Friday, 22nd November 2024

Chickballapur News: ಕೃಷಿಕಾಯಕ ನಿರತ ರೈತಾಪಿ ವರ್ಗ ಆರೋಗ್ಯದ ಬಗ್ಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅವಶ್ಯ- ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಚಿಕ್ಕಬಳ್ಳಾಪುರ : ಹಾವು ಕಡಿತ ಮತ್ತು ನಾಯಿ ಕಡಿತ ಪ್ರಕರಣಗಳು ೨೦೨೦ ಮತ್ತು ೨೦೨೧ರ ಕೋವಿಡ್ ವರ್ಷಗಳಲ್ಲಿ ಕಡಿಮೆಯಾಗಿದ್ದವು.ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿವೆ. ಸಾರ್ವಜನಿಕರು, ರೈತರು ಮನೆಯಿಂದ ಹೊರಗಡೆ ಕೆಲಸ ಮಾಡುವಾಗ ಮುಂಜಾಗ್ರತೆವಹಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದನ್ನು ಮರೆಯಬಾರದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ರೈತರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ “ ರಾಷ್ಟೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ಆಯೋಜನೆಯ ಅಂತರ ಇಲಾಖಾ ಸಮನ್ವಯ ಸಭೆ”ಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಜಿಲ್ಲೆಯಲ್ಲಿ ೨೦೨೨ ರಲ್ಲಿ ೧೯೨, ೨೦೨೩ ರಲ್ಲಿ ೮೧೨ ಜನರು ಹಾಗೂ ಸೆ.೧೬ ರ ವರೆಗೆ ಈ ವರ್ಷ ೫೮೭ ಜನರು ಹಾವು ಕಡಿತಕ್ಕೆ ಒಳಗಾಗಿದ್ದಾರೆ. ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸ ಬೇಕು.

ಗದ್ದೆ ಬದುಗಳಲ್ಲಿ ಓಡಾಡುವಾಗ ಶೂಗಳನ್ನು ಧರಿಸುವುದೋ, ಕೋಲು ಬಳಕೆ ಮೂಲಕ ಶಬ್ದ ಮಾಡಿಕೊಂಡು ನಡೆಯುವಂತದ್ದೋ  ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಹಾವುಕಡಿತದಿಂದ ಪಾರಾಗಬೇಕು. ಇಷ್ಟೆಲ್ಲ ಕ್ರಮಗಳ ಮಧ್ಯಯು ಹಾವು ಕಡಿತಕ್ಕೆ ಒಳಪಟ್ಟರೆ ತಕ್ಷಣವೆ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಔಷಧೋಪಚಾರ ಮಾಡಿಸಿಕೊಳ್ಳಬೇಕು ಎಂದರು.

ಹಾವು ಕಡಿತ, ಹುಚ್ಚುನಾಯಿ ಕಡಿತದ  ಚಿಕಿತ್ಸೆ, ಚುಚ್ಚು ಮದ್ದು ಹಾಗೂ ಆರೋಗ್ಯ ಸೇವೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಔಷಧದ ದಾಸ್ತಾನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸದಾಕಾಲ ಲಭ್ಯವಿರುತ್ತದೆ. ನಾಟಿ ಔಷಧಿ ಬಳಕೆ ಮಾಡುವುದು ಹಾಗೂ ಸ್ವಯಂಚಿಕಿತ್ಸೆ ಮಾಡಿಕೊಳ್ಳುವುದನ್ನು ಬಿಟ್ಟು ಆರೋಗ್ಯ ಇಲಾಖೆಯ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಸಲಹೆ ತಿಳಿಸಿದರು.

ರೇಬೀಸ್ ಕಾಯಿಲೆಯು ಮಾರಾಣಾಂತಿಕ ಕಾಯಿಲೆಯಾಗಿದ್ದು, ನಾಯಿ ಕಡಿತಕ್ಕೆ ಒಳಗಾದ ಕೂಡಲೆ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಚುಚ್ಚು ಮದ್ದು ಪಡೆಯುವುದು ಕಡ್ಡಾಯವಾಗಿರುತ್ತದೆ ಅಲ್ಲದೆ ವೈದ್ಯರು ಸೂಚಿಸಿದ ಪ್ರಕಾರವೇ ಆರೋಗ್ಯ ಚಿಕಿತ್ಸೆ ಪಡೆಯುವುದು ಅತಿ ಮುಖ್ಯವಾಗುತ್ತದೆ.ಒಮ್ಮೆ ರೇಬೀಸ್ ಕಾಯಿಲೆ ಬಂದರೆ ಗುಣಪಡಿಸಲು ಸಾಧ್ಯವಿಲ್ಲ. ಇದನ್ನು ಅರಿತು ಕೊಂಡು ಯಾವುದೇ ವ್ಯಕ್ತಿಗಳು ನಾಯಿ ಕಡಿತಕ್ಕೆ ಒಳಗಾದರೆ ಕೂಡಲೆ ಆರೋಗ್ಯ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ೨೦೨೨ ರಲ್ಲಿ ೪೮೪೪, ೨೦೨೧ ರಲ್ಲಿ ೪೭೩೦, ೨೦೨೨ರಲ್ಲಿ ೭೨೭೯, ೨೦೨೩ರಲ್ಲಿ ೮೬೦೫ ಜನರು ಹಾಗೂ ೨೦೨೪ ಸೆಪ್ಟೆಂಬರ್ ೧೬ ವರೆಗೆ ೭೨೨೬ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಮಾಂಸ ಮಾರಾಟ ಮಾಡುವ ಅಂಗಡಿಯವರು, ಕೋಳಿಪಾರಂ, ಕುರಿಪಾರಂ ಗಳಲ್ಲಿ ಸತ್ತ ಪ್ರಾಣಿ, ಕೋಳಿಗಳನ್ನು ಸಂಬಂಧಪಟ್ಟವರು ಸೂಕ್ತ ವಿಲೇವಾರಿ ಮಾಡಬೇಕು. ಪಶುಪಾಲನಾ ಇಲಾಖೆ ಸಹಯೋಗದಲ್ಲಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ನಗರ ಗ್ರಾಮ ಸ್ಥಳೀಯಾಡಳಿತ ಸಂಸ್ಥೆಗಳು ಮುಂದಾಗಬೇಕು, ಬೀದಿ ನಾಯಿಗಳ ಹಾವಳಿಯನ್ನು ಆಗ ಮಾತ್ರ ತಪ್ಪಿಸಲು ಸಾಧ್ಯವಾಗಲಿದೆ. ನಾಯಿಗಳ ಹಾವಳಿ ಕಡಿಮೆಯಾದರೆ ಶೇ ೯೯ರಷ್ಟು ರೇಬಿಸ್ ಪ್ರಕರಣಗಳು ಕಡಿಮೆಯಾಗಲಿವೆ. ಈ  ಕಾಯಿಲೆಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಸೆಪ್ಟೆಂಬರ್ ೨೮ ರಂದು ವಿಶ್ವ ರೇಬೀಸ್ ದಿನಾಚರಣೆಯನ್ನು ಜಿಲ್ಲೆಯಲ್ಲಿ ಆಚರಣೆ ಮಾಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ೨೦೨೪ ರ ವರ್ಷದಲ್ಲಿ ಈ ವರೆಗೆ ೩ ತಾಯಿ ಸಾವು ಪ್ರಕರಣಗಳು ವರದಿಯಾಗಿವೆ. ಯಾವುದೇ ಕಾರಣಕ್ಕೂ ವೈದ್ಯಕೀಯ ಆರೋಗ್ಯ ಸೇವೆಗಳ ಕೊರತೆ ಹಾಗೂ ನಿರ್ಲಕ್ಷತೆಯಿಂದ ಇಂತಹ ಪ್ರಕರಣಗಳು ಜರುಗಬಾರದು. ಹೈರಿಸ್ಕ್ ಪ್ರಕರಣಗಳಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ.ಕೃಷ್ಣ ಪ್ರಸಾದ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಉಮಾ, ಜಿಲ್ಲಾ ರೋಗವಾಹಕ ಆಶ್ರಿತ  ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಶಿವಕುಮಾರ್, ಡಾ ರವಿ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.