Monday, 25th November 2024

MP Dr K Sudhakar: ಸಂಸದ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಉಪಾಧ್ಯಕ್ಷರು- ಅಭಿವೃದ್ಧಿಗೆ ಪಣ

ಹೈಕೋರ್ಟ್ ನಿರ್ದೇಶನ : ನಗರಸಭೆ ಅಧ್ಯಕ್ಷರಾಗಿ ಗಜೇಂದ್ರ ಉಪಾಧ್ಯಕ್ಷರಾಗಿ ನಾಗರಾಜ್ ಪದಗ್ರಹಣ

ಚಿಕ್ಕಬಳ್ಳಾಪುರ: ದೀರ್ಘಕಾಲದ ನಂತರ ಚಿಕ್ಕಬಳ್ಳಾಪುರ ನಗರಸಭೆ ಆಡಳಿತ ಚುನಾಯಿತ ಜನಪ್ರತಿನಿಧಿಗಳ ಕೈಗೆ ಹಸ್ತಾಂತರವಾಗಿದ್ದು ಅಭಿವೃದ್ಧಿಗೆ ವೇಗ ದೊರೆತಂತಾಗಿದೆ.೧೪ ತಿ ಂಗಳ ಅವಧಿಗೆ ನಾಲ್ಕನೇ ವಾರ್ಡಿನ ಗಜೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರೆ, ೫ನೇ ವಾರ್ಡಿನ ನಗರಸಭಾ ಸದಸ್ಯ ಜೆ ನಾಗರಾಜ್ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಸೆ.೧೨ರಂದು ಚುನಾವಣೆ ನಡೆದರೂ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟಿನ ನಿರ್ದೇಶನ ಇದ್ದ ಕಾರಣ ತಡೆ ಹಿಡಿಯಲಾಗಿತ್ತು. ಮಂಗಳವಾರ ಫಲಿತಾಂಶಕ್ಕೆ ಹಿಡಿದಿದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿ ಫಲಿತಾಂಶ ಘೋಷಣೆಗೆ ಗ್ರೀನ್ ಸಿಗ್ನಲ್ ನೀಡಿದ ಪರಿಣಾಮ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಜಿಲ್ಲಾ ಉಪವಿಭಾಗಾಧಿಕಾರಿ ಆರ್.ಅಶ್ವಿನ್ ಫಲಿತಾಂಶ ಪ್ರಕಟಿಸಿದ ಪರಿಣಾಮ ಸಂಸದ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ಅಧಿಕೃತವಾಗಿ ನಗರಾಡಳಿತದ ಅಧಿಕಾರ ಚುಕ್ಕಾಣಿ ಹಿಡಿದರು.

ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ ಕೆ.ಸುಧಾಕರ್ ಮಧ್ಯೆ ಭಾರೀ ಪ್ರತಿಷ್ಠೆಗೆ ಕಾರಣವಾಗಿದ್ದ ನಗರಸಭೆ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಲು ಅರ್ಹರಲ್ಲ ಎಂದು ತಗಾದೆ ತೆಗೆದು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಚುನಾವಣೆಯ ದಿನ ಹೈಡ್ರಾಮವೇ ನಡೆದು ಹೋಗಿತ್ತು.

9 ಮಂದಿ ಬಿಜೆಪಿ ಸದಸ್ಯರನ್ನು ಇಟ್ಟುಕೊಂಡು ನಗರಾಡಳಿತದ ಚುಕ್ಕಾಣಿ ಹಿಡಿಯಲು ಮುಂದಾದ ಸಂಸದರು, ನೈತಿಕತೆಯನ್ನು ಬದಿಗೊತ್ತಿ 3 ಮಂದಿ ಪಕ್ಷೇತರ ಸದಸ್ಯರು,6 ಮಂದಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ನೋಡಿಕೊಂಡ ಪರಿಣಾಮ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತಮಗೆ ಬೆಂಬಲ ನೀಡುವ ಸದಸ್ಯರ ಜತೆಗೆ ಕಾಂಗ್ರೆಸ್ ಸದಸ್ಯರನ್ನು ಡಾರ್ಜಲಿಂಗ್ ಪ್ರವಾಸ ಕಳಿಸಿದ್ದ ಸುಧಾಕರ್ ಚುನಾವಣೆಗೂ ಪೂರ್ವದಲ್ಲಿ ಪ್ರವಾಸಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಂಡಿದ್ದರು. ಆದರೆ ಚುನಾವಣೆಯ ದಿನ, ಅದರ ಹಿಂದಿನ ದಿನ ತಾವೇ ಅಖಾಡಕ್ಕೆ ಇಳಿದರಲ್ಲದೆ ನಗರಸಭೆ ಆವರಣಕ್ಕೆ ಕೂಡ ಖುದ್ದು ಅವರೇ ಮುಂದೆ ನಿಂತು ಕರೆದುಕೊಂಡು ಬಂದು ತಮ್ಮ ಅಭ್ಯರ್ಥಿಪರ ಮತ ಚಲಾಯಿಸುವಂತೆ ಮಾಡಿ ಹಿಡಿದ ಹಠ ಸಾಧಿಸಿದ್ದರು.

ಸೆ.೧೨ರಂದೇ ಫಲಿತಾಂಶ ಪ್ರಕಟವಾಗದಿದ್ದರೂ ಬಹುಮತ ಇದ್ದ ಕಾರಣ ನಗರದಾಧ್ಯಂತ ವಿಜಯೋತ್ಸವ ಆಚರಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದ್ದಲ್ಲದೆ ಶಾಸಕ ಪ್ರದೀಪ್ ಈಶ್ವರ್ ರಾಜಕೀಯ ಭವಿಷ್ಯಧ ಭವಿಷ್ಯದ ಬಗ್ಗೆ ಲೇವಡಿ ಮಾಡಿ ಮಾತನಾಡಿ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಸರಣಿ ಸುದ್ದಿಗೋಷ್ಟಿಗಳ ಮೂಲಕ ಸಂಸದ ಸುಧಾಕರ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು.

ತಮ್ಮ ಬೆಂಬಲಿತರು ನಗರಸಭೆಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗ, ಆಮಿಷ, ಬೆದರಿಕೆ ಇವೆಲ್ಲದರ ನಡುವೆಯೂ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಐತಿಹಾಸಿಕ ಗೆಲುವಿಗೆ ಕಾರಣೀಭೂತರಾದ ಎಲ್ಲ ನಾಯಕರಿಗೂ ನನ್ನ ಅಭಿನಂದನೆ ತಿಳಿಸುತ್ತೇನೆ. ಚಿಕ್ಕಬಳ್ಳಾಪುರದ ಸುರಕ್ಷಿತ ಹಾಗೂ ಸುಸಜ್ಜಿತ ನಗರವಾಗಿ ಬಲಗೊಳಿಸಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಉಪಾ ಧ್ಯಕ್ಷರು ಕಾರ್ಯೋನ್ಮುಖವಾಗಲಿ, ಅವರಿಗೆ ಬೇಕಾದ ಎಲ್ಲಾ ಸಲಹೆ ಸೂಚನೆ ಬೆಂಬಲವನ್ನು ಸದಾ ನೀಡಲು ಬದ್ಧನಾಗಿದ್ದೇನೆ ಎಂದರು.

ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 40 ಕೋಟಿ ಅನುದಾನ ತಂದಿದ್ದರೂ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಟೆಂಡರ್ ಹಂತದಲ್ಲಿ ರದ್ದು ಮಾಡಿ ರಾಜಕೀಯ ಮಾಡಿತ್ತು.  ಕಳೆದ ೧೬ ತಿಂಗಳಿAದ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಶೂನ್ಯವಾಗಿತ್ತು. ಇನ್ನು ಮುಂದೆ ಉತ್ತಮ ವಾಗಿ ಅಭಿವೃದ್ದಿ ಹೊಂದಲಿದೆ ಎಂಬ ವಿಶ್ವಾಸವನ್ನು ವ್ಯೆಕ್ತಪಡಿಸಿದರು.

ನೂತನ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ಗ್ಯಾಸ್ ನಾಗರಾಜು ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ಅವರ ರಾಜಕೀಯ ತಂತ್ರಗಾರಿಕೆಯಿಂದಾಗಿ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ, ಸಂಸದ ಡಾ.ಕೆ.ಸುಧಾಕರ್ ಅವರ ಜನಪ್ರಿಯತೆ ಹಾಗೂ ರಾಜಕೀಯ ಚಾಣಾಕ್ಷತೆಗೆ ಸಾಕ್ಷಿಯೆಂಬAತೆ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿದೆ.

ಇನ್ನು ಮುಂದೆ ನಗರದ ಅಭಿವೃದ್ದಿಗೆ ಶ್ರಮಿಸುತ್ತೇವೆ. ಮುಖ್ಯವಾಗಿ ನಗರದ ಸಮಸ್ಯೆಗಳಾದ ಯುಜಿಡಿ, ಕುಡಿಯುವ ನೀರಿನ ಸಮರ್ಪಕ ವಿತರಣೆ, ಬೀದಿ ದೀಪ, ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಖಾತೆಗಳ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಲು ಆಧ್ಯತೆ ನೀಡಲಗುವುದು. ನಗರದ ನಾಗರೀಕರು ಯಾರೇ ಆಗಲಿ ನಗರಸಭೆಯಲ್ಲಿ ಆಗ ಬೇಕಾದ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳನ್ನು ಆಶ್ರಯಿಸದೆ ನೇರವಾಗಿ ನಮ್ಮನ್ನಾಗಲಿ, ಅಧಿಕಾರಿಗಳನ್ನಾಗಲಿ ಭೇಟಿ ಮಾಡಿ ಅರ್ಜಿ ಸಲ್ಲಿಸುವ ಕೆಲಸ ಮಾಡಿ. ಯಾವುದೇ ಕೆಲಸವಿರಲಿ ಅಧಿಕೃತ ಶುಲ್ಕ ಬಿಟ್ಟು ಯಾರಿಗೂ ಹೆಚ್ಚು ಹಣ ನೀಡದೆ ತಮ್ಮ ಕೆಲಸ ಪೂರೈಸಿಕೊಳ್ಳಬೇಕು. ಹಾಗೇನಾದರೂ ತೊಂದರೆಯಾದರೆ ತಮ್ಮನ್ನು ನೇರವಾಗಿ ಕಂಡು ಸಮಸ್ಯೆ ಹೇಳಿಕೊಳ್ಳಿ ಎಂದು ಮನವಿ ಮಾಡಿದರು.

ಈ ವೇಳೆ ಡಾ.ಕೆ.ಸುಧಾಕರ್ ಬೆಂಬಲಿತ ನಗರಸಭಾ ಸದಸ್ಯರು,ಬಿಜೆಪಿ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಇದ್ದರು .