ಜಿಲ್ಲಾಡಳಿತ ಭವನದ ಆವರಣದಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿಕೆ
ಚಿಕ್ಕಬಳ್ಳಾಪುರ: ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಲ್ಲಿ ಸ್ವಚ್ಚತೆಯಾಗಿರುತ್ತದೆ ಅಲ್ಲಿ ನಮ್ಮ ಮನಸ್ಸು ಸ್ವಚ್ಛ ಹಾಗೂ ಸುಂದರವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.
ಬುಧವಾರ ಬೆಳಿಗ್ಗೆ ೭ ಗಂಟೆಯಿಂದ ೯ ಗಂಟೆಯವರೆಗೆ ಜಿಲ್ಲಾಡಳಿತ ಭವನದ ಆವರಣ ಹಾಗೂ ಸುತ್ತಲಿನ ಪ್ರದೇಶ ದಲ್ಲಿ ಏರ್ಪಡಿಸಿದ್ದ ಶ್ರಮದಾನದ ಮೂಲಕ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಸರ್ಕಾರವು ಇದೇ ಸೆ.೧೪ ರಿಂದ ಅಕ್ಟೋಬರ್ ೨ ರ ವರೆಗೆ “ಸ್ವಚ್ಚತಾ ಹೀ ಸೇವಾ ಪಾಕ್ಷಿಕ-೨೦೨೪” ನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ “ಸ್ವಚ್ಛತೆಯೇ ಸೇವೆ” ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಈ ಕಾರ್ಯಕ್ರಮದ ಭಾಗವಾಗಿ ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಗಿಡ ನೆಡುವುದು. ಮನೆಯ ಸುತ್ತಮುತ್ತಲಿ ನಲ್ಲಿ ಪ್ಲಾಸ್ಟಿಕ್ ನ್ನು ವಿಲೇ ಮಾಡವುದು ಹಾಗೂ ಅನುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚತೆಯಿಂದ ಕಾಪಾಡಿಕೊಂಡರೆ ಯಾವುದೇ ಕಾಯಿಲೆಗಳು ಬರುವುದಿಲ್ಲ. ಗಿಡ ಮರಗಳನ್ನು ಬೆಳೆಸಿ ಅರಣ್ಯ ನಾಶ ಮಾಡದೆ ಕಾಪಾಡಿಕೊಳ್ಳಬೇಕು. ತಮ್ಮ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳು ಹಾಗೂ ಹಾಸ್ಟೆಲ್ ಗಳ ಆವರಣದಲ್ಲಿ ಒಂದು ಗಿಡ ನೆಡುವುದರಿಂದ ಮುಂದಿನ ಪೀಳಿಗೆಗೂ ಉತ್ತಮವಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಘೋಷ ವಾಕ್ಯ ಸ್ವಭಾವ ಸ್ವಚ್ಛತೆ ಮತ್ತು ಸಂಸ್ಕಾರ ಸ್ವಚ್ಛತೆ ಎಂಬುದಾಗಿದೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಸೇವೆ ಆಂದೋಲನದ ರೂಪದಲ್ಲಿ ನಡೆಯುತ್ತಿದೆ. ಇದರಡಿ ನಾಲ್ಕು ಭಾಗಗಳಿದ್ದು, ಗಿಡಗಳನ್ನು ನೆಡುವುದು, ಸ್ಥಳೀಯ ನೃತ್ಯ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವುದು, ಸಾರ್ವಜನಿಕ ಕಚೇರಿ ಮತ್ತು ಶೌಚಾಲಯ, ಉದ್ಯಾನಗಳನ್ನು ಸ್ವಚ್ಛ ಮಾಡುವುದು ಹಾಗೂ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಕಾರ್ಯಕ್ರಮಗಳು ಸೇರಿವೆ. ಇದರ ಜೊತೆಗೆ ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆಯೂ ಸೇರಿದೆ ಎಂದರು.
ಸ್ವಚ್ಚ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಸರ್ಕಾರಿ ಕಚೇರಿಯಗಳನ್ನು ಸ್ವಚ್ಚತೆಯಿಂದ ನೋಡಿಕೊಳ್ಳುವುದು ಅದೇ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಹಾಗೂ ಇಲಾಖೆ ಸುತ್ತ ಮುತ್ತಲು ಸ್ವಚ್ಚತೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸ್ವಭಾವ ಸ್ವಚ್ಚತೆ ಸಂಸ್ಕಾರ ಸ್ವಚ್ಚತೆ, ಸ್ವಚ್ಚತೆ ಮತ್ತು “ಎಲ್ಲಿದಿಯೋ ಅಲ್ಲಿ ಇದೇ ಆರೋಗ್ಯ” ಎಂಬ ಘೋಷ ವಾಕ್ಯ ಗಳೊಂದಿಗೆ ಬ್ಯಾನರ್ ಪ್ರರ್ದಶಿಸಿ ಸ್ಥಳೀಯ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾಧಿಕಾರಿಗಳು ಸ್ವತಃ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡರು ಹಾಗೂ ನೆರೆದಿದ್ದವರಿಗೆ ಅರಿವು ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಈಶ್ವರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ನಗರ ಸಭೆಯ ಪೌರಕಾರ್ಮಿಕರು ಸ್ವಚ್ಚತೆ ಕಾರ್ಯದಲ್ಲಿ ಭಾಗಿಯಾಗಿದ್ದರು.