅವರಿಗೆ ಕ್ಯಾನ್ಸರ್ ರೋಗವಿದೆಯೆಂದು ಎಂದು ವರದಿಯಾಗಿತ್ತು. ಅದಕ್ಕೆ ಅವರು ತಕ್ಷಣ ಚಿಕಿತ್ಸೆ ಪಡೆದರು. ‘ನನ್ನ ಆತ್ಮಸ್ಥೈರ್ಯವನ್ನು
ಭೇದಿಸಲಾಗದೇ ಕ್ಯಾನ್ಸರ್ ಓಡಿಹೋಯಿತು…ನಾನು ಈಗ ಅದರಿಂದ ಸಂಪೂರ್ಣ ಮುಕ್ತನಾಗಿದ್ದೇನೆ’ ಎಂದು ಅವರು ಘೋಷಿಸಿ ದರು. ಈಗ ಅವರನ್ನು ನೋಡಿದರೆ ಅವರಿಗೆ ತೊಂಬತ್ನಾಲ್ಕಾಗಿದೆ ಎಂದು ಹೇಳಲಾಗುವುದಿಲ್ಲ. ಅಷ್ಟೊಂದು ಕ್ರಿಯಾಶೀಲರಾಗಿ ದ್ದಾರೆ.
ಕಾರ್ಟರ್ ಅವರನ್ನು ನೋಡಲೆಂದೇ ಆ ಹಳ್ಳಿಗೆ ಪ್ರತಿದಿನ ನೂರಾರು ಜನ ಬರುತ್ತಾರೆ. ಅವರ ಮನೆ ಒಂದು ರೀತಿಯ ಜೀವಂತ, ಚಲನಶೀಲ ಮ್ಯೂಸಿಯಂ ಆಗಿದೆ. ಪ್ರತಿ ವರ್ಷ ಪ್ಲೈನ್ಸ್’ಗೆ ಕನಿಷ್ಠ 75 ಸಾವಿರ ಜನ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇದರಿಂದಾಗಿ ಆ ಊರಿಗೆ ಪ್ರವಾಸೋದ್ಯಮದಿಂದ ವಾರ್ಷಿಕ ನಾಲ್ಕು ದಶಲಕ್ಷ ಡಾಲರ್ ಹಣ ಬರುತ್ತದೆ. 2002ರಲ್ಲಿ ಕಾರ್ಟರ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂತು. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ನೂರಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್, ಪ್ರಶಸ್ತಿ ಹಾಗೂ ಇನ್ನಿತರ ಸಮ್ಮಾನಗಳನ್ನು ಕೊಡುತ್ತಾರೆ. ಪ್ರಪಂಚದ ನಾನಾ ದೇಶಗಳ ಪತ್ರಕರ್ತರು ಅವರನ್ನು ಹುಡುಕಿಕೊಂಡು ಸಂರ್ಶನ ಅಪೇಕ್ಷಿಸಿ ಬರುತ್ತಾರೆ.
ಕಾರ್ಟರ್ ಎಲ್ಲ ವಿವಾದಗಳಿಂದ ದೂರವಿರಲು ಬಯಸುತ್ತಾರೆ. ರಾಜಕೀಯ ಹೇಳಿಕೆ ಕೊಡಲು ಇಷ್ಟಪಡುವುದಿಲ್ಲ. ಆದರೆ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ‘ಟ್ರಂಪ್ ಅಮೆರಿಕಕ್ಕೆ ಬಂದೆರಗಿದ ಅಪಾಯ’ ಎಂದಿದ್ದು ಅಂತಾರಾಷ್ಟ್ರೀಯ ಸುದ್ದಿಯಾಯಿತು. ಅಂದರೆ ಇಂದಿಗೂ ಅವರ ಹೇಳಿಕೆಗೆ ಸುದ್ದಿಮೌಲ್ಯವಿದೆ.
ನಮಗೆ ಕಾರ್ಟರ್ ಬದುಕು ಯಾಕೆ ಮುಖ್ಯವಾಗುತ್ತದೆ ಅಂದರೆ, ಬದುಕಿನ ಅತ್ಯುನ್ನತ ಸ್ಥಾನದಿಂದ ಇಳಿದ ನಂತರವೂ ಸುಂದರ ವಾದ ಬದುಕನ್ನು ಸಾಗಿಸಬಹುದು, ಆ ಬದುಕಿಗೆ ಒಂದು ಅರ್ಥ ಕೊಡಬಹುದು, ಪದವಿ, ಹುದ್ದೆ, ಸ್ಥಾನಮಾನಗಳೇ ಮುಖ್ಯವಲ್ಲ, ಅವೆಲ್ಲವನ್ನು ತೊರೆದ ನಂತರವೂ ಜನ ನಮ್ಮನ್ನು ಹುಡುಕಿಕೊಂಡು ಬರುವಂಥ ಬದುಕು ಸಾಗಿಸಬಹುದು, ರಾಜಕಾರಣಿಗಳಿಗೆ ಅಧಿಕಾರವೊಂದೇ ಆರಂಭವೂ ಅಲ್ಲ, ಅಂತ್ಯವೂ ಅಲ್ಲ, ಎಲ್ಲಾ ಪದವಿಗಳನ್ನು ಬಿಟ್ಟ ಬಳಿಕವೂ ನೆಮ್ಮದಿಯ ಜೀವನ ಸಾಗಿಸಬಹುದು, ಅಧಿಕಾರವಿಲ್ಲದೆಯೂ ಸಂತಸದ ಬದುಕು ಸಾಗಿಸಬಹುದು ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ.
ನಮ್ಮ ರಾಜಕಾರಣಿಗಳಿಗೆ ಜಿಮ್ಮಿ ಕಾರ್ಟರ್ ಆದರ್ಶವೊಂದೇ ಅಲ್ಲ, ಸಾಂತ್ವನವೂ ಹೌದು, ಸಮಾಧಾನವೂ ಹೌದು!