Friday, 22nd November 2024

CM Siddaramaiah: ಕನ್ನಡ ಬಳಗ ಯುಕೆಯಿಂದ ದೀಪಾವಳಿ, ಕನ್ನಡ ರಾಜ್ಯೋತ್ಸವಕ್ಕೆ ಸಿಎಂಗೆ ಆಹ್ವಾನ

CM Siddaramaiah

ಬೆಂಗಳೂರು: ಯುನೈಟೆಡ್ ಕಿಂಗ್ಡಮ್‌ನ (UK) ಕೊವೆಂಟ್ರಿಯಲ್ಲಿ ಇದೇ ನವೆಂಬರ್‌ನಲ್ಲಿ ಅಪ್ಪಟ ಕನ್ನಡಿಗರಿಂದಲೇ ಅದ್ಧೂರಿಯಾಗಿ ಆಚರಿಸಲ್ಪಡುವ ದೀಪಾವಳಿ (Deepavali) ಹಾಗೂ ಕನ್ನಡ ರಾಜ್ಯೋತ್ಸವಕ್ಕೆ (Kannada Rajyotsava) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಕನ್ನಡ ಬಳಗ ಯುಕೆಯ ವತಿಯಿಂದ ಆಹ್ವಾನ ನೀಡಲಾಯಿತು. ಪ್ರಸ್ತುತ ಯುನೈಟೆಡ್ ಕಿಂಗ್ಡಮ್‌ನಲ್ಲಿ ಕನ್ನಡ ಬಳಗವನ್ನು ಮುನ್ನಡೆಸುತ್ತಿರುವ ಅಧ್ಯಕ್ಷೆ ಸುಮನಾ ಗಿರೀಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕನ್ನಡಿಗರಿಂದ ವಿಶೇಷವಾಗಿ ಆಚರಿಸಲ್ಪಡುವ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಆಮಂತ್ರಣ ನೀಡಿದರು. ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಕನ್ನಡಿಗರು ಸೇರುತ್ತಿರುವುದು ವಿಶೇಷವಾಗಿದೆ.

ಈ ಸುದ್ದಿಯನ್ನೂ ಓದಿ | Eshwar Khandre: ಕಸ್ತೂರಿ ರಂಗನ್‌ ವರದಿ; ಪರಿಸರ, ಜನಜೀವನ ಹಿತಾಸಕ್ತಿ ರಕ್ಷಣೆಗೆ ಸರ್ಕಾರದ ಕ್ರಮ

ಕನ್ನಡ ಬಳಗ ಯುಕೆ, ಸಾಗರದಾಚೆ ಕನ್ನಡತನವನ್ನು ಜಾಗೃತಗೊಳಿಸುತ್ತಾ ಕಳೆದ 40 ವರ್ಷಗಳಿಂದ ಯುನೈಟೆಡ್ ಕಿಂಗ್ ಡಮ್‌ನಲ್ಲಿ ಕನ್ನಡದ ಸೇವೆಯನ್ನು ಶ್ರದ್ಧೆ ಹಾಗೂ ಅಭಿಮಾನದಿಂದ ನಿರ್ವಹಿಸಿಕೊಂಡು ಬರುತ್ತಿದೆ. ನಾಡಿನ ಹೊರಗೂ ಕನ್ನಡದ ಕಂಪು ಪಸರಿಸಿರಬೇಕು ಎಂಬ ಸದಾಶಯದೊಂದಿಗೆ 40 ವರ್ಷಗಳಲ್ಲಿ ಹತ್ತು ಹಲವು ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.

ನಾಡಿನ ಹೊರಗೆ ಅದರಲ್ಲೂ ವಿದೇಶಿ ನೆಲದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವುದು ಮತ್ತು ಅವರಲ್ಲಿ ಭಾಷೆ, ಸಂಸ್ಕೃತಿಯ ವಿಚಾರಗಳನ್ನು ಸದಾ ಜೀವಂತವಾಗಿಡುವುದು ಬಹು ಸವಾಲಿನ ಕೆಲಸ. ಆ ನಿಟ್ಟಿನಲ್ಲಿ ಕನ್ನಡ ಬಳಗ ಯುಕೆ ಅದ್ವಿತೀಯ ಕಾರ್ಯನಿರ್ವಹಿಸಿದ್ದು ನಿರಂತರವಾಗಿ ಕನ್ನಡದ ಅಸ್ಮಿತೆಯನ್ನು ಯುಕೆ ನೆಲದಲ್ಲಿ ಜೀವಂತವಾಗಿರುವಂತೆ ನೋಡಿಕೊಂಡಿದೆ.

ಆ ನಿಟ್ಟಿನಲ್ಲಿ 1988ರಲ್ಲಿಯೇ ಕರ್ನಾಟಕದ ನೆಲದಾಚೆ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿ ನಾಡಿನ ಅಂದಿನ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಸೇರಿದಂತೆ ಖ್ಯಾತ ರಾಜಕಾರಣಿಗಳು, ಸಾಹಿತಿಗಳು ಹಾಗೂ ಸಿನಿಮಾ ನಟರನ್ನು ಆಹ್ವಾನಿಸಿದ್ದ ಹಿರಿಮೆ ಕನ್ನಡ ಬಳಗ ಯುಕೆಗೆ ಇದೆ. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಾಡಿನ ಖ್ಯಾತನಾಮರನ್ನು ಆಹ್ವಾನಿಸಿ ವರ್ಷಕ್ಕೆರಡು ಬಾರಿ ಅಂದರೆ, ಯುಗಾದಿ ಹಾಗೂ ದೀಪಾವಳಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ.

ಈ ಸುದ್ದಿಯನ್ನೂ ಓದಿ | KPSC AEE Recruitment: 42 ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿಯ ಮಾಹಿತಿ ಇಲ್ಲಿದೆ

ಈ ಬಾರಿಯೂ ಕೂಡಾ ಕನ್ನಡ ಬಳಗ ಯುಕೆ ಕನ್ನಡ ನಾಡು, ನುಡಿಯನ್ನು ಬಿಂಬಿಸುವಂತಹ ಕಾರ್ಯಕ್ರಮ ಮಾಡುವ ತಯಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಕನ್ನಡ ಬಳಗ ಯುಕೆ ಅಧ್ಯಕ್ಷೆ ಸುಮನಾ ಗಿರೀಶ್, ಲಂಡನ್‌ನಿಂದ ಆಗಮಿಸಿ, ಮುಖ್ಯಮಂತ್ರಿಗಳಿಗೆ ವಿಶೇಷ ಆಹ್ವಾನವನ್ನು ನೀಡಿದ್ದಾರೆ.