Friday, 22nd November 2024

Areca Nut Imports: ಅಡಿಕೆ ಬೆಳೆಗಾರರಿಗೆ ಆಮದು ಭೂತ ಸಂಕಷ್ಟ, ಭೂತಾನ್‌ನಿಂದ ಆಮದಿಗೆ ಕೇಂದ್ರ ಸರ್ಕಾರ ಅನುಮತಿ

areca nut imports

ನವದೆಹಲಿ: ಭೂತಾನ್‌ನಿಂದ (Bhutan) ಕನಿಷ್ಠ ಆಮದು ಬೆಲೆಯ (ಎಂಐಪಿ) ಷರತ್ತು ಇಲ್ಲದೆಯೇ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಬುಧವಾರ ಅನುಮತಿ (Areca Nut Imports) ನೀಡಿದೆ. ಎಲೆಚುಕ್ಕಿ ರೋಗ, ಹಳದಿ ರೋಗ, ಕೊಳೆರೋಗಗಳ ಬಾಧೆಯಿಂದ ನಲುಗುತ್ತಿರುವ ಅಡಿಕೆ ಕೃಷಿಕರು (areca nut farmers) ಕೇಂದ್ರದ ಈ ನಿರ್ಧಾರದಿಂದ ಮತ್ತೊಮ್ಮೆ ನಿದ್ದೆಗೆಡುವಂತಾಗಿದೆ.

ಒಡಿಶಾದ ಹತಿಸರ್‌ ಮತ್ತು ಅಸ್ಸಾಂನ ದರ್ರಂಗದ ಕಸ್ಟಮ್ಸ್‌ ಕೇಂದ್ರದ ಮೂಲಕ ಈ ಅಡಿಕೆ ಆಮದಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.

2022ರ ಸೆಪ್ಟೆಂಬರ್‌ನಲ್ಲಿ ಪ್ರತಿ‌ ವರ್ಷ ಭೂತಾನ್‌ನಿಂದ ಎಂಐಪಿ ಇಲ್ಲದೆ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿತ್ತು. 2017ರಲ್ಲಿ ಕೇಂದ್ರ ಸರ್ಕಾರವು ಪ್ರತಿ ಕೆ.ಜಿ ಅಡಿಕೆಗೆ ₹251 ಕನಿಷ್ಠ ಆಮದು ಬೆಲೆ ನಿಗದಿಪಡಿಸಿದೆ. ಕಳೆದ ವರ್ಷ ಈ ಬೆಲೆಯನ್ನು ಕೆ.ಜಿಗೆ ₹351ಕ್ಕೆ ಹೆಚ್ಚಿಸಿದೆ. ದೇಶದ ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.

ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿಕೊಂಡರೂ ಈ ಬೆಲೆಗಿಂತ ಕಡಿಮೆಗೆ ಆಮದು ಮಾಡಿಕೊಳ್ಳಬಾರದು ಎಂದು ಹೇಳಿದೆ.

ದೇಶದಲ್ಲಿ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರವು ನೀಡಿರುವ ಈ ಅನುಮತಿ ರಾಜ್ಯದ ಬೆಳೆಗಾರರನ್ನು ಮತ್ತೆ ಬೆಚ್ಚುವಂತೆ ಮಾಡಿದೆ. ಈಗಾಗಲೇ ಅಡಿಕೆ ಮರಗಳಿಗೆ ಎಲೆಚುಕ್ಕಿ, ಕೊಳೆ ರೋಗ, ಹಳದಿ ರೋಗಗಳು ಬಾಧಿಸುತ್ತಿವೆ. ಬೆಳೆಗಾರರು ನಷ್ಟಕ್ಕೆ ಸಿಲುಕಿಸಿದ್ದಾರೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಅಡಿಕೆಯ ಪೈಕಿ ಶೇ 2ರಷ್ಟು ಅಡಿಕೆಯನ್ನು ಭೂತಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ವರ್ತಕರು ಸರ್ಕಾರದ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ಸರ್ಕಾರವು ಸಂಸತ್‌ಗೆ ಸಲ್ಲಿಸಿರುವ ಉತ್ತರದಲ್ಲಿ ತಿಳಿಸಿದೆ. ದೇಶದಲ್ಲಿ ಕಳೆದ ಐದು ವರ್ಷದಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್‌ ಮಂಡಳಿಯ ತನಿಖಾ ತಂಡವು 26 ಸಾವಿರ ಟನ್‌ಗೂ ಹೆಚ್ಚು ಅಡಿಕೆಯನ್ನು ವಶಕ್ಕೆ ಪಡೆದಿದೆ.

ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಿಕೆ ಪ್ರಮಾಣವು ದೇಶೀಯ ಅಡಿಕೆ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ವ್ಯಾಪಾರಿಗಳು ಇದರ ಲಾಭ ಪಡೆದು ಸ್ಥಳೀಯವಾಗಿ ಬೆಲೆ ಕಡಿಮೆ ಮಾಡಲು ಬಳಸಿಕೊಳ್ಳುತ್ತಾರೆ ಎಂಬುದು ಬೆಳೆಗಾರರ ಆತಂಕ. ‘ಭೂತಾನ್ ಅಡಿಕೆ ಭಾರತಕ್ಕೆ ಬರುತ್ತಿದ್ದಂತೆ ಅಡಿಕೆ ದರದಲ್ಲಿ ಏರುಪೇರು ಶುರುವಾಗುತ್ತದೆ. ಕಳೆದ ವರ್ಷಗಳಲ್ಲಿ ಕ್ವಿಂಟಲ್‌ವೊಂದಕ್ಕೆ ₹4 ಸಾವಿರದವರೆಗೆ ದರ ಇಳಿದಿತ್ತು’ ಎಂದು ಅಡಿಕೆ ವಹಿವಾಟು ನಡೆಸುವ ಸಹಕಾರ ಸಂಘಗಳ ಪ್ರಮುಖರು ಹೇಳುತ್ತಾರೆ.

ಇದನ್ನೂ ಓದಿ: ಅಡಿಕೆ ತಟ್ಟೆ ತಯಾರಿಕರ ಅಭಿವೃದ್ಧಿಗೆ ಜಿಯೋ ಟ್ಯಾಗ್ ಅಗತ್ಯ