ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಸಮೀಪ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಟೋಲಾ ಪ್ಲಾಜಾ ಬಳಿ ಚಿರತೆ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾ ಬಳಿ ರಸ್ತೆ ದಾಟುತ್ತಿದ್ದ ವೇಳೆ ಚಿರತೆ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ನಸುಕಿನ ಜಾವ 3 ಗಂಟೆಗೆ ಹೆದ್ದಾರಿಯಲ್ಲಿ ಚಿರತೆ ನಡೆದುಕೊಂಡು ಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆ ಪನಕ್ ಕಂಪನಿ ಬಳಿಯಿಂದ ಎನ್‌ಟಿಟಿಎಫ್ ಗ್ರೌಂಡ್ ಕಡೆಗೆ ಪರಾರಿಯಾಗಿದೆ. ಕಳೆದ ವಾರ ಜಿಗಣಿ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಎಲೆಕ್ಟ್ರಾನಿಕ್ ಸಿಟಿ ಬಳಿ ಚಿರತೆ ಕಾಣಿಸಿಕೊಂಡಿರುವುದರಿಂದ ಐಟಿಬಿಟಿ ಕಂಪನಿಗಳ ಸಿಬ್ಬಂದಿ ಹಾಗೂ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಎನ್‌ಟಿಟಿಎಫ್‌ನ ಪ್ರಾಂಶುಪಾಲ ಸುನೀಲ್ ಜೋಶಿ ಮಾತನಾಡಿ, ಟೋಲ್‌ಗೇಟ್ ಬಳಿಯಿರುವ ಕ್ಯಾಮೆರಾದಲ್ಲಿ ಕಾಂಪೌಂಡ್ ಗೋಡೆ ಬಳಿ ಚಿರತೆ ಹಾದು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಕ್ಯಾಂಪಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪರಿಶೀಲನೆ ನಡೆಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಬಂದು ದೃಢಪಡಿಸಿದ್ದಾರೆ. ಯಾವುದೇ ಚಿರತೆ ಕಾಣಿಸಲಿಲ್ಲ. ನಾವು ತರಬೇತಿ ಕೇಂದ್ರವಾಗಿರುವುದರಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಈ ಪ್ರದೇಶದಲ್ಲಿ ಬೀದಿನಾಯಿಗಳು ಸಾಕಷ್ಟಿದ್ದು, ಇವುಗಳನ್ನು ಚಿರತೆ ರಾತ್ರಿ ಹಿಡಿದು ಬೇಟೆಯಾಡುತ್ತಿರಬಹುದು. ಖಾಲಿ ಸೈಟುಗಳು ಹಾಗೂ ಗುಡ್ಡಗಳು ಈ ಪ್ರದೇಶದಲ್ಲಿ ಸಾಕಷ್ಟಿದ್ದು, ಅಲ್ಲಿ ಚಿರತೆಗೆ ಅವಿತುಕೊಳ್ಳಲು ಅಗತ್ಯವಾದ ಸ್ಥಳಾವಕಾಶ ಇದೆ ಎನ್ನಲಾಗಿದೆ.
ಇದನ್ನೂ ಓದಿ: Leopard Spotted: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ