Saturday, 23rd November 2024

JK election: ಕಣಿವೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಪೂರ್ಣ; ಶೇ.58.85ರಷ್ಟು ವೋಟಿಂಗ್‌

JK election

ಶ್ರೀನಗರ: ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರ(JK election) ದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು,ಶೇ. 58.85ರಷ್ಟು ಮತದಾನ ಆಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 7 ಜಿಲ್ಲೆಗಳ 24 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ(Polling) ನಡೆದಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತ್ತು.

ಅಧಿಕೃತ ಮೂಲಗಳ ಪ್ರಕಾರ, ಕಿಶ್ತ್ವಾರ್‌ನಲ್ಲಿ 77.23% ಮತದಾನ ಆಗಿದ್ದು, ಅತಿ ಹೆಚ್ಚು ಮತದಾನ ನಡೆದಿರುವ ಜಿಲ್ಲೆ ಇದಾಗಿದೆ. ಇನ್ನು ಪುಲ್ವಾಮಾದಲ್ಲಿ ಕೇವಲ 43.87% ಮತದಾನವಾಗಿದ್ದು, ಅತಿ ಕಡಿಮೆ ಮತದಾನ ನಡೆದಿರುವ ಜಿಲ್ಲೆ ಇದಾಗಿದೆ. ಇಂದು 23.27 ಲಕ್ಷ ಮತದಾರರು ಮತದಾನ ಮಾಡಬೇಕಿತ್ತು.

ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ, ಪಿಡಿಪಿ ಅಭ್ಯರ್ಥಿ ಇಲ್ತಿಜಾ ಮುಫ್ತಿ ಅವರು ಬಿಜ್‌ಬೆಹರಾ ವಿಧಾನಸಭಾ ಕ್ಷೇತ್ರದಿಂದ ಮತ ಚಲಾಯಿಸಿದರು. ಕಿಶ್ತ್ವಾರ್‌ನ ಬಿಜೆಪಿ ಅಭ್ಯರ್ಥಿ ಶಗುನ್ ಪರಿಹಾರ್ ಕೂಡ ಮತದಾನ ಮಾಡಿದರು. ಕಿಶ್ತ್ವಾರ್‌ನ ಬಾಗ್ವಾನ್ ಪ್ರದೇಶದಲ್ಲಿ ಗುರುತಿನ ಚೀಟಿ ಇಲ್ಲದೆ ಮತ ಚಲಾಯಿಸಲಾಗಿದೆ ಎಂದು ಶಗುನ್ ಆರೋಪಿಸಿದ್ದರು. ಇದಾದ ನಂತರ ಕೆಲಕಾಲ ಗೊಂದಲ ಸೃಷ್ಟಿಯಾಗಿ ಮತದಾನ ಸ್ಥಗಿತಗೊಂಡಿತ್ತು.

ಮೊದಲ ಹಂತದ ಮತದಾನದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ 35 ಸಾವಿರಕ್ಕೂ ಹೆಚ್ಚು ನಿರಾಶ್ರಿತ ಕಾಶ್ಮೀರಿ ಪಂಡಿತರು ಕೂಡ ಮತದಾನ ಮಾಡಿದರು. ಅವರಿಗಾಗಿ ಒಟ್ಟು 24 ವಿಶೇಷ ಬೂತ್‌ಗಳನ್ನು ಮಾಡಲಾಗಿದೆ. ಮೊದಲ ಹಂತದಲ್ಲಿ 24 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುತ್ತಿರುವ 90 ಪಕ್ಷೇತರರು ಸೇರಿದಂತೆ 219 ಅಭ್ಯರ್ಥಿಗಳ ಭವಿಷ್ಯವನ್ನು 23 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ಇನ್ನೆರಡು ಹಂತಗಳ ಮತದಾನ ಪ್ರಕ್ರಿಯೆ ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

2014ರ ಮೊದಲ ಹಂತದಲ್ಲಿ 22 ಸ್ಥಾನಗಳಿಗೆ ಮತದಾನ ನಡೆದಿದ್ದು, 2014ರ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ದಕ್ಷಿಣ ಕಾಶ್ಮೀರದಲ್ಲಿ 22 ಸ್ಥಾನಗಳಿಗೆ ಮತದಾನ ನಡೆದಿತ್ತು. ಆಗ ಮೆಹಬೂಬಾ ಮುಫ್ತಿ ಅವರ ಪಕ್ಷವಾದ ಪಿಡಿಪಿ 11 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 4 ಸ್ಥಾನಗಳನ್ನು ಗೆದ್ದಿದ್ದವು. ಫಾರೂಕ್ ಅಬ್ದುಲ್ಲಾ ಅವರ ಪಕ್ಷದ ನ್ಯಾಷನಲ್ ಕಾನ್ಫರೆನ್ಸ್ 2 ಸ್ಥಾನಗಳನ್ನು ಮತ್ತು ಸಿಪಿಐ (ಎಂ) ಒಂದು ಸ್ಥಾನವನ್ನು ಪಡೆದುಕೊಂಡಿತ್ತು.

2024 ರ ಲೋಕಸಭಾ ಚುನಾವಣೆಯ ಕುರಿತು ಮಾತನಾಡುವುದಾದರೆ, ನ್ಯಾಷನಲ್ ಕಾನ್ಫರೆನ್ಸ್ 11 ಸ್ಥಾನಗಳಲ್ಲಿ, ಪಿಡಿಪಿ 5, ಕಾಂಗ್ರೆಸ್ 4 ಮತ್ತು ಬಿಜೆಪಿ 3 ಸ್ಥಾನಗಳಲ್ಲಿ ಮುಂದಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9, ನ್ಯಾಷನಲ್ ಕಾನ್ಫರೆನ್ಸ್ 6, ಪಿಡಿಪಿ 4 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. 2014ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ 11, ಪಿಡಿಪಿ 5, ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂರು ಸ್ಥಾನಗಳನ್ನು ಗಳಿಸಿದ್ದವು.

ಈ ಸುದ್ದಿಯನ್ನೂ ಓದಿ: JK Election: ಜಮ್ಮು ಕಾಶ್ಮೀರ ಚುನಾವಣೆ; ಸಮೀಕ್ಷೆ ಹೇಳೋದೇನು?