ಬೈರುತ್: ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪು ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್ ದಾಳಿಯಲ್ಲಿ (Hezbollah Attack) ಎಂಟು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 2,750 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಲೆಬನಾನ್‌ನಲ್ಲಿರುವ ಇರಾನ್ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಲೆಬನಾನ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 3:30ರ ಸುಮಾರಿಗೆ (ಭಾರತೀಯ ಕಾಲಮಾನ ಸಂಜೆ 6 ಗಂಟೆ) ಸ್ಫೋಟ ಸಂಭವಿಸಿದೆ.
ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಎರಡರಿಂದಲೂ ನಿಷೇಧಿಸಲ್ಪಟ್ಟ ಹಿಜ್ಬುಲ್ಲಾ ಲೆಬನಾನ್‌ನಲ್ಲಿರುವ ರಾಜಕೀಯ ಮತ್ತು ಮಿಲಿಟರಿ ಸಂಸ್ಥೆಯಾಗಿದೆ. ಅದನ್ನು ಇರಾನ್ ಬೆಂಬಲಿಸುತ್ತದೆ. ಅಕ್ಟೋಬರ್ 2023 ರಿಂದ ಗಾಝಾದಲ್ಲಿ ಇಸ್ರೇಲ್‌ನೊಂದಿಗೆ ಯುದ್ಧ ನಡೆಸುತ್ತಿರುವ ಹಮಾಸ್‌ಗೂ ಹಿಜ್ಬುಲ್ಲಾ ಬೆಂಬಲ ನೀಡುತ್ತದೆ. ಸೌದಿ ಸುದ್ದಿ ವಾಹಿನಿ ಅಲ್ ಹದತ್ ವರದಿಯ ಪ್ರಕಾರ, ಪೇಜರ್ ದಾಳಿಯಲ್ಲಿ ಲೆಬನಾನ್ ಸಂಸತ್ತಿನಲ್ಲಿ ಹಿಜ್ಬುಲ್ಲಾ ಪ್ರತಿನಿಧಿ ಅಲಿ ಅಮ್ಮರ್ ಅವರ ಪುತ್ರ ಸಾವನ್ನಪ್ಪಿದ್ದಾರೆ.
ಸೈಬರ್ ದಾಳಿಯಿಂದ ಉಂಟಾದ ಲಿಥಿಯಂ ಬ್ಯಾಟರಿಗಳು ಅತಿಯಾಗಿ ಬಿಸಿಯಾಗಿದ್ದರಿಂದ ಪೇಜರ್ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಈ ದಾಳಿಗೆ ಇಸ್ರೇಲ್ ಕಾರಣ ಎಂದು ಹೆಜ್ಬುಲ್ಲಾ ಆರೋಪಿಸಿದ್ದು, ಇದು ತಾನು ಎದುರಿಸಿದ ಅತಿದೊಡ್ಡ ಭದ್ರತಾ ಉಲ್ಲಂಘನೆ ಎಂದು ಹೇಳಿಕೊಂಡಿದೆ. ಎಲ್ಲಾ ಪೇಜರ್‌ಗಳು ಬಹುತೇಕ ಒಂದೇ ಸಮಯದಲ್ಲಿ ಸ್ಫೋಟಗೊಂಡಿವೆ ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ.
ಲೆಬನಾನ್‌ನಲ್ಲಿ ಭಾರೀ ಹಾನಿ
ಲೆಬನಾನ್‌ನಾದ್ಯಂತ ಹಿಜ್ಬುಲ್ಲಾ ತಾಣಗಳ ಮೇಲೆ ದಾಳಿ ನಡೆದಿದೆ. ಹಮಾಸ್‌ಗೆ ಬೆಂಬಲವಾಗಿ ಹೆಜ್ಬುಲ್ಲಾ ಪ್ರತಿದಿನ ಇಸ್ರೇಲ್‌ನೊಂದಿಗೆ ಗುಂಡಿನ ಚಕಮಕಿ ನಡೆಸಲು ಪ್ರಾರಂಭಿಸಿದ ನಂತರ ಇದು ಮೊದಲ ಗಂಭೀರ ಪ್ರತಿದಾಳಿಯಾಗಿದೆ. ಲೆಬನಾನ್‌ನ ಹೊರಗೂ ಸ್ಫೋಟಗಳು ಸಂಭವಿಸಿದ್ದು, ಸಿರಿಯಾದಲ್ಲಿ ಡಮಾಸ್ಕಸ್ ನಲ್ಲಿ ವಾಹನವೊಂದರಲ್ಲಿ ಕನಿಷ್ಠ ಒಂದು ಪೇಜರ್ ಸ್ಫೋಟಗೊಂಡು ನಾಲ್ವರು ಗಾಯಗೊಂಡಿದ್ದಾರೆ.
“ದಕ್ಷಿಣ ಮತ್ತು ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಹಲವಾರು ಹಿಜ್ಬುಲ್ಲಾ ಸದಸ್ಯರು ಗಾಯಗೊಂಡಿದ್ದಾರೆ” ಎಂದು ಹಿಜ್ಬುಲ್ಲಾಗೆ ಹತ್ತಿರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Instagram Account : ಅಪ್ತಾಪ್ತ ವಯಸ್ಸಿನವರ ಖಾತೆಗೆ ಮಿತಿಗಳನ್ನುನಿಗದಿಪಡಿಸಿದ ಇನ್‌ಸ್ಟಾಗ್ರಾಮ್
ಲೆಬನಾನ್ ನ ಅಧಿಕೃತ ರಾಷ್ಟ್ರೀಯ ಸುದ್ದಿ ಸಂಸ್ಥೆ ಇದನ್ನು “ಭೀಕರ ಶತ್ರು ದಾಳಿ ” ಎಂದು ಕರೆದಿದೆ. ಲೆಬನಾನ್ ನಾದ್ಯಂತ ಒಂದೇ ಸಮಯದಲ್ಲಿ ಹ್ಯಾಂಡ್ ಹೆಲ್ಡ್ ಪೇಜರ್ ಗಳು ಸ್ಫೋಟಗೊಂಡಿವೆ ಎಂದು ಹೇಳಿದೆ.
ಹಿಜ್ಬುಲ್ಲಾ ತನ್ನದೇ ಆದ ದೂರಸಂಪರ್ಕ ವ್ಯವಸ್ಥೆಯ ಮೂಲಕ ಸಂವಹನ ನಡೆಸುತ್ತದೆ. ಸುಮಾರು ಒಂದು ವರ್ಷದ ಹಿಂದೆ ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಮೊಬೈಲ್ ಫೋನ್‌ಗಳನ್ನು ಬಳಸುತ್ತಿಲ್ಲ. ಅವರು ಪೇಜರ್‌ಗಳನ್ನು ಬಳಸುತ್ತಿದೆ. ಅದರ ಮೇಲೆ ದಾಳಿ ನಡೆಸಲಾಗಿದೆ.
ಹೆಜ್ಬುಲ್ಲಾ ಹೇಳಿಕೆಯೇನು?
ಮಂಗಳವಾರ ಮಧ್ಯಾಹ್ನ 3:30 ರ ಸುಮಾರಿಗೆ ಹೆಜ್ಬುಲ್ಲಾ ಸದಸ್ಯರು ಮತ್ತು ವಿವಿಧ ಸಂಸ್ಥೆಗಳ ಅಧಿಕಾರಿಗಳು ಬಳಸುವ ಹಲವಾರು ಪೇಜರ್ ಸಾಧನಗಳು ಸ್ಫೋಟಗೊಂಡಿವೆ ಎಂದು ಹೆಜ್ಬುಲ್ಲಾ ಹೇಳಿಕೆ ನೀಡಿದೆ. ಘಟನೆಯಲ್ಲಿ ಬಾಲಕಿ ಮತ್ತು ಆಕೆಯ ಇಬ್ಬರು ಸಹೋದರರು ಮೃತಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಸ್ಫೋಟಗಳಿಗೆ ಕಾರಣಗಳನ್ನು ಕಂಡುಹಿಡಿಯಲು ಹಿಜ್ಬುಲ್ಲಾದ ಸಂಬಂಧಿತ ಅಧಿಕಾರಿಗಳು ವೈಜ್ಞಾನಿಕ ತನಿಖೆಗಳನ್ನು ನಡೆಸುತ್ತಿದ್ದಾರೆ ಎಂದು ಅದು ಹೇಳಿದೆ. ಹಿಜ್ಬುಲ್ಲಾ ಅಥವಾ ಇರಾನ್ ಮಾಡಿದ ಈ ಹೇಳಿಕೆಗಳಿಗೆ ಇಸ್ರೇಲ್ ಇನ್ನೂ ಪ್ರತಿಕ್ರಿಯಿಸಿಲ್ಲ.