ಬೆಂಗಳೂರು: ʼಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಹೌದು, ʼಬಡವ ರಾಸ್ಕಲ್ʼ ಸಿನಿಮಾದ ಮೂಲಕ ಗಮನ ಸೆಳೆದ ನಿರ್ದೇಶಕ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ ʼರಾವಣ ರಾಜ್ಯದಲ್ಲಿ ನವದಂಪತಿಗಳುʼ ಎಂಬ ಕನಸಿಗೆ ಶಂಕರ್ ಗುರು ಸಾಥ್ ಕೊಟ್ಟಿದ್ದಾರೆ. ಅಂದಹಾಗೆ ಈ ಚಿತ್ರದ ಪ್ರಮುಖ ಪಿಲ್ಲರ್ ಧೀರಜ್ ಎಂ.ವಿ. ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್‌ನಡಿ ʼರಾವಣ ರಾಜ್ಯದಲ್ಲಿ ನವದಂಪತಿಗಳುʼ ಎನ್ನುವ ವಿಭಿನ್ನ ಶೀರ್ಷಿಕೆಯ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ (Sandalwood News).
ʼರಾವಣ ರಾಜ್ಯದಲ್ಲಿ ನವದಂಪತಿಗಳುʼ ಸಿನಿಮಾಕ್ಕೆ ಯುವ ಪ್ರತಿಭೆ ರಂಗ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ಪ್ರಸಾದ್ ಗರಡಿಯಲ್ಲಿ ಕೋ ಡೈರೆಕ್ಟರ್ ಆಗಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ಜತೆ ನಿರ್ದೇಶನದ ಗುಟ್ಟು ಕಲಿತುಕೊಂಡಿರುವ ರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಯುವ ಪ್ರತಿಭೆ ಅರುಣ್ ಸೂರ್ಯ ಹಾಗೂ ʼಡೊಳ್ಳುʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ.
ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್.ಟಿ.ಎ. ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ. ಡಾರ್ಕ್ ಸೋಷಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ʼರಾವಣ ರಾಜ್ಯದಲ್ಲಿ ನವದಂಪತಿಗಳುʼ ಸಿನಿಮಾವನ್ನು ಕನ್ನಡ ಫಿಲ್ಮಿ ಕ್ಲಬ್ ಸಿನಿಮಾ ಬಿಡುಗಡೆ ಕಾರ್ಯಕ್ಕೆ ಸಾಥ್ ಕೊಡಲಿದೆ.
ಈ ಸುದ್ದಿಯನ್ನೂ ಓದಿ: Sandalwood News: ‘ದೂರದರ್ಶನ’ ನಿರ್ದೇಶಕರ ಹೊಸ ಸಾಹಸ; ‘ಪೀಟರ್’ಗೆ ಸಾಥ್ ಕೊಟ್ಟ ವಿಜಯ್ ಸೇತುಪತಿ, ಡಾಲಿ ಧನಂಜಯ್