Thursday, 19th September 2024

One Nation One Election: ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ನೀತಿ ಎಂದು ಖರ್ಗೆ ಟೀಕೆ; ಬಿಜೆಪಿ ತಿರುಗೇಟು

one nation one election

ನವದೆಹಲಿ: ಬಹುಚರ್ಚಿತ ವಿಚಾರವಾಗಿರುವ ʻಒಂದು ರಾಷ್ಟ್ರ ಒಂದು ಚುನಾವಣೆʼ(One Nation One Election) ಪ್ರಸ್ತಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ(Union Cabinet) ಅನುಮೋದನೆ ನೀಡಿರುವ ಬೆನ್ನಲ್ಲೇ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಇದೊಂದು ಅಪ್ರಯೋಗಿಕ ನೀತಿ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದರೆ, ಈ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಲಾಭ ಆಗಲಿದೆ ಎಂದು ಎನ್‌ಡಿಎ ಮತ್ತು ಅದರ ಮಿತ್ರಪಕ್ಷಗಳ ನಾಯಕರು ಟಾಂಗ್‌ ಕೊಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಪ್ರಸ್ತಾಪವು ಅಪ್ರಾಯೋಗಿಕ ಮತ್ತು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ. ನಾವು ಇದರೊಂದಿಗೆ ನಿಲ್ಲುವುದಿಲ್ಲ. ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರಜಾಪ್ರಭುತ್ವ ಉಳಿಯಲು ಜನ ಬಯಸಿದಾಗ ಮತ್ತು ಅಗತ್ಯವಿರುವಾಗ ಚುನಾವಣೆಗಳು ನಡೆಯಬೇಕು ಎಂದು ಕೇಂದ್ರ ನಡೆಯನ್ನು ಟೀಕಿಸಿದ್ದಾರೆ.

ಅಶ್ವಿನಿ ವೈಷ್ಣವ್‌ ತಿರುಗೇಟು

ಇನ್ನು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿರುಗೇಟು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ಮಹತ್ವದ ನಡೆಗೆ ಶೇ.80ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಪ್ರತಿಪಕ್ಷ ನಾಯಕರ ಮೇಲೆ ಇದನ್ನು ವಿರೋಧಿಸುವ ಒತ್ತಡ ಇದೆ. ಹೀಗಾಗಿ ಈರೀತಿ ಹೇಳಿಕೆ ಕೊಟ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಈ ಒಂದು ದೇಶ ಒಂದು ಚುನಾವಣೆ ನೀತಿಗೆ ಅನೇಕ ವಿರೋಧ ಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಅಪ್ರಾಯೋಗಿಕ ನೀತಿ ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನೂ ಓದಿ: One Nation One Election: ‘ಒಂದು ರಾಷ್ಟ್ರ, ಒಂದು ಚುನಾವಣೆ’ ವರದಿಗೆ ಕೇಂದ್ರದಿಂದ ಅಸ್ತು; ಶೀಘ್ರವೇ ಸಂಸತ್‌ನಲ್ಲಿ ಮಂಡನೆ